ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ
ಕಾರ್ಮಿಕರ ಹಿತರಕ್ಷಣೆ - ಭಾರತೀಯ ಚಿಂತನೆ
ಸನಾತನಧರ್ಮದ ನೀತಿ ಮೌಲ್ಯಗಳು ಸಾರ್ವಕಾಲಿಕ . ರಷ್ಯಾದಲ್ಲಿ ಒಂದು ಕಾಲದಲ್ಲಿ ಜಮೀನ್ದಾರಿಕೆಯ ವಿರುದ್ಧವಾಗಿ ಹಾಗೂ ಜಮೀನ್ದಾರರ ದಬ್ಬಾಳಿಕೆಯ ವಿರುದ್ಧವಾಗಿ ,ಕಮ್ಯುನಿಸಮ್ ನ ಚಿಂತನೆಯೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಯಿತು . ಆದರೆ ಆ ಹೋರಾಟವು ಸಕಾರಾತ್ಮವಾಗಿ ಕೊನೆಗೊಳ್ಳದೆ ,ಹಿಂಸೆ , ಅನಾಚಾರ, ಅಸ್ಥಿರತೆಯಲ್ಲಿ ಕೊನೆಗೊಂಡು ಅನೇಕ ಸಾವು-ನೋವುಗಳನ್ನು ಕಂಡಿತು . ಜಗತ್ತಿನ ಇತಿಹಾಸದಲ್ಲಿ ಫ್ರೆಂಚ ಕ್ರಾಂತಿ ಹೊರತುಪಡಿಸಿದರೆ , ಇನ್ನಾವುದೆ ಕ್ರಾಂತಿಗಳಿಂದ ಸಮಾಜದ ನಿರ್ಮಾಣವು ಸಾಧ್ಯವಾಗಿಲ್ಲ. ಉಳಿದೆಲ್ಲ ಕ್ರಾಂತಿಗಳು ಇರುವ ವ್ಯವಸ್ಥೆಯನ್ನು ಉರುಳಿಸಿದವೆ ಹೊರತು ಹೊಸ ಸಮಾಜವನ್ನು ಕಟ್ಟಲಿಲ್ಲ. ಈ ಚಿಂತನೆಗಳು ಬೆಳೆದು ಕಾರ್ಮಿಕ ಸಂಘಟನೆಗಳು , ಕಾರ್ಮಿಕ ನಿಯಮಗಳೆಲ್ಲಾ ಬಂದು "'ಲೇಬರ್ ಡಿಗ್ನಿಟಿ"' ಎಂಬ ಚಿಂತನೆಯೊಂದಿಗೆ ಕಾರ್ಮಿಕರ ಹಿತಸಂರಕ್ಷಣೆ, ಮೂಲಭೂತ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಮೂಡಿತು . ಆದರೆ ಇದೇ ಕಾರ್ಮಿಕ ಸಂಘಟನೆಗಳು ರಾಜಕೀಯದಿಂದ ಪ್ರೇರಿತವಾಗಿ ,ಕಾರ್ಮಿಕರ ಹಿತರಕ್ಷಣೆ ನೆಪವೊಡ್ಡಿ ಪದೆ ಪದೆ ಮುಷ್ಕರಗಳನ್ನು ಬಂದಗಳನ್ನು ಕರೆಕೊಟ್ಟಿದ್ದರಿಂದ , ಕಾರ್ಖಾನೆಯ ಮಾಲಿಕರು ನಷ್ಟಕ್ಕೆ ಸಿಲುಕಿಕೊಂಡು ಕಾರ್ಖಾನೆಯನ್ನು ಮುಚ್ಚಿದಾಗ , ಬಡ ಕಾರ್ಮಿಕರು ಬಿದಿಗೆ ಬಿದ್ದ ಅನೇಕ ಪ್ರಸಂಗಗಳು ಕಳೆದೈದಾರು ದಶಕಗಳಲ್ಲಿ ನಡೆದಿವೆ . ಹಾಗಾದರೆ ಇಂತಹ ಜ್ವಲಂತ ಸಮಸ್ಯೆಯಾದ ಕಾರ್ಮಿಕರ ಮೂಲಭೂತ ಹಕ್ಕುಗಳು, ಅದರ ರಕ್ಷಣೆ ಹಾಗೂ ಮಾಲಿಕರ ಕರ್ತವ್ಯಗಳ ಬಗ್ಗೆ ಭಾರತೀಯ ಪ್ರಾಚೀನ ಸಾಹಿತ್ಯಗಳಲ್ಲಿ ಚರ್ಚೆ ನಡೆದಿದೆಯೆ ಎಂದು ಕುತೂಹಲ ಮೂಡುವುದು ಸಹಜ .
ವರಾಹಪುರಾಣದ ಇನ್ನೂರೊಂದನೆಯ ಅಧ್ಯಾಯದಲ್ಲಿ ಕುತೂಹಲಕಾರಿಯಾದ ಈ ಸಮಸ್ಯೆಗೆ ಪ್ರಸಕ್ತವಾದ ಘಟನೆಯೊಂದನ್ನು ನಿರೂಪಿಸುತ್ತಾರೆ . ನಚಿಕೇತನು ಯಮನ ಪಟ್ಟಣಕ್ಕೆ ಭೆಟಿಯಿತ್ತು ಅಲ್ಲಿ ನೀಡುವ ಹಿಂಸೆಗಳ ವಿವರಗಳನ್ನೆಲ್ಲಾ ತಿಳಿಯುತ್ತಿರುತ್ತಾನೆ . ಯಮದೂತರೆಲ್ಲರೂ ಜೀವರ ಕರ್ಮಾನುಗುಣವಾಗಿ ಶಿಕ್ಷೆಯನ್ನು ನೀಡುವುದಕ್ಕಾಗಿ ಪ್ರತಿನಿತ್ಯ ಹಗಲಿರುಳು ಕೆಲಸ ಮಾಡುತ್ತಿರುತ್ತಾರೆ . ಚಿತ್ರಗುಪ್ತ ಯಮದೂತರ ಮೇಲ್ವಿಚಾರಕ . ಒಮ್ಮೆ ಯಮದೂತರೆಲ್ಲ ಚಿತ್ರಗುಪ್ತನ ಬಳಿ ಸೇರಿ
ವಯಂ ಶ್ರಾಂತಾಶ್ಚ ಕ್ಷೀಣಾಶ್ಚ ಹ್ಯನ್ಯಾನ್ಯೂಜಿತುಮರ್ಹಸಿ | ವಯಮನ್ಯತ್ಕರಿಷ್ಯಾಮಃ ಸ್ವಾಮಿನ್ ಕಾರ್ಯಂ ಸುದುಷ್ಕರಂ ||
ಅನ್ಯೇ ಹಿ ತಾವತ್ ತತ್ಕುರ್ಯುಃ ಯಥೇಷ್ಟಂ ತವ ಸುವ್ರತ | ಭಗವನ್ ಸ್ಮ ಪರಿಕ್ಲಿಷ್ಟಾಃ ತ್ರಾಹಿ ನಃ ಪರಮೇಶ್ವರ"
ಸ್ವಾಮಿಯೆ, ನಾವು ಈ ನರಕದಲ್ಲಿ ಅನೇಕ ರೀತಿಯಾದ ದಂಡನೆಗಳನ್ನು ಕೊಟ್ಟು ಬಹಳ ಬಳಲಿದ್ದೇವೆ, ಹಾಗಾಗಿ ಯಾವುದಾದರೂ ಬೇರೆ ಕಾರ್ಯವನ್ನು ಮಾಡುತ್ತೇವೆ. ಬೇರೆ ಯಾರಾದರೂ ನಮ್ಮ ಕೆಲಸವನ್ನು ನಿನ್ನ ಆಜ್ಞೆಯಂತೆ ಮಾಡಲಿ ,ಈ ಕೆಲಸವನ್ನು ಮಾಡಿ ಬಹಳ ಶ್ರಮಪಟ್ಟಿದ್ದೇವೆ , ನಮ್ಮನ್ನು ಕಾಪಾಡು'' ಎಂದು ನಿವೇದಿಸಿಕೊಳ್ಳುತ್ತಾರೆ . ಯಮದೂತರ ಈ ಮಾತನನ್ನು ಕೇಳಿ ಸಿಟ್ಟುಗೊಂಡ ಚಿತ್ರಗುಪ್ತನು ಮಂದೇಹರೆಂಬ ಯೋಧರನ್ನು ಇವರನ್ನು ದಂಡಿಸಲು ಹಾಗು ಕೊಲ್ಲಲು ಆದೇಶಿಸುತ್ತಾನೆ . ಇದರಿಂದ ಕಳವಳಗೊಂಡ ಯಮದೂತರು
ಶ್ರಾಂತಾ ವಾ ಕ್ಷುತಿಧಾ ವಾಪಿ ದುಃಖಿತಾ ವಾ ತಪೋಧನಾಃ | ಅಮಾತ್ಯಾ ಏವ ಜ್ಞಾತವ್ಯಾ ಭೃತ್ಯಾಶ್ಶತಸಹಸ್ರಶಃ ||
ಬಳಲಿದ , ಹಸಿದ , ದುಃಖಿತರಾದ ಸೇವಕರನ್ನು ಕುಟುಂಬದ ಸದಸ್ಯರೆಂದು ತಿಳಿದೆ ವ್ಯವಹರಿಸಬೇಕು . ಅವರ ದುಃಖಗಳನ್ನು ಪರಿಹರಿಸಬೇಕು . ಅದು ಬಿಟ್ಟು ನಮ್ಮನ್ನು ಕೊಲ್ಲಲು ಆಜ್ಞಾಪಿಸಿರುವುದು ಸರಿಯಲ್ಲ. ಈ ಮಂದೇಹರು ಜಗತ್ತಿನ ಕಲ್ಯಾಣದ ಕಾರ್ಯಕ್ಕಾಗಿಯೆ ಅವತರಿಸಿದವರು . ನಾವೂ ಅದಕ್ಕಾಗಿಯೆ ಅವತರಿಸಿದವರು . ಹಾಗಾಗಿ ನಮ್ಮನ್ನು ಕೊಲ್ಲಲು ಅವರನ್ನು ನಿಯಮಿಸಿರುವುದು ಸರಿಯಾದ ಕ್ರಮವಲ್ಲ . ಆದರೆ ನಿನ್ನ ಆಜ್ಞೆಯು ಸುಳ್ಳಾಗಲು ಸಾಧ್ಯವಿಲ್ಲ ಆದ್ದರಿಂದ ನಾವೂ ಮಂದೇಹರೊಂದಿಗೆ ಯುದ್ದಮಾಡುತ್ತೇವೆಂದು ನುಡಿದರು . ಘೋರವಾದ ಯುದ್ಧವು ಪ್ರಾರಂಭವಾಯಿತು . ಮೊದಲು ಯಮದೂತರು ಮಂದೇಹ ರಾಕ್ಷಸರನ್ನು ಕೊಲ್ಲಲು ಪ್ರಾರಂಭಿಸಿದರು . ಆದರೆ ನಂತರ ಚಿತ್ರಗುಪ್ತನ ಪ್ರೇರಣೆಯಿಂದ ಮಂದೇಹರೆಂಬ ಯೋಧರು ದೂತರನ್ನು ತಿನ್ನಲು ಪ್ರಾರಂಭಿಸಿದಾದ ಅವರೆಲ್ಲರೂ ಯಮಸ್ವರೂಪನೆ ಆದ ಜ್ವರನೆಂಬ ದೇವನನ್ನು ಮೊರೆಹೊಕ್ಕರು . ಜ್ವರನು ಭಯಂಕರ ರೂಪವನ್ನು ತಳೆದನು . ಅವನ ಸಹಾಯದಿಂದ ದೂತರೆಲ್ಲರೂ ರಾಕ್ಷಸರನ್ನೆಲ್ಲಾ ಸಂಹರಿಸಲು ಪ್ರಾರಂಭಿಸಿದರು . ಚಿತ್ರಗುಪ್ತನಿಗೆ ತನ್ನ ತಪ್ಪಿನ ಅರಿವಾಗತೊಡಗಿತು . ಮಾತುಕಥೆಯ ಮೂಲಕ ಬಗೆಹರಿಸಬೇಕಾದದ್ದನ್ನು ಬಲಪ್ರಯೋಗದ ಮೂಲಕ ಪರಿಹರಿಸಲು ಪ್ರಯತ್ನಿಸಿದ್ದು ಸಾವು-ನೋವುಗಳಿಗೆ ಎಡೆಮಾಡಿಕೊಟ್ಟಿತ್ತು . ಈ ಮಾರಣಹೋಮ ನಡೆಯುತ್ತಿರುವಾಗಲೆ ಯಮನೆ ತಾನು ತನ್ನ ಮೂಲರೂಪದಿಂದ ಪ್ರಕಟನಾಗಿ ಮಧ್ಯಪ್ರವೇಶಿಸಿ ಯುದ್ಧವನ್ನು ತಡೆದು ಉಳಿದ ರಾಕ್ಷಸರ ಸಂಹಾರವನ್ನು ತಡೆದನು . ಜ್ವರನನ್ನು ತನ್ನ ಮನೆಗೆ ಸಾದರದಿಂದ ಕರೆದುಕೊಂಡು ಹೋಗಿ ಸತ್ಕರಿಸಿ ಕೋಪವನ್ನು ಬಿಡುವಂತೆ ಕೇಳಿಕೊಂಡನು . ಅದೇ ರೀತಿಯಾಗಿ ಚಿತ್ರಗುಪ್ತನಿಗೂ ದೂತರಿಗೂ ಸಂಧಾನದ ಮೂಲಕ ಸ್ನೇಹವನ್ನುಂಟುಮಾಡಿದನು . ಅನಂತರ ದೂತರೆ ಚಿತ್ರಗುಪ್ತನ ಬಳಿ ಬಂದು ವಿವಿಧ ಶಿಕ್ಷೆಗಳನ್ನು ವಿಧಾನಿಸುವ ಕೆಲಸದಲ್ಲಿ ನಮ್ಮನ್ನು ನಿಯೋಜಿಸು ಎಂದು ಪ್ರಾರ್ಥಿಸಿ ಅವನ ಆಜ್ಞೆಯಂತೆ ಮತ್ತೊಮ್ಮೆ ಕೆಲಸಕ್ಕೆ ಮರಳಿದರು.
ಇದು ಅತ್ಯಂತ ಪ್ರಸಕ್ತವಾದ ಘಟನೆಯಾಗಿದೆ. ಸಾಮಾನ್ಯವಾಗಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆಯನ್ನು ನಡೆಸಿದಾಗ ಅದು ತಮ್ಮ ವಿರಿದ್ಧವಾಗಿರುತ್ತದೆಯೆಂದು ತೀರ್ಮಾನಿಸಿ ಬಲಪ್ರಯೋಗದಿಂದ ಅದನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ . ಹಾಗೆ ಮಾಡಿದಾಗ ಪರಿಸ್ಥಿತಿಯು ಉಲ್ಬಣಗೊಂಡು ಅನೇಕ ಸಾವು ನೋವುಗಳನ್ನು ಕಾಣುತ್ತೇವೆ . ಆದರೆ ಉತ್ತಮ ನಾಯಕನು ಯಾವಾಗಲೂ ಸಂಧಾನಕ್ಕಾಗಿ ಪ್ರಯತ್ನಿಸಬೇಕು . ಯಮನು ತನ್ನ ಮತ್ತೊಂದು ರೂಪದಿಂದ ಯಮದೂತರ ಪಕ್ಷವನ್ನು ವಹಿಸಿ ಅವರಿಗಾದ ಅನ್ಯಾಯವನ್ನು ಹೋಗಲಾಡಿಸಲು ಬೆಂಬಲಿಸಿದನು . ಆದರೆ ಚಿತ್ರಗುಪ್ತನಲ್ಲಿ ದ್ವೇಷಬರುವಂತೆ ಮಾಡದೆ , ಸಂಧಾನದಿಂದ ಪರಿಸ್ಥಿಯನ್ನು ತಿಳಿಗೊಳಿಸಿ ಲೋಕವ್ಯವಸ್ಥೆಯು ಎಂದಿನಂತೆ ನಡೆಯುವಂತೆ ಮಾಡಿದನು . ಪ್ರತಿಭಟನೆಯ ಮೂಲ ಆಶಯವನ್ನು ಬಿಟ್ಟು , ಅಹಂಕಾರಿಂದ ವರ್ತಿಸಿದಾಗ ಇಬ್ಬರಿಗೂ ನಷ್ಟವಾಗುವುದು ಖಂಡಿತ . ಹಾಗಾಗಿ ಕಾರ್ಮಿಕರೂ ಕೂಡ ಆಮಿಷಕ್ಕೊಗೊಳಗಾಗದೆ ಮೂಲ ಸಮಸ್ಯೆಯ ನಿವಾರಣೆಗಾಗಿ ಪ್ರಯತ್ನಿಸಬೇಕು . ಇಂತಹ ಸಂದರ್ಭದಲ್ಲಿ ನಿಜವಾದ ನಾಯಕನು ಸಂಧಾನ ಮಾರ್ಗವನ್ನೆ ಆಯ್ದುಕೊಳ್ಳಬೇಕು ಹಾಗೂ ನಿಜವಾಗಿಯೂ ಅಹಿತಕಾರಿಯಾಗಿದ್ದಲ್ಲಿ ಸಮಸ್ಯೆಯನ್ನು ಪರಿಹರಿಸಿ ಅವಾಂತರಗಳನ್ನು ತಡೆಯಬೇಕು, ಸಂಧಾನ ಸಾಧ್ಯವೆ ಇಲ್ಲದಿದ್ದಾಗ ಬೇರೆ ಮಾರ್ಗಗಳನ್ನು ಅನುಸರಿಸಬೇಕು ಎಂಬ ಸಂದೇಶವನ್ನು ಪುರಾಣದ ಈ ಘಟನೆಯಿಂದ ತಿಳಿಯಲು ಸಾಧ್ಯವಾಗಿದೆ . ಕಮ್ಯುನಿಸ್ಟ್ ಚಿಂತನೆಯು ಉಲ್ಭಣಗೊಂಡು, ವಿಕಾರವನ್ನು ಪಡೆದು , ಶ್ರೀಮಂತ ಬಡವರ ಮಧ್ಯೆ ಪರಸ್ಪರ ದ್ವೇಷವನ್ನು ಬೆಳೆಸಿತು. ಶ್ರಿಮಂತಿಕೆಯು ದೊಡ್ಡ ಅಪರಾಧವೆನ್ನುವ ಚಿಂತನೆಯನ್ನು ಬೆಳೆಸಿತು . ದ್ವೇಷವು ಮನುಷ್ಯನನ್ನು ನಕಾರಾತ್ಮಕ ಕೆಲಸಗಳನ್ನು ಮಾಡಲು ಪ್ರೇರೆಪಿಸುತ್ತದೆ . ಹಾಗಾಗಿ ಸಮಸ್ಯೆಗಳ ಪರಿಹಾಕ್ಕಾಗಿ ದ್ವೇಷ ಬಿತ್ತಿ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುವ ಇಂತಹ ಅನೇಕ ಚಿಂತನೆಗಳನ್ನು ತೊರೆದು, ಸಮಸ್ಯೆಗಳನ್ನು ಪರಿಹರಿಸಿ ಎಲ್ಲರನ್ನು ಒಗ್ಗೂಡಿಸುವ ಭಾರತೀಯ ಚಿಂತನೆಗಳತ್ತ ಮರಳೋಣ .
ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ
ಪೂರ್ಣಪ್ರಜ್ಞ ಸಂಶೋಧನ ಮಂದಿರ ,ಬೆಂಗಳೂರು.
Comments
Post a Comment