ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ

 

ಇಂಡೋಲಜಿ ವಿಮರ್ಶೆ 6– ಮಿಶನರಿ ಮತ್ತು ಚರ್ಚ್ ಸಂಸ್ಕೃತ.     - ಡಾ.ಶ್ರೀನಿಧಿ ಪ್ಯಾಟಿ

ಕಳೆದ ಸಂಚಿಕೆಯಲ್ಲಿ ಬ್ರಿಟಿಷ್ ಸರ್ಕಾರದ ಕಾನೂನಿನ ಬಲದಿಂದ ಮಿಶನರಿಗಳು ಭಾರತಕ್ಕೆ ಮುಕ್ತವಾಗಿ ಪ್ರವೇಶಿಸಲು ಪ್ರಾರಂಭಿಸಿದವೆಂದು ತಿಳಿದೆವು . ಅಂತಹ ಮಿಶನರಿಗಳಲ್ಲಿ ಕೆಲವು ಪ್ರಮುಖರ ಬಗ್ಗೆ ತಿಳಿಯೋಣ .

ವಿಲಿಯಮ್ ಕ್ಯಾರಿ (William carey 1761-1834) ಇವನು ಅಧುನಿಕ ಮಿಶನರಿ ಚಟುವಟಿಕೆ ಹಾಗೂ ಪೂರ್ವೀಯ , ವಿಶೇಷವಾಗಿ ಭಾರತೀಯ ಭಾಷೆಗಳಲ್ಲಿ ಮಿಶನರಿಗಳಿಗೆ ಅನುಕೂಲವಾಗುವ ಸಾಹಿತ್ಯ ನಿರ್ಮಾಣದ ಪ್ರವರ್ತಕ ಹಾಗೂ ಬ್ಯಾಪ್ಟಿಸ್ಟ್ ಮಿಶನರಿ ಸೊಸಾಯಿಟಿ (Baptist missionary society)  ಸಂಸ್ಥಾಪಕ . ಇವನನ್ನು ಅಧುನಿಕ ಮಿಶನರಿಯ ಪಿತಾಮಹ ಎಂದು ಗುರುತಿಸಬಹುದು .  ಬ್ರಿಟಿಷ್ ಸರ್ಕಾರದ ನಿಯಮಗಳು ಮಿಶನರಿಗಳ ಪರವಾಗಿ ಮಾರ್ಪಾಡಾಗುವ ಮೊದಲೆ ಇವನು ಭಾರತದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ.  ಪೂರ್ವಿಯ ದೇಶದ ಭಾಷೆಗಳ ಪ್ರೋಫೆಸರ್ ಆಗಿದ್ದ ಇವನು ಅನೇಕ ವೇದಾಂತ ಗ್ರಂಥಗನ್ನು  ಹಾಗೂ ಮರಾಠಿ, ಸಂಸ್ಕೃತ, ಪಂಜಾಬಿ, ತೆಲುಗು , ಬೆಂಗಾಲಿ , ಮುಂತಾದ ಭಾಷೆಗಳ ವ್ಯಾಕರಣ ಹಾಗೂ ನಿಘಂಟು (Dictionary) ಗಳನ್ನು ರಚಿಸಿದನು . ಇವನು ತನ್ನ ಜೀವಿತಾವಧಿಯಲ್ಲಿ  ಸೆರಾಂಪೂರ್ ಪ್ರೆಸ್ ನಿಂದ ಎರಡು ಲಕ್ಷಕ್ಕೂ ಅಧಿಕ ಬೈಬಲ್ ಪ್ರತಿಗಳನ್ನು ನಲ್ವತ್ತಕ್ಕೂ ಹೆಚ್ಚಿನ ಭಾಷೆಗಳಲ್ಲಿ ಮುದ್ರಿಸಿ ಹಂಚಿದನು .ಅದರ ಸಾಹಿತ್ಯ ನಿರ್ಮಾಣದ ಹೆಚ್ಚಿನ ಕೆಲಸವನ್ನು ಸ್ವತಃ ತಾನೆ ಮಾಡಿದನು . 1809 ರಲ್ಲಿ ಬೈಬಲ್ ನ್ನು ಮೊದಲ ಬಾರಿಗೆ ಸಂಸ್ಕೃತದಲ್ಲಿ ಅನುವಾದಿಸಿ ಪ್ರಕಟಿಸಿದ . 1811 ರಲ್ಲಿ ಬೈಬಲ್ ನ್ನು ಹಿಂದಿಯಲ್ಲಿ ಅನುವಾದಿಸಿ ಬಿಡುಗಡೆಗೊಳಿಸಿದ. ಬೈಬಲ್ ನ ಅನುವಾದಕ್ಕಾಗಿ ಕನ್ನಡ ಹಾಗೂ ತೆಲುಗು ಭಾಷೆಯ ಅಧ್ಯಯನ ಮಾಡಿದ . ಪಷ್ತೂ ಹಾಗೂ ಖಸಿ ಭಾಷೆಯ ಬೈಬಲ್ ನ ಅನುವಾದ ಕಾರ್ಯದಲ್ಲಿ ಕೆಲಸ ಮಾಡಿದ . ತನ್ನ ಅಧಿನದಲ್ಲಿ ಕೆಲಸ ಮಾಡುವ ವಿದ್ವಾಂಸರ ಸಮಿತಿಯಿಂದ 35 ಭಾಷೆಗಳಲ್ಲಿ ಬೈಬಲ್ ನ ಪ್ರಾಕಾಶನ ಕಾರ್ಯವನ್ನು ಮಾಡಿಸಿದ. ಭಾರತೀಯ ಭಾಷೆಯಲ್ಲಿ ಮೊದಲ ಬಾರಿಗೆ ಸಮಾಚಾರ್ ದರ್ಪಣ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ . ಇವು ಇವನ ದೈತ್ಯ ಪ್ರತಿಭೆಗೆ ಕೆಲವು ನಿದರ್ಶನಗಳು . ಅಪ್ರತಿಮ ಭಾಷಾ ತಜ್ಞನಾದ ಇವನು ವಿಶೆಷವಾಗಿ ಬಂಗಾಳಿ ಭಾಷೆಯ ಪುನರುತ್ಥಾನಕ್ಕೆ ಕೊಟ್ಟ ಕೊಡುಗೆಯನ್ನು ರವಿಂದ್ರನಾಥ ಟಾಗೋರರು ಸ್ಮರಿಸಿದ್ದಾರೆ.

ಕ್ಯಾರಿ ಅಗಸ್ಟ 17, 1761 ರಲ್ಲಿ ಜನಿಸಿದನು . 1781 ರಲ್ಲಿ ಡಾಲಿ ಎಂಬವಳ ಜೊತೆ ವಿವಾಹವಾದನು .1789 ನಲ್ಲಿ ಇಂಗ್ಲ್ಯಾಂಡ್ ನ ಲೈಸಿಸ್ಟರ್ ಎಂಬುವಲ್ಲಿ ಸಣ್ಣ ಚರ್ಚನಲ್ಲಿ ಪಾದ್ರಿಯಾಗಿ ನೇಮಕಗೊಂಡನು . ಕ್ಯಾರಿ , ಅವನ ಹಿರಿಯ ಮಗ ಫೆಲಿಕ್ಸ್ , ಥೋಮಸ್ , ಪತ್ನಿ ಹಾಗೂ ಮಗಳು ಇಂಗ್ಲ್ಯಾಂಡಿನಿಂದ  ಹಡಗಿನ ಮೂಲಕ 1793 ರಲ್ಲಿ ಭಾರತಕ್ಕೆ ಬಂದಿಳಿದರು . ಮೊದ ಮೊದಲು ಮಿಶನರಿಗಳು ಭಾರತದಲ್ಲಿ ಬಂದಿಳಿದಾಗ ತಮ್ಮ ಕೆಲಸ ಕಾರ್ಯಕ್ಕಾಗಿ ತಮ್ಮ ಅಸ್ತಿತ್ವಕ್ಕಾಗಿ ವ್ಯವಸ್ಥೆಯನ್ನು ತಾವೆ ಮಾಡಿಕೊಳ್ಳಬೇಕಿತ್ತು . ಮಿಶನರಿಗಳಿಗೆ ಸ್ಥಳಿಯ ಜನರ ಜೊತೆ ಬೆರೆಯುವುದಕ್ಕಾಗಿ ಬಂಗಾಳಿ ಭಾಷೆಯನ್ನು ಕಲಿಯಲಾರಂಭಿಸಿದರು . ಕ್ಯಾರಿ ಬಂಗಾಳದ ದಿನಾಪುರದ ಸಮೀಪದ ಹಳ್ಳಿಯೊಂದಲ್ಲಿದ್ದ ತನ್ನ ಮಿತ್ರನ ಇಂಡಿಗೋ ಡೈ ಫ್ಯಾಕ್ಟರಿಯಲ್ಲಿ ನಿರ್ವಾಹಕನಾಗಿ (Manager) ಕೆಲಸಕ್ಕೆ ಸೇರಿಕೊಂಡ .  ಅಲ್ಲಿ ಕೆಲಸ ಮಾಡುತ್ತಾ ಆರು ವರುಷಗಳಲ್ಲಿ ಅವನು ಬೆಂಗಾಳಿ ಬಾಷೆಯ ಬೈಬಲ್ ನ ಮೊದಲ ಆವೃತ್ತಿಯನ್ನು ಸಿದ್ಧಗೊಳಿಸಿದ . ತನ್ನ ಮಿಶಿನರಿಯು ಯಾವ ಸಿದ್ಧಾಂತಗಳ ತಳಹದಿಯಲ್ಲಿ ನೆಲೆಯೂರಬೆಕೆಂದು ನಿತಿ –ನಿಯಮಗಳನ್ನು ರೂಪಿಸಿದ್ದಲ್ಲದೆ , ಆರ್ಥಿಕವಾಗಿ ಸ್ವಾವಲಂಬನೆಯಾಗುವ ದೃಷ್ಟಿಯಲ್ಲಿ ಅನೇಕ ಉಪಾಯಗಳನ್ನು ಮಾಡಿದ . ಈ ಮಧ್ಯದಲ್ಲಿ  ಇಂಗ್ಲ್ಯಾಂಡಿನ ತಂಪಾದ ವಾತಾವರಣದಿಂದ ಭಾರತದ ಉಷ್ಣ ವಾತಾವರಣಕ್ಕೆ ಹೊಂದಿಕೆಯಾಗದೆ , ಅವನ ಮಗ ಡಿಸೆಂಟ್ರಿ ರೋಗದಿಂದ ಬಳಲಿ ಸಾವನ್ನಪ್ಪಿದ .ಅದರ ಆಘಾತದಿಂದ ಹೊರಬರಲಾಗದೆ ಅವನ ಪತ್ನಿಯು 1807 ರಲ್ಲಿ ನಿಧನ ಹೊಂದಿದಳು. ಅದೇ ಸಂದರ್ಭದಲ್ಲಿ ಮಿಶನರಿಯು ಹೆಚ್ಚಿನ ಜನರನ್ನು ಭಾರತಕ್ಕೆ ಕಳುಹಿಸಲು ಪ್ರಾರಂಭಿಸಿತು. ಅವರಲ್ಲಿ ಜೋನ್ ಫೌಂಟೇನ್ ಎಂಬುವವನು ಮೊದಲಿಗನು .ಅವನು ಮುಡ್ನಾಬಟಿ ಎಂಬ ಊರಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದನು .ಇವನ ಜೊತೆಗೆ  ವಿಲಿಯಮ ವಾರ್ಡ್ ಎಂಬ ಪ್ರಿಂಟರ್(printer) ಹಾಗೂ ಇನ್ನೂ ಕೆಲವರು ಆಗಮಿಸಿದರು . ಈಸ್ಟ್ ಇಂಡಿಯಾ ಕಂಪನಿಯು ಇನ್ನೂ  ಮಿಶನರಿಗಳಿಗೆ ಅಷ್ಟಾಗಿ ಅನುಕೂಲಕರವಾಗದಿದ್ದ ಕಾಲವಾದ್ದರಿಂದ ಡಚ್ಚರ ಆಡಳಿತದಲ್ಲಿದ್ದ ಸೆರಾಂಪೂರ್ ಎಂಬ ಸ್ಥಳದಲ್ಲಿ ವಾಸಿಸತೊಡಗಿದರು . ಅಲ್ಲಿ ವ್ಯವಸ್ಥಿತವಾಗಿ ನೆಲೆಯೂರಿದ ಮೇಲೆ ತಮ್ಮ ಕುಟುಂಬಕ್ಕೆ ಹಾಗೂ ತಾವು ನಡೆಸುವ ಶಾಲೆಗೆ ಅನುಕೂಲವಾಗುವಷ್ಟು ದೊಡ್ಡದಾದ ಮನೆಯನ್ನು ಖರಿಸಿದಿಸಿದರು . ಈ ಶಾಲೆಯು ಅವರ ಆದಾಯದ ಮುಖ್ಯ ಮೂಲವಾಗಿತ್ತು. ವಿಲಯಮ್ ವಾರ್ಡ್ ಎಂಬುವನು ಕ್ಯಾರಿ ಖರಿದಿಸಿದ ಸೆಕೆಂಡ್ ಹ್ಯಾಂಡ್ ಮುದ್ರಣ ಯಂತ್ರದಿಂದ  ಮುದ್ರಣಾಗಾರವನ್ನು (printing press) ಸ್ಥಾಪಿಸಿದರು, ಅವರು ಬೆಂಗಾಳಿ ಭಾಷೆಯಲ್ಲಿ ಬೈಬಲ್ ಮುದ್ರಿಸುವ ಕೆಲಸವನ್ನು ಪ್ರಾರಂಭಿಸಿದರು. ಆಗಸ್ಟ್ 1800ರಲ್ಲಿ ಇವರ ಜೊತೆಗಾರನಾದ  ಫೌಂಟೇನ್ ಎಂಬುವವನು ಕೂಡ ಡಿಸೆಂಟ್ರಿ (ಪಚನ ಸಂಬಂಧಿತ ಕಾಯಿಲೆ) ಗೆ ಬಲಿಯಾದನು. 

ಆ ವರ್ಷ ಕೊನೆಗೆ, ಮಿಷನ್ ತನ್ನ ಮೊದಲ ವ್ಯಕ್ತಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿತು. ಅವನು ಕೃಷ್ಣ ಪಾಲ್ ಎಂಬ ಹಿಂದು  ವ್ಯಕ್ತಿಯಾಗಿದ್ದನು. ಡ್ಯಾನಿಷ್ ಸರ್ಕಾರದ ಬೆಂಬಲ ಮತ್ತು ಆಗಿನ ಡಚ್ ಇಂಡಿಯಾದ ಗವರ್ನರ್ ಜನರಲ್ ರಿಚರ್ಡ್ ವೆಲ್ಲೆಸ್ಲಿಯವರ ವಿಶ್ವಾಸವನ್ನು ಕೂಡಾ ಕ್ಯಾರಿಯು ಪಡೆದನು. ಹಿಂದುಗಳನ್ನು ಕ್ರೈಸ್ತ ರಿಲಿಜನ್ನಿಗೆ ಮತಾಂತರಗೊಳಿಸಿದ ನಂತರ, ಮತಾಂತರಗೊಂಡವರ  ಜಾತಿಯನ್ನು ಮುಂದುವರಿಸಲು ಅನುಮತಿ ನೀಡಬೇಕೇ ಎಂಬ ಪ್ರಶ್ನೆ ಉಂಟಾಯಿತು. 1802ರಲ್ಲಿ ಕೃಷ್ಣ ಪಾಲ್  ಅವನ ಮಗಳು (ಶೂದ್ರ ಜಾತಿಯವಳು) ಬ್ರಾಹ್ಮಣನನ್ನು ಮದುವೆಯಾದಳು. ಈ ಮದುವೆಯು  ಜಾತಿ ವ್ಯತ್ಯಾಸಗಳನ್ನು ಚರ್ಚ್ ತ್ಯಜಿಸುತ್ತಿದೆ ಎನ್ನುವುದರ ಸಾರ್ನಿವಜನಿಕ ಪ್ರದರ್ಶನವಾಗಿತ್ತು.

1801ರಲ್ಲಿ, ಗವರ್ನರ್ ಜನರಲ್ ನು ಫೋರ್ಟ್ ವಿಲಿಯಂ ಎಂಬ ಕಾಲೇಜನ್ನು ಸ್ಥಾಪಿಸಿದನು, ಇದನ್ನು ಸರ್ಕಾರಿ ಅಧಿಕಾರಿಗಳಿಗೆ (civil cervents) ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಅವನು ಕ್ಯಾರಿಯನ್ನು ಬೆಂಗಾಳಿ ಭಾಷೆಯ ಪ್ರಾಧ್ಯಾಪಕನನ್ನಾಗಿ ನೇಮಿಸಿದನು.  ಅಲ್ಲಿ ಕ್ಯಾರಿಯೂಂದಿಗೆ ಪಂಡಿತರೂ ಕೆಲಸ ಮಾಡುತ್ತಿದ್ದರು.  ಬೆಂಗಾಳಿ ಭಾಷೆಯಲ್ಲಿ ಬೈಬಲ್ ಅನುವಾದದ ತಪ್ಪುಗಳನ್ನು ಸರಿಪಡಿಸಲು ಅವರೆಲ್ಲರಿಂದ ಸಹಾಯವನ್ನು ಪಡೆದನು. ಕ್ಯಾರಿ ಬೆಂಗಾಳಿ ಮತ್ತು ಸಂಸ್ಕೃತದ ವ್ಯಾಕರಣಗಳನ್ನು ಬರೆಯುವ ಜೊತೆಗೆ ಸಂಸ್ಕೃತದಲ್ಲಿ ಬೈಬಲ್ ನ್ನು ಅನುವಾದಿಸಲು ಪ್ರಾರಂಭಿಸಿದನು.

ಕ್ಯಾರಿಯು ಗವರ್ನರ್ ಜನರಲ್ ಅವರೊಂದಿಗೆ ಸೇರಿ  ಹುಟ್ಟಿದ ಮಗು ಬಲಿ ಕೊಡುವ ಪದ್ಧತಿ ಮತ್ತು ಸತೀ ಪದ್ಧತಿಯನ್ನು ನಿಲ್ಲಿಸಲು ಪ್ರಯತ್ನಿಸಿದನು. ಅವನು ಪಂಡಿತರನ್ನು ಸಂಪರ್ಕಿಸಿ, ಇವುಗಳಿಗೆ ಹಿಂದೂ  ಗ್ರಂಥಗಳಲ್ಲಿ ಆಧಾರವಿಲ್ಲ ಎಂದು ನಿರ್ಧರಿಸಿದನು. ಮಿಷನ್ನಿನ ಮುದ್ರಣಾಲಯದಲ್ಲಿ ಬೆಂಗಾಳಿ, ಸಂಸ್ಕೃತ ಮತ್ತು ಇತರ ಮುಖ್ಯ ಭಾಷೆಗಳಲ್ಲಿ ಬೈಬಲ್ ಮುದ್ರಣ ಪ್ರಾರಂಭವಾಯಿತು. ಕೆಲವು ಭಾಷೆಗಳು ಮೊದಲ ಬಾರಿಗೆ ಮುದ್ರಣಗೊಂಡವು. ಮುದ್ರಣಕ್ಕೆ  ಬೇಕಾಗುವ ಅಚ್ಚುಗಳನ್ನು ವಿಲಿಯಮ್ ವಾರ್ಡ ಸ್ವತಃ ತಾನೆ  ತಯಾರಿಸಿದನು. 

ಕ್ಯಾರಿಯು ಸಂಸ್ಕೃತದಿಂದ ಪಾಶ್ಚಾತ್ಯ ಭಾಷೆಗೆ ವೇದಾಂತ ಗ್ರಂಥಗಳನ್ನು ಅನುವಾದಿಸಲು ಪ್ರಾರಂಭಿಸಿದನು. 1812ರಲ್ಲಿ ಮುದ್ರಣಾಲಯದಲ್ಲಿ ಬೆಂಕಿ ಸಂಭವಿಸಿ £10,000 ನಷ್ಟವಾಯಿತು, ಕ್ಯಾರಿಯು ಬರೆದ ಅನೇಕ ಮೂಲ ಹಸ್ತಪ್ರತಿಗಳು  ಹಾಳಾದವು, ಅವನ ಸಂಸ್ಕೃತ ಅನುವಾದದ ಬಹುತೇಕ ಭಾಗ ಮತ್ತು ಸಂಸ್ಕೃತ ನಿಘಂಟುಗಳು (ಅನೇಕ ಭಾಷೆಗಳ ನಿಘಂಟು) ಕೂಡ ನಷ್ಟವಾದವು. ಆದರೆ ಮುದ್ರಣ ಯಂತ್ರ ಉಳಿಯಿತು. 6 ತಿಂಗಳಲ್ಲಿ ಮುದ್ರಣ ಕಾರ್ಯ ಪುನಃ ಆರಂಭವಾಯಿತು. ಕ್ಯಾರಿಯ ಜೀವನಕಾಲದಲ್ಲಿ 44 ಭಾಷೆಗಳಲ್ಲಿ ಬೈಬಲ್ ಮುದ್ರಿಸಲಾಯಿತು ಮತ್ತು ಹಂಚಲಾಯಿತು. 

ಕ್ಯಾರಿಯು ಕೋಲ್ಕತ್ತಾ, ಅಲಿಪುರದಲ್ಲಿ ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಇಂಡಿಯಾ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದನು.ಅವನಿಗೆ ಸಸ್ಯಶಾಸ್ತ್ರದಲ್ಲಿ ಅಪಾರವಾದ ಅಭಿರುಚಿಯಿತ್ತು. 1821ರಲ್ಲಿ ಕ್ಯಾರಿಯ ಎರಡನೇ ಪತ್ನಿ ಶಾರ್ಲೊಟ್ ನಿಧನಳಾದಳು. . ನಂತರ ಅವರ ಹಿರಿಯ ಮಗ ಫಿಲಿಕ್ಸ್ ಸಾವನಪ್ಪಿದನು. 1823ರಲ್ಲಿ, ಅವನು ಮೂರನೇ ಬಾರಿ ಗ್ರೇಸ್ ಹ್ಯೂಜ್ ಎಂಬ ವಿಧವೆಯನ್ನು ಮದುವೆಯಾದನು. ಅವನು 1834ರಲ್ಲಿ ಸಾವನ್ನಪ್ಪಿದನು 

ಕ್ಯಾರಿ ಮತ್ತು ಅವರ ಸಹೋದ್ಯೋಗಿಗಳು "ಚರ್ಚ್ ಸಂಸ್ಕೃತ" ಎಂಬ  ಪ್ರಯೋಗ ನಡೆಸಿದರು. ಅವನು "ಕ್ರೈಸ್ತ ಪಂಡಿತರು" ಎಂಬ ಗುಂಪನ್ನು ಸೃಷ್ಟಿಸಿ ತರಬೇತಿ ಮಾಡಬೇಕೆಂದಿದ್ದನು, ಇವರು ಹಳೆಯ ಹಿಂದೂ  ಗ್ರಂಥಗಳನ್ನು ವಿಶ್ಲೇಷಿಸಿ, ಅವುಗಳ ಅರ್ಥಹೀನತೆಯನ್ನು ತೋರಿಸುವ ಕಾರ್ಯದಲ್ಲಿ ನಿರತವಾಗಬೇಕು ಎಂದು ಯೋಚಿಸಿದ್ದನು. ಸಂಸ್ಕೃತದ ಅದ್ಭುತ  "ಚಿನ್ನದ ಪೆಟ್ಟಿಗೆಯು" (golden casket) ಕೇವಲ "ಕಲ್ಲು ಮತ್ತು ಕಸದೊಂದಿಗೆ ತುಂಬಿರುವುದರಿಂದ" ಬೇಸರಗೊಂಡಿದ್ದನು. ಇದನ್ನು ಕ್ರೈಸ್ತ ಧರ್ಮದ ಮಹತ್ವದಿಂದ ತುಂಬಿಸಬೇಕೆಂಬ ದೃಢ ನಿಶ್ಚಯದಿಂದ ಅವನು ಕೆಲಸ ಮಾಡಿದನು. ಇದು ಕ್ಯಾರಿ ಮತ್ತು ಅವನ ಸಹಚರರ ಸಂಸ್ಕೃತ ಕಲಿಯಕೆಯ ಉದ್ದೇಶವಾಗಿತ್ತು.

ಕ್ಯಾರಿಯು ಭಾರತಕ್ಕೆ  ಪರವಾನಗಿ ಇಲ್ಲದೆ ಸ್ಮಗ್ಲಿಂಗ್ ಮೂಲಕ ಬಂದು, ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದನು‌‌. ಇದರಿಂದ ಈಸ್ಟ್ ಇಂಡಿಯಾ ಕಂಪನಿ ಇವನನ್ನು ರಾಜಕೀಯವಾಗಿ ಅಪಾಯಕಾರಕನೆಂದು ಗುರುತಿಸಿತು. ಕ್ಯಾರಿಯಿಂದ ಮುದ್ರಿತವಾಗಿ ಕ್ರೈಸ್ತ ರಿಲೀಜನ್ನಿನ ಪ್ರಚಾರಕ್ಕಾಗಿ ಬಳಸಲಾಗುತ್ತಿದ್ದ ಕೆಲವು ಬೆಂಗಾಳಿ  ಕರಪತ್ರಗಳನ್ನು ಜಪ್ತಿಮಾಡಿದ ನಂತರ, ಗವರ್ನರ್-ಜನರಲ್ ಲಾರ್ಡ್ ಮಿಂಟೋ ಅವುಗಳ ಬಗ್ಗೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದನು -

"ಅಸಂಸ್ಕೃತ ನಿಂದನೆ ಹಾಗೂ ಯಾವುದೇ ವಾದಗಳಿಲ್ಲದ ಆ ಪತ್ರಗಳು ಸಂಪೂರ್ಣ ನರಕ ಹಾಗು ಅದರ ಭಯದ ವರ್ಣನೆಯಿಂದಲೆ ತುಂಬಿತ್ತು. . ಇಡೀ ಜನಾಂಗವನ್ನು ಅವರ ಪೂರ್ವಜರಿಂದ ಕಲಿತ ಧರ್ಮವನ್ನು ನಂಬಿದಕ್ಕಾಗಿ ದೋಷಾರೋಪಣೆ ಮಾಡಲಾಗಿತ್ತು."

ಆದರೆ, ಕ್ಯಾರಿ ಮತ್ತು ಅವರಂತಹ ಧರ್ಮಪ್ರಚಾರಕರು ಸರಕಾರದ ಅನುಮತಿ ಇಲ್ಲದೆ ಸ್ವತಂತ್ರವಾಗಿ ತಮ್ಮ ಪ್ರಚಾರವನ್ನು ಮುಂದುವರಿಸಲು ಕೊನೆಗೂ  1813 ರಲ್ಲಿ ಅವಕಾಶ ಪಡೆದರು.

ಕ್ಯಾರಿಯ ಉದ್ದೇಶವು ಸರಿಯಿಲ್ಲದಿದ್ದರೂ ,ತಾನು ನಂಬಿದ ಸಿದ್ಧಾಂತಕ್ಕಾಗಿ ,ಅದರ ಪ್ರಚಾರಕ್ಕಾಗಿ ,ಪ್ರ,ತಿಕೂಲ ವಾತಾವರಣದಲ್ಲಿ , ಪತ್ನಿ ಮಕ್ಕಳ ಸ್ನೇಹಿತರ ಸಾವಿಗೂ ಎದೆಗುಂದದೆ ,ಡೃಢವಾಗಿ ಕೊನೆಯವರೆಗೂ ಹೋರಾಡುತ್ತಾ ಸಾಹಿತ್ಯ ನಿರ್ಮಾಣವನ್ನು ಮಾಡಿರುವುದನ್ನು ಗಮನಿಸಿದರೆ ಆಶ್ಚರ್ಯವಾಗುವುದರಲ್ಲಿ ಸಂದೇಹವಿಲ್ಲ.

ಆ ಪರಿಶ್ರಮಕ್ಕೆ ಪ್ರೇರಕವಾಗುವ "ಸ್ವಸಿದ್ಧಾಂತದಲ್ಲಿ ನಿಷ್ಠೆಯ ಪರಾಕಾಷ್ಠೆ" ಎಂಬುವ ಗುಣ ಎಲ್ಲರಿಗೂ ತಮ್ಮ  ತಮ್ಮ ಧರ್ಮಾಚರಣೆಯಲ್ಲಿ ಪ್ರೇರಣೆಯಾಗಬಲ್ಲದು . ಮುಂದಿನ ಸಂಚಿಯಲ್ಲಿ ಇನ್ನೂ ಕೆಲವು ಪ್ರಮುಖರ ಪರಿಚಯವನ್ನು ಮಾಡಿಕೊಳ್ಳೋಣ..


https://srinidhipyati.blogspot.com/2025/01/blog-post.html

Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions