ಇಂಡೊಲೊಜಿ ವಿಮರ್ಶೆ- 15 ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2
ಇಂಡೊಲೊಜಿ ವಿಮರ್ಶೆ- 15 ಭಾರತೀಯ ಶಿಕ್ಷಣದ ಸಂಕ್ರಮಣಕಾಲ -ಭಾಗ-2 ನಿರಂತರ ರಾಜಕೀಯ ವಿಪ್ಲವ ಹಾಗೂ ಅಸ್ಥಿರತೆಯಿಂದ ಭಾರತದಲ್ಲಿ ಕೆಲವು ಶತಮಾನಗಳವರೆಗೆ ಜ್ಞಾನದ ವಿಕಾಸದಲ್ಲಿ ಕುಂಠಿತತೆಯನ್ನು ಗಮನಿಸಬಹುದು. ನೂತನ ಆವಿಷ್ಕಾರಗಳು ,ಪ್ರಾಯೋಗಿಕ ವಿಜ್ಞಾನದ ( Experimental Science) ಬೆಳವಣಿಗೆಗಳು ಹತ್ತನೆಯ ಶತಮಾನದ ನಂತರ ಇಳಿಮುಖದಲ್ಲಿದ್ದು ಹದಿನಾರನೆಯ ಶತಮಾನದ ನಂತರ ಸಂಪೂರ್ಣ ಕುಂಠಿತವಾಯ್ತು. ಅದಕ್ಕೆ ಪ್ರಾಯಃ ದೇಶಿಯ ರಾಜರುಗಳು ದೇಶಿ ಹಾಗೂ ವಿದೇಶಿ ಆಕ್ರಮಣಗಳಿಂದ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವುದರಲ್ಲೆ ಮಗ್ನವಾಗಿದ್ದದ್ದು ಕಾರಣ. ರಾಜರ ದೂರದೃಷ್ಟಿ ರಹಿತವಾದ ನಾಯಕತ್ವವು ಪ್ರಮುಖ ಕಾರಣಗಳಲ್ಲೊಂದು. ಹದಿನೆಂಟು ಹಾಗೂ ಹತ್ತೊಂಬತ್ತನೆಯ ಶತಮಾನದಲ್ಲಿ ರಾಜರು ಭಾರತೀಯ ವಿದ್ಯೆಗಳಿಗಾಗಿ ಪಾಠಶಾಲೆಗಳಿಗೆ ದೇಣಿಗೆಗಳನ್ನು , ಜಮೀನುಗಳನ್ನು ಕೊಡುತ್ತಿದ್ದರೂ ಕೂಡ ಪಶ್ಚಿಮದೇಶದಿಂದ ಹೊಸತಾಗಿ ಉದಯವಾಗುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಥವಾ ಅರಿತುಕೊಳ್ಳುವ ಪ್ರಯತ್ನವಾಗಲಿಲ್ಲ. ಪಾಠಶಾಲೆಗಳಲ್ಲಿ ಹಾಗು ಗುರುಕುಲಗಳಲ್ಲಿ ಸಾಹಿತ್ಯ, ವ್ಯಾಕರಣ, ನ್ಯಾಯ, ವೇದಾಂತ ಮುಂತಾದ ಪಾರಂಪರಿಕ ...