ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ -ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ಹಾಗೂ ಪರಮಪೂಜ್ಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ನನಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನಿಗೆ ಪೂಜ್ಯ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು . ಅದರ ಜೊತೆಗೆ ಪೂಜ್ಯ ಶ್ರೀಪಾದಂಗಳವರ ಅಚಲ ಶ್ರದ್ಧೆ ಹಾಗೂ ಭಕ್ತಿಯ ವಿಶ್ವರೂಪದರ್ಶನ ಮಾಡುವ ಯೋಗವು ದೊರೆಯಿತು . ಅಯೋಧ್ಯೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಾದ ಚಳಿಯ ವಾತಾವರಣ. ನಮಗೆಲ್ಲರಿಗೂ ಸ್ವೆಟರ್,ಗ್ಲೌಸ್ ಗಳಿಲ್ಲದೆ ಒಡಾಡಲೂ ಸಾಧ್ಯವಾಗದ ಸ್ಥಿತಿ. ಅದರಲ್ಲೂ ಬೆಳಿಗ್ಗೆಯಂತೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾಗದಷ್ಟು ಮಂಜಿನ ಮುಸುಕು. ಇಂತಹ ವಾತಾವರಣದಲ್ಲೂ ಶ್ರೀಪಾದಂಗಳವರು ಬೆಳೆಗ್ಗೆ ಎಂದಿನಂತೆ ಎದ್ದು, ಸ್ನಾನವನ್ನು ಮುಗಿಸಿ, ತಮ್ಮ ಜಪತಪತರ್ಪಣಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದನ್ನು ಕಂಡರೆ , ಶ್ರೀಪಾದರಿಗಿರುವ ಸಂನ್ಯಾಸಧರ್ಮದ ನಿಷ್ಠೆ ಹಾಗೂ ಅನುಷ್ಠಾನದಲ್ಲಿ ಶ್ರದ್ಧೆ ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ . ಅನುಕೂಲ ವಾತಾವರಣದಲ್ಲೂ ನಿತ್ಯಾನುಷ್ಠಾನದಲ್ಲಿ ಆಲಸ್ಯತನನಿಂದ ಅಥವಾ ಸಣ್ಣಪುಟ್ಟ ಕಾರಣಗಳಿಂದ ವಿಳಂಬ ಪ್ರವೃತ್ತಿಯನ್ನು ಮಾಡುವ ಇಂದಿನ ಅನೇಕರಿಗೆ ೬೦ ವರ್ಷದ ಶ್ರೀಪಾದಂಗಳವರ ನಡೆ ಆದರ್ಶವಾಗಬೇಕು . ...