ಮಧ್ವಾಚಾರ್ಯರು ಮತ್ತು Leadership Quality



      ಅಮಂತ್ರಂ ಅಕ್ಷರಂ ನಾಸ್ತಿ 
        ನಾಸ್ತಿ ಮೂಲಂ ಅನೌಷಧಂ|
      ಅಯೋಗ್ಯಃ ಪುರುಷೋ ನಾಸ್ತಿ 
        ಯೋಜಕಃ ತತ್ರ ದುರ್ಲಭಃ||
ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು “ಆಧ್ಯಾತ್ಮಜ್ಞಾನನೇತಾ” ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವ “ನಾಯಕ” ಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರು.  ಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ.
ಮುಂದಾಳುತ್ವ ಗುಣ (leading from front)
ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ. ಶ್ರೀ ಮಧ್ವವಿಜಯದ ೧೦ನೇ ಸರ್ಗದಲ್ಲಿ ಆಚಾರ್ಯರ ಉತ್ತರಭಾರತದ ಸಂಚಾರವನ್ನು ವರ್ಣಿಸುತ್ತಾರೆ. ಆಚಾರ್ಯರು ಸಂಚರಿಸುತ್ತಾ ಶಿಷ್ಯರೊಂದಿಗೆ ಕೂಡಿ ಗಂಗಾನದಿಯ ದಡಕ್ಕೆ ಬಂದು ಸೇರುತ್ತಾರೆ. ಅಲ್ಲಿ ಶತ್ರುಗಳ ಆಕ್ರಮಣದ ಭಯದಿಂದ ತುರುಷ್ಕರಾಜನು ನೌಕೆಗಳ ಸಂಚಾರವನ್ನು ನಿಲ್ಲಿಸಿದ್ದನು. ಅಲ್ಲಿರುವ ಜನರೆಲ್ಲರೂ ಭಯಂಕರ ಪ್ರವಾಹ,ಶತ್ರುರಾಜನ ಸೈನ್ಯದ ಭಯವಿರುವುದರಿಂದ ನದಿಯು ದಾಟಲು ಯೋಗ್ಯವಲ್ಲ, ಎಂದು ತಡೆದರು.ಬೇರೆಯವರಿಗೆ ಇದೋಂದು Risk Factor ಆಗಿತ್ತು. ಆದರೆ ಆಚಾರ್ಯರು “ನಾಯಕನಾದವನು ಗಮ್ಯ ತಲುಪಲು ಅತ್ಮವಿಶ್ವಾಸದಿಂದ ರಿಸ್ಕ್ ತೆಗೆದುಕೊಳ್ಳಬೇಕೆಂದು” ತಾವು ಆಚರಿಸಿ ತೋರಿಸುತ್ತಾರೆ. ಹಾಗಂತ ಆಚಾರ್ಯರು ಮೊದಲು ತಮ್ಮ ಶಿಷ್ಯರನ್ನು ನೀರಿಗೆ ಬಿಡಲಿಲ್ಲ. ತಾವು ಮುಂದೆ ನಿಂತರು,ಶಿಷ್ಯರಿಗೆ ಧೈರ್ಯ ತುಂಬಿ ತಮ್ಮನ್ನು ಅನುಸರಿಸಲು ಹೇಳಿದರು. ತಾವು ಮುಂದೆ ಈಜುತ್ತಾ, ಎಲ್ಲರನ್ನೂ ದಡ ಸೇರಿಸಿದರು. ನಾಯಕನು ಹೀಗಿರಬೇಕೆಂದು ಜಗತ್ತಿಗೆ ತೋರಿಸಿದರು.
 
ಭಯಮಿಶ್ರಿತಪ್ರೀತಿ
ಭೀಷಾಸ್ಮಾತ್ ವಾತಃ ಪವತೆ ಭೀಷೋದೇತಿ ಸೂರ್ಯ:” ಎಂಬುವ ತೈತ್ತಿರೀಯ ಮಂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ಆಚಾರ್ಯರು ಹೀಗೆ ಹೇಳುತ್ತಾರೆ.”ತಸ್ಮಾತ್ ವಾಯ್ವಾದಯೋ ದೇವಾಃ ವಿದ್ವಾಂಸೋಪಿ ವಿಶೇಷತಃ| ಭೀತಾಃ ಸ್ವಕರ್ಮ ಕುರ್ವಂತಿ ವಿಷ್ಣೋಃ ಪ್ರೀತ್ಯರ್ಥಮಂಜಸಾ||”. ವಾಯು ,ಸೂರ್ಯ ಮೊದಲಾದ ದೇವತೆಗಳು ಪರಮಾತ್ಮನ ಭಯದಿಂದ, ಅವನ ಪ್ರೀತಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ವಾಯು ಮೊದಲಾದ ದೇವತೆಗಳಿಗೆ ಪರಮಾತ್ಮನ ವಿಷಯದಲ್ಲಿ ಪ್ರೀತಿಯೂ ಇದೆ,ಭಯವೂ ಇದೆ. ನಾಯಕನಲ್ಲಿ ಅವನ ಅನುಯಾಯಿಗಳಿಗೆ ಇವೆರಡೂ ಇರಬೇಕೆಂದು ಸೂಚಿಸುತ್ತಾರೆ. ಕೇವಲ ಭಯವಿದ್ದರೆ ಅವನ ಎದುರು ಮಾತ್ರ ಕೆಲಸ ಮಾಡುತ್ತಾರೆ.ಕೇವಲ ಪ್ರೀತಿಯಿದ್ದರೆ ಉದಾಸೀನ ಮಾಡಿ,ಚೆನ್ನಾಗಿ ಕೆಲಸ ಮಾಡುವುದಿಲ್ಲ. ಎರಡೂ ಇದ್ದರೆ ನಿರಂತರವಾಗಿ ,ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾದರೆ ನಾಯಕನಾದವನು ಅನುಯಾಯಿಗಳಿಂದ ಭಯಮಿಶ್ರಿತಪ್ರೀತಿಯನ್ನು ಹೇಗೆ ಸಂಪಾದಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಆಚಾರ್ಯರು ಕೊಡುವ ಉತ್ತರ “ಧಾರ್ಯತೇ ಯೇನ ವಿಶ್ವಂ ಸದಾ ಅಜಾದಿಕಂ”.ಎಂದು ಪರಮಾತ್ಮ ನಿರಂತರವಾಗಿ ಈ ವಿಶ್ವದ ಸೃಷ್ಟಿ, ಸ್ಥಿತಿ, ಲಯ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾನೆ.ಅವನು ವಾಯು ಮೊದಲಾದ ದೇವತೆಗಳಿಗಿಂತ ಅತಿ ಹೆಚ್ಚು ಕೆಲಸ ಮಾಡುತ್ತಾನೆ. ಅಷ್ಟೇ ಅಲ್ಲ “ವಾರ್ಯತೇ ಅಶೇಷ ದುಃಖಂ ನಿಜಧ್ಯಾಯಿನಾಂ”,ತನ್ನನ್ನು ನಂಬಿ ಕೆಲಸ ಮಾಡುವವರ ದುಃಖಕ್ಕೆ ಸ್ಪಂದಿಸಿ,ಅವರ ದುಃಖವನ್ನು ಪರಿಹರಿಸುತ್ತಾನೆ.ಅಪ್ಪ ತಾನು ಸಂಧ್ಯಾವಂದನೆ ಮಾಡದೇ ಮಗನಿಗೆ ಸಂಧ್ಯಾವಂದನೆ ಮಾಡೆಂದು ಹೇಳುವುದು ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ ನಾಯಕನು ತಾನು ಪರಿಶ್ರಮಿಯಾಗಿರಬೇಕು(Hard working). ಅಷ್ಟೇ ಅಲ್ಲದೆ ತನ್ನವರ ವಿಷಯದಲ್ಲಿ ಕಾಳಜಿವುಳ್ಳವನಾಗಿರಬೇಕು(concerned). ಆಗ ಅನುಯಾಯಿಗಳು ನಾಯಕನಲ್ಲಿ ಭಯಮಿಶ್ರಿತಪ್ರೀತಿಯುಳ್ಳವರಾಗುತ್ತಾರೆ.  ಆಚಾರ್ಯರು ತಮ್ಮ ಶಿಷ್ಯರಲ್ಲಿ ಕಾಳಜಿಯುಳ್ಳವರಾಗಿದ್ದರು.ಈ ವಿಷಯದಲ್ಲಿ ನಾರಾಯಣಪಂಡಿತಾಚಾರ್ಯರು ಆಚಾರ್ಯರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ.ಆಚಾರ್ಯರು ಅರುಣೋದಯ ಕಾಲದಲ್ಲಿ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು. ಶಿಷ್ಯರು ತಡವಾಗಿ ಮಲಗಿದರೂ, ಬೇಗ ಎದ್ದು  ಕಷ್ಟಕರವಾದ ಗುರು ಶುಷ್ರೂಶೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆದರೆ ಒಮ್ಮೆ ಶ್ರವಣ ಮನನ ಮಾಡುತ್ತಾ ಬಹಳ ತಡವಾಗಿ ಮಲಗಿದ್ದ ಶಿಷ್ಯರು ಬೆಳಿಗ್ಗೆ ಬೇಗ ಏಳಲಿಲ್ಲ. ಆಚಾರ್ಯರು ತಾವೇ ತಮ್ಮ ಸ್ನಾನವಸ್ತ್ರಾದಿಗಳನ್ನು ಹಿಡಿದು ನದಿಗೆ ಹೊರಟರು. ಶಿಷ್ಯರನ್ನು ಎಬ್ಬಿಸಲಿಲ್ಲ. ಆಮೇಲೆ ತಕ್ಷಣ ಎಚ್ಚರಗೊಂಡ ಶಿಷ್ಯರು ಆಚಾರ್ಯರು ಕೆಲಸ ಮಾಡದ್ದಕ್ಕೆ ಬಯ್ಯುವರು ಎಂದು ಗಾಬರಿಯಿಂದ ಸುಮ್ಮನೆ ನಿಂತರು ಆದರೇ ಆಚಾರ್ಯರು ಬಯ್ಯಲಿಲ್ಲ. ಹಾಗಾಗಿ ನಾಯಕನು ನಿಯಮಕ್ಕನುಗುಣವಾಗಿ ಕೆಲಸ ಮಾಡಿಸಬೇಕಾದರೂ, (Principled) ಕೆಲವೊಮ್ಮೆ ಸಂದರ್ಭಾನುಸಾರವಾಗಿ, ವ್ಯಕ್ತಿಗಳಿಗನುಸಾರವಾಗಿ ಮುಕ್ತತೆಯನ್ನೂ(Liberty) ಪ್ರದರ್ಶಿಸಬೇಕು. ಹೀಗೆ ಆಚಾರ್ಯರೂ ನಾಯಕತ್ವ ಗುಣಗಳ ಬಗ್ಗೆ ಅನೇಕ ಕಡೆ ಬೆಳಕು ಚೆಲ್ಲಿದ್ದಾರೆ, ಆ ದೃಷ್ಟಿಯಿಂದ ಗಮನಿಸಿ, ಜನರಿಗೆ ತಿಳಿಸಿ, ಅಳವಡಿಸಿಕೊಳ್ಳಬೇಕಾಗಿದೆಯಷ್ಟೇ.
ಲೇಖಕರು - ವಿ. ಶ್ರೀನಿಧಿ ಪ್ಯಾಟಿ. ಪೂರ್ಣಪ್ರಜ್ಞ ಸಂಶೋಧನ ಮಂದಿರ. ಬೆಂಗಳೂರು.


Comments

  1. ಇಂತಹ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಆಚಾರ್ಯರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಅರ್ಹತೆ ಬರುತ್ತದೆ
    ಲೇಖನ ತುಂಬಾ ಪ್ರಸ್ತುತವಾಗಿದೆ

    ReplyDelete
  2. ಲೇಖನ ತುಂಬಾ ಉತ್ಕೃಷ್ಟ ಚಿಂತನೆ ಉಳ್ಳದ್ದಾಗಿದೆ ಇಂತಹ ಲೇಖನಗಳು ಈಗಿನ ಕಾಲಕ್ಕೆ ಅತ್ಯಂತ ಪ್ರಸ್ತುತವಾಗಿದೆ ಶ್ರೀನಿಧಿ ಅವರಿಂದ ಇಂತಹ ಲೇಖನಗಳು ನಿರಂತರವಾಗಿ ಬರಲೆಂದು ಆಶಿಸುತ್ತೇನೆ

    ReplyDelete
  3. Veena Honnatti. Every one should read and follow.

    ReplyDelete

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting