ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ಹಾಗೂ ಪರಮಪೂಜ್ಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ನನಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನಿಗೆ ಪೂಜ್ಯ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು . ಅದರ ಜೊತೆಗೆ ಪೂಜ್ಯ ಶ್ರೀಪಾದಂಗಳವರ ಅಚಲ ಶ್ರದ್ಧೆ ಹಾಗೂ ಭಕ್ತಿಯ ವಿಶ್ವರೂಪದರ್ಶನ ಮಾಡುವ ಯೋಗವು ದೊರೆಯಿತು . ಅಯೋಧ್ಯೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಾದ ಚಳಿಯ ವಾತಾವರಣ. ನಮಗೆಲ್ಲರಿಗೂ ಸ್ವೆಟರ್,ಗ್ಲೌಸ್ ಗಳಿಲ್ಲದೆ ಒಡಾಡಲೂ ಸಾಧ್ಯವಾಗದ ಸ್ಥಿತಿ. ಅದರಲ್ಲೂ ಬೆಳಿಗ್ಗೆಯಂತೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾಗದಷ್ಟು ಮಂಜಿನ ಮುಸುಕು. ಇಂತಹ ವಾತಾವರಣದಲ್ಲೂ ಶ್ರೀಪಾದಂಗಳವರು ಬೆಳೆಗ್ಗೆ ಎಂದಿನಂತೆ ಎದ್ದು, ಸ್ನಾನವನ್ನು ಮುಗಿಸಿ, ತಮ್ಮ ಜಪತಪತರ್ಪಣಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದನ್ನು ಕಂಡರೆ , ಶ್ರೀಪಾದರಿಗಿರುವ ಸಂನ್ಯಾಸಧರ್ಮದ ನಿಷ್ಠೆ ಹಾಗೂ ಅನುಷ್ಠಾನದಲ್ಲಿ ಶ್ರದ್ಧೆ  ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ . ಅನುಕೂಲ ವಾತಾವರಣದಲ್ಲೂ ನಿತ್ಯಾನುಷ್ಠಾನದಲ್ಲಿ ಆಲಸ್ಯತನನಿಂದ ಅಥವಾ ಸಣ್ಣಪುಟ್ಟ ಕಾರಣಗಳಿಂದ ವಿಳಂಬ ಪ್ರವೃತ್ತಿಯನ್ನು ಮಾಡುವ ಇಂದಿನ ಅನೇಕರಿಗೆ ೬೦ ವರ್ಷದ ಶ್ರೀಪಾದಂಗಳವರ ನಡೆ ಆದರ್ಶವಾಗಬೇಕು .

                        ತಮ್ಮ ಅನುಷ್ಠಾನಗಳನ್ನು ಮುಗಿಸಿದ ತರುವಾಯ ಶ್ರೀಪಾದಂಗಳವರು ಸಂಸ್ಥಾನ ಪೂಜೆಯನ್ನು ನೆರವೇರಿಸಿ ಬಾಲರಾಮನಿಗೆ ತತ್ವಹೋಮ ಕಲಶಜಲದ ಸಂಪ್ರೋಕ್ಷಣೆಯನ್ನು ನೆರವೇರಿಸಲು ಶ್ರೀರಾಮನ ಮಂದಿರಕ್ಕೆ ತೆರಳುತ್ತಿದ್ದರು . ಪ್ರತಿಷ್ಠೆಯ ಅಂಗವಾಗಿ ೪೮ ದಿನ ನಡೆಯುವ ಮಂಡಲ ಪೂಜೆಯ ಭಾಗವಾಗಿ ತತ್ವಹೋಮವನ್ನು ಮಾಡುವುದು ಶಾಸ್ತ್ರಗಳು ವಿಧಿಸಿದ ಕ್ರಮ . ಸಮಾಜದ ಅನೇಕ ಹಿರಿಯ ವಿದ್ವಾಂಸರು ಹಾಗೂ ಪುರೋಹಿತರು ಪ್ರತಿದಿನ ಬೆಳಿಗ್ಗೆ ಗರ್ಭಗುಡಿಯ ಪಕ್ಕದಲ್ಲಿಯೇ ತತ್ವಹೋಮವನ್ನು ನೆರೆವೇರಿಸುತ್ತಿದ್ದರು . ಶ್ರೀಪಾದಂಗಳವರು ದೇವಸ್ಥಾನಕ್ಕೆ ಆಗಮಿಸಿ ಬಿಂಬದಲ್ಲಿ ತತ್ವನ್ಯಾಸ, ಮಾತೃಕಾನ್ಯಾಸಾದಿಗಳನ್ನು ನೆರೆವೇರಿಸಿ, ಕಲಶಜಲಪ್ರೋಕ್ಷಣೆಯನ್ನು ಮಾಡುತ್ತಿದ್ದರು . ತರುವಾಯ ಚಾಮರಸೇವೆಯನ್ನು ಮಾಡುತ್ತಿದ್ದರು . ಬೆಳ್ಳಿಯಿಂದ ನಿರ್ಮಿತವಾದ ಆ ಚಾಮರವು  ಎರಡೂ ಕೈಗಳನ್ನು ಉಪಯೋಗಿಸಿದರೂ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಹಿಡಿಯಲು ಸಾಧ್ಯವಿಲ್ಲದಷ್ಟು ಭಾರವಾಗಿದೆ. ನನಗೆ ಪಲ್ಲಕ್ಕಿ ಉತ್ಸವದಲ್ಲಿ ಚಾಮರ ಸೇವೆಯ ಅವಕಾಶ ಸಿಕ್ಕಿದ್ದರಿಂದ ಇದು ನನ್ನ ವೈಯಕ್ತಿಕ ಅನುಭವವೂ ಹೌದು .ಆದರೆ  ಶ್ರೀಪಾದಂಗಳವರು ಮಾತ್ರ ಒಂದೊಂದು ಕೈಗಳಲ್ಲಿ ಒಂದೊಂದು ಚಾಮರವನ್ನು ಹಿಡಿದು ಶ್ರೀರಾಮಚಂದ್ರನಿಗೆ ವಿವಿಧ ಸ್ತ್ರೋತ್ರಗಳಿಂದ ಅರ್ಧ ಗಂಟೆಗೂ ಹೆಚ್ಚು ಸಮಯ ಚಾಮರ ಸೇವೆಯನ್ನು ತದೇಕಚಿತ್ತದಿಂದ ನೆರೆವೇರಿಸುತ್ತಿದ್ದರು. ಇದು ಶ್ರೀಪಾದಂಗಳವರ ಅಚಲ ಭಕ್ತಿ, ಮನೋದಾರ್ಢ್ಯ ಹಾಗೂ ದೈಹಿಕ ದಾರ್ಢ್ಯಕ್ಕೆ ಕನ್ನಡಿಯಂತಿತ್ತು . ಭಾರತದ ಪ್ರಸಿದ್ಧ ತಾರೆ ಅಮಿತಾಭ್ ಬಚ್ಚನ ದರ್ಶನಕ್ಕೆ ಬಂದಾಗಲೂ ಶ್ರೀಪಾದಂಗಳವರು ಯಾವುದೇ ವ್ಯತ್ಯಾಸವಿಲ್ಲದೆ ಎಂದಿನಂತೆ ಶ್ರದ್ಧಾಭಕ್ತಿಯಿಂದ ಕಲಶಜಲಪ್ರೋಕ್ಷಣೆಯನ್ನು ನೆರೆವೆರಿಸುತ್ತಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡ ಭಕ್ತರೊಬ್ಬರಲ್ಲಿ ಮೂಡಿದ ಉದ್ಗಾರ ಹೀಗಿತ್ತು " ಇದೇ ಅಲ್ಲವೇ ನಿಜವಾದ ಭಕ್ತಿ , ಇದನ್ನೇ ಅಲ್ಲವೇ ಶ್ರೀಮದಾಚಾರ್ಯರೂ ಉಪದೇಶಿಸಿದ್ದು "ಮಾಹಾತ್ಮ್ಯಜ್ಞಾನ ಪೂರ್ವಸ್ತು ಸುಧೃಢಃ ಸರ್ವತೋಧಿಕಃ ಸ್ನೇಹ ಭಕ್ತಿಃ ಎಂದು" 

 ಪ್ರತಿನಿತ್ಯವೂ ಪ್ರತಿಷ್ಠೆಯ ಅಂಗವಾಗಿ ಅನೇಕ ಹೋಮಗಳು ರಾಮಮಂದಿರದ ಆವರಣದಲ್ಲಿ ನೆರವೇರುತ್ತಿವೆ . ಅದಕ್ಕಾಗಿ ಸುಂದರವಾದ ಯಾಗಮಂಟಪವನ್ನು ರಾಮಜನ್ಮಭೂಮಿಯಲ್ಲಿ ಟ್ರಸ್ಟ್ ನವರು ನಿರ್ಮಿಸಿದ್ದಾರೆ . ಅಲ್ಲಿ ದೇಶದ ಅನೇಕ ಭಾಗಗಳಿಂದ ಸ್ಮಾರ್ತ,ಶೈವ, ವೈಷ್ಣವ ಭೇದವಿಲ್ಲದೇ ಎಲ್ಲ ಪುರೋಹಿತರು ಯಜ್ಞ ,ಪಾರಾಯಣ ಮುಂತಾದ ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ . ಶ್ರೀಪಾಂದಗಳವರು ಬಾಲರಾಮನ ಸೇವೆಯ ತರುವಾಯ ಈ ಯಾಗಮಂಟಪಕ್ಕೆ ಆಗಮಿಸಿ ಅಲ್ಲಿ ನೆರವೇರುವ ಅನೇಕ ಹೋಮಗಳ ಪೂರ್ಣಾಹುತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ . ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ಶ್ರೀಪಾದಂಗಳವರು ಕೇವಲ ಶ್ರೀರಾಮಮಂದಿರದ ಧಾರ್ಮಿಕ ವಿಧಿವಿಧಾನಗಳಿಗಲ್ಲದೆ , ಶ್ರೀರಾಮರಾಜ್ಯ ನಿರ್ಮಾಣದ ಕಾರ್ಯಕ್ಕೂ ಮಹತ್ವವನ್ನು ನೀಡುತ್ತಿದ್ದಾರೆ . ಅದಕ್ಕಾಗಿ ಸೇವೆಯೊಂದನ್ನು ರೂಪಿಸಿದ್ದಾರೆ . ಶ್ರೀರಾಮನ ಪ್ರೋಕ್ಷಣೆಗೆ ಉಪಯೋಗಿಸುವ ಕಲಶದ ಸೇವೆಯನ್ನು ಮಾಡಿಸುವ ಅತ್ಯಂತ ಪುಣ್ಯದ ಸೇವೆಯದು . ಐದು ಲಕ್ಷ ರೂಗಳನ್ನು ಈ ಸೇವೆಗಾಗಿ ಸಲ್ಲಿಸಿದರೆ ದೇವರ ಪ್ರೋಕ್ಷಣೆಗಾಗಿ ಬಳಿಸಿದ ಆ ಕಲಶವನ್ನು ಶ್ರೀಪಾದಂಗಳವರಿಂದ ಪ್ರಸಾದವಾಗಿ ಪಡೆಯಬಹುದು . ಹಾಗೂ ನೀವು ಸಲ್ಲಿಸಿದ ಸೇವಾಧನವೂ ಶ್ರೀರಾಮರಾಜ್ಯದ ನಿರ್ಮಾಣದ ಅಂಗವಾಗಿ ನಡೆಯುವ ದೀನರ ,ಆರ್ಥಿಕಸಂಕಷ್ಟದಲ್ಲಿರುವ ಬಡವರ ಉದ್ಧಾರಕ್ಕಾಗಿ ಬಳಕೆಯಾಗುತ್ತದೆ. "ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ" ಎಂಬ ನುಡಿಯ ಅರ್ಥಬದ್ಧವಾದ ಅನುಷ್ಠಾನವೆಂದರೆ ಇದೇ ಅಲ್ಲವೇ!!!. 

ನಂತರ ಯಾಗ ಮಂಟಪದಲ್ಲಿಯೇ ಶ್ರೀಪಾದಂಗಳವರು ಪೂರ್ಣಪ್ರಜ್ಞ ವಿದ್ಯಾಪೀಠದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಪಾಠವನ್ನು ಮಾಡುತ್ತಿದ್ದರು . ಎಷ್ಟೇ ನಿಬಿಡವಾದ ದಿನಚರಿಯಿದ್ದರೂ ಶ್ರೀಪಾದಂಗಳಿಗಿರುವ ಪಾಠದಲ್ಲಿನ ನಿಷ್ಠೆ  ಅವರಿಗಿರುವ ಮೌದ್ಗಲ್ಯ ಋಷಿಗಳ "ಸ್ವಾಧ್ಯಾಯ ಪ್ರವಚನ ಎವೇತಿ ನಾಕೋ ಮೌದ್ಗಲ್ಯಃ ತದ್ಧಿ ತಪಃ ತದ್ಧಿ ತಪಃ'' ವಾಣಿಯಲ್ಲಿನ  ಶ್ರದ್ಧೆಯನ್ನು ಸಾರುತ್ತಿತ್ತು. .

ಮಧ್ಯಾಹ್ನದ ಭಿಕ್ಷೆಯ ಸಮಯ. ಶ್ರೀಗಳು ಮಧ್ಯಾಹ್ನದ ಪೂಜೆ ,ತದಂಗ ಸ್ನಾನಕ್ಕಾಗಿ ಅಯೋಧ್ಯೆಯ ಪೇಜಾವರ ಮಠಕ್ಕೆ ತೆರಳುತ್ತಾರೆ .ಪೂಜೆ ಹಾಗು ಭಿಕ್ಷೆಯ ನಂತರ ಶ್ರೀರಾಮನ ದರುಶನಕ್ಕಾಗಿ ಬಂದ ಯಾತ್ರಾರ್ಥಿಗಳಿಗೆ ಮಂತ್ರಾಕ್ಷತೆ ಪ್ರದಾನ. ಮಧ್ಯಾಹ್ನ ಪುನಃ ಶ್ರೀರಾಮಮಂದಿರಕ್ಕೆ ಪಯಣ. ನಾಲ್ಕು ಗಂಟೆಗೆ ಪ್ರತಿನಿತ್ಯವೂ ಶ್ರೀಪಾದಂಗಳವರ ಪರಕಲ್ಪನೆಯಂತೆ ಜರಗುವ ಪಲ್ಲಕ್ಕಿ ಉತ್ಸವ . ಉತ್ತರ ಭಾರತದವರಿಗೆ ಈ ಉತ್ಸವ ಚಿರಪರಿಚಿತವಲ್ಲ . ಶ್ರೀರಾಮಮಂದಿರ ಉತ್ತರ ದಕ್ಷಿಣ ಭಾರತದ ಸಂಪ್ರದಾಯದ ಸೇತುವೆಯಂತೆ ಗೋಚರಿಸುತ್ತದೆ . ದೇವಸ್ಥಾನ ಉತ್ತರದ ನಾಗರ ಶೈಲಿ, ಶ್ರೀರಾಮಮೂರ್ತಿ ದಕ್ಷಿಣ ಶೈಲಿ . ಪ್ರಧಾನ ಪೂಜೆ ಉತ್ತರದ ರಮಾನಂದಿ ಸಂಪ್ರದಾಯದಂತೆ, ಮಂಡಲ ಪೂಜೆ ದಕ್ಷಿಣದ ಸಂಪ್ರದಾಯದಂತೆ, ಎಲ್ಲೂ ವಿರೋಧವಿಲ್ಲ, ವಿವಾದವಿಲ್ಲ ಭಾರತದ ಬಹುತ್ವವನ್ನು ಸಾರುತ್ತಾ ಉತ್ತರ ದಕ್ಷಿಣ ಎಂದು ಭಾರತವನ್ನು ವಿಭಜಿಸುವವರಿಗೆ ಉತ್ತರಕೊಡಲು ಸಜ್ಜಾಗಿ ನಿಂತಂತಿದೆ . ಶ್ರೀಗಳು ತಾವೇ ಶ್ರೀರಾಮಲಲ್ಲಾನ ಉತ್ಸವಮೂರ್ತಿಯನ್ನು ಕೈಯಿಂದ ಎತ್ತಿ ಪಲ್ಲಕ್ಕಿಯಲ್ಲಿ ಇರಿಸುತ್ತಾರೆ . ಹಿಂದೂಮ್ಮೆ ಕಠಿಣ ಪರಿಸ್ಥಿತಿಯಲ್ಲಿ ಗುರುಗಳಾದ ವಿಶ್ವೇಶತೀರ್ಥಶ್ರೀಪಾದರು ರಾಮಲಲ್ಲಾನ ಇನ್ನೊಂದು ಪ್ರತಿಮೆಯನ್ನು ಬಿಗಿದಪ್ಪಿ ಟೆಂಟಿನಲ್ಲಿ ಪ್ರತಿಷ್ಠಾಪಿಸಿದ್ದರ ಫಲವೆಂಬಂತೆ , ಅವರ ಶಿಷ್ಯರು ಪಡೆದ ಈ ಸೇವಾಭಾಗ್ಯವನ್ನು ಕಣ್ತುಂಬಿಸಿಕೊಳ್ಳುವ ಅವಕಾಶದಿಂದ ಭಾವುಕರಾಗುವರು ಇತಿಹಾಸಕ್ಕೆ ಸಾಕ್ಷಿಗಳಾದ ಕೆಲವರು , ಪಲ್ಲಕ್ಕಿಸೇವೆಯಲ್ಲಿ ಅಥವಾ ಯಾವುದಾದರೊಂದು ಸೇವೆಯಲ್ಲಿ ತಮಗೆ ಪಾಲುಸಿಗಲೆಂದು ಧುಮುಕಿ ಧಾವಂತಿಸುವವರು ಕೆಲವರು . ಪಂಚವಾದ್ಯಗಳ ಘೋಷ, ಚಂಡೆಯ ನಾದ, ತಾಳ ಜಾಘಂಟೆಗಳ ಸಪ್ಪಳ, ವೇದ ಸ್ತ್ರೋತ್ರಪಾರಾಯಣದ ಝೇಂಕಾರ, ಮೈಮರೆತು ಕುಣಿಯುವ ಭಕ್ತರ ಗುಂಪು, ಸಾಲು ಸಾಲಾಗಿ ಶ್ರೀರಾಮ ದರುಶನಕ್ಕೆ ಬರುವ ಭಕ್ತರ  ಜೈ ಶ್ರೀರಾಮ ಎಂಬ ನಾಮದ ಘರ್ಜನೆ .ಹೀಗೆ ಅನೇಕ ಭಾವನೆಗಳ ಸಮಾಗಮದಿಂದ ವಾತಾವರಣದಲ್ಲೆಲ್ಲಾ ಭಕ್ತಿಯ ಪರಿಮಳದ ಕಂಪು ಸೂಸುತ್ತಿತ್ತು.  ಪಲ್ಲಕ್ಕಿಗೆ ಹಾಗೂ ಶ್ರೀರಾಮನಿಗೆ ಯಾವುದೇ ಹಾನಿಯಾಗಬಾರದೆಂಬ ಕಾಳಜಿಯಿಂದ ಎಲ್ಲ ತರಹದ ಗುಂಪನ್ನು ಸಮಾಧಾನಿಸುತ್ತಾ ಮುನ್ನಡಡೆಸುವವರು ಶ್ರೀಗಳು . ಈ ಜಾಗದಲ್ಲಿ ನಿಂತು ಈ ಉತ್ಸವವನ್ನು ಆಚರಿಸಲು ಸಾಧ್ಯವಾಗಿದ್ದು ಪರಮಪೂಜ್ಯ ವಿಶ್ವೇಶತೀರ್ಥಶ್ರೀಪಾದಂಗಳವರ ದಣಿವರಿಯದ ಹೋರಾಟದಿಂದ. ಅವರಿಗೆ ಆ ಜಾಗದಲ್ಲಿ ಹೃದಯದಿಂದ ಲಕ್ಷ ಲಕ್ಷ ನಮಸ್ಕಾರಗಳನ್ನು ನಮಗರಿವಿಲ್ಲದಂತೆ ಸಲ್ಲಿಸುತ್ತೇವೆ. ಈ ಹೋರಾಟಕ್ಕಾಗಿ ಪ್ರಾಣತೆತ್ತ ಅನೇಕ ಕರಸೇವಕರವನ್ನು ಹೃದಯಾಳದಿಂದ ನಮಿಸುತ್ತೇವೆ.  ಹೀಗೆ ಮೂರು ಪ್ರದಕ್ಷಿಣೆಯ ನಂತರ ತೊಟ್ಟಿಲಲ್ಲಿ ಭಗವಂತನನ್ನು ಶ್ರೀಗಳು ಕೂರಿಸುತಿದ್ದರು . 

ನಂತರ ಅಷ್ಟಾವಧಾನದಲ್ಲಿ ಚತುರ್ವೇದ, ಇತಿಹಾಸ, ಪುರಾಣ, ಸಂಗೀತ, ಭರತನಾಟ್ಯ ,ಯಕ್ಷಗಾನ, ಮುಂತಾದ ಸೇವೆಗಳು ರಾಮಲಲ್ಲಾನಿಗೆ ಸಲ್ಲುತ್ತಿದ್ದವು. ಆಧ್ಯಾತ್ಮಿಕ ಲೋಕವೊಂದು ಸೃಜಿಸುತ್ತಿತ್ತು. ರಾಮಾಯಣವನ್ನು ಅಭ್ಯಸಿಸಿದವರಿಗೆ ಮಹರ್ಷೀ ವಾಲ್ಮೀಕಿಗಳು ವನವಾಸದ ನಂತರ ಪ್ರಜೆಗಳು ರಾಮನನ್ನು ಸ್ವಾಗತಿಸಿದ ಪರಿಯ ವರ್ಣನೆಯು ನೆನಪಿಗೆ ಬರುತ್ತದೆ. ಪೂಜ್ಯ ಶ್ರೀಪಾದಂಗಳವರ ಸೌಂದರ್ಯ ಪ್ರಜ್ಞೆ , ಸೂಕ್ಷ್ಮ ದೃಷ್ಟಿ , ವ್ಯವಸ್ಥೆಯ ಪಟುತ್ವ ಈ ಉತ್ಸವವು ಹತ್ತಾರು ವರ್ಷಗಳ ಕಾಲ ಭಕ್ತರ ಮನಸ್ಸಿನಲ್ಲಿ ಅಚ್ಚಾಗುವಂತೆ ಮಾಡುತ್ತದೆ. ಈ ಉತ್ಸವ ಇನ್ನೂ ಮುಂದುವರಿಯಬಾರದೇ ಎಂಬ ಸದಾಸೆಯನ್ನು ಹುಟ್ಟಿಸುತ್ತದೆ. ಧನ್ಯತಾಭಾವವು ಅಭಿವ್ಯಕ್ತವಾಗುತ್ತದೆ . ಶಂಖನಾದದೊಂದಿಗೆ ಉತ್ಸವ ಸಮಾಪ್ತವಾದಾಗ ಶ್ರೀಗಳು ಶ್ರೀರಾಮಲಲ್ಲಾನ ಉತ್ಸವಮೂರ್ತಿಯನ್ನು ಜೋಪಾನವಾಗಿ ಗರ್ಭಗುಡಿಯಲ್ಲಿ ತಂದಿರಿಸುತ್ತಿದ್ದರು. ಆಗ ನಮಗೆಲ್ಲರಿಗೂ ಶ್ರೀರಾಮನ ದರುಶನದ ಭಾಗ್ಯ. ಮಂದಸ್ಮಿತನಾದ ಬಾಲರಾಮ ದರ್ಶನ. ಐದುನೂರು ವರುಷದ ಪಾರಿಪಾಕರೂಪದ ಆ ದರುಶನ ಕ್ಷಣ ಎಂದೂ ಮುಗಿಯಬಾರದೆಂಬ ಭಾವವು ಚಿಗುರುತ್ತಿತ್ತು ,ಆದರೆ ಪೋಲೀಸರ ಸದ್ದಿಗೆ ಜಾಗೃತರಾಗಿ ವಾಸ್ತವ ಪ್ರಪಂಚಕ್ಕೆ ಮರಳಬೇಕಾಗಿತ್ತು . 

ಶ್ರೀಪಾದಂಗಳವರದ್ದು ಈ ದಿನಚರಿ ಕೇವಲ ಒಂದು ದಿನದ್ದಲ್ಲ, 48 ದಿನವೂ ಇದೇ ರೀತಿ ಬಿಡುವಿಲ್ಲದ ದಿನಚರಿ.ಒಂದೆರಡು ದಿನ ಈ ದಿನಚರಿಯನ್ನು ಅನುಸರಿಸಿದರೆ ಮೂರನೆಯ ದಿನ ರಜೆಯನ್ನು ಬಯಸುತ್ತೇವೆ.  ಅಂತಹದರಲ್ಲಿ ಅನೇಕ ವರ್ಷಗಳಿಂದ ಇದೇ ರೀತಿಯ ಬಿಡುವಿಲ್ಲದ ದಿನಚರಿಯನ್ನು ಪಾಲಿಸುತ್ತಿರುವ ಶ್ರೀಪಾದರ ಕರ್ತೃತ್ವ ಶಕ್ತಿಗೆ ನಮೋ ನಮಃ .

ಇಲ್ಲಿ ನಮೂದಿಸಲೇಕಾದ ಅಂಶಗಳು ಕೆಲವಿವೆ . ನಾವೆಲ್ಲಾ ಅನುಭವಿಸಿದ ಸಂಭ್ರಮದ ಹಿಂದೆ ಅನೇಕರ ಪರಿಶ್ರಮವಿತ್ತು . ಆಗಮಿಸುವವರಿಗೆಲ್ಲಾ ಮುಗುಳ್ನಗೆಯೊಂದಿಗೆ ವ್ಯವಸ್ಥೆ ಮಾಡುತ್ತಿದ್ದ, ಶಶಾಂಕ ಭಟ್ ಆಚಾರ್ಯರ ನೇತೃತ್ವ, ಲಕ್ಷೀನಾರಾಯಣ ಆಚಾರ್ಯ,ಸೋದೆ ಗುರುರಾಜ ಆಚಾರ್ಯ, ಪ್ರಸಾದ ಭಟ್, ಹಾಗೂ ಸುಧಾವಿದ್ಯಾರ್ಥಿಗಳ ತಂಡಕ್ಕೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಅಲ್ಪವೇ. ಸ್ವಾಮಿಗಳ ಆಜ್ಞೆಯಂತೆ ವಿಷಮ ಪರಿಸ್ಥಿತಿಯಲ್ಲಿ ಈ ಕಾರ್ಯವನ್ನು ನಿರ್ವಹಿಸುತ್ತಿರುವ ಅವರಿಗೆ ಗುರುಗಳ ಹಾಗೂ ಶ್ರೀರಾಮನ ಅನುಗ್ರಹವಾಗುವುದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ .

ಕೊನೆಗೆ ಸ್ವಾಮಿಗಳ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಅಯೋಧ್ಯೆಯಿಂದ ತೆರಳುವಾಗ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಎಂಬ ಹಾಡನ್ನು ಗುನುಗುತ್ತಾ , ಅದರ ನಿಜವಾದ ಭಾವವನ್ನು ಅರ್ಥೈಸಿಕೊಳ್ಳುತ್ತಾ ಯಾತ್ರೆಯನ್ನು ಮುಗಿಸಿದೆವು.    

https://youtu.be/MTmkYggAPPU?si=ivEd34JBBGGH_vOz


ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ಏಕಭುಕ್ತ ಮತ್ತು intermittent fasting