ಇಂಡೋಲಜಿ – ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ.

 


ಇಂಡೋಲಜಿ (Indology)– ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆ. 

ಕಳೆದ ಸಂಚಿಕೆಯಲ್ಲಿ ಇಂಡೋಲಜಿಯ ಅರ್ಥ ಮತ್ತು ವಿಸ್ತಾರ ಇವುಗಳನ್ನು ಅರ್ಥೈಸಿಕೊಂಡಿದ್ದೆವು. ಈ ಸಂಚಿಕೆಯಲ್ಲಿ ಇಂಡೋಲಾಜಿಯ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆಯ ಕುರಿತಾಗಿ ತಿಳಿಯೋಣ. 

ಇಂಡೋಲಜಿ ಎಂದರೆ ಭಾರತದ ಕಲೆ, ಸಂಸ್ಕೃತಿ ,ಭಾಷಾ ಸಾಹಿತ್ಯ, ಇತಿಹಾಸ ಮುಂತಾದವುಗಳ ಅಧ್ಯಯನಕ್ಕೆ ಮೀಸಲಾದ ಅಧ್ಯಯನ ಪ್ರಕಾರ. ಇಂಡೋಲಜಿಯ ಪುಸ್ತಕಗಳು ಪ್ರಾಯಃ ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣಗೊಂಡಿವೆ. ಯುರೋಪಿನ ವಿದ್ವಾಂಸರಾಗಲೀ, ಅಮೆರಿಕದ ವಿದ್ವಾಂಸರಾಗಲೀ ಇಂಗ್ಲಿಷ್ ಭಾಷೆಯಲ್ಲಿಯೇ ಭಾರತದ ಕುರಿತಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಪಾರಂಪರಿಕ ಪಂಡಿತರಿಗೆ ಪ್ರಾಯಃ ಇಂಗ್ಲಿಷ್ ಜ್ಞಾನದ ಕೊರತೆ ಇರುತ್ತದೆ. ಆ ನಿಟ್ಟಿನಲ್ಲಿ ಅಕಾಡೆಮಿಕ್ ಸರ್ಕಲ್ ನಲ್ಲಿ ನಡೆಯುವ ಯಾವುದೇ ವಿದ್ಯಮಾನಗಳ ಪರಿಚಯವು ಅವರಿಗೆ ಆಗುವುದಿಲ್ಲ. ಕೆಲವೊಮ್ಮೆ ಗೊತ್ತಾದರೂ ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ಕೊಡುವಷ್ಟು ಪರಿಣತಿಯಾಗಲಿ, ಅವಕಾಶವಾಗಲಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಳೆದ ಶತಮಾನದಲ್ಲಿ ಇಂಡೋಲಜಿಯ ವಿಷಯದಲ್ಲಿ ಅಂತರಾಷ್ಟ್ರೀಯ ಅಕಾಡೆಮಿಕ್ ಸರ್ಕಲ್‌ನಲ್ಲಿ ಹಾರ್ವರ್ಡ್, ಆಕ್ಸ್ಫರ್ಡ್ , ಸ್ಟ್ಯಾನ್ಪೋರ್ಡ್ ಮುಂತಾದ ವಿಶ್ವವಿದ್ಯಾಲಯಗಳ ವಿದ್ವಾಂಸರ ಚಿಂತನೆಗಳೇ ಮುನ್ನೆಲೆಗೆ ಬಂದು ಪ್ರಪಂಚದಲ್ಲಿ ಅಂಗೀಕೃತವಾದವು. ಕೆಲವೇ ಬೆರಳೆಣಿಕೆಯಷ್ಟು ಭಾರತೀಯ ವಿದ್ವಾಂಸರು ಇವರ ಚಿಂತನೆಗಳ ವಿಮರ್ಶೆ ಮತ್ತು ಪ್ರತಿಕ್ರಿಯೆಯನ್ನು ಬರೆದಿದ್ದಾರೆ. 

ಆದರೆ ಪಾಶ್ಚಾತ್ಯ ವಿದ್ವಾಂಸರೆಲ್ಲರೂ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಹುದ್ದೆಗಳಲ್ಲಿ ಇರುವುದರಿಂದ ಅವರ ಚಿಂತನೆ ಮುನ್ನಡೆಗೆ ಬಂದು ಭಾರತದಲ್ಲಿರುವ ಸಾಮಾನ್ಯ ಜಿಜ್ಞಾಸುಗಳನ್ನು, ಉದ್ಯಮಿಗಳನ್ನು ಆಕರ್ಷಿಸಿತು. 

ಭಾರತವನ್ನು ತಿಳಿದುಕೊಳ್ಳುವ ಅಥವಾ ಭಾರತೀಯತೆಯನ್ನು ಜಗತ್ತಿನಲ್ಲಿ ಬಿಂಬಿಸುವ ಉತ್ತಮವಾದ ಯೋಚನೆಗಳಿದ್ದರೂ ಕೂಡ ಯುವ ಜನಾಂಗವು ಪಾರಂಪರಿಕ ಪಂಡಿತರು ಬರೆದಿರುವ ಪುಸ್ತಕಗಳನ್ನು ಬಿಟ್ಟು, ಈ ಪ್ರೊಫೆಸರ್ ಗಳ ಅಥವಾ ಅವರ ಭಾರತೀಯ ಶಿಷ್ಯರ ಪುಸ್ತಕಗಳನ್ನು ಓದಲು ಪ್ರಾರಂಭಿಸಿ ಭಾರತದ ಕುರಿತಾಗಿ ಕೀಳರಿಮಿಯನ್ನೇ ಹೊಂದಲು ಪ್ರಾರಂಭಿಸಿದರು. ಉದಾಹರಣೆಗೆ ಇನ್ಫೋಸಿಸ್ ಎಂಬ ಪ್ರಸಿದ್ಧ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಭಾರತೀಯ ಸಾಹಿತ್ಯದ ಅನುವಾದ ಮಾಡಿಸುವ ಯೋಜನೆಯನ್ನು ರೂಪಿಸಿ ಅದರ ಜವಾಬ್ದಾರಿಯರನ್ನು ಕೊಲಂಬಿಯ ವಿಶ್ವವಿದ್ಯಾಲಯದ ಸೌತ್ ಎಷಿಯನ್ ಸ್ಟಡೀಸ್ ನ ಪ್ರೊಫೆಸರ್ ಆದ ಶಲ್ಡನ್ ಪೋಲಾಕ್ ಎಂಬ ವಿದ್ವಾಂಸನಿಗೆ ನೀಡಿದರು. 'ಮೂರ್ತಿ ಕ್ಲಾಸಿಕ್ಸ್ ಲೈಬ್ರರಿ' ಎಂಬ ಹೆಸರಿನಡಿಯಲ್ಲಿ ಮಿಲಿಯನ್ ಗಟ್ಟಲೆ ಡಾಲರ್ ಗಳನ್ನು ಈ ಯೋಜನೆಗೆ ಅವರು ಮೀಸಲಿಟ್ಟರು. ಈ ವಿದ್ವಾಂಸನ ಅನೇಕ ಚಿಂತನೆಗಳು ಮಾರ್ಕ್ಸ್ ನಿಂದ ಪ್ರೇರಿತವಾಗಿದ್ದು, ಅದರ ಹಿನ್ನೆಲೆಯಲ್ಲಿ ಭಾರತೀಯ ಚಿಂತನೆಯು ನಡೆಯುತ್ತದೆ ಎಂಬ ಚಿಂತೆಯಿದ್ದ ಅನೇಕ ವಿದ್ವಾಂಸರು ಹಸ್ತಾಕ್ಷರಗಳನ್ನು ಸಂಗ್ರಹಿಸುವ ಮೂಲಕ ಪ್ರತಿಭಟನೆಯನ್ನು ನಡೆಸಿದರು. ಆದರೂ ಆ ಯೋಜನೆಯು ಮುಂದುವರೆದು ಅನೇಕ ಪುಸ್ತಕಗಳು ಪ್ರಕಟಗೊಂಡವು. ಇದೇ ರೀತಿ ರಿಲಯನ್ಸ್, ಪಿರಾಮಲ್, ಮಹೇಂದ್ರ ಮುಂತಾದ ಅನೇಕ ಭಾರತೀಯ ಉದ್ಯಮಿಗಳು ಇಂತಹ ವಿಶ್ವವಿದ್ಯಾಲಯಗಳಲ್ಲಿ ದೇಣಿಗೆಗಳನ್ನು ಕೊಡುತ್ತಾರೆ. ಅವರ ಉದ್ದೇಶ ಸರಿಯಾಗಿದ್ದರೂ ಗೊತ್ತಿಲ್ಲದೆಯೋ ಭಾರತೀಯತೆಯ ವಿರುದ್ಧವಾಗಿಯೇ ಅವರು ಕೆಲಸ ಮಾಡಿದಂತೆ ಆಗುತ್ತದೆ. 

ಈ ಮೇಲಿರುವ ಪರಿಸ್ಥಿತಿಗೆ ಅನೇಕ ಕಾರಣಗಳಿದ್ದರೂ ಅದರಲ್ಲಿ  ಭಾರತೀಯ ವಿದ್ವಾಂಸರು ಈ ವಿಶ್ವವಿದ್ಯಾಲಯಗಳ ವಿದ್ವಾಂಸರುಗಳು ಬರೆದಿರುವ ಪುಸ್ತಕಗಳ ವಿಮರ್ಶೆ ಅಥವಾ ಪ್ರತಿಕ್ರಿಯೆಯನ್ನು ಬರೆಯದಿರುವುದು ಒಂದು ಕಾರಣವಾಗಿದೆ. ಪ್ರತಿಕ್ರಿಯೆಯನ್ನು ಸಮರ್ಥವಾಗಿ ನೀಡಿದಾಗ ಬದಲಾವಣೆಗಳಾದ ನಿದರ್ಶನಗಳು ಇವೆ. ಉದಾಹರಣೆಗೆ ದೇವದತ್ತ ಪಟ್ನಾಯಕ್ ಎಂಬ ಸ್ವಘೋಷಿತ ವಿದ್ವಾಂಸ ಭಾರತೀಯ ಸಂಸ್ಕೃತಿ, ಪುರಾಣಗಳು, ಮಹಾಭಾರತ, ಭಗವದ್ಗೀತೆ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ಹತ್ತು ವರ್ಷಗಳ ಹಿಂದೆ ಈ ಎಲ್ಲಾ ಪುಸ್ತಕಗಳು ಬೆಸ್ಟ್ ಸೆಲ್ಲರ್ ಆಗಿದ್ದವು. ಯಾವುದೇ ಪ್ರಸಿದ್ಧ ವಿಮಾನ ನಿಲ್ದಾಣ ಹಾಗೂ ಪುಸ್ತಕ ಭಂಡಾರಗಳಲ್ಲಿ ಇವನ ಪುಸ್ತಕಗಳೇ ರಾರಾಜಿಸುತ್ತಿದ್ದವು. ಯುವಕರಿಗೆ ಹಾಗೂ ನಗರದ ವಿಮರ್ಶಕರಿಗೆ ಇವನ ಮಾತೇ ವೇದವಾಕ್ಯವಾಗಿತ್ತು. ಆದರೆ ಇವನ ಪುಸ್ತಕಗಳು ಅಸಂಬದ್ಧವಾಗಿದ್ದವು. ಅಷ್ಟೇ ಇಲ್ಲದೆ ಮೂಲಭೂತವಾದ ಅನೇಕ ತಪ್ಪುಗಳನ್ನು ಒಳಗೊಂಡಿದ್ದವು. ಆಶ್ಚರ್ಯವೆಂದರೆ ಯಾರೂ ಕೂಡ ಇದನ್ನು ಸರಿಯಾಗಿ ವಿಮರ್ಶಿಸಿ ಅವುಗಳ ತಪ್ಪುಗಳನ್ನು ಪ್ರದರ್ಶಿಸಲಿಲ್ಲ. ಆದರೆ ಇನ್ಫಿನಿಟಿ ಫೌಂಡೇಶನ್ ಎಂಬ ಸಂಸ್ಥೆಯ ಸ್ಥಾಪಕರಾದ ರಾಜೀವ್ ಮಲ್ಹೋತ್ರ ಇವರು ಕಳೆದ 20 ವರ್ಷಗಳಿಂದ ಈ ವಿಷಯವಾಗಿ ಹೋರಾಟವನ್ನು ನಡೆಸುತ್ತಿರುವುದಲ್ಲದೇ ಇದರ ಕುರಿತಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.A Battle for Sanskrit , Snakes in the gangas, Breaking India ಮುಂತಾದವುಗಳು ಪ್ರಸಿದ್ಧವಾದ ಪುಸ್ತಕಗಳು. ಇವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನಿತ್ಯಾನಂದ ಮಿಶ್ರಾ ಎಂಬ ವಿದ್ವಾಂಸರೊಂದಿಗೆ ಇದೇ ವಿಷಯದ ಕುರಿತಾಗಿ ಚರ್ಚೆಯನ್ನು ನಡೆಸಿದರು. ನಿತ್ಯಾನಂದ ಮಿಶ್ರ ಸಂಸ್ಕೃತವನ್ನು ತುಂಬಾ ಚೆನ್ನಾಗಿ ಬಲ್ಲವರಷ್ಟೇ ಅಲ್ಲದೆ ಅನೇಕ ಪುಸ್ತಕಗಳನ್ನು ಬರೆದಿರುವವರು. I.I.M Bangalore ನಲ್ಲಿ ಫೈನಾನ್ಸ್ ನಲ್ಲಿ ಎಂಬಿಎ ಮಾಡಿರುವ ಅವರು ಇಂಗ್ಲೀಷ್ ಭಾಷೆಯಲ್ಲಿಯೂ ಪ್ರಾವೀಣ್ಯವನ್ನು ಗಳಿಸಿದವರು. ಇವರು ಈ ಸಂವಾದದಲ್ಲಿ  https://youtu.be/vtkMFLuOa3M?si=PrzLWyS697RfEuwe

 ದೇವದತ್ತ ಪಟ್ನಾಯಕ್ ನ ಭಗವದ್ಗೀತೆಯ ಕುರಿತಾದ ಪುಸ್ತಕದ ವಿಮರ್ಶೆಯನ್ನು ಮಾಡಿ ಅಲ್ಲಿರುವ ಅನೇಕ ತಪ್ಪುಗಳನ್ನು ಬೆಳಕಿಗೆ ತಂದರು. ಭಗವದ್ಗೀತೆಯ ಕುರಿತಾಗಿ ಬರೆಯುವ ಇವರಿಗೆ ಸಂಸ್ಕೃತದ ಮೂಲಭೂತ ಜ್ಞಾನವೂ ಇಲ್ಲ ಎಂದು ಸಪ್ರಮಾಣವಾಗಿ ಪ್ರತಿಪಾದಿಸಿದರು. ಈ ಯೂಟ್ಯೂಬ್ ವಿಡಿಯೋ ಒಂದು ಮಿಲಿಯನ್ ಗಿಂತಾ ಹೆಚ್ಚು ವ್ಯೂಸ್ಅನ್ನು ಪಡೆಯಿತು. ಇದರ ಪರಿಣಾಮವಾಗಿ ದೇವದಾಸ್ ಪಟ್ನಾಯಕನ ಅಜ್ಞಾನವು ಜಗಜ್ಜಾಹೀರಾಯಿತು. ತದನಂತರ ಅನೇಕರು ಅವನನ್ನು ಪ್ರಶ್ನಿಸತೊಡಗಿದರು. ಅವನು ನಡೆಸಿಕೊಡುವ history ಎಂಬ ರಿಲಯನ್ಸ್ ನಿಂದ ಫಂಡೆಡ್ ಆದ ಡೆವಲೊಕ್ ವಿತ್ ದೇವದತ್ತ ಪಟ್ನಾನಾಯಕ್ ಎಂಬ ಕಾರ್ಯಕ್ರಮದ ವೀಕ್ಷಣೆಯೂ ಕಡಿಮೆಯಾಯಿತು. ಅವನ ಪುಸ್ತಕಗಳ ಮಹತ್ವ ಕಡಿಮೆ ಆಯಿತು. ಈ ರೀತಿಯಾಗಿ ವಿಮರ್ಶೆ ಮತ್ತು ಪ್ರತಿಕ್ರಿಯೆಯು ಉತ್ತಮ ಬೆಳವಣಿಗೆಯನ್ನು ಸಮಾಜಕ್ಕೆ ಕೊಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಹಿಂದಿನ ಕಾಲದಲ್ಲಿ ತಂತ್ರಜ್ಞಾನದ ಕೊರತೆಯಿಂದ ಹಾಗೂ ವಿಷಯದ ಕೊರತೆಯಿಂದ ಅನೇಕರಿಗೆ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗಿನ ಪೀಳಿಗೆಯ ವಿದ್ವಾಂಸರು ಈ ನಿಟ್ಟಿನಲ್ಲಿ ಕೆಲಸ ಮಾಡದೇ ಇದ್ದಲ್ಲಿ western Indologist ಗಳು ಬರೆದ ಪುಸ್ತಕಗಳೇ ಪ್ರಮಾಣವಾಗಿ ನಮ್ಮ ಮುಂದಿನ ಪೀಳಿಗೆಯವರು ಖಂಡಿತವಾಗಿ ಅದನ್ನೇ ಓದುವ ಪರಿಸ್ಥಿತಿಯು ಉಂಟಾದಲ್ಲಿ ಆಶ್ಚರ್ಯವಿಲ್ಲ . ಈ ನಿಟ್ಟಿನಲ್ಲಿ ಅನೇಕ ವಿದ್ವಾಂಸರು ಹಾಗೂ ಯುವ ವಿದ್ವಾಂಸರು ಕೆಲಸವನ್ನು ಮಾಡುತ್ತಿದ್ದಾರೆ. ಇನ್ಫಿನಿಟಿ ಫೌಂಡೇಶನ್ ವತಿಯಿಂದಲೇ western Indology ಯ ವಿಮರ್ಶಾತ್ಮಕವಾದ ಸ್ವದೇಶೀ ಇಂಡಾಲಜಿ-1 , ಸ್ವದೇಶಿ ಇಂಡಾಲಜಿ-2 ಎನ್ನುವ ಎರಡು ಪುಸ್ತಕಗಳು ಪ್ರಕಟವಾಗಿವೆ. 


  ಈ ನಿಟ್ಟಿನಲ್ಲಿ ವೆಂಡೀ ಡೊನೆಗರ್ ಬರೆದ ಪುಸ್ತಕದ ವಿಮರ್ಶೆಯನ್ನು ನಿಮಿತ್ತ ಮಾಡಿಕೊಂಡು, ವೆಸ್ಟರ್ನ್ ಇಂಡೋಲಜಿಸ್ಟ್ ಗಳ ಪುಸ್ತಕಗಳ ಹಿಂದಿರುವ ಉದ್ದೇಶ, ಅರ್ಥೈಸುವಿಕೆಯಲ್ಲಿರುವ ದೋಷಗಳೇ ಮೊದಲಾದ ಅಂಶಗಳನ್ನು ಮುಂದಿನ ಲೇಖನಗಳಲ್ಲಿ ಸ್ಪಷ್ಟಪಡಿಸುತ್ತೇನೆ.. 


ಮುಂದುವರೆಯುವುದು


                       ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting