ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2

   ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2  


ಪರಮಾತ್ಮನ ಅಧೀನರಾದಮೇಲೆ ನಮ್ಮ ಜೀವನದ ಭಾರವನ್ನೆಲ್ಲಾ ಪರಮಾತ್ಮನೇ ಹೊರುತ್ತಾನೆ ಎಂಬ ನಂಬಿಕೆಯನ್ನು ಹೊಂದಿರಬೇಕು ಎಂದು ದಾಸರು ``ನಿನ್ನಾಧೀನನಾದವನೋ ನಿತ್ಯದಲಿ ನಾನು, ಮನ್ನಿಸು ದಯದಿಂದ ಮಾತು ಕೇಳಿ , ಇನ್ನಾವ ಯೋಚನೆಯೋ ನಿರ್ಧಾರವಾಗಿ ನುಡಿದೆ  ಎನ್ನಭಾರವು ನಿನ್ನದಲ್ಲವೇನಯ್ಯಾ” ಎಂದು ತಮ್ಮ ಸುಳಾದಿಯಲ್ಲಿ ನಿರೂಪಿಸುತ್ತಾರೆ. ಈ ಜನ್ಮದಲ್ಲಿ ನಮ್ಮ ತಂದೆಯೋ,ತಾಯಿಯೋ ಇನ್ನಾರೋ ರಕ್ಷಕರೆಂದು ತಿಳಿದಿರುತ್ತೇವೆ. ಅನಂತಜನ್ಮಗಳಿಂದ ನಮ್ಮನ್ನು ರಕ್ಷಿಸುತ್ತಾ ಬಂದವನು ಆ ಪರಮಾತ್ಮ . ಜಲೂಕ ಎಂಬ ಜಲಚರ ಪ್ರಾಣಿಗೆ ಕೈ , ಕಾಲುಗಳಿಲ್ಲ , ಆದರೆ ನದಿಯಲ್ಲಿ ಅದರ ಆಹಾರವು ಹರಿದುಬರುವಂತೆ ಮಾಡಿ ಅದನ್ನು ರಕ್ಷಿಸುತ್ತಾನೆ. “ರಕ್ಷತೀತ್ಯೇವ ವಿಶ್ವಾಸಃ” ಎಂದು ಹೇಳಿದ ಹಾಗೆ "ರಕ್ಷಿಸುತ್ತಾನೆ" ಎನ್ನುವ ಧೃಢವಾದ ವಿಶ್ವಾಸವಿದ್ದರೆ,  ಪರಮಾತ್ಮನೂ ಕೂಡ ``ಯೋಗಕ್ಷೇಮಂ ವಹಾಮ್ಯಹಂ” ಎಂದು ಆಶ್ವಾಸನೆ ಕೊಟ್ಟ ಹಾಗೆ ನಮ್ಮನ್ನು ರಕ್ಷಿಸುತ್ತಾನೆ ಎಂಬುವುದರಲ್ಲಿ ಸಂದೇಹವಿಲ್ಲ. ದಾಸರು ತಮ್ಮ ಹಂತದ ಭಕ್ತಿಯ ಪ್ರಕಾರವನ್ನು ನಿರೂಪಿಸುತ್ತಾರೆ. ಯಾವುದೇ ಸುಖ ಸುಪ್ಪತ್ತಿಗೆಗಳು ತನ್ನ ಸಾಧನೆಗೆ ಅಡ್ಡವಾಗುವುದಂತಾದ್ದರೇ, ಅದನ್ನು ಎಂದೆಂದೂ ಕರುಣಿಸಬೇಡ, ಕಷ್ಟ ಬಂದರೂ ಅದನ್ನು ನಿನ್ನ ಅನುಗ್ರಹವೆಂದು ಅನುಭವಿಸುವ ಧೈರ್ಯ ನನಗೆ ಕರುಣಿಸಿರುವಿ, ಹಾಗಾಗಿ ನಾನು ದುಃಖ ಪಡುವುದಿಲ್ಲ, ಎಷ್ಟೇ ಕಷ್ಟ ಬಂದರೂ,ಸುಖ ಬಂದರೂ ಮಧ್ವ ಮತದಲ್ಲೇ ನಾನಿರುವೆ ಎಂದು ಭಕ್ತಿಯಿಂದ ಬೇಡುತ್ತಾರೆ. ``ಆನಂದವಿತ್ತರೇ ಒಳಿತು, ದುಃಖವನ್ನು ಅನಂತಾನಂತವಾಗಿ ತಂದಿತ್ತರೂ ಲೇಸು”. ಇದು ದಾಸರ ಭಕ್ತಯ ಪರಿ. 

ಇದು ''ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎನ್ನುವ ಭಗವದ್ಗೀತೆಯ ಮಾತಿನ ಸಾರ.” ಇನ್ನು "ದುಃಖವನ್ನು ಅನಂತಾನಂತವಾಗಿ ತಂದಿತ್ತರೂ ಲೇಸು" ಎನ್ನುವ ಪ್ರಾರ್ಥನೆ, ಕುಂತಿಯ "ವಿಪದಃ ಸಂತು ನಃ ಶಶ್ವತ್ ತತ್ರ ತತ್ರ ಜಗತ್ಪತೇ" ಎನ್ನುವ ಮಾತನ್ನು ನೆನಪಿಸುತ್ತದೆ.  ಎಂತಹ ಪ್ರತಿಕೂಲ, ಅನುಕೂಲ ಪರಿಸ್ಥಿತಿಗಳಿದ್ದರೂ ನಿನ್ನ ಸ್ಮರಣೆ ಮರೆಸಬೇಡ ಎಂದು ಪ್ರಾರ್ಥಿಸುತ್ತಾರೆ. "ಎಷ್ಟೇ ದಿವಸವಾಗೆ ಎನ್ನ ವದನದಲ್ಲಿ ಕೃಷ್ಣರಾಮರೆಂಬೊ ಸ್ಮರಣೆ ಮರೆಸದಿರು” ಈ ಪ್ರಾರ್ಥನೆ ಸಜ್ಜನರಾದವರು ಪರಮಾತ್ಮನಲ್ಲಿ ಏನನ್ನು ಬೇಡಬೇಕೆಂಬುವುದನ್ನು ತಿಳಿಸಿಕೊಡುತ್ತದೆ. ಕೊನೆಗೆ ಸತ್ಯಸಂಕಲ್ಪನಾದ ಪರಮಾತ್ಮನ ಚಿತ್ತಕ್ಕೆ ವಿರುದ್ಧವಾದುದು ಯಾವುದು ಇಲ್ಲ. ಅವನ ಚಿತ್ತವನ್ನು ಅರಿಯಲು ನಮ್ಮಲ್ಲಿ ಸಾಮರ್ಥ್ಯವಿಲ್ಲ. ಹಾಗಾಗಿ ಅವನ ಮೇಲೆ ಭಾರಹಾಕಿ ಸಾಧನಮಾರ್ಗದಲ್ಲಿ ನಡೆಯಲು ಪ್ರಯತ್ನಿಸುವುದೇ ಖಿನ್ನತೆ ರಹಿತವಾದ ಜೀವನದ ರಹಸ್ಯ. ಈ ರೀತಿಯಾಗಿ ಆಧುನಿಕವಾದ ಅನೇಕ ಮಾನಸಿಕ ಸಮಸ್ಯೆಗಳಿಗೆ ಸೂತ್ರರೂಪವಾದ ಪರಿಹಾರವನ್ನೂ ಕೊಟ್ಟಿದ್ದಾರೆ.

    “ಅಷ್ಟಷ್ಟೇನಯ್ಯಾ ನಿನ್ನ ಮನಕೆ ಬಂದ ಚೇಷ್ಟಿಯ ಮಾಡಿಸೊ ಈ ಚೇತನ ಕೈಯಿಂದ “ ಎಂದು ಪ್ರಾರ್ಥಿಸುವ ಮೂಲಕ ಪರಮಾತ್ಮನೇ ಸಕಲಕಾರ್ಯಗಳಿಗೆ ಪ್ರೇರಕಶಕ್ತಿ ಎಂದು ತಿಳಿಸುತ್ತಾರೆ. ಸಕಲವೂ ಪರಮಾತ್ಮನ ಅಧೀನ, ಎಲ್ಲ ಕಾರ್ಯಗಳೂ ಅವನ ಇಚ್ಚೆಯಂತೆ ನಡೆಯುವದಾದರೆ, ಜೀವನಿಗೆ ಸ್ವಾತಂತ್ರ್ಯವೇ ಇರುವುದಿಲ್ಲವೆಂಬ ಈ ಚಿಂತನೆಯು ನಿರಾಶಾವಾದ , ಮತ್ತು ಪಲಾಯನವಾದವನ್ನು ಪ್ರೋತ್ಸಾಹಿಸುತ್ತದೆ ಎನ್ನುವ ಆಪಾದನೆಯನ್ನು ಹಲವರು ಮಾಡುತ್ತಾರೆ. ಈ ಚಿಂತನಾಕ್ರಮವನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವುದೆ ಆಪಾದನೆಗೆ ಕಾರಣ. ಜೀವನಿಗೆ ಸ್ವಾತಂತ್ರ್ಯವಿಲ್ಲದಿದ್ದರೂ ಅವನು ಪ್ರಯತ್ನವನ್ನೇ ಮಾಡಬಾರದು ಎಂದು ಆಚಾರ್ಯರಾಗಲಿ,ದಾಸರಾಗಲಿ ಹೇಳಿಲ್ಲ. ಅಷ್ಟೇ ಅಲ್ಲದೆ ``ಮಹಾಪ್ರಯತ್ನವನ್ನು ಮಾಡದಿದ್ದರೆ ಜನರೆಂದೂ ಉನ್ನತಿಯನ್ನು ಹೊಂದುವುದಿಲ್ಲ” ಎನ್ನುವ ಭೀಮನ ಮಾತನ್ನು ಆಚಾರ್ಯರು ತಾತ್ಪರ್ಯನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.

 ಮಹಾನುಭಾವವರ್ಜಿತಾಃ  ಹರೇರನುಗ್ರಹೋಜ್ಝಿತಾಃ |

ಮಹಾಪ್ರಯತ್ನವರ್ಜಿತಾಃ ಜನಾಃ ನ ಜಗ್ಮುರುನ್ನತಿಂ ||

 ಹರಿಯ ಅನುಗ್ರಹ ಮತ್ತು ಮಹಾಪ್ರಯತ್ನವಿಲ್ಲದ ವ್ಯಕ್ತಿ ಉನ್ನತಿಯನ್ನು ಹೊಂದಲಾರ ಎಂಬುವುದು ಇದರ ತಾತ್ಪರ್ಯ. ಇದು ಆಚಾರ್ಯರ ಸ್ಪಷ್ಟವಾದ ನಿಲುವು. ಪರಮಾತ್ಮನ ಇಚ್ಚೆ ನಮಗೆ ಗೊತ್ತಿಲ್ಲವಾದ್ದರಿಂದಲೇ ನಮ್ಮ ಪ್ರಯತ್ನವನ್ನು ಫಲದ ನಿರೀಕ್ಷೆಯಿಲ್ಲದೆ ನಾವು ಮಾಡಬೇಕು. ಫಲದ ನೀರಿಕ್ಷೆಯಿಲ್ಲದೆ ಕರ್ಮ ಮಾಡಿದಾಗ  ಫಲಿತಾಂಶ ಉತ್ತಮವಾಗಿ ಬರುತ್ತದೆ. ಹಾಗಾಗಿಯೆ ಗೀತೆಯಲ್ಲಿ ಕೃಷ್ಣನು “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಜೀವಿಗಳಿಗೆ ಕರ್ಮಗಳಲ್ಲಿ ಮಾತ್ರ ಅಧಿಕಾರ. ಫಲದಲ್ಲಿ ಅಧಿಕಾರವಿಲ್ಲ ಎಂದಿದ್ದಾನೆ. ಹಾಗೆಂದಮಾತ್ರಕ್ಕೆ ಕರ್ಮಗಳಿಗೆ ಫಲವೇ ಇಲ್ಲವೆಂದಲ್ಲ. ಅದಕ್ಕಾಗಿ ಮುಂದೆ ಕೃಷ್ಣ  `` ಮಾ ಕರ್ಮಫಲಹೇರ್ತುಭೂಃ” ಎಂದ, ಅಂದರೆ ಫಲದನಿರೀಕ್ಷೆಯಿಂದ ಕರ್ಮ ಮಾಡಬಾರದು. ಫಲದ ನಿರೀಕ್ಷೆಯಿಂದ ಕರ್ಮಮಾಡುವಾಗ ವ್ಯಕ್ತಿಗೆ ಫಲದಲ್ಲೇ ಆಸಕ್ತಿಯಿರುತ್ತದೆ, ಆಗ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದಿಲ್ಲ. ನಿರೀಕ್ಷಿಸಿದ ಫಲಸಿಗದೇ ಇದ್ದಾಗ ಮಾನಸಿಕ ಕ್ಷೋಭೆ,ಮತ್ತು ಖಿನ್ನತೆಗೊಳಗಾಗುವುದು ಮೊದಲಾದ ಸಮಸ್ಯೆಗಳು ಒದಗಿಬರುತ್ತವೆ.  ಅದೇ ಕರ್ತವ್ಯ ದೃಷ್ಟಿಯಿಂದ ಫಲನಿರೀಕ್ಷೆಯಲ್ಲದೇ ಕರ್ಮಗಳನ್ನು ಮಾಡಿದಾಗ ,ನಿರೀಕ್ಷಿಸಿದಷ್ಟು ಫಲಸಿಗದೇ ಇದ್ದಾಗಲೂ ,ಪರಮಾತ್ಮ ನನ್ನ ಯೋಗ್ಯತೆಗೆ ತಕ್ಕಂತೆ ಫಲ ನೀಡಿದ್ದಾನೆಂದು ತಿಳಿದು, ಖಿನ್ನತೆಯಿಲ್ಲದೇ ಮುಂದಿನ ಕೆಲಸಗಳಿಗೆ ಅಣಿಯಾಗುತ್ತಾನೆ. ಇಂದಿನ ಅನೇಕ ಸಮಸ್ಯೆಗಳಿಗೆ ಇದೇ ಪರಿಹಾರ ಸೂತ್ರ. ಹಾಗಾಗಿ ದಾಸರ ಉಪದೇಶದಲ್ಲಿ ಎಲ್ಲೂ ನೈರಾಶ್ಯವಾದ ಹಾಗೂ ಪಲಾಯನವಾದಕ್ಕೆ ಅವಕಾಶವಿಲ್ಲ. ಭಕ್ತಿಮಾರ್ಗದಲ್ಲೂ ಇದೇ ಸೂತ್ರ ನಮ್ಮನ್ನು ಉನ್ನತಿಗೆ ಕೊಂಡೊಯ್ಯುತ್ತದೆ.

ಲೇಖಕರು - ವಿ. ಶ್ರೀನಿಧಿ ಪ್ಯಾಟಿ. ಪೂರ್ಣಪ್ರಜ್ಞ ಸಂಶೋಧನ ಮಂದಿರ. ಬೆಂಗಳೂರು.

Comments

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting