ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ-1

 


ಕನ್ನಡಸಾರಸ್ವತ ಲೋಕಕ್ಕೆ ಹರಿದಾಸರುಗಳ ಕೊಡುಗೆ ಅಪಾರ. ಅದರಲ್ಲೂ ಅಧ್ಯಾತ್ಮಪ್ರಪಂಚಕ್ಕೆ ಹರಿದಾಸರುಗಳ ಪದ್ಯಗಳು ರಸದೌತಣ. ಮಧ್ವಾಚಾರ್ಯರು ಸ್ವತಃ ಸಂಗೀತಕೋವಿದರು ,ಅವರ ದ್ವಾದಶಸ್ತೋತ್ರಗಳಲ್ಲಿ ಇರುವ  ಸಂಗೀತದ ಸುವಾಸನೆಯನ್ನು ಜಗತ್ತಿಗೆಲ್ಲಾ ಪಸರಿಸಿದ ಕೀರ್ತಿ ಹರಿದಾಸರದ್ದು. ಶ್ರೀಪಾದರಾಜರು,ವ್ಯಾಸರಾಜರು ಹಾಕಿಕೊಟ್ಟದಾರಿಯಲ್ಲಿ ಮುಂದುವರೆದು ತತ್ವಗಳನ್ನು ಕನ್ನಡಭಾಷೆಯಲ್ಲಿ ತಿಳಿಸಿ ಹರಿದಾಸರುಗಳು ಮಾಡಿದ ಉಪಕಾರವು ಅವಿಸ್ಮರಣೀಯ. ಇಂತಹ ಹರಿದಾಸರಪರಂಪರೆಯಲ್ಲಿ ಪುರಂದರದಾಸರ ಶಿಷ್ಯರಾಗಿ 25,000ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಶ್ರೇಷ್ಠರೆನಿಸಿಕೊಂಡ ಮಹಾನುಭಾವರು ವಿಜಯದಾಸರು.  ವಿಜಯದಾಸರ ಕೃತಿಗಳು ಅವರ ಅನುಭವದ ಮೂಸೆಯಲ್ಲಿ ಬಂದ ರಸಪಾಕಗಳು. ಅವುಗಳು ಕೇವಲ ಅಧ್ಯಯನಕ್ಕೆ ಮಾತ್ರ ನಿಲುಕುವಂತದ್ದಲ್ಲ. ಭಗವದ್ಭಕ್ತಿ, ವೈರಾಗ್ಯ ,ಮತ್ತು ಅನುಭವಗಳಿಂದ ನಮ್ಮ ಪಾತ್ರತೆ ಎಷ್ಟು ಹೆಚ್ಚುತ್ತದೋ ,ಅಷ್ಟು ನಮಗೆ ಹೆಚ್ಚೆಚ್ಚು ಅರ್ಥವಾಗುತ್ತಾ ಹೋಗುತ್ತವೆ. “ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ “ ಎನ್ನುವ ಸುಳಾದಿಯು ಇದಕ್ಕೆ ಸ್ಪಷ್ಟ ನಿದರ್ಶನ. ಪ್ರತಿಯೊಂದು ಪದಾರ್ಥವು ಪರಮಾತ್ಮನ ಅಧೀನವೆನ್ನುವುದು ಸಿದ್ಧಾಂತ. ಅದರ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.  “ನ ಋತೇ ತ್ವತ್ಕ್ರಿಯತೆ” ಎನ್ನುವ ವೇದಮಂತ್ರದ , ‘ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ | ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ‘ ಎಂಬ ಅನುವ್ಯಾಖ್ಯಾನದ ಮಾತಿನ ಸಾರ ಈ ಸುಳಾದಿ. ಜೀವಿಯ ದುಃಖಕ್ಕೆ ಮೂಲಕಾರಣ ಸ್ವಾತಂತ್ರ್ಯ ಭ್ರಾಂತಿ. ಅದರ ನಿವಾರಣೆ ಅಷ್ಟು ಸುಲಭವಲ್ಲ. ಹಲವು ಬಾರಿ, ಅಸ್ವಾತಂತ್ರ್ಯ ಜ್ಞಾನವಿದ್ದರೂ , ಜ್ಞಾನವು ಅನುಭವ-ಅನುಷ್ಠಾನಗಳ ಹಂತಕ್ಕೆ ಇಳಿಯದಿರುವುದು ದುಃಖದ ನಿರಂತರೆಗೆ ಕಾರಣವಾಗಿರುತ್ತದೆ. ಜ್ಞಾನವು ಅನುಭವಾನುಷ್ಠಾನಗಳ ಹಂತಕ್ಕೆ ಬರಬೇಕಾದರೆ, ಒಮ್ಮೆ ಉಪದೇಶವಾದರೆ ಸಾಕಾಗುವುದಿಲ್ಲ. ಒಂದು ವಿಧವಾಗಿ ಉಪದೇಶಿಸಿದರೆ ಕೆಲವೊಬ್ಬರಿಗೆ ಮಾತ್ರ ಅನುಭವಕ್ಕೆ ಬರಬಹುದು. ಹಾಗಾಗಿ ಪುರಾಣಗಳಲ್ಲಿ , ಮಹಾಭಾರತಾದಿಗಳಲ್ಲಿ ವೇದವ್ಯಾಸರು ಒಂದೇ ತತ್ವವನ್ನು ಅನೇಕ ಉಪಾಖ್ಯಾನಗಳ ಮೂಲಕ, ವಿವಿಧ ದೃಷ್ಟಾಂತಗಳ ಮೂಲಕ ಉಪದೇಶಿಸುತ್ತಾರೆ. ಅದೇ ಶೈಲಿಯನ್ನು ದಾಸರಾಯರು ಈ ಸುಳಾದಿಯಲ್ಲಿ ಅನುಸರಿಸಿದ್ದಾರೆ. ಇದು ಉತ್ತಮವಾದ ಮನೋವೈಜ್ಞಾನಿಕ ವಿಧಾನ. ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸ್ವಾತಂತ್ರ್ಯ ಭ್ರಾಂತಿ ಬರುತ್ತದೆ. ಕೆಲವರು ತಮ್ಮ ಇಚ್ಚೆಗನುಸಾರವಾಗಿ ವೇಷಭೂಷಣಗಳನ್ನು ತೊಡುತ್ತೇವೆಂದು ತಿಳಿದು ಹಿಗ್ಗುತ್ತಾರೆ. ಇನ್ನು ಕೆಲವೊಬ್ಬರಿಗೆ ತಮ್ಮ ಇಚ್ಛೆಗನುಸಾರವಾಗಿ ಗುಣಗಳಿರುವ ಮಡದಿಯನ್ನು ಪಡೆಯುತ್ತೇವೆಂದು ಭ್ರಾಂತಿ ಇರುತ್ತದೆ. ಕೆಲವೊಬ್ಬರಿಗೆ ತಾವು ಇಚ್ಛೆ ಪಟ್ಟಂತೆ ದೇಶ,ಕೋಶ,ಭಾಷೆಗಳ ಅಧ್ಯಯನವನ್ನು ಮಾಡಿದ್ದೇವೆಂಬ ಅತ್ಯಭಿಮಾನವಿರುತ್ತದೆ. ಸ್ತ್ರೀಯರಿಗೆ ತಮ್ಮ ಇಚ್ಛೆಗನುಸಾರವಾಗಿ ಯೌವನ,ಮುಪ್ಪು ಬರಬೇಕೆಂದು ಆಸೆಯಿರುತ್ತದೆ. ಇವುಗಳು ಕೆಲವೊಮ್ಮೆ ಈಡೇರುತ್ತವೆ.ಆಗ ಸಂತೋಷಪಡುತ್ತಾರೆ. ಅನೇಕಬಾರಿ ಈಡೇರುವುದಿಲ್ಲ, ಆಗ ದುಃಖಪಡುತ್ತಾರೆ.ಹೀಗೆ ಸುಖದುಃಖಗಳ ಅನಿಶ್ಚಿತತೆಯಲ್ಲಿ ಹೆಚ್ಚು ದುಃಖವನ್ನೇ ಅನುಭವಿಸುತ್ತಾರೆ. ಇದು ಲೌಕಿಕರ ಸಮಸ್ಯೆಯಾದರೆ, ಇನ್ನು ಸಾಧನೆಯ ಮಾರ್ಗದಲ್ಲಿರುವವರು ತಮಗೆ ಇಚ್ಛೆಯಾದ ಸಮಯದಲ್ಲಿ ಪರಮಾತ್ಮನನ್ನು  ಒಲಿಸಿಕೊಳ್ಳಲು,ವೈರಾಗ್ಯ ಬರಸಿಕೊಳ್ಳಲು ಹವಣಿಸುತ್ತಾರೆ. ಧ್ಯಾನ ಮಾಡುವಾಗ ತಮ್ಮ ಇಚ್ಛೆಯಂತೆ ಆ ಸಮಯದಲ್ಲಿ ದೇವರು ತಮ್ಮ ಹೃದಯದಲ್ಲಿ ಬರಲಿ ಎಂದು ಅಪೇಕ್ಷಿಸುತ್ತಾರೆ. ಸಾಧ್ಯವಾಗದಿದ್ದಾಗ ಬೇಸರಿಸುತ್ತಾರೆ.  ಆದ್ದರಿಂದ ದಾಸರು ಹೀಗೆ ನೀರೂಪಿಸಿದರು.

``ನಿನ್ನಾಧೀನ ಜಪತಪೋಧ್ಯಾನನಿದಾನಾ, ನಿನ್ನಾಧೀನ ಭಯವಿರೋಗಯೋಗಭೋಗ ,ನಿನ್ನಾಧೀನ ವೈರಾಗ್ಯಭಾಗ್ಯ ವಸನ ಭೂಷಣ,ನಿನ್ನಾಧೀನ ದೇಶಕೋಶ ಒದು ಮಾಧುರ್ಯ,ನಿನ್ನಾಧೀನ ಬಾಲ್ಯಯೌವ್ವನ ವಾರ್ಧಕ್ಯ, ನಿನ್ನಾಧೀನ ಇಷ್ಟಾನಿಷ್ಟ ಪಾಪ ಪುಣ್ಯ,” ``ಮಡದಿ ಮಕ್ಕಳು ನಿನ್ನಾಧೀನ, ಒಡವೆ ವಸ್ತು ನಿನ್ನಾಧೀನಾ, ಪಡಿಬಾನವು ನಿನ್ನಾಧೀನ, ಒಡೆತನವು ನಿನ್ನಾಧೀನ,ಬಡತನವೂ ನಿನ್ನಾಧೀನ” ಹೀಗೆ ಎಲ್ಲವೂ ಪರಮಾತ್ಮನ ಅಧೀನ. ಅವನ ಇಚ್ಚೆಯೆ ನಮ್ಮೆಲ್ಲರ  ಇಚ್ಛೆಗಿಂತ ಪ್ರಧಾನ. ಈ ವಿಷಯದಲ್ಲಿ ಮಹಾಭಾರತದ ಒಂದು ದೃಷ್ಟಾಂತವನ್ನು ದಾಸರು ನಿರೂಪಿಸಿದ್ದಾರೆ. ರಣರಂಗದಲ್ಲಿ ಇನ್ನೇನು ಯುದ್ಧ ಪ್ರಾರಂಭವಾಗುವಾಗ, ಬಂಧುಮೋಹದಿಂದ ತಾನು ಯುದ್ಧವನ್ನು ಮಾಡುವುದಿಲ್ಲವೆಂದು ಅರ್ಜುನ ಹಠಹಿಡಿದು ಕುಳಿತ. ಅರ್ಜುನ ಇಂದ್ರನ ಅವತಾರ, ಇಂದ್ರ ಮನೋಭಿಮಾನಿಯೂ ಹೌದು. ಅಂತಹ ಮನೋಭಿಮಾನಿಯ ಮನಸ್ಸನ್ನೇ ಬದಲಿಸಿ,ತನ್ನ ಇಚ್ಛೇಯಂತೆ ಯುದ್ಧಮಾಡಿಸಿದ ಎಂದ ಮೇಲೆ, ನಮ್ಮಂತಹ ಹುಲುಮಾನವರ ಲೌಕಿಕ,ಇಚ್ಛೆಗಳು ಅವನ ಇಚ್ಛೆಯ ಮುಂದೆ ನಡೆಯುವುದೇ ? ಎಂದು ದಾಸರು ಪ್ರಶ್ನಿಸುತ್ತಾರೆ. ಹಾಗಾಗಿ ಅವನ ಇಚ್ಛೆಯೆ ಪ್ರಬಲ ಎಂದು ಒಪ್ಪಿ ಜೀವನ ನಡೆಸಿದರೆ, ಸುಖದುಃಖ ಎಂಬ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬರುತ್ತದೆ. ನಾನು ಮಾಡಿದೆ,ನಾನು ಪಡೆದೆ, ನನ್ನದ್ದು ಎಂಬ ಭಾವವಿದ್ದರೆ, ವಿಷಯಸಿದ್ಧಿಸಿದಾಗ ಸುಖವೂ ಹೆಚ್ಚು, ಸಿದ್ಧಿಸದೆ ಇದ್ದಾಗ ದುಃಖವೂ ಹೆಚ್ಚು. ಇದೆರಡೂ ಉತ್ತಮವಲ್ಲ. ಎಲ್ಲವೂ ದೇವರ ಇಚ್ಛಾಧೀನ ಎಂಬ ಜ್ಞಾನವಿದ್ದಾಗ, ವಿಷಯಸಿದ್ಧಿಸಿದರೆ ದೇವರ ಇಚ್ಛೆಯಿತ್ತು ಆದ್ದರಿಂದ ಸಿದ್ಧಿಸಿತು ಎಂಬ ಭಾವ,ಸಿದ್ಧಿಸದಿದ್ದಾಗ ದೇವರ ಇಚ್ಛೆಯಿರಲಿಲ್ಲ ಆದ್ದರಿಂದ ಸಿದ್ಧಿಸಲಿಲ್ಲ ಎಂಬ ಭಾವ ಜಾಗೃತವಾಗಿ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯನ್ನೇ ಅಲ್ಲವೆ ಗೀತೆಯು ಮುನಿಯ ಮನಸ್ಥಿತಿಯೆಂದು ಕೊಂಡಾಡಿದ್ದು.


ದುಃಖೇಷು-ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ

ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ |

ಈ ಸ್ಥಿತಿಯ ಪ್ರಾಪ್ತಿಯೆ ದಾಸರ ಉಪದೇಶದ ಆಶಯ. ಇನ್ನೂ ಸಾಧನಮಾರ್ಗದಲ್ಲಿರುವವರು ಅವನ ಅನುಗ್ರಹ ಅವನ ಇಚ್ಛಾಧೀನ ಎಂದು ತಿಳಿಯಬೇಕು. ಕೆಲವೊಮ್ಮೆ ದಾನ ,ಜಪ, ಧ್ಯಾನ, ಮಂತಾದ ಸಂದರ್ಭಗಳಲ್ಲಿ ದೇವರು ಹೃದಯದಲ್ಲಿ ಚಿಂತನೆಗೆ ನಿಲುಕಬೇಕಾದರೆ ನಮಗೆ ಮುಖ್ಯ ಬೇಕಾಗುವುದು ಶರಣಾಗತಿ. ನನ್ನ ಪ್ರಯತ್ನದಿಂದ ಪರಮಾತ್ಮನನ್ನು ಚಿಂತಿಸುವೆನೆಂಬ ಭಾವವಿದ್ದರೆ,ಅದು ಅಹಂಕಾರವಾಗುತ್ತದೆ. ಅಹಂಕಾರ ರಜೋಗುಣದ ಪರಿಣಾಮ. ರಜೋಗುಣವಿದ್ದಲ್ಲಿ ಪರಮಾತ್ಮನ ಮನನ,ಧ್ಯಾನ ,ಚಿಂತನೆ ಸಾಧ್ಯವಾಗುವುದಿಲ್ಲ. ಹಾಗಾಗಿ ಶರಣಾಗತಿಯನ್ನು ಹೊಂದಬೇಕು. ಶರಣಾಗತಿಯು ಭಕ್ತಿಯ ಒಂದು ವಿಧಾನ. ಭಕ್ತಿಯು ಸತ್ವಗುಣದ ಪರಿಣಾಮ. ಸಾತ್ವಿಕಗುಣಗಳಿದ್ದಲ್ಲಿ ದೇವರ ಚಿಂತನಾದಿಗಳು ಸಾಧ್ಯ .ನೀನೆ ಅನುಗ್ರಹ ಮಾಡಿ ನಿನ್ನ ಸ್ಮರಣಾದಿಗಳನ್ನು ಕರುಣಿಸು ಎಂದು ಪ್ರಾರ್ಥಿಸಬೇಕು. ಹಾಗಾಗಿಯೆ ದೇವರ ಪೂಜೆ ಮಾಡುವಾಗ ``ಭಗವತೋ ವೀರ್ಯೇಣ ,ಭಗವತೋ ಬಲೇನ, ಭಗವತಃ ತೇಜಸಾ, ಭಗವತಃ ಕರ್ಮಣಾ, ಭಗವತಃ ಧ್ಯಾನ-ಆವಾಹನಾದಿ ಷೋಡಷೋಪಚಾರ-ಪೂಜಾಂ ಕರಿಷ್ಯೇ” ಎಂದು ಸಂಕಲ್ಪಿಸುತ್ತೇವೆ. ದೇವರ ಪೂಜೆಯ ಆದಿಯಲ್ಲಿ ಪಠಿಸುವ ``ಗಣಾನಾಂ ತ್ವಾ” ಎಂಬ ಮಂತ್ರದ ಅರ್ಥವು ನಮ್ಮಲ್ಲಿ ಈ ಭಾವವನ್ನು ಜಾಗೃತಗೊಳಿಸುತ್ತದೆ. ಭಕ್ತಿಯು ದೇವರ ಅಧೀನ ಎನ್ನುವ ಜ್ಞಾನವು ಎಷ್ಟು ಮುಖ್ಯವೋ, ಮುಕ್ತಿಯು, ಮತ್ತು ಮುಕ್ತಿಯಲ್ಲಿ ಅವನ ಆನಂದವೂ ಅವನ ಅಧೀನ ಅನ್ನುವ ಜ್ಞಾನವೂ ಅಷ್ಟೇ ಮುಖ್ಯ. ಭಕ್ತಿಯನ್ನು ಮಾಡಿದೇವೆಂದ ಮೇಲೆ ಮುಕ್ತಿಯನ್ನು ಕೊಡಲೇಬೇಕೆಂದು ಆಗ್ರಹಿಸುವಂತಿಲ್ಲ. ಆದ್ದರಿಂದಲೇ ದಾಸರು ``ಭಕುತಿ ಮುಕ್ತಿ ನಿನ್ನಾಧೀನ” ಎಂದರು.  ಪರಮಾತ್ಮನ ಅನುಗ್ರಹದಿಂದ ಜ್ಞಾನ ಬಂದಾಗ  ಎಲ್ಲಾ ಅಜ್ಞಾನಗಳು, ಬೆಳಕು ಬಂದಾಗ ಕತ್ತಲೆ ಹೋಗುವಂತೆ ಹೋಗುವುದಿಲ್ಲ. ಜಡವಾದ ಜ್ಞಾನಕ್ಕೆ ಆ ಸಾಮರ್ಥ್ಯವಿಲ್ಲ. ಪರಮಾತ್ಮನ ಪ್ರಸಾದರೂಪವಾದ ಇಚ್ಛೆಯಿಂದ ಸಕಲ-ಅಜ್ಞಾನಗಳ ನಿವೃತ್ತಿ. ಇದನ್ನು ಭಾಗವತವೂ ನಿರೂಪಿಸುತ್ತದೆ , ``ಯಸ್ಯ ಪ್ರಸಾದಾತ್ ಪರಮಾರ್ತಿರೂಪಾತ್ ಅಸ್ಮಾತ್ ಸಂಸಾರಾತ್ ಮುಚ್ಯತೆ ನಾಪರೇಣ”.  ಇನ್ನು ಪರಮಭಕ್ತಿ ಮಾಡಿದಾಕ್ಷಣ ಅಪರೋಕ್ಷವನ್ನು ಕೊಡಲೇಬೇಕೆಂದು ಆಗ್ರಹಿಸಲು ಸಾಧ್ಯವಿಲ್ಲ. ಅದು ನಮ್ಮ ಅಧಿಕಾರಲ್ಲ, ಅಪರೋಕ್ಷವು ಅವನ ಅನುಗ್ರಹ. ದೇವರು ಯಾರಿಗೆ ಅಪರೋಕ್ಷವನ್ನು ಕರುಣಿಸಬೇಕೆಂದು ಇಚ್ಚಿಸುತ್ತಾನೊ, ಅವರಿಗೆ ಮಾತ್ರ ಅಂತಹ ಜ್ಞಾನ. ಅದೂ ಅವನ ಅಧೀನ. ಉಪನಿಷತ್ತೂ ಈ ವಿಷಯವನ್ನು ಸಾರುತ್ತದೆ. “ಯಮೆವೈಷ ವೃಣುತೆ ತೇನ ಲಭ್ಯಃ ತಸ್ಯೈಷ ಆತ್ಮಾ ವಿವೃಣತೇ ತನೂಂ ಸ್ವಾಂ” ಆಚಾರ್ಯರೂ ಅನುವ್ಯಾಖ್ಯಾನದಲ್ಲಿ ಜ್ಞಾನ, ಮೋಕ್ಷ, ಆನಂದ ಎಲ್ಲವೂ ಅವನಧೀನ ಎಂದಿದ್ದಾರೆ.     `` 

ಅಜ್ಞಾನಾಂ ಜ್ಞಾನದೋ ವಿಷ್ಣುಃ ಜ್ಞಾನಿನಾಂ ಮೋಕ್ಷದಶ್ಚ ಸಃ | ಆನಂದದಶ್ಚ ಮುಕ್ತಾನಾಂ ಸ ಏವೈಕೋ ಜನಾರ್ದನಃ ||”

ಇನ್ನು ಮೋಕ್ಷದಲ್ಲಿಯೂ ಜೀವನು ಪರಮಾತ್ಮನ ಅಧೀನ. ಅಲ್ಲಿ ಜೀವ ಅನುಭವಿಸುವ ಸ್ವರೂಪಾನಂದವೂ ದೇವರ ಅಧೀನ. ಇದು ಮಧ್ವಸಿದ್ಧಾಂತದಲ್ಲಿ ಮಾತ್ರವಿರುವ ವಿಶೇಷ ಪ್ರಮೇಯ. ಭಾಗವತದಲ್ಲಿ ಪ್ರಹ್ಲಾದರು ನವವಿಧಭಕ್ತಿಯನ್ನು ನಿರೂಪಿಸುತ್ತಾರೆ. ಅಲ್ಲಿ ಬರುವ ದಾಸ್ಯ ಮತ್ತು ಆತ್ಮನಿವೇದನ ಎಂಬ ಎರಡು ವಿಧವಾದ ಭಕ್ತಿಪ್ರಕಾರದಲ್ಲಿರುವ ವ್ಯತ್ಯಾಸವನ್ನು ಆಚಾರ್ಯರು ಬಿಟ್ಟರೇ ಬೇರಾರೂ ನಿರೂಪಿಸಿಲ್ಲ .ಪರಮಾತ್ಮನಲ್ಲಿ ದೇಹೇಂದ್ರಿಯಾದಿಗಳ ಸಮರ್ಪಣಾಪೂರ್ವಕವಾದ ಭಕ್ತಿ ದಾಸ್ಯ. ಮುಕ್ತಿಯಲ್ಲಿಯೂ ಹರಿಯೇ ನನ್ನ ನಿಯಾಮಕ ಎಂದು ತಿಳಿಯುವುದೇ ಆತ್ಮನಿವೇದನ ಎಂದು ವ್ಯತ್ಯಾಸವನ್ನು ಭಾಗವತತಾತ್ಪರ್ಯದಲ್ಲಿ

ಮುಕ್ತಾವಪಿ ಮಮಾಂತಸ್ಥೋ ನಿಯಂತಾ ಹರಿರೇವ ಹಿ

ತಿ ಜ್ಞಾನಂ ಸಮುದ್ದಿಷ್ಟಂ ಸಮ್ಯಗಾತ್ಮನಿವೇದನಂ ||

ಹಾಗಾಗಿ ವಿಜಯದಾಸರು ``ದೇಹಪ್ರಾಣೇಂದ್ರಿಯಕರ್ಮಾಚರಣೇ ನಿನ್ನಾಧೀನ” ಎಂದು ಹೇಳಿದ ಮೇಲೂ ,ಕೊನೆಗು ಮತ್ತೊಮ್ಮೆ ``ಕಡಿಗೆ ನಾನೆ ನಿನ್ನಾಧೀನ” ಎಂದು ಹೇಳುವ ಮೂಲಕ ಈ ಎರಡು ಭಕ್ತಿಯ ಪ್ರಕಾರಗಳನ್ನು ಸೂಚಿಸಿದ್ದಾರೆ.

 ಕೊನೆಗೆ ``ನಿನ್ನಾಧೀನವಾಗಿ ಸಕಲವಸ್ತುಗಳಿರೆ | ಎನ್ನದೆಂಬೋದೇನೊ ವಿಜಯವಿಠಲಸ್ವಾಮಿ “ ಎಂದು ``ಈಶಾವಾಸ್ಯಮಿದಂ ಸರ್ವಂ ಯತ್ಕಿಂ ಚ ಜಗತ್ಯಾಂ ಜಗತ್ “ ಎಂಬ ಈಶಾವಾಸ್ಯೋಪನಿಷತ್ತಿನ ಮಂತ್ರದ ಸಾರವನ್ನು  ತಮ್ಮ ಸುಳಾದಿಯಲ್ಲಿ ನಿರೂಪಿಸಿದ್ದಾರೆ. 

ಲೇಖಕರು - ವಿ. ಶ್ರೀನಿಧಿ ಪ್ಯಾಟಿ. ಪೂರ್ಣಪ್ರಜ್ಞ ಸಂಶೋಧನ ಮಂದಿರ. ಬೆಂಗಳೂರು.


Comments

  1. ಅದ್ಭುತವಾದ ಚಿಂತನೆ ಆಚಾರ್ಯರಿಗೆ ಭಕ್ತಿ ಪುರಸ್ಸರವಾದ ಶಿರ ಸಾಷ್ಟಾಂಗ ನಮಸ್ಕಾರಗಳು

    ReplyDelete
  2. ಅದ್ಭುತವಾದ ಚಿಂತನೆ ಆಚಾರ್ಯರಿಗೆ ಭಕ್ತಿ ಪುರಸ್ಸರವಾದ ಶಿರ ಸಾಷ್ಟಾಂಗ ನಮಸ್ಕಾರಗಳು

    ReplyDelete

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting