ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಧೀರ.
ಕಾರ್ತವೀರ್ಯಾರ್ಜುನ - ಪ್ರಧಾನ ಸೇವಕ ಎಂದ ಉದ್ಘೋಷಿಸಿದ ಮಹಾರಾಜ ಧೀರ.
ಮೈಸೂರು ಅರಮನೆಯನಲ್ಲಿ ನಡೆಯುವ ಖಾಸಗಿ ದರ್ಬಾರ್ ನ್ನು ಆಡಿಕೊಳ್ಳುವ ವರ್ಗವೊಂದು ರಾಜರ ಕೊಡುಗೆಗಳನ್ನು ಅಲ್ಲೆಗೆಳೆಯುವ ಪ್ರಯತ್ನ ಮಾಡುತ್ತಲೆ ಇರುತ್ತದೆ. ಇವರು ರಾಜಪ್ರಭುತ್ವವನ್ನು ಟೀಕಿಸಿ ಮಾತನಾಡುವುದುಂಟು . ರಾಜನ ಮಗನೆ ರಾಜನಾಗಬೇಕು, ಮತ್ಯಾರಿಗೂ ಅವಕಾಶಕಲ್ಪಿಸದ ವ್ಯವಸ್ಥೆ. ರಾಜರು ಸ್ತ್ರೀಲೋಲುಪರು, ಐಷಾರಾಮಿಗಳು, ವಿಲಾಸಿಜೀವಿಗಳಾಗಿದ್ದರು , ಪ್ರಜೆಗಳ ಕಷ್ಟಗಳಿಗೆ ಯಾವುದೆ ಸ್ಪಂದನೆಯಿಲ್ಲದ ವ್ಯವಸ್ಥೆ. ಇವೆ ಮೊದಲಾದ ಟೀಕೆಗಳನ್ನು ರಾಜಪ್ರಭುತ್ವದ ವಿಷಯದಲ್ಲಿ ಕೇಳುತ್ತೆವೆ. ಇದು ವಾಸ್ತವಿಕವೆ ? ರಾಜಪ್ರಭುತ್ವವು ಈಗ ಪ್ರಸಕ್ತವಲ್ಲದಿರಬಹುದು, ಆದರೆ ಆ ರಾಜಪ್ರಭುತ್ವವಿದ್ದ ಕಾಲದಲ್ಲಿ ಆಡಳಿತ ವ್ಯವಸ್ಥೆಯೆಲ್ಲವೂ ಇವರೆಲ್ಲ ಆರೋಪಿಸುವ ದೋಷಗಳಿಂದಲೆ ಕೂಡಿತ್ತೆ . ರಾಜರಲ್ಲಿ ನೈತಿಕತೆಯೆ ಇರಲಿಲ್ಲವೆ ? ರಾಜನಿಗೆ ಸಾಮಾನ್ಯ ಪ್ರಜೆಯ ಕುರಿತು ಕಾಳಜಿಯೆ ಇರಲಿಲ್ಲವೆ ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ . ಇದಕ್ಕ್ಕೆಲ್ಲಾ ಉತ್ತರವನ್ನು ಕಂಡುಕೊಳ್ಳಲ್ಲು ಕಾರ್ತವೀರ್ಯಾರ್ಜುನನ ಚರಿತ್ರೆಯನ್ನು ತಿಳಿಯಬೇಕು .
ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ ಧರ್ಮಶೀಲ , ಪರಾಕ್ರಮೀ ಕ್ಷತ್ರಿಯ . ತಂದೆಯು ಸ್ವರ್ಗಸ್ಥನಾದ ಮೇಲೆ ಮಂತ್ರಿಗಳು ಹಾಗೂ ಪುರೋಹಿತರು ಪಟ್ಟಾಭಿಷೇಕಕ್ಕೆ ತಯಾರಾಗಿ ರಾಜನಾಗುವಂತೆ ಪ್ರಾರ್ಥಿಸಿದರು . ಅವರಷ್ಟೆ ಅಲ್ಲದೆ ಪೌರಜನರೆಲ್ಲರೂ ಅವನನ್ನು ರಾಜನಾಗುವಂತೆ ಕೇಳಿಕೊಂಡರು . ಆದರೆ ಕಾರ್ತವೀರ್ಯಾರ್ಜುನನು ಮಾತ್ರ ಅವರೆಲ್ಲರ ಪ್ರಾರ್ಥನೆಯನ್ನು ನಯವಾಗಿ ನಿರಾಕರಿಸಿದನು . ಅವನು ಹೇಳುವ ಕಾರಣಗಳು ಇಂದಿನ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಂದೇಶ.
ನಾಹಂ ರಾಜ್ಯಂ ಕರಿಷ್ಯಾಮಿ ಮಂತ್ರಿಣೋ ನರಕೋತ್ತರಮ್ | ಯದರ್ಥಂ ಗೃಹ್ಯತೇ ಶುಲ್ಕಂ ತದನಿಷ್ಪಾದಯನ್ ವೃಥಾ |
ಪಣ್ಯಾನಾಂ ದ್ವಾದಶಂ ಭಾಗಂ ಭೂಪಾಲಾಯ ವಣಿಗ್ಜನಾಃ | ದತ್ವಾತ್ಮರಕ್ಷಿಭಿರ್ಮಾರ್ಗೆ ರಕ್ಷಿತೋ ಯಾತಿ ದಸ್ಯುತಃ |
ಗೋಪಾಶ್ಚ ಘೃತತಕ್ರಾದೇಃ ಷಡಂಗಂ ಚ ಕೃಷಿವಲಾಃ | ದತ್ವಾನ್ಯದ್ಭೂಭುಜೇ ದದ್ಯುರ್ಯದಿ ಭಾಗಂ ತತೋಧಿಕಮ್ | ಪಣ್ಯಾದೀನಾಮಶೇಷಾಣಾಂ ವಣಿಜೋ ಗೃಹ್ಣತಸ್ತತಃ ॥ (ಮಾ.ಪು -16-124)
ನರಕದ ಭೋಗವನ್ನು ಕೊಡುವ ರಾಜ್ಯಭಾರವನ್ನು ನಾನು ಮಾಡುವುದಿಲ್ಲ. ವರ್ತಕರು ವ್ಯಾಪಾರಮಾಡುವ ವಸ್ತುಗಳಲ್ಲಿ ಹನ್ನೆರಡನೆಯ ಒಂದು ಭಾಗವನ್ನು ರಾಜನಿಗೆ ಶುಲ್ಕ ರೂಪದಲ್ಲಿ ಕೊಡುವರು. ಹಾಗೆ ಗೊಲ್ಲರು ತುಪ್ಪ-ಮಜ್ಜಿಗೆಗಳಲ್ಲಿಯೂ ಕೃಷಿಮಾಡುವ ಜನರು ಬೆಳೆದ ವಸ್ತುಗಳಲ್ಲಿಯೂ ಆರನೆಯ ಒಂದು ಭಾಗವನ್ನು ಶುಲ್ಕವಾಗಿ ಕೊಡುವರು. ಅದು ರಾಜ್ಯದ ಅಭಿವೃದ್ಧಿಗಾಗಿ , ಪ್ರಜೆಗಳು ಹಾಗೂ ವ್ಯಾಪಾರ ಮಾಡುವ ವ್ಯಾಪಾರಿಗಳು ಕಳ್ಳಕಾಕರ ಭಯವಿಲ್ಲದೆ ಒಡಾಡುವ ವಾತಾವರಣದ ನಿರ್ಮಾಣಕ್ಕಾಗಿ, ಆಂತರಿಕ ಬಾಹ್ಯ ಸುರಕ್ಷತೆಗಾಗಿ ಉಪಯೋಗವಾಗಬೇಕು . ಅಂದರೆ law and order, internal external security, ease of doing business ಇದು ಕರವನ್ನು ತುಂಬುವ ವ್ಯಾಪಾರಿಗಳು ರಾಜನಿಂದ ನಿರೀಕ್ಷಿಸುವ ವ್ಯವಸ್ಥೆ . ಹೀಗೆ ಯಾವ ಕಾರಣಕ್ಕಾಗಿ ಶುಲ್ಕವನ್ನು ತೆಗೆದುಕೊಳ್ಳಲಾಗುವುದೊ ; ಆ ಕಾರ್ಯವನ್ನು ಸಾಧಿಸದೇ ರಾಜ್ಯಭಾರಮಾಡುವುದು ಅತ್ಯಂತ ಪಾಪಕರವು . ರಾಜನಿಂದ ಸಿಗಬೇಕಾದ ರಕ್ಷಣೆಯ ಜವಾಬ್ದಾರಿಯನ್ನು ವ್ಯಾಪಾರಿಗಳು ಅನ್ಯರಿಂದ ಪಡೆಯುವಂತಾದರೆ , ಆಗ ಪ್ರಜೆಗಳು ಮಾಡುವ ಪುಣ್ಯಕರ್ಮಗಳು ರಾಜನನ್ನು ನಾಶಮಾಡುತ್ತವೆ . ರಾಜನು ಪಡೆಯುವ ಆ ಶುಲ್ಕವು ರಾಜನನ್ನು ನರಕಕ್ಕೆ ಕೊಂಡೊಯ್ಯುತ್ತವೆ .
"ನಿರೂಪಿತಮಿದಂ ರಾಜ್ಞಃ ಪೂರ್ವೈಃ ರಕ್ಷಣವೇತನಂ | ಅರಕ್ಷಂಶ್ಚೋರತಃ ಚೋರಃ ತದ್ಧನಂ ನೃಪತೇರ್ಭವೇತ್ "|
ರಾಜನು ರಾಜ್ಯವನ್ನು ರಕ್ಷಣೆ ಮಾಡುವ ಕಾರ್ಯಕ್ಕಾಗಿ ವೇತನ ರೂಪದಲ್ಲಿ ಪ್ರಜೆಗಳು ಶುಲ್ಕವನ್ನು (tax) ಕೊಡುವರು . ಕರವು ರಾಜನಿಗೆ ಪ್ರಜೆಗಳು ಕೊಡುವ ವೇತನವೆಂದು ಪೂರ್ವಜರು ತಿರ್ಮಾನಿಸಿರುವರು . ಇದು ಗಮನಿಸಬೇಕಾದ ಅಂಶ . ರಾಜನು ಕರವನ್ನು ಅಧಿಕಾರದಿಂದ ಪಡೆಯುತ್ತಿಲ್ಲ, ಹೊರತಾಗಿ ತಾನು ಮಾಡುವ ಕರ್ತವ್ಯದ ಪ್ರತಿಫಲವಾಗಿ ಪಡೆಯುತ್ತಿರುವನು . ಹಾಗಾಗಿ ಅವನಿಗೆ ಉತ್ತರದಾಯಿತ್ವವಿದೆ . ಹಾಗಾಗಿ ತನ್ನ ಕೆಲಸವನ್ನು ಮಾಡದೆ ಕೇವಲ ಕರವನ್ನು ಸಂಗ್ರಹ ಮಾಡಿದರೆ, ವೇತನವನ್ನು ಪಡೆದರೆ ಅದು ಕಳ್ಳತನದ ಹಣವಾಗುವುದು . ರಾಜನು ಚೋರನಾಗುವನು . ಅಂತಹವನು ನಿಶ್ಚಯವಾಗಿ ನರಕವನ್ನು ಹೊಂದುವವನು . ಆದ್ದರಿಂದ ಈ ಗುಣಗಳನ್ನು ಹೊಂದಿರದ ನಾನು ಖಂಡಿತ ರಾಜನಾಗುವುದಿಲ್ಲ ಎಂದು ಮಂತ್ರಿಗಳ ಹಾಗೂ ಪ್ರಜೆಗಳ ಮನವಿಯನ್ನು ತಿರಸ್ಕರಿಸುತ್ತಾನೆ . ಹಾಗಾದರೆ ರಾಜ್ಯವನ್ನಾಳುವ ಸಮರ್ಥನಾರು ಎನ್ನುವ ಪ್ರಶ್ನೆಗೆ ಅವನು ಕೊಡುವ ಉತ್ತರ ತುಂಬಾ ಮಾರ್ಮಿಕವಾಗಿದೆ .
"ತಸ್ಮಾದ್ಯದಿ ತಪಸ್ತಪ್ತ್ವಾ ಪ್ರಾಪ್ತೋ ಯೋಗಿತ್ವಮೀಪ್ಸಿತಂ | ಭುವಃ ಪಾಲನಸಾಮರ್ಥ್ಯಯುಕ್ತ ಎಕೋ ಮಹೀಪತಿಃ ''|
ಯಾವನು ತಪಸ್ಸನ್ನಾಚರಿಸಿ ಯೋಗಿತ್ವವನ್ನು ಪಡೆಯುವವನೋ ಅಂತಹ ಭೂಮಿಯನ್ನು ರಕ್ಷಿಸುವ ಸಾಮರ್ಥ್ಯಯುಕ್ತನಾದ ಯೋಗಿಯೊಬ್ಬನೆ ರಾಜನಾಗಲು ಸಮರ್ಥ . ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ ಇಂದಿಗೂ ಕೂಡ ಅಮೇರಿಕಾದ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಮಾನಸಿಕ ಧೃಢತೆ (Mental stability), ಶಿಸ್ತು (Discipline) , ನಡವಳಿಕೆ (Public conduct), ಬಗ್ಗೆ ಬಹಳ ಚರ್ಚೆಯಾಗುತ್ತದೆ . ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ರಾಷ್ಟ್ರದ ನಾಯಕತ್ವವನ್ನು ವಹಿಸಿಕೊಳ್ಳಲು ದೈಹಿಕ ಹಾಗೂ ಮಾನಸಿಕ ಅತ್ಯಂತ ಸಧೃಢತೆ ಮುಂತಾದ. ಈ ಎಲ್ಲಾ ಗುಣಗಳು ಅನಿವಾರ್ಯ. ಯೋಗಸಿದ್ಧಿಯು ಈ ಎಲ್ಲಾ ಗುಣಗಳನ್ನು ತಂದುಕೋಡುವುದಲ್ಲದೆ , ಅತ್ಯಂತ ಪ್ರಮುಖವಾದ ನೈತಿಕತೆ, ಧಾರ್ಮಿಕ ಪ್ರಜ್ಞೆ, ಸಮಚಿತ್ತತ್ವ , ಸರ್ವಜನಾನುರಾಗ, ದಯೆ, ಮುಂತಾದ ಈ ಕಾಲದಲ್ಲಿ ಮರೆತಿರುವ ಆದರೆ ಅತ್ಯಂತ ಅನಿವಾರ್ಯವಾದ ಗುಣಗಳನ್ನು ತಂದುಕೊಡುತ್ತದೆ . ಕೇವಲ ಬಾಹ್ಯದ ಸಧೃಢತೆಯಿಂದ ನಾಯಕನು ಕೆಲಸಗಳನ್ನು ಸಕ್ಷಮವಾಗಿ ಮಾಡಬಲ್ಲನಾದರೂ , ಕೆಲಸಗಳಲ್ಲಿ ಪ್ರಾಮಾಣಿಕತೆಯನ್ನು , ಪರಿಮಾಣಿಕಾರಿತ್ವವನ್ನು, ತರುವ ಗುಣ ಆಂತರಿಕ ಸಧೃಢತೆಯಿಂದಲೆ ಸಾಧ್ಯ . ಇದು ತಪಸ್ಸಿನಂದಲೆ ಸಾಧ್ಯ. ಹಾಗಾಗಿ ಕಾರ್ಯವೀರ್ಯಾರ್ಜುನನು ಯೋಗಕ್ಕೆ ಮಹತ್ವವನ್ನು ಕೊಟ್ಟನು .
ಇದನ್ನು ತಿಳಿದ ಮಂತ್ರಿಯೋಬ್ಬ ಕಾರ್ತವೀರ್ಯಾರ್ಜುನನಿಗೆ ಸಹ್ಯಾಚಲ ಪರ್ವತದಲ್ಲಿ ಆಶ್ರಮದಲ್ಲಿರುವ ಯೋಗವಿದ್ಯಾಪ್ರವರ್ತಕನಾದ ಪರಮಾತ್ಮನ ದತ್ತಾವತಾರದ ಬಗ್ಗೆ ತಿಳಿಸಿದ . ಹಾಗೂ ದತ್ತನಲ್ಲಿ ಶರಣು ಹೊಂದಿ ಯೋಗವಿದ್ಯೆಯನ್ನು ಸಂಪಾದಿಸಿಕೊಳ್ಳುವಂತೆ ಸೂಚಿಸಿದ .
ಕಾರ್ತವೀರ್ಯಾರ್ಜುನನು ದತ್ತನ ಬಳಿ ಹೋಗಿ ಅನೇಕ ವಿಘ್ನಗಳನ್ನು ದಾಟಿ ಅವನ ಆಶೀರ್ವಾದವನ್ನು ಹಾಗೂ ಯೋಗವಿದ್ಯೆಯನ್ನು ಪಡೆದ . ಅದೇ ರೀತಿಯಾಗಿ ಆಡಳಿತಕ್ಕೆ ಅನುಕೂಲವಾಗುವ ಅನೇಕ ವರಗಳನ್ನು ಕೇಳಿದ . ಅವನು ಕೇಳುವ ವರಗಳ ಕುರಿತಾಗಿಯೆ ವಿಸ್ತಾರವಾದ ಪ್ರಭಂಧವನ್ನು ಬರೆಯಬಹುದು .
ಯದಿ ದೇವ ಪ್ರಸನ್ನಸ್ವಂ ತತ್ಪಯಚ್ಛರ್ಧಿಮುತ್ತಮಮ್ | ಯಥಾ ಪ್ರಜಾಂ ಪಾಲಯೇಯಂ ನ ಚಾಧರ್ಮಮವಾಪ್ನುಯಾಮ್ ||
ಪರಾನುಸ್ಮರಣಂ ಜ್ಞಾನಮಪ್ರತಿದ್ವಂಧ್ವತಾಂ ರಣೇ | ಸಹಸ್ರಮಾಪ್ತುಮಿಚ್ಛಾಮಿ ಬಾಹೂನಾಂ ಲಘುತಾಗುಣಮ್ ||
ಅಸಜ್ಜಾ ಗತಯಃ ಸನ್ತು ಶೈಲಾಕಾಶಾಮ್ಬುಭೂಮಿಷು | ಪಾತಾಲೇಷು ಚ ಸರ್ವೇಷು ವಧಶ್ಚಾಪ್ಯಧಿಕಾನ್ನರಾತ್
ತಥಾಮಾರ್ಗಪ್ರವೃತ್ತಸ್ಯ ಸನ್ತು ಸನ್ಮಾರ್ಗದೇಶಿಕಾಃ | ಸನ್ತು ಮೇಃತಿಥಯಃ ಶ್ಲಾಘ್ಯಾ ವಿತ್ತಂ ವಾನ್ಯತಥಾಕ್ಷಯಮ್ |
ಅನಷ್ಟದ್ರವ್ಯತಾ ರಾಷ್ಟ್ರೇ ಮಮಾನುಸ್ಮರಣೇನ ಚ | ತ್ವಯಿ ಭಕ್ತಿಶ್ಚ ದೇವಾಸ್ತು ನಿತ್ಯಮವ್ಯಭಿಚಾರಿಣಿ |
ಸಮೃದ್ಧಿಯಿಂದ ರಾಜ್ಯವನ್ನು ಪರಿಪಾಲಿಸುವಂತವಹ, ಅಧರ್ಮದಲ್ಲಿ ಭಾಗಿಯಾಗದಂತಹ ಸಮೄದ್ಧಿಯನ್ನು ಕರುಣಿಸು . ಪರನಾದ ಪರಮಾತ್ಮನ ಅನುಸಂಧಾನ ಎಂದೂ ತಪ್ಪದಂತಹ ಜ್ಞಾನವನ್ನು ಕೊಡು . ಸಂಗ್ರಾಮದಲ್ಲಿ ಎದುರಾಳಿಯಿಲ್ಲದಿರುವಂತೆ ಮಾಡುವ ಶಕ್ತಿಯನ್ನು ಕೊಡು .ಸಹಸ್ರ ಬಾಹುಗಳನ್ನು ಕರುಣಿಸು . ನನಗಿಂತಲೂ ಮಹಾತ್ಮನಾದ ವ್ಯಕ್ತಿಯಿಂದ ನನಗೆ ವಧವು ಸಂಭವಿಸಲಿ. ನಾನು ಅಮಾರ್ಗದಲ್ಲಿ ಪ್ರವರ್ತಿಸಿದರೆ ಅದನ್ನು ತಿದ್ದುವ ಮಾರ್ಗದರ್ಶಕರು ದೊರಕಲಿ. ರಾಷ್ಟ್ರ್ರದಲ್ಲಿ ನನ್ನನ್ನು ಸ್ಮರಿಸುವುದರಿಂದ ಕಳೆದ ಸಂಪತ್ತೆಲ್ಲಾ ದೊರಕಲಿ( ಆದ್ದರಿಂದಲೆ ಈಗಲೂ ಕಳೆದು ಹೋದ ಪದಾರ್ಥವು ದೊರೆಯಬೇಕೆಂದು ಕಾರ್ತವೀರ್ಯಾರ್ಜುನನ ಸ್ಮರಣೆ ಮಾಡುತ್ತೇವೆ .) ಇದೆ ಮುಂತಾದ ಅತ್ಯತ್ತಮ ಆಡಳಿತಕ್ಕೆ ಬೇಕಾಗುವ ವರಗಳನ್ನು ಕೇಳಿದನೆ ಹೊರತು, ತನ್ನ ಉತ್ಕರ್ಷಕ್ಕಾಗಿ ಯಾವುದೆ ವರಗಳನ್ನು ಕೇಳಲಿಲ್ಲ.
ಇದು ನಮ್ಮ ಪ್ರಾಚೀನರ ರಾಜಕೀಯ ವಿಜ್ಞಾನ (Political Science) . ಇಂದು ಪಠ್ಯ ಪುಸ್ತಕ ತೆರೆದರೆ ರಾಜಕೀಯ ವಿಜ್ಞಾನದಲ್ಲಿ ಕೇವಲ ಪಾಶ್ಚಾತ್ಯರ ಚಿಂತನೆಗಳು , ವಾಕ್ಯಗಳೆ ರಾರಾಜಿಸುತ್ತವೆ. ಹೆಚ್ಚೆಂದರೆ ಕೌಟಿಲ್ಯನ ಅರ್ಥಶಾಸ್ತ್ರದ ಉಲ್ಲೇಖ ಕೆಲವು ಕಡೆ ದೊರೆಯುತ್ತವೆ . ಆದರೆ ನಮ್ಮ ಪುರಾಣ ಹಾಗೂ ಧರ್ಮಶಾಸ್ತ್ರ ಸಾಹಿತ್ಯದಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ ಅದನ್ನು ಈಗೀನ ಸಂದರ್ಭಕ್ಕೆ, ಭಾಷೆಗೆ , ಶೈಲಿಗೆ ಅನುಗುಣವಾಗಿ ನಿರೂಪಿಸುವ ಅನಿವಾರ್ಯತೆಯಿದೆ . ಅದಕ್ಕಾಗಿ ಸಂಸ್ಕೃತಜ್ಞರು ನ್ಯಾಯ- ವ್ಯಾಕರಣಾದಿ ಶಾಸ್ತ್ರಗಳಲ್ಲ್ದೆ , ಆಧುನಿಕ Environmental science, Political science, Social Science , Ethics , Jurisprudence , Moral Science ಮುಂತಾದ ಆಧುನಿಕ ಶಾಖೆಗಳನ್ನು ಪೂರ್ವಪಕ್ಷಗಳ ರೀತಿಯಲ್ಲಿ ಅಭ್ಯಸಿಸಬೇಕಾಗಿದೆ . ತದನಂತರ ಈ ವಿಷಯದಲ್ಲಿ ಭಾರತೀಯ ದೃಷ್ಟಿಕೋನವನ್ನು ಜಗತ್ತಿನ ಮುಂದಿಡಬೇಕಾಗಿದೆ .
ಡಾ.ಶ್ರೀನಿಧಿ ಪ್ಯಾಟಿ
ಪೂರ್ಣಪ್ರಜ್ಞ ಸಂಶೋಧನ ಮಂದಿರ.ಬೆಂಗಳೂರು.

Comments
Post a Comment