ಇಂಡೊಲೊಜಿಯ ಇತಿಹಾಸ

 


ಇಂಡೊಲೊಜಿಯ ಇತಿಹಾಸ 

ಕಳೆದ ಸಂಚಿಕೆಯಲ್ಲಿ ವಿಮರ್ಶೆ ಮತ್ತು ಪ್ರತಿಕ್ರಿಯೆ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನು ವಿಮರ್ಶಿಸಬೇಕಾದರೆ ಆ ವಿಷಯದ ಇತಿಹಾಸ, ಆಳ ಮತ್ತು ಅಗಲಗಳನ್ನು ಚೆನ್ನಾಗಿ ತಿಳಿಯಬೇಕಾಗುತ್ತದೆ. ಆ ದೃಷ್ಟಿಯಿಂದ ಇಂಡೋಲಜಿಯ ಇತಿಹಾಸವನ್ನು ತಿಳಿಯಲು ಪ್ರಯತ್ನಿಸೋಣ. 

ಇಂಡೋಲಜಿಯ ಮೂಲ  ಓರಿಯಂಟಲ್ ಸ್ಟಡೀಸ್ ನಿಂದ ಪ್ರಾರಂಭವಾಗುತ್ತದೆ. ಈಗಲೂ ಓರಿಯಂಟಲ್ ರಿಸರ್ಚ್  ಇನ್ಸ್ಟಿಟ್ಯೂಟ್ ಗಳು ಮೈಸೂರು,ಪುಣೆ, ಬರೋಡಾ ಮುಂತಾದ ಕಡೆಗಳಲ್ಲಿ ಇರುವುದನ್ನು ಗಮನಿಸಬಹುದು. (Oriental research institute ORI ,Mysore, Bhandarkar oriental research institute BORI ,Pune )  ಓರಿಯಂಟಲ್  ಸ್ಸ್ಟಡೀಸ್   ಎಂದರೇನು, ಅದರ ಅಸ್ತಿತ್ವಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಕಾಡುವುದು ಸಹಜ .

ಪಾಶ್ಚಾತ್ಯರು ಪೂರ್ವದ ದೇಶಗಳ ಭಾಷೆಗಳ ಅಧ್ಯಯನವನ್ನು ಮಾಡಲು ಬೆಳೆಸಿದ ಅಧ್ಯಯನ ಶಾಖೆಯನ್ನು ಓರಿಯಂಟಲ್ ಸ್ಟಡೀಸ್ ಎನ್ನುತ್ತಾರೆ.

ಅದು  ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯನ್  ರಿಲಿಜನ್ ನ ಸರ್ವತೋಮುಖ ಪ್ರಭಾವ ಮತ್ತು ಹಿಡಿತವಿದ್ದ ಕಾಲ. ಆಗ ಕ್ರಿಶ್ಚಿಯನ್ ರಿಲಿಜನ್  ಯುರೋಪಿಗಿಂತ ಆಚೆಗೆ ವಿಸ್ತಾರವನ್ನೂ ಪ್ರಚಾರವನ್ನೂ ಪಡೆಯಬೇಕೆಂದು ಚರ್ಚ್ ತೀರ್ಮಾನಿಸಿತು. ಇದರ ಅಂಗವಾಗಿ 12ನೇ ಶತಮಾನದಲ್ಲಿ  ಚರ್ಚ್ ನ ಪೋಪ್ ಐದನೆಯ ಹೊನೋರಿಯಸ್ (Pope, Honorius IV) ಪೆಗನ್ಗಳಿಗೆ ( ಪೇಗನ್ - ಕ್ರಿಶ್ಚಿಯನ್ ಅಲ್ಲದವರು) ಕ್ರಿಶ್ಚಿಯನ್ ರಿಲಿಜಿಯನ್ನಿನ ಬೋಧನೆಗಾಗಿ ಓರಿಯಂಟಲ್ ಭಾಷೆಗಳ( ಪೂರ್ವದ ದೇಶಗಳ ಭಾಷೆಗಳು) ಅಧ್ಯಯನಕ್ಕಾಗಿ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದನು.

ಇದರ ಕೆಲವೇ ವರ್ಷಗಳ ನಂತರ 1312 ರಲ್ಲಿ " Ecumenical Council of the Vatican " ಈ ರೀತಿಯಾಗಿ ಒಂದು ನಿರ್ಧಾರವನ್ನು ಹೊರಡಿಸಿತು - "The Holy Church should have an abundant number of Catholics well versed in the languages, especially in those of the infidels, so as to be able to instruct them in the sacred doctrine." (" ಚರ್ಚ್ ನಲ್ಲಿ ಅನೇಕ ಭಾಷೆಗಳನ್ನು ತಿಳಿದಿರುವ  ಕ್ಯಾಥೊಲಿಕರು ಬಹಳ ಸಂಖ್ಯೆಯಲ್ಲಿ ಇರಬೇಕು, ಹಾಗೆಯೇ ಪೇಗನ್ ಗಳಿಗೆ  ಅವರದ್ದೇ ಭಾಷೆಯಲ್ಲಿ ಬೋಧನೆ ನೀಡಲು ಸಾಧ್ಯವಾಗಬೇಕು.")

ಇದರ ಪರಿಣಾಮವಾಗಿ ಬೋಲೋಗ್ನ, ಆಕ್ಸ್ಫರ್ಡ್, ಪ್ಯಾರಿಸ್, ಸ್ಯಾಲಮಂಕ್ ವಿಶ್ವವಿದ್ಯಾಲಯಗಳಲ್ಲಿ ಹೀಬ್ರೂ ,ಅರೆಬಿಕ್ , ಕ್ಯಾಲ್ಡಿಯನ್ ಭಾಷೆಗಳ ಅಧ್ಯಯನಪೀಠವನ್ನು ಪ್ರಾರಂಭಿಸಿದರು. 

ಅದಾದ ಒಂದು ಶತಮಾನದ ನಂತರ 1434 ರಲ್ಲಿ  General Council of Basel ಇದೇ ಉದ್ದೇಶದೊಂದಿಗೆ ಮತ್ತೊಂದು ನಿರ್ಣಯವನ್ನು ಪ್ರಕಟಿಸಿತು -

All Bishops must sometimes each year send men well-grounded in the divine word to those parts where Jews and other infidels live, to preach and explain the truth of the Catholic faith in such a way that the infidels who hear them may come to recognize their errors. Let them compel them to hear their preaching. ("ಎಲ್ಲಾ ಬಿಷಪ್‌ಗಳು ಪ್ರತಿ ವರ್ಷವೂ ಕ್ರಿಶ್ಚಿಯನ್ ರಿಲಿಜನ್ ನಲ್ಲಿ ಆಳವಾದ ಅಧ್ಯಯನ ಹೊಂದಿರುವ ಪಂಡಿತರನ್ನು ಯಹೂದ್ಯರು ಮತ್ತು ಇತರ ನಾಸ್ತಿಕರು ವಾಸಿಸುವ ಭಾಗಗಳಿಗೆ ಕಳುಹಿಸಬೇಕು, ಅವರು ಕ್ಯಾಥೊಲಿಕ್ ರಿಲೀಜನ್ನಿನ ಸತ್ಯವನ್ನು ಬೋಧಿಸಿ, ವಿವರಿಸಲು ಸಾಧ್ಯವಾಗಬೇಕು. ನಾಸ್ತಿಕರು ತಮ್ಮ ಬೋಧನೆ ಕೇಳುವ ಮೂಲಕ ತಮ್ಮ ತಪ್ಪುಗಳನ್ನು ಅರಿತುಕೊಳ್ಳುವಂತೆ ಮಾಡಬೇಕು)."

ಶತಮಾನಗಳ ನಂತರ 1870 ರಲ್ಲಿ ನಡೆದ ಮೊದಲನೇ ವ್ಯಾಟಿಕನ್ ಕೌನ್ಸಿಲ್ ನಲ್ಲಿ( First Vatican Council) ಹಿಂದೂಯಿಸಮ್ ಅನ್ನು ಅಧಿಕೃತವಾಗಿ ನಿಂದನೆಯ ಪಟ್ಟಿಯಲ್ಲಿ ಸೇರಿಸಿದರು ಎಂದು ಚರ್ಚ್ ನ  ಅಧಿಕೃತ ಪುಸ್ತಕವಾದ The Catholic Catechism ಎಂಬ ಪುಸ್ತಕದಲ್ಲಿ  ಜಾನ್ ಹರ್ಡನ್ ಎಂಬ ಪಾದರಿ ದಾಖಲಿಸಿದ್ದಾನೆ.

ಇನ್ನು ಕ್ರಿಶ್ಚಿಯನೇತರ ವಿದ್ವಾಂಸರ ಭಾರತೀಯ ಅಧ್ಯಯನ ಪರಂಪರೆಯನ್ನು ಗಮನಿಸಿದರೆ ಗ್ರೀಕ್ ನಾಗರಿಕತೆಯ ಕಾಲದಿಂದಲೂ ಕುರುಹು ಸಿಗುತ್ತವೆ. ಮೌರ್ಯರ ಆಳ್ವಿಕೆಯ ಕಾಲದಲ್ಲಿ ಗ್ರೀಕ್ ರಾಜ ಸೇಲೆಸಿಡ್ಸ ನ ಪ್ರತಿನಿಧಿ  ಮೆಗೆಸ್ತೀನ್ಸ (350 -290 B.C) ನು ನಾಲ್ಕು ವಿಭಾಗಗಳಲ್ಲಿ ಭಾರತದ ಕುರಿತಾಗಿ ಇಂಡಿಕಾ ಎಂಬ ಗ್ರಂಥವನ್ನು ಬರೆದಿದ್ದನು ಎಂದು ತಿಳಿಯುತ್ತದೆ . ಅದರ ಕೆಲವು ಭಾಗಗಳು ಮಾತ್ರ ಈಗ ಉಪಲಬ್ಧ ಇದೆ. ನಂತರ ಬರುವಂತಹ ಇಸ್ಲಾಮಿಕ್ ಆಳ್ವಿಕೆಯಲ್ಲಿ ಅನೇಕರು ಭಾರತವನ್ನು ಅಧ್ಯಯನ ಮಾಡಿದರು. ಅದರಲ್ಲಿ ಪ್ರಧಾನ ಮಹಮದ್ ಬಿನ್ ಅಹಮದ್ ಅಲ್ಬಿರೋನಿ. ಅವನು ತಾರಿಕ್ ಅಲ್ ಹಿಂದ್ ಎಂಬುವ ಪುಸ್ತಕವನ್ನು ಭಾರತದ ಸಂಸ್ಕೃತಿ ವಿಜ್ಞಾನ ಕಲೆ ಸಾಹಿತ್ಯವನ್ನು ಸೆರೆಹಿಡಿಯುವ ದೃಷ್ಟಿಯಿಂದ ಬರೆದನು. 

 ಅನೇಕ ಯಾತ್ರಿಕರು ಭಾರತದ ಕುರಿತಾಗಿ ಬರೆದಿದ್ದಾರೆ. "ಮಾರ್ಕೋ ಪೋಲೊ ಮತ್ತು ಇತರರು ಚೀನಾಗೆ ಹೋಗುವ ಮಾರ್ಗದಲ್ಲಿ ಅಥವಾ ಹಿಂತಿರುಗುವ ಮಾರ್ಗದಲ್ಲಿ ಭಾರತವನ್ನು ನೋಡಿದರು. ಡೊಮಿನಿಕನ್ ಧರ್ಮಪ್ರಚಾರಕ ಜೋರ್ಡಾನಸ್ 14ನೇ ಶತಮಾನದ ಆರಂಭದಲ್ಲಿ ಮಲಬಾರ ಕರಾವಳಿಯಲ್ಲಿ ಅನೇಕ ವರ್ಷಗಳನ್ನು ಕಳೆದು 'ದ ವಂಡರ್ಸ್ ಆಫ್ ಇಂಡಿಯಾ' ಎಂಬ ಪುಸ್ತಕವನ್ನು ಬರೆದನು. ನಿಕೋಲೊ ಡಿ' ಕಾಂಟಿ (1395-1469) ತನ್ನ ಕಥೆಯನ್ನು ಪೋಪ್ ನ ಕಾರ್ಯದರ್ಶಿ ಪೊಜ್ಜಿಯೋ ಬ್ರಾಚಿಯೋಲಿನಿಗೆ ಹೇಳಿದನು, ಮತ್ತು ಅವರು ಅದನ್ನು ತಮ್ಮ 'ಡೆ ವರೈಟೇಟೆ ಫಾರ್ಚೂನೇ' ಯಲ್ಲಿ ಪ್ರಕಟಿಸಿದರು. ರಷ್ಯಾದ ವ್ಯಾಪಾರಿ ಅಫನಾಸಿಜ್ ನಿಕಿಟಿನ್ ಸುಮಾರು 1470ರಲ್ಲಿ ಭಾರತಕ್ಕೆ ಭೇಟಿ ನೀಡಿದ ದಾಖಲಿಸಿದ ವರದಿ  1819ರಲ್ಲಿ  ಪ್ರಕಟವಾಯಿತು . 

16ನೇ ಶತಮಾನದಿಂದ 18ನೇ ಶತಮಾನದ ಆರಂಭದವರೆಗೆ ಕಾಲವು , ವಸಾಹಾತುಶಾಹಿಯ  ಆರಂಭ ಮತ್ತು ಭಾರತ ಮತ್ತು ಯೂರೋಪ್ ನಡುವಿನ ನೇರ ವ್ಯಾಪಾರದ ಕಾಲವಾಗಿತ್ತು. ಇದು ಕ್ರಿಶ್ಚಿಯನ್ ರಿಲಿಜನ್ ಪ್ರಚಾರಕರು ಮತ್ತು ಪ್ರವಾಸಿಗರ ಕಾಲವಾಗಿತ್ತು. ಇಬ್ಬರೂ ವರದಿಗಳನ್ನು ದಾಖಲಿಸಿದ್ದಾರೆ. ಇವೆಲ್ಲವೂ ಬಹಳಷ್ಟ ದೋಷಗಳು ಮತ್ತು ತಪ್ಪು ತೀರ್ಮಾನಗಳಿಂದ ಪೂರ್ವಗ್ರಹಗಳಿಂದ ತುಂಬಿರುತ್ತವೆ, ಆದರೆ ಅನೇಕ ಆಸಕ್ತಿದಾಯಕ ವಿವರಗಳನ್ನೂ ಹೊಂದಿರುತ್ತವೆ.

ನಾನು ಮೊದಲೇ ತಿಳಿಸಿದಂತೆ ಕ್ರಿಶ್ಚನ್ ರಿಲಿಜನ್ ನ ಪ್ರಚಾರಕ್ಕಾಗಿ ಅನೇಕ ಮಿಷನರಿಗಳು ಭಾರತಕ್ಕೆ 16ನೇ ಶತಮಾನದಿಂದ ಭೇಟಿ ನೀಡಲು ಆರಂಭಿಸಿದ್ದವು. ಅವುಗಳಲ್ಲಿ ಪ್ರಮುಖರು ಭಾರತದ ಕುರಿತಾಗಿ ಪುಸ್ತಕಗಳನ್ನು ಬರೆದಿದ್ದಾರೆ.

16ನೇ ಶತಮಾನದಿಂದ, ಭಾರತದಲ್ಲಿ ಅನೇಕ ಕ್ಯಾಥೊಲಿಕ್ ಧರ್ಮಪ್ರಚಾರಕರು ಕಾರ್ಯನಿರ್ವಹಿಸುತ್ತಿದ್ದರು ಮತ್ತು ಅನೆಕರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು.  ಥಾಮಸ್ ಸ್ಟೀಫನ್ಸ್ (1549-1619) ಮರಾಠಿ ಪಂಡಿತರಾಗಿದ್ದನು. ಜ್ಯಾಕೊಪೊ ಫೆನಿಸಿಯೋ (1558-1632) ಹಿಂದು ಧರ್ಮದ ಕುರಿತು ಪುಸ್ತಕವನ್ನು ಬರೆದನು . ಸೆಬಾಸ್ಟಿಯನ್ ಮ್ಯಾನ್‌ರಿಕ್ (1590?-1669) ಅನೇಕ ತಿಳಿಯದ ಸ್ಥಳಗಳಿಗೆ ಭೇಟಿ ನೀಡಿ ವರದಿಯನ್ನು ಪ್ರಕಟಿಸಿದನು.  ರಾಬರ್ಟೊ ಡಿ' ನೋಬಿಲಿ (1577-1656) ಭಾರತೀಯ ಆಚಾರಗಳನ್ನು ಅಳವಡಿಸಿಕೊಂಡು ಮದುರೈನಲ್ಲಿ ಕ್ರೈಸ್ತ ಗುರುವಾಗಿದ್ದನು. ಜರ್ಮನ್ನಿನ ಹೆನ್ರಿಚ್ ರೋತ್ (1610-1668) ಮೊದಲ ಪೀಳಿಗೆಯ ಸಂಸ್ಕೃತ ಪಂಡಿತರುಗಳಲ್ಲಿ ಒಬ್ಬರಾಗಿದ್ದನು . ಕಾನ್ಸ್ಟ್ಯಾಂಟಿನೋ ಬೆಸ್ಕಿ (1680-1747) ತಮಿಳು ಪಂಡಿತ ಹಾಗೂ ಲೇಖಕನಾಗಿದ್ದನು. ಇದೇ ರೀತಿ ಪ್ರೊಟೆಸ್ಟೆಂಟ್ ಪಾದ್ರಿಗಳು ಕೂಡ ಭಾರತಕ್ಕೆ ಬಂದು ರಿಲೀಜಿಯನ್ ಪ್ರಚಾರಕ್ಕಾಗಿ ಅನೇಕ ಪುಸ್ತಕಗಳನ್ನು ಭಾರತ ಮೇಲೆ ಬರೆದರು.

ಆದರೂ ಸಾಂಸ್ಥಿಕವಾಗಿ ಹಾಗೂ ಸಾಂಘಿಕವಾಗಿ ಭಾರತದ ಕುರಿತಾಗಿ ಅಧ್ಯಯನ ಪ್ರಾರಂಭವಾದದ್ದು ಬ್ರಿಟಿಷರ ಆಗಮನದ ನಂತರ 18ನೇ ಶತಮಾನದ ಪ್ರಾರಂಭದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ. 

ಅದರ ಹಿನ್ನೆಲೆ ಮತ್ತು ವಿಸ್ತಾರವನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.

ಡಾ.ಶ್ರೀನಿಧಿ ಪ್ಯಾಟಿ

ನಿರ್ದೇಶಕರು,ಶ್ರೀವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಂ,ಮೈಸೂರು.


Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting