ಇಂಡೋಲಜೀ ವಿಮರ್ಶೆ 5– ಮಿಷನರಿಗಳ ಆಗಮನ

 


ಇಂಡೋಲಜೀ ವಿಮರ್ಶೆ 5– ಮಿಷನರಿಗಳ ಆಗಮನ

ಕಳೆದ ಸಂಚಿಕೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹಾಗೂ ಬ್ರಿಟಿಷ್ ಸರ್ಕಾರದ ಭಾರತದ ಕುರಿತಾದ ಧೋರಣೆಯನ್ನು ಗಮನಿಸಿದ್ದೇವೆ. ಭಾರತೀಯ ವೈದಿಕ ಅಥವಾ ಅವೈದಿಕ ಸಾಹಿತ್ಯಗಳ ಅಧ್ಯಯನ ಹಾಗೂ ಧರ್ಮದ ಹೇರಿಕೆಯ ವಿಷಯದಲ್ಲಿ ಅನಾಸಕ್ತಿಯ ಮೂಲವನ್ನು ಮನಗೊಂಡೆವು. ಆದರೂ, ಮಿಷನರಿಗಳು ಭಾರತದಲ್ಲಿ ತಮ್ಮ ಮತಾಂತರದ ಕಾರ್ಯವನ್ನು ಹಾಗೂ ಅದಕ್ಕೆ ಬೇಕಾದ ಸಾಹಿತ್ಯ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸಿದರು. ಇದಕ್ಕೆ ಕಂಪನಿಯ ಹಾಗೂ ಬ್ರಿಟಿಷ್ ಸರ್ಕಾರದ ಬೆಂಬಲವಿತ್ತೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ವಿಮರ್ಶೆಯನ್ನು ಈ ಸಂಚಿಕೆಯಲ್ಲಿ ನಡೆಸೋಣ.

ಯುರೋಪಿಯನ್ನರ, ಅದರಲ್ಲೂ ಬ್ರಿಟಿಷರ ಆಕ್ರಮಣ ಶೈಲಿ ಭಾರತವು ಹಿಂದೆಂದೂ ಕಂಡಿರದ ರೀತಿಯಲ್ಲಿತ್ತು. ಹಿಂದೆ ಯಾರೆಲ್ಲಾ ಭಾರತವನ್ನು ಆಕ್ರಮಿಸಿದ್ದರೊ, ಅವರೆಲ್ಲರೂ ಭಾರತದ ಶ್ರೇಷ್ಠತೆಯನ್ನು, ಸಂಪತ್ತು ಸಮೃದ್ಧಿಯನ್ನು ಮನಗಂಡು ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆಯಿಂದ ಆಕ್ರಮಿಸಿದ್ದವರಾಗಿದ್ದರು. ಆದರೆ ಮೊದಲ ಬಾರಿಗೆ, ತಮ್ಮನ್ನು ತಾವು ನಮಗಿಂತ ಶ್ರೇಷ್ಠರೆಂದು ಹಾಗೂ ತಮ್ಮ ಸಂಸ್ಕೃತಿಯು ಭಾರತೀಯ ಸಂಸ್ಕೃತಿಗಿಂತ ಶ್ರೇಷ್ಠವೆಂದು ಭಾವಿಸುವ ಜನರಿಂದ ಭಾರತವು ಆಕ್ರಮಣಕ್ಕೊಳಗಾಗಿತ್ತು.

ಯುರೋಪಿನಲ್ಲಿ ನಡೆದ ಆಧುನಿಕ ವಿಜ್ಞಾನ ಬೆಳವಣಿಗೆಯ ಹಿನ್ನೆಲೆಯಲ್ಲಿ ಅನೇಕ ತಂತ್ರಜ್ಞಾನಗಳನ್ನು ಆವಿಷ್ಕರಿಸಿದ್ದರು. ಅದರಲ್ಲಿ ಪ್ರಮುಖವಾದದ್ದು  ದಿಕ್ಸೂಚಿಯ.( Compass) ಆವಿಷ್ಕಾರ. ಅದರ ನೆರವಿನಿಂದ ಹಡಗಿನ ಮೂಲಕ ಜಗತ್ತಿನ ಅನೇಕ ಸ್ಥಳಗಳಿಗೆ ವ್ಯಾಪಾರಕ್ಕಾಗಿ ಬಿಷಪ್‌ನ ಅನುಮತಿಯನ್ನು, ಸ್ಥಳೀಯ ರಾಜರ ಆಶ್ರಯ ಮತ್ತು ಅನುದಾನವನ್ನು ಪಡೆದು ಜಗತ್ತನ್ನೆಲ್ಲಾ ಆವರಿಸಿದರು. ದುರ್ಬಲ ರಾಷ್ಟ್ರಗಳನ್ನು ತಮ್ಮ ಬಲ ಪ್ರಯೋಗದಿಂದ ಸ್ವಾಧೀನಪಡಿಸಿಕೊಂಡರು. ಪ್ರಬಲ ರಾಷ್ಟ್ರಗಳಲ್ಲಿ ಮೊದಲು ವ್ಯಾಪಾರವನ್ನು ಮಾತ್ರ ಮಾಡುತ್ತಾ, ನಂತರ ಆಂತರಿಕ ವ್ಯವಹಾರಗಳಲ್ಲಿ ಬಹಳ ಯುಕ್ತಿಯಿಂದ ಪ್ರವೇಶಮಾಡುತ್ತಾ ತಮ್ಮ ಅಧಿಕಾರವನ್ನು ಸ್ಥಾಪಿಸುತ್ತಿದ್ದರು.

ಹೀಗೆ, ಜಗತ್ತನ್ನೆಲ್ಲಾ ಆಕ್ರಮಿಸುವುದರ ಹಿಂದೆ ವ್ಯಾಪಾರದ ಉದ್ದೇಶದ ಜೊತೆಗೆ, ಅವರು ನಡೆಸುತ್ತಿದ್ದ ಕ್ರೌರ್ಯಕ್ಕೆ ಹಾಗೂ ಬಲವಂತದ ಆಕ್ರಮಣಕ್ಕೆ "ಜಗತ್ತಿನ ಇತರ ಅನಾಗರೀಕ (uncivilized) ಜನಾಂಗಗಳನ್ನು ನಾಗರೀಕ ಜನಾಂಗವಾಗಿ ಪರಿವರ್ತಿಸಬೇಕೆಂಬ" ಮನೋಭಾವವು ನೈತಿಕ ತಳಹದಿಯನ್ನು (moral justification) ಒದಗಿಸುತ್ತಿತ್ತು. ಇದನ್ನು ಇಂಗ್ಲಿಷ್ ಭಾಷೆಯಲ್ಲಿ White Man's Burden ಎಂದು ಕರೆಯುತ್ತಾರೆ. ಆಫ್ರಿಕಾ ಖಂಡದಲ್ಲಿ ನಡೆದ ದಬ್ಬಾಳಿಕೆ, ಕ್ರೌರ್ಯ ಹಾಗೂ ಕ್ರಿಸ್ತೀಕರಣವೂ ಇದೇ ತಳಹದಿಯನ್ನು ಹೊಂದಿತ್ತು. ಆದರೆ ಭಾರತದಲ್ಲಿ ಅವರ ನೀತಿ ವಿಭಿನ್ನವಾಗಿತ್ತು.

1651ರಲ್ಲಿ, ಶಾಹಜಹಾನ್ ಅವರ ಎರಡನೇ ಮಗನಾದ ಸುಲ್ತಾನ್ ಶುಜಾ ನ ಅನುಮತಿಯಿಂದ ಬಂಗಾಳದ ಹುಗ್ಲಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಫ್ಯಾಕ್ಟರಿಯನ್ನು ಸ್ಥಾಪಿಸಿದತು. ಬೌಟನ್ ಎಂಬುವವನು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಶಸ್ತ್ರಚಿಕಿತ್ಸಕನಾಗಿಯೂ ವೈದ್ಯನಾಗಿಯೂ ಸೇವೆ ಸಲ್ಲಿಸುತ್ತಿದ್ದನು ಮತ್ತು ಅವನು ವೈದ್ಯಕೀಯ ಕೌಶಲಕ್ಕಾಗಿ ಪ್ರಸಿದ್ಧನಾಗಿದ್ದನು. ಮುಘಲ್ ರಾಜಕುಟುಂಬದ ಸದಸ್ಯರನ್ನು ಚಿಕಿತ್ಸೆಯಿಂದ ಗುಣಪಡಿಸಿ ಕಂಪನಿಗೆ ವ್ಯಾಪಾರ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದನು. ಅವನು ರಾಜಕುಟುಂಬದ ಮಹಿಳೆಯನ್ನು ಗುಣಪಡಿಸಿದ ಸೇವೆಗೆ ಸುಲ್ತಾನ್ ಶುಜಾ ತೃಪ್ತನಾಗಿ, ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳ, ಬಿಹಾರ ಮತ್ತು ಒಡಿಶಾದಾದ್ಯಂತ ಮುಕ್ತ ವ್ಯಾಪಾರದ ಹಕ್ಕುಗಳನ್ನು ನೀಡಿದನು. ಹೀಗಾಗಿ, ಕಾಸಿಂಬಜಾರ್, ಪಾಟ್ನಾ ಮತ್ತು ಪ್ರಾಂತ್ಯದ ಇತರ ಸ್ಥಳಗಳಲ್ಲಿ ಅನೇಕ ಫ್ಯಾಕ್ಟರಿಗಳನ್ನು ನಿರ್ಮಿಸಿದರು.

1717ರಲ್ಲಿ, ಫರ್ರುಕ್ಸಿಯಾರ್ ಎಂಬುವವನು ಈ ಹಿಂದೆ ಬಂಗಾಳದ ಸುಭೆದಾರರು ನೀಡಿದ ವ್ಯಾಪಾರ ಹಕ್ಕುಗಳನ್ನು ಮುಂದುವರೆಸಿದನು. 1757ರಲ್ಲಿ ಪ್ಲಾಸಿಯ ಯುದ್ಧದ ನಂತರ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ನಿಜವಾಗಿಯೂ ಏಕಾಧಿಕಾರವನ್ನು ಸ್ಥಾಪಿಸಿತು.

ಈ ಯುದ್ಧವು ಭಾರತದ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಿತು. ಪ್ಲಾಸಿಯ ಯುದ್ಧದ ನಂತರ, ಇಂಗ್ಲೆಂಡು ಬಂಗಾಳದ ನವಾಬ್‌ಗಳ ನಂತರ ಪ್ರಮುಖ ರಾಜಕೀಯ ಶಕ್ತಿಯಾಗಿ ಪರಿಣಮಿಸಿತು. ವೆಲ್ಲೆಸ್ಲಿಯ ( Lord  Richard Wellesley)ಆಗಮನದೊಂದಿಗೆ, ಕಂಪನಿಯು ಭಾರತೀಯ ರಾಜ್ಯಗಳೊಂದಿಗೆ ಹೊಂದಿರುವ ಸಂಬಂಧಗಳಲ್ಲಿ ಬದಲಾವಣೆ ಕಂಡುಬಂದಿತು. ಅವನು ಭಾರತೀಯ ರಾಜ್ಯಗಳನ್ನು ಬ್ರಿಟಿಷ್ ನಿಯಂತ್ರಣದ ಅಡಿಯಲ್ಲಿ ತರಲು ಪ್ರಯತ್ನಿಸಿದನು. ಲಾರ್ಡ್ ಹಾಸ್ಟಿಂಗ್ಸ್ ನಿವೃತ್ತಿಯ ವೇಳೆಗೆ ರಾಜ್ಯದ ಆಂತರಿಕ ಆಡಳಿತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಪ್ರಭಾವ ವೇಗವಾಗಿ ಹೆಚ್ಚಾಯಿತು.

ಆರಂಭದಲ್ಲಿ, ಇಂಗ್ಲೀಷರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಾಗ, ಭಾರತ ಕುರಿತು ಹೆಚ್ಚು ಚಿಂತಿಸಿರಲಿಲ್ಲ. ಭಾರತದಲ್ಲೇ ನೆಲೆಸಿದ ನಂತರವೂ, ಅವರು ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಗಳಲ್ಲಿ ತಲೆ ಹಾಕದೆ ಇರುತ್ತಿದ್ದರು. ಅವರಿಗೆ ತಮ್ಮ ಧರ್ಮವನ್ನು ವಿಸ್ತರಿಸಬೇಕೆಂಬ ಆಸಕ್ತಿ ಇರಲಿಲ್ಲವೆಂದಲ್ಲ. ಆದರೆ, ಪೋರ್ಚುಗೀಸರು ಕ್ರೈಸ್ತ ಧರ್ಮವನ್ನು ಹರಡುವ ಪ್ರಯತ್ನದಲ್ಲಿ ವಿಫಲರಾಗಿ, ಬಹಳ ನಷ್ಟವನ್ನು ಅನುಭವಿಸಿದ ಉದಾಹರಣೆಯಿದ್ದ ಕಾರಣ, ಕ್ರೈಸ್ತ ಧರ್ಮಪ್ರಚಾರಕ್ಕೆ ಅವರು ಪ್ರೋತ್ಸಾಹ ನೀಡಲಿಲ್ಲ.

18ನೇ ಶತಮಾನದಲ್ಲಿ ಕಂಪನಿಯು ತನ್ನ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳಿಗೆ ಅವಕಾಶ ನೀಡಲಿಲ್ಲ. ಧಾರ್ಮಿಕ ಹೇರಿಕೆಯು ದಂಗೆಗೆ ಹಾಗೂ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುವ ಭಯವೇ ಇದಕ್ಕೆ ಕಾರಣ. ಆದಾಗ್ಯೂ, ಪ್ಲಾಸಿ ಮತ್ತು ಬಕ್ಸರ್ ಯುದ್ಧಗಳಲ್ಲಿ ಗೆಲುವು ಸಾಧಿಸಿದ ನಂತರ, ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರ ಕಂಪನಿಯಿಂದ ರಾಜಕೀಯ ಸಂಸ್ಥೆಯಾಗಿ ಮಾರ್ಪಟ್ಟಿತು. 19ನೇ ಶತಮಾನದ ವೇಳೆಗೆ, ಭಾರತದಲ್ಲಿ ಯಾವುದೇ ಸ್ಥಳೀಯ ರಾಜನು ಕಂಪನಿಯನ್ನು ಹೊರಹಾಕಲು ಶಕ್ತನಲ್ಲ ಎಂಬುದು ಸ್ಪಷ್ಟವಾಯಿತು.

ಇದನ್ನೆಲ್ಲಾ ಗಮನಿಸಿದ ಬ್ರಿಟಿಷರು ತಮ್ಮ ಪಾರ್ಲಿಮೆಂಟ್‌ನಲ್ಲಿ "ಚಾರ್ಟರ್ ಆಕ್ಟ್ ಆಫ್ 1813" (Charter Act of 1813) ಎಂಬ ಕಾನೂನನ್ನು ಮಂಡಿಸಿದರು. ಇದು ಭಾರತದಲ್ಲಿ ಭೌಗೋಳಿಕ, ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕ ಪರಿಣಾಮವನ್ನು ಉಂಟುಮಾಡಿತು.


ಮುಖ್ಯ ಅಂಶಗಳು:

ವ್ಯಾಪಾರ ಏಕಾಧಿಕಾರದ ಅಂತ್ಯ:

ಈ ಆಕ್ಟ್ ಮೂಲಕ  ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರದ ಏಕಾಧಿಕಾರ (ಮೊನೋಪೋಲಿ) ಕೊನೆಗೊಳಿಸಲಾಯಿತು, ಮತ್ತು ಎಲ್ಲಾ ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಯಿತು.


ಶಿಕ್ಷಣದ ಪ್ರೋತ್ಸಾಹ:

ಪ್ರತಿ ವರ್ಷ ₹1 ಲಕ್ಷ ಶಿಕ್ಷಣಕ್ಕೆ ಮೀಸಲಿಡಲಾಯಿತು. ಈ ಮೊತ್ತ ಅಲ್ಪವಾಗಿದ್ದರೂ, ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸುವ ಮೊದಲ ಹೆಜ್ಜೆಯಾಯಿತು.

ಕ್ರೈಸ್ತ ಮಿಷನರಿಗಳ ಪ್ರವೇಶ:

ಕ್ರೈಸ್ತ ಮಿಷನರಿಗಳಿಗೆ ಭಾರತದಲ್ಲಿ ಅವರ ಧರ್ಮವನ್ನು ಪ್ರಚಾರ ಮಾಡಲು ಅವಕಾಶ ನೀಡಲಾಯಿತು.

ಬ್ರಿಟಿನ್ ರಾಣಿಯ ಸರ್ವಾಧಿಕಾರ:

ಈ ಆಕ್ಟ್ ಭಾರತದಲ್ಲಿ ಬ್ರಿಟಿಷ್ ಕಿರೀಟದ (ಸರ್ಕಾರ) ಸರ್ವಾಧಿಕಾರವನ್ನು ಅಧಿಕೃತವಾಗಿ ಘೋಷಿಸಿದರು.

ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಧರ್ಮಗಳ ವಿಗ್ರಹಾರಾಧನೆ ಹಾಗೂ ಇತರ ಆರಾಧನೆಗಳ ವಿಷಯದಲ್ಲಿ ಮೃದು ಧೋರಣೆಯನ್ನು ಪ್ರದರ್ಶಿಸುತ್ತಿರುವುದು ಮಿಷನರಿಗಳಿಗೆ ಸ್ವಲ್ಪವೂ ಸಹ್ಯವಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಂಪನಿಯು ಭಾರತೀಯ ಧರ್ಮಗಳ ವಿಷಯದಲ್ಲಿ ಅಭಿಮಾನದಿಂದಲೋ ಅಥವಾ ಗೌರವದಿಂದಲೋ ಮೃದು ಧೋರಣೆಯನ್ನು ತಾಳಿದ್ದಲ್ಲ. ಧಾರ್ಮಿಕ ಹೇರಿಕೆಯನ್ನು ನಡೆಸಿದರೆ ತಮ್ಮ ಮೂಲ ಉದ್ದೇಶವಾದ ವ್ಯಾಪಾರದಲ್ಲಿ ಲಾಭ ಹಾಗೂ ಆಡಳಿತದಲ್ಲಿ ಉಂಟಾಗುವ ಸಮಸ್ಯೆಯನ್ನು ಮನಗಂಡು ಆ ನೀತಿಯನ್ನು ತಾಳಿದರು.


ಆದರೆ, ಮಿಷನರಿಗಳ ಪ್ರಕಾರ ಪೆಗನ್ (ಕ್ರಿಶ್ಚಿಯನ್ನೇತರ) ಧರ್ಮಗಳಿಗೆ ನೀಡುವ ಯಾವುದೇ ರೀತಿಯ ಸಹಕಾರವು ದೇವನಿಂದೆಯೆ (Blasphemy) ಆಗುತ್ತದೆ. ಹಾಗಾಗಿ, ಮಿಷನರಿಯ ಕಾರ್ಯಗಳಿಗೆ ಭಾರತದಲ್ಲಿರುವ ವಿಪುಲವಾದ ಅವಕಾಶವನ್ನು ಗಮನಿಸಿದ ಕ್ರಿಶ್ಚಿಯನ್ ಮಿಷನರಿಗಳು, ಧರ್ಮದ ವಿಸ್ತಾರವು ಕ್ರಿಶ್ಚಿಯನ್ ಸರ್ಕಾರದ ಆದ್ಯ ಕರ್ತವ್ಯವಾಗಬೇಕೆಂದು ಪ್ರತಿಪಾದಿಸುತ್ತಾ, ಸರ್ಕಾರದ ಅನುಮತಿ ಇಲ್ಲದೆ ಭಾರತವನ್ನು ಪ್ರವೇಶಿಸುತ್ತಿದ್ದರು.


ಈ ಹೊಸ ಆಕ್ಟ್ನ (Charter Act of 1813)ಪ್ರಕಾರ  ಅನುಮತಿಯ ಅವಶ್ಯಕತೆಯೇ ಇಲ್ಲದಿರುವುದರಿಂದ, ಮೊದಲು ಕದ್ದು ಮುಚ್ಚಿ ಭಾರತವನ್ನು ಪ್ರವೇಶಿಸುತ್ತಿದ್ದ ಈ ಮಿಷನರಿಗಳು ಈಗ ಭಾರತವನ್ನು ಮುಕ್ತವಾಗಿ ಪ್ರವೇಶಿಸಲು ಪ್ರಾರಂಭಿಸಿದವು. ಭಾರತದಲ್ಲಿ ಅನೇಕ ಮಿಷನರಿ ಪಂಡಿತರು ತಮ್ಮ ಕಾರ್ಯ ಸಾಧನೆಗಾಗಿ ಭಾರತೀಯ ಸಾಹಿತ್ಯದ ಅಧ್ಯಯನವನ್ನು ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖರನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಯೋಣ.

Dr.Shrinidhi Pyati






Comments

Popular posts from this blog

Śrī Madhvācārya and the Doctrine of Bhakti

The Saint of the Century - Glimpses of Sri Vishweshatirtha's Unparalleled Life

Sri Vyasaraja: A Historical Reappraisal – Dispelling Myths and Misconceptions