ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ-1

ಕನ್ನಡಸಾರಸ್ವತ ಲೋಕಕ್ಕೆ ಹರಿದಾಸರುಗಳ ಕೊಡುಗೆ ಅಪಾರ. ಅದರಲ್ಲೂ ಅಧ್ಯಾತ್ಮಪ್ರಪಂಚಕ್ಕೆ ಹರಿದಾಸರುಗಳ ಪದ್ಯಗಳು ರಸದೌತಣ. ಮಧ್ವಾಚಾರ್ಯರು ಸ್ವತಃ ಸಂಗೀತಕೋವಿದರು ,ಅವರ ದ್ವಾದಶಸ್ತೋತ್ರಗಳಲ್ಲಿ ಇರುವ ಸಂಗೀತದ ಸುವಾಸನೆಯನ್ನು ಜಗತ್ತಿಗೆಲ್ಲಾ ಪಸರಿಸಿದ ಕೀರ್ತಿ ಹರಿದಾಸರದ್ದು. ಶ್ರೀಪಾದರಾಜರು,ವ್ಯಾಸರಾಜರು ಹಾಕಿಕೊಟ್ಟದಾರಿಯಲ್ಲಿ ಮುಂದುವರೆದು ತತ್ವಗಳನ್ನು ಕನ್ನಡಭಾಷೆಯಲ್ಲಿ ತಿಳಿಸಿ ಹರಿದಾಸರುಗಳು ಮಾಡಿದ ಉಪಕಾರವು ಅವಿಸ್ಮರಣೀಯ. ಇಂತಹ ಹರಿದಾಸರಪರಂಪರೆಯಲ್ಲಿ ಪುರಂದರದಾಸರ ಶಿಷ್ಯರಾಗಿ 25,000ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಶ್ರೇಷ್ಠರೆನಿಸಿಕೊಂಡ ಮಹಾನುಭಾವರು ವಿಜಯದಾಸರು. ವಿಜಯದಾಸರ ಕೃತಿಗಳು ಅವರ ಅನುಭವದ ಮೂಸೆಯಲ್ಲಿ ಬಂದ ರಸಪಾಕಗಳು. ಅವುಗಳು ಕೇವಲ ಅಧ್ಯಯನಕ್ಕೆ ಮಾತ್ರ ನಿಲುಕುವಂತದ್ದಲ್ಲ. ಭಗವದ್ಭಕ್ತಿ, ವೈರಾಗ್ಯ ,ಮತ್ತು ಅನುಭವಗಳಿಂದ ನಮ್ಮ ಪಾತ್ರತೆ ಎಷ್ಟು ಹೆಚ್ಚುತ್ತದೋ ,ಅಷ್ಟು ನಮಗೆ ಹೆಚ್ಚೆಚ್ಚು ಅರ್ಥವಾಗುತ್ತಾ ಹೋಗುತ್ತವೆ. “ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ “ ಎನ್ನುವ ಸುಳಾದಿಯು ಇದಕ್ಕೆ ಸ್ಪಷ್ಟ ನಿದರ್ಶನ. ಪ್ರತಿಯೊಂದು ಪದಾರ್ಥವು ಪರಮಾತ್ಮನ ಅಧೀನವೆನ್ನುವುದು ಸಿದ್ಧಾಂತ. ಅದರ ವಿವರಣೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. “ನ ಋತೇ ತ್ವತ್ಕ್ರಿಯತೆ” ಎನ್ನುವ ವೇದಮಂತ್ರದ , ‘ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ | ಯದನುಗ್ರಹತಃ ಸಂತಿ ನ ಸಂತಿ ಯದುಪೇ...