ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ !

 


ಇಂಡೊಲೊಜಿ ವಿಮರ್ಶೆ -11 – ಹೆಚ್.ಹೆಚ್.ವಿಲ್ಸನ್- ಆ ಕಾಲದ ಶ್ರೇಷ್ಠ ಸಂಸ್ಕೃತ ಪಂಡಿತ "ಕೃತಿಚೋರನೆ !

ಭಾರತದ ಇತಿಹಾಸ ,ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಶ್ರೇಷ್ಠ ಪಂಡಿತರು ಅನೆಕರಿದ್ದಾರೆ. ಹಾಗೆಯೆ ವಿದ್ವಾಂಸ ಎಂಬ ಹಣೆಪಟ್ಟಿಯನ್ನು ಹೊತ್ತ್ತು ಅನೇಕ ವರ್ಷ ಮೆರೆದ ಮೇಲೆ , ನಿಜ ಬಣ್ಣ ಬಯಲಾದ ಕಥೆಗಳಿಗೂ ಕಡಿಮೆಯೆನಿಲ್ಲ. ಹೆಚ್.ಹೆಚ್.ವಿಲ್ಸನ್ ತನ್ನ ಕಾಲದ  ಶ್ರೇಷ್ಠ ಪಂಡಿತನೆಂದು ಪ್ರಸಿದ್ಧನಾದವನು. ಎಸಿಯಾಟಿಕ್ ಸೋಸಾಯಿಟಿಯ ನಿರ್ದೇಶಕನಾಗಿ , ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿ,ಅನೇಕ ಉನ್ನತ ಪದವಿಯನ್ನು ಗಳಿಸಿದವನು. ಜೇಮ್ಸ ಮಿಲ್ ನ ಕುಪ್ರಸಿದ್ಧವಾದ "ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ" ದ ಸಂಶೋಧಿತ ಪುನರಾವೃತ್ತಿಗಳನ್ನು ತನ್ನ ಮುನ್ನುಡಿಯೊಂದಿಗೆ ಪುನರ್ಮುದ್ರಿಸಿದ. ಮೇಘದೂತ, ವಿಷ್ಣುಪುರಾಣವನ್ನು ಅನುವಾದಿಸಿದ. ಮೊತ್ತ ಮೊದಲ ಬಾರಿಗೆ ಋಗ್ವೇದದ ಕೆಲವು ಭಾಗವನ್ನು ಆಂಗ್ಲಭಾಷೆಗೆ ಅನುವಾದಿಸಿದ. ಇವನು ನಿಜವಾಗಿ ಅಷ್ಟು ಶ್ರೇಷ್ಠ ಪಂಡಿತನೆ. ಸಂಸ್ಕೃತದ ಯಾವುದೆ ವಿಧವಾದ ಅಧ್ಯಯನದ ಹಿನ್ನಲೆಯೆಲ್ಲದೆ ಭಾರತಕ್ಕೆ ಬಂದಳಿದ ಇವನು ಪ್ರಪಂಚದ ಮೊದಲ ಸಂಸ್ಕೃತ-ಇಂಗ್ಲೀಷ್ ನಿಘಂಟುವನ್ನು ಜಗತ್ತಿಗೆ ಕೊಟ್ಟದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದರೆ ಅನಾವರಣಗೊಳ್ಳುವುದು ,ಅದೃಷ್ಟ, ವಂಚನೆ, ಉತ್ಸಾಹ ಹಾಗು ಕೃತಿಚೌರ್ಯದ ಇತಿಹಾಸ. ಅದುವೆ ಹೆಚ್,ಹೆಚ್, ವಿಲ್ಸನ್ ನ ಜೀವನೇತಿಹಾಸ.


*ಹೆಚ್.ಹೆಚ್.ವಿಲ್ಸನ್ (1786-1860)*


ಹೊರೆಸ್ ಹೆಯ್ಮನ್ ವಿಲ್ಸನ್ ನ (Horace Hayman Wilson)  ಪುಸ್ತಕಗಳನ್ನು ಗಮಿನಿಸಿದರೆ ಅವನು ಪಡೆದ ಪದವಿಗಳ ಪಟ್ಟಿಯೆ ಕಾಣುತ್ತದೆ, M.A. , F.R.S, Ph.D , M.D  ಮುಂತಾದ ಪದವಿಗಳು ಅವನು ಪಂಡಿತನಲ್ಲದಿದ್ದರೆ ಹೇಗೆ ಪಡೆಯಲು ಸಾಧ್ಯ, ಆಕ್ಸಫರ್ಡ್ ವಿಶ್ವವಿದ್ಯಾಲಯದ ಅತ್ಯಂತ ಪ್ರತಿಷ್ಠಿತ Boden Proffesor of Sanskrit ಹುದ್ದೆಯನ್ನು ಹೇಗೆ ಹೊಂದಲು ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ . ಮೊದಲನೆಯದ್ದಾಗಿ ಅವನಿಗೆ ದೊರೆತ ಪದವಿಗಳೆಲ್ಲವೂ ಗೌರವ ಪದವಿಗಳೆ ಹೊರತು , ಪರೀಕ್ಷೆ ,ಪ್ರಭಂಧಗಳನ್ನು ಬರೆದು ಗಳಿಸಿದ್ದಲ್ಲ.  ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರೂ ವಿಲ್ಸನ್ ನು ಎಂದೂ ಗೌರವ ಎಂಬ ವಿಶೇಷಣವನ್ನು ತನ್ನ ಪುಸ್ತಕದಲ್ಲಿ ನಮೂದಿಸಲಿಲ್ಲ.  ಹಾಗೆಯೆ ಒಂದು ದಿನವೂ ವೈದ್ಯಕೀಯ ವೃತ್ತಿಯನ್ನು ನಡೆಸದಿದ್ದರೂ M.D. ಎಂಬ ಪದವಿಯನ್ನು ಪಡೆದಿದ್ದೂ ಗೌರವ ಸೂಚಕವಾಗಿಯೆ. .ಮಾರ್ಬರ್ಗ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನ್ನು ಪಡೆದವರಿಗೆ ಗೌರವ M.D. ಪದವಿಯನ್ನು ನೀಡುತ್ತಿತ್ತು. ಹೀಗೆ ಅವನ ಪದವಿಗಳು ಅವನ ವಿದ್ವತ್ತೆಯನ್ನು ಪ್ರಮಾಣೀಕರಿಸುವುದಿಲ್ಲ. ಹಾಗಾದರೆ ಅವನ ನಿಘಂಟು ಅವನ ವಿದ್ವತ್ತೆಗೆ ಸಾಕ್ಷಿಯಲ್ಲವೆ ಎಂದು ಜಿಜ್ಞಾಸೆ ಮೂಡುವುದು . ಅದಕ್ಕೂ ಸ್ವಾರಸ್ಯಕರವಾದ ಹಿನ್ನಲೆಯಿದೆ . ಇಲ್ಲಿಯೆ ಅವನ ಅದೃಷ್ಟ ಅವನ ಕೈ ಹಿಡಿದಿದೆ. ಇವನು ಲಂಡನ್ ನಲ್ಲಿ ಶಿಕ್ಷಣವನ್ನು ಪಡೆದು ಈಸ್ಟ್ ಇಂಡಿಯಾ ಕಂಪನಿಯ ವೈದ್ಯಕೀಯ ತಂಡದಲ್ಲಿ ಅಸಿಸ್ಟಂಟ್ ಸರ್ಜನ್ ಆಗಿ ೧೮೦೮ ರಲ್ಲಿ ಭಾರತದ ಕಲ್ಕತ್ತಾಗೆ ಬಂದಿಳಿದನು. ಇದು H.T.Colebrooke ಎಂಬ ವಿದ್ವಾಂಸನ ಜೀವನದ ಅತ್ಯಂತ ವಿಷಮ ಪರಿಸ್ಥಿತಿಯ ಸಮಯ. ಅವನು ಬಹುಭಾಷೆಯ ಶಬ್ದಕೋಶದ (Multi-lingual) ನಿರ್ಮಾಣದ ಯೋಜನೆಯೊಂದರ ನಿರ್ದೇಶಕನಾಗಿದ್ದನು. ತನ್ನ ಪ್ರಗತಿಯಿಂದ ಅಸಂತುಷ್ಟನಾಗಿದ್ದ ಅವನು ಈ ಯೋಜನೆಯನ್ನು ಕೈಬಿಡಲು ಯೋಚಿಸುತ್ತಿದ್ದನು . ಈ ಯೋಜನೆಯು H.T.Colebrooke ನ ನಿರ್ದೇಶನದಲ್ಲಿ ಪ್ರಾರಂಭವಾಗಿತ್ತು . ಅವನು ಪೂರ್ಣಾವಧಿಯಾಗಿ ನ್ಯಾಯಾಧೀಶನ ಕಾರ್ಯವನ್ನು ನಿರ್ವಹಿಸುತ್ತಿದ್ದನಾದ್ದರಿಂದ , ಕಲ್ಕತ್ತಾದ ವಿಲಿಯಮ್ ಫೋರ್ಟ್ ಕಾಲೇಜಿನ ಪಂಡಿತರನ್ನು ಈಗಾಗಲೆ ಮುದ್ರಿತವಾಗಿರುವ ಸಂಸ್ಕೃತ ಕೋಶಗಳಿಂದ ಅಕರಾದಿಕ್ರಮದಿಂದ ಶಬ್ದಗಳನ್ನು ವಿಂಗಡಿಸಿ ಸಂಗ್ರಹಿಸಲು ಸೂಚಿಸಿದನು . ಪಂಡಿತರಿಗೆ ಇನ್ನೂ ಹೆಚ್ಚಿನ ಮೆಲ್ವಿಚಾರಣೆಯ ಅವಶ್ಯಕತೆಯಿತ್ತು . ಹಾಗಾಗಿ ಕೆಲಸವು ನಿಧಾನಗತಿಯಲ್ಲಿ ಸಾಗಿತು. . ಕೊನೆಗೂ ನಾಲ್ಕು ಸಂಪುಟದ ಸಂಸ್ಕೃತ-ಪರ್ಷಿಯನ್-ಬೆಂಗಾಲೀ ಶಬ್ದಕೋಶವು ಲೋಕಾರ್ಪಣೆಗೊಂಡಿತು . ಅನಂತರ Colebrooke  ನು ಈಸ್ಟ್ ಇಂಡಿಯಾ ಕಂಪನಿಯ ಪ್ರಾದೇಶಿಕ ಅಧಿಕಾರಿಗಳಿಗೆ ಇದರ ಪ್ರತಿಗಳನ್ನು ಕಳುಹಿಸಿ, ಇದರಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬಂದಲ್ಲಿ ಗುರುತಿಸಿ ಕಳುಹಿಸಬೇಕೆಂದು ಕೋರಿದನು. ಆದರೆ ಯಾರೂ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಇದರಿಂದ ಬೆಸರಗೊಂಡ Colebrooke ಅದೇ ಸಮಯಕ್ಕೆ ಸರಿಯಾಗಿ ಯುವ, ಉತ್ಸಾಹಿ, ವಿಲ್ಸನ್ ಸಂಸ್ಕೃತಯನ್ನು ಕಲಿಯಲು ಅತ್ಯಂತ ಆಸಕ್ತಿಯನ್ನು ವಹಿಸಿದ್ದನ್ನು ಕಂಡು , ಶಬ್ದಕೋಶವನ್ನು ಅವನಿಗೆ ಹಸ್ತಾಂತರಿಸಿದನು . ವಿಲ್ಸನ್ ನು ಒಬ್ಬ ಪಂಡಿತನನ್ನು ಬಂಗಾಲೀಗೆ ಸರಿಸಮಾನವಾದ ಇಂಗ್ಲೀಷ್ ಪದಗಳನ್ನು ಬರೆಯಲು ನಿಯೋಜಿಸಿದನು . ಅದಾಗಿ ಹತ್ತು ವರ್ಷದ ನಂತರ ಮೊತ್ತ ಮೊದಲ ಸಂಸ್ಕೃತ-ಇಂಗ್ಲಿಷ್-ನಿಘಂಟು ಎಂದು 1818 ರಲ್ಲಿ ಪ್ರಕಟವಾಯಿತು.. ಅದರ ಮೊದಲ ಸಂಪುಟದಲ್ಲಿ "*A Dictionary in Sanscrit and English, translated, amended, and enlarged, from an original compilation, Prepared by Learned Natives*'' ( ಸಂಸ್ಕೃತ –ಇಂಗ್ಲೀಷ ಶಬ್ದಕೋಶ- ಸ್ಥಾನೀಯ ಪಂಡಿತರಿಂದ ಸಂಗ್ರಹಿಸಲ್ಪಟ್ಟ ಶಬ್ದಕೋಶದ , ಅನುವಾದಿತ, ಪರಿಷ್ಕೃತ, ವಿಸ್ತೃತ ಸಂಪುಟ) ಎಂದು ಸ್ಥಾನೀಯ ಪಂಡಿತರ ಶ್ರಮಕ್ಕೆ ಸಾಮೂಹಿಕ ಶ್ರೇಯಸ್ಸನ್ನು ಸಲ್ಲಿಸಿದನು . ಆದರೆ ಆವೃತ್ತಿಯ ಮುನ್ನುಡಿಯಲ್ಲಿ ಪಂಡಿತರ ತಪ್ಪುಗಳನ್ನು ಟೀಕಿಸಿದ್ದಲ್ಲದೆ, ಅಗತ್ಯಕ್ಕಿಂತ ಹೆಚ್ಚಾಗಿ ಸಮಯವನ್ನು ತೆಗುದುಕೊಂಡಿದ್ದಾರೆಂದು ಅವರನ್ನು ಬೈಯ್ದನು . ತಾನು ಮಾತ್ರ ವೈಯಕ್ತಿಕ ಲಾಭಕ್ಕಾಗಿ ಈ ಶಬ್ದಕೋಶವನ್ನು ಬಳಸಿಕೊಳ್ಳಲು ಹಿಂಜರಿಯಲಿಲ್ಲ. ತಾನು Boden Proffesor of Sanskrit ಹುದ್ದೆಗೆ ಅರ್ಹನೆಂದು ಪ್ರತಿಪಾದಿಸಲು ಈ ಶಬ್ದಕೋಶವನ್ನು ಬಳಸಿಕೊಂಡನು . ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ , ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲಿ ಶ್ರೀಮಂತರು ಹಣವನ್ನು ದೇಣಿಗೆಯ ರೂಪದಲ್ಲಿ ನೀಡಿ ತಮ್ಮ ಉದ್ದೇಶಗಳಿಗನುಗುಣವಾಗಿ ಅಧ್ಯಯನ ವಿಭಾಗಗಳನ್ನು ಕಲ್ಪಿಸುವ ವ್ಯವ್ಯಸ್ಥೆ ಜಾರಿಯಲ್ಲಿದೆ . ಆ ವಿಭಾಗಕ್ಕೆ ದೇಣಿಗೆಯನ್ನು ನೀಡಿದವನ ಹೆಸರನ್ನಿಡುತ್ತಾರೆ .ಕರ್ನಲ್ ಬೊಡನ್ ಎಂಬುವವನು ಸಂಸ್ಕೃತ ಗ್ರಂಥಗಳ ಅನುವಾದ ಕಾರ್ಯಕ್ಕಾಗಿ ಈ ಹಣವನ್ನು ಬಳಸಬೇಕೆಂದು  ವಿಲ್ ಬರೆದಿದ್ದನು . ಮೆಲ್ನೋಟಕ್ಕೆ ಇಂತಹ ಉತ್ತಮ ಉದ್ದೇಶಕ್ಕಾಗಿ ಹಣವನ್ನು ಮೀಸಲಿಟ್ಟಿದ್ದಾನೆಂದು ತೋರಬಹುದು . ಆದರೆ ಅವನ ವಿಲ್ ನಲ್ಲಿ ಅವನು ನಮೂದಿಸಿದ ಉದ್ದೇಶವನ್ನು ಸಂಪೂರ್ಣವಾಗಿ ಗಮನಿಸಿದರೆ ನಿಜವಾದ ಗುರಿಯನ್ನು ತಿಳಿಯಬಹುದು.   ಈ ವಿಷಯವನ್ನು ಮೊನಿಯರ್ ವಿಲಿಯಮ್ಸನು ತನ್ನ ಸಂಸ್ಕೃತ- ಆಂಗ್ಲಶಬ್ದಕೋಶದ ಮುನ್ನುಡಿಯಲ್ಲಿ ದಾಖಲಿದ್ದಾನೆ. *''Colonel Boden, stated most explicitly in his will (dated August 15, 1811) that the special object of his munificent bequest was to promote the translation of the Scriptures into Sanskrit, so as  to enable his countrymen to proceed in the conversion of the natives of India to the Christian Religion'' (Sanskrit-English dictionary, Sir – Monier William-Williams  preface -9)*  ಬೈಬಲ್ ಮುಂತಾದ ಕ್ರೈಸ್ತ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದಿಸುವ ಮೂಲಕ ತನ್ನ ದೇಶದ ಜನರಿಗೆ ಮತಾಂತರ ಕಾರ್ಯದಲ್ಲಿ ಸಹಾಯಕವಾಗಲು ಈ ಹಣವನ್ನು ಬಳಸಬೇಕೆನ್ನುವುದು ಅವನ ಇಚ್ಛಾ ಪತ್ರದಲ್ಲಿ ಸ್ಪಷ್ಟವಾಗಿದೆ . ಇಂದು ನಾವು ಬಳಸುವ ಸಂಸ್ಕೃತದ-ಇಂಗ್ಲೀಷ್ ಶಬ್ದಕೋಶ Monier William ನ ನಿರ್ಮಾಣವು ಇದೆ ಉದ್ದೆಶದಿಂದ ನಡೆದಿದೆ. Monier William ನು ವಿಲ್ಸನ್ ನ ನಂತರ Boden Proffesor of Sanskrit ಹುದ್ದೆಗೆ ಆಯ್ಕೆಯಾದನು . ಅದರ ಮುನ್ನುಡಿಯಲ್ಲಿ ಅವನೆ ಹೇಳುವಂತೆ "*Surely then it need not be thought surprising, if following in the footsteps of my venerated master, I have made it the chief aim of my professorial life to provide facilities for the translation of our sacred Scriptures into Sanskrit, and for the promotion of a better knowledge of the religions and customs of India, as the best key to a knowledge of the religious needs of our great Eastern Dependency. My very first public lecture delivered after my election in 1860 was on"The Study of Sanskrit in Relation to Missionary Work in India" (published in 1861)"*.(ನಾನು ಹುದ್ದೆಗೆ ಆಯ್ಕೆಯಾದ ಮೇಲೆ ನನ್ನ ಗುರುವು ಹಾಕಿಕೊಟ್ಟ ಮಾರ್ಗದಲ್ಲಿಯೆ ನನ್ನ ಕಾರ್ಯಕಾಲವನ್ನು ಬೈಬಲ್ ಮುಂತಾದ ಕ್ರಿಶ್ಚಿಯನ್ ಗ್ರಂಥಗಳ ಸಂಸ್ಕೃತಾನುವಾದಕ್ಕಾಗಿ ಉಪಯುಕ್ತವಾಗುವ ಸಾಧನಗಳನ್ನು ನಿರ್ಮಿಸುವುದರಲ್ಲಿ ವ್ಯಯಿಸಿದೆ. ನಾನು ಈ ಹುದ್ದೆಗೆ ಆಯ್ಕೆಯಾದ ಮೇಲೆ ನಡೆಸಿದ ಮೊದಲ ಭಾಷಣ- "ಮಿಶನರಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಂಸ್ಕೃತ ಅಧ್ಯಯನ" ಎಂಬ ವಿಷಯದ ಕುರಿತಾಗಿತ್ತು ). ಕೆಲವರು ಕನ್ನಡದ ಕಿಟಲ್ ಕೋಶ , ಸಂಸ್ಕೃತ ಮೊನಿಯರ್-ವಿಲಿಯಮ್ ಮುಂತಾದ ಕೋಶಗಳನ್ನು ಉದಾಹರಿಸಿ ಅವರ ಕೊಡುಗೆಯನ್ನು ಅತಿವೈಭವಿಸುತ್ತಾರೆ . ಆದರೆ ಅವರುಗಳೆ ದಾಖಲಿಸಿದ ತಮ್ಮ ಉದ್ದೇಶಗಳನ್ನು ಚರ್ಚಿಸಲು ಹಿಂಜರಿಯುತ್ತಾರೆ . ಅದಕ್ಕಾಗಿ ಕೋಶಗಳ ಕೊಡುಗೆಗಳ ಹಿಂದಿರುವ ಉದ್ದೇಶಗಳನ್ನು ಅವರ ಮಾತಿನಿಂದಲೆ ಸ್ಪಷ್ಟವಾಗಿ ದಾಖಲಿಸಬೇಕಾಯಿತು .  ಅದೇನೆ ಇರಲಿ ಮೊನಿಯರ್ ವಿಲಿಯಮ್ಸ್ ನ ಮಾತಿನಿಂದಲೆ ವಿಲ್ಸನ್ ನು ಸ್ಥಾನೀಯ ಪಂಡಿತರು ಸಂಗ್ರಹಿಸಿದ್ದ ಶಬ್ದಕೋಶವನ್ನು ತನ್ನ Boden Proffesor of Sanskrit ಹುದ್ದೆಗಾಗಿ ಬಳಸಿಕೊಂಡದ್ದು ಸ್ಪಷ್ಟವಾಗಿ ತಿಳಿಯುತ್ತದೆ . ಆದರೆ ಅದರಲ್ಲಿ ಅವನ ಯಾವ  ದೊಡ್ಡ ಕೊಡುಗೆಯು ಇರಲಿಲ್ಲ ಹಾಗೂ ಇದಕ್ಕಾಗಿ ಶ್ರಮಿಸಿದ್ದ H.T.Colebrooke ನಿಗೂ ಯಾವುದೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. H.T.Colebrooke ನ ನಿಧನಕ್ಕಿಂತಲೂ ಮೊದಲು ಸಾಂಖ್ಯದರ್ಶನಕ್ಕೆ ಸಂಬಂಧಿಸಿದ ಸಾಂಖ್ಯಕಾರಿಕೆಯ ಇಂಗ್ಲೀಷ್ ಅನುವಾದದ ಪುಸ್ತಕವನ್ನು ಮುದ್ರಿಸಲು ಸಿದ್ಧನಾಗಿದ್ದನು . ಆಗ ಅವನು ಅನಾರೋಗ್ಯಕ್ಕೊಳಗಿದ್ದರಿಂದ , ವಿಲ್ಸನ್ ನು ಅನುವಾದದ ಅಕ್ಷರದೋಷಗಳನ್ನು ಗಮನಿಸಲು ಸಹಾಯ ಹಸ್ತವನ್ನು ಚಾಚಿದನು . Colebrooke ನ ನಿಧನದ ನಂತರ , ಸಾಂಖ್ಯ ದರ್ಶನದ ಅಧ್ಯಯನದ ಯಾವುದೆ ಹಿನ್ನಲೆಯಿಲ್ಲದಿದ್ದರೂ ಆ ಪುಸ್ತಕವನ್ನು ಮುದ್ರಿಸಿ, ಕೊನೆಗೆ ತನ್ನ ಸ್ವಂತ ಕೃತಿ ಎಂದು ಪ್ರತಿಪಾದಿಸಿದ.  ಹಾಗಾದರೆ ಅವನು ಆ ಕಾಲದಲ್ಲಿ ಅಷ್ಟು ಪ್ರಖ್ಯಾತನಾಗಲು ಹೇಗೆ ಸಾಧ್ಯವೆಂದು ಪ್ರಶ್ನೆ ಮೂಡಬಹುದು . ಅದಕ್ಕೆ ಉತ್ತರ –ಅವನಲ್ಲಿದ್ದ ಅಪ್ರಕಟಿತ ಪುಸ್ತಕಗಳನ್ನು ಹುಡುಕುವ ಉತ್ಸಾಹ .  ಅವನು ಸಂಪಾದಿಸಿದ ಎಲ್ಲಾ ಕೃತಿಗಳ ಮೂಲ ಲೇಖಕರು ಪುಸ್ತಕಗಳ ಪ್ರಕಟಣೆಯ ಕಾಲದಲ್ಲಿ ಸತ್ತಿರುತ್ತಾರೆ . ಅಂತಹವರ ಪುಸ್ತಕವನ್ನು ತೆಗೆದುಕೊಂಡು , ತನ್ನ ಜ್ಞಾನವನ್ನು ಪ್ರದರ್ಶಿಸಲು ಒಂದಿಷ್ಟು ವ್ಯತ್ಯಾಸಗಳನ್ನು ಮಾಡಿ ಪುಸ್ತಕಗಳನ್ನು ಪ್ರಕಟಿಸಿದ್ದೆ ಅವನ ಸಾಧನೆ .


ಪಾಶ್ಚಾತ್ಯ ವಿಶ್ವವಿದ್ಯಾಲಯಗಳು , ಅಲ್ಲಿನ ಪದವಿಗಳು ಹಾಗೂ ಅವರು ಬರೆದ ಪುಸ್ತಕಗಳೆಂದ ತಕ್ಷಣ ಕಣ್ಣೋತ್ತಿಕೊಂಡು ಗೌರವ ಸಲ್ಲಿಸುವ ದೊಡ್ಡ ಸಮೂಹವೆ ನಮ್ಮಲ್ಲಿದೆ . ಆದರೆ ನಾವೆಷ್ಟು ಜಾಗೃತರಾಗಿರಬೆಂದು ತಿಳಿಸಲು ಉದಾಹರಣೆಯಾಗಿ ಇವನ ಚರಿತ್ರೆಯನ್ನು ದಾಖಲಿಸಿದ್ದೇನೆ.

ಕಾಳಿದಾಸ ಮಾತನ್ನು ಈಗಿನ ಕಾಲಕ್ಕೆ ಬದಲಿಕೊಳ್ಳುವ ಅನಿಯಾರ್ಯತೆಯೂ ಎದುರಾಗಿದೆ..


*ಪ್ರತೀಚ್ಯಮಿತ್ಯೇವ ನ ಸಾಧು ಸರ್ವಂ*| 

 *ಪೂರ್ವೀಯಮೇವೆತಿ ನಚಾಪಿ ದುಷ್ಟಂ* ||

*ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ* |

 *ಮೂಢಃ ಪರಪ್ರತ್ಯನೇಯಬುದ್ಧಿಃ ||*


ಗ್ರಂಥ ಋಣ


*1.Early indologist a study in motivation* –part-1

Autor –Swamy B.V.Giri


2. *Sanskrit-English dictionary - preface -9*

Author -– Monier William-Williams


3. *Horace hayman wilson and Gamesmanship in indology*

Author - natalie p. R. Sirkin



*Dr.Shrinidhi Pyati*

P.P.S.M , Bangalore.

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions