ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City

 


ಆದರ್ಶನಗರೀ ಅಯೋಧ್ಯೆ - ಮಹರ್ಷಿ ವಾಲ್ಮೀಕಿಗಳು ವರ್ಣಿಸಿದ Role model City  -  ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

ಜನವರಿ 22 ರಂದು ಇಡೀ ಜಗತ್ತು ಅಯೋಧ್ಯೆಯ ಕಡೆ ಕಾತರದಿಂದ ತನ್ನ ದೃಷ್ಟಿಯನ್ನು ಹರಿಬಿಡುತ್ತಿದೆ. ಅನೇಕ ಶತಮಾನಗಳ ಕನಸು ನನಸಾಗುವ ದಿವ್ಯ ಮಂಗಳ ಮುಹೂರ್ತಕ್ಕೆ ಅಯೋಧ್ಯಾ ನಗರಿಯು ನವವಧುವಿನಂತೆ ಸಜ್ಜಾಗುತ್ತಿದೆ. ಈ ಅಯೋಧ್ಯೆಯಲ್ಲಿ ನಾವು ಇಡುವ ಒಂದೊಂದು ಹೆಜ್ಜೆಯು ನಮಗೆ ನೂರು ಅಶ್ವಮೇಧ ಯಾಗದ ಫಲವನ್ನು ನೀಡುವುದೆಂದು ಸ್ಕಂದಪುರಾಣವು ತಿಳಿಸಿಕೊಡುತ್ತದೆ. 

 ಅಯೋಧ್ಯಾ ಪುರಿಯನ್ನು ಮನುವು ತನ್ನ ಮಗನಾದ ಇಕ್ಷ್ವಾಕುವಿನ ರಾಜ್ಯ ಪರಿಪಾಲನೆಗಾಗಿ ನಿರ್ಮಿಸಿದ ಎಂದು ರಾಮಾಯಣವು ತಿಳಿಸಿದೆ. ಆದ್ದರಿಂದಲೇ ಈ ಪಟ್ಟಣ 'ಆದಿಪುರಿ' ಎಂಬ ನಾಮಾಂತರವನ್ನು ಹೊಂದಿದೆ. ಈ ನಗರವು ಕೇವಲ ಆದಿ ನಗರಿಯಾಗಿರದೆ ಆದರ್ಶ ನಗರಿಯಾಗಿತ್ತು ಎಂದು ರಾಮಾಯಣದ ವಿವರಣೆಯಿಂದ ನಮಗೆ ತಿಳಿದು ಬರುತ್ತದೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಗಸ್ಟ 15 ರ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ Decolonization ನ ಸಾಕಾರತೆಗಾಗಿ  ಭಾರತೀಯ ನಗರನಿರ್ಮಾಣದ ಮೂಲಭೂತ ಅಂಶಗಳ ನಿರೂಪಣೆಯನ್ನು ರಾಮಾಯಣದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯು ಮೂಲಭೂತ ಸೌಕರ್ಯಗಳಿಂದ ಹಾಗು ಸಂಪತ್ತು ಸವಲತ್ತುಗಳಿಂದ ಕಂಗೊಳಿಸುತಿತ್ತು ಎಂಬ ವಿಷಯವನ್ನು ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ವಿವರಿಸಿದ್ದಾರೆ. ರಾಮಾಯಣದ ಅಧ್ಯಯನದಿಂದ ಅಯೋಧ್ಯೆಯು ಬಹುತೇಕ ಆಧುನಿಕ ನಗರಗಳಿಗೆ ಆದರ್ಶವಾಗಬಹುದಾದ,  ಎಲ್ಲರಿಗೂ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಹೊಂದಿತ್ತು ಎಂದು ತಿಳಿಯುತ್ತದೆ. ಆಧುನಿಕ ನಗರಗಳಿಗೆ  ಹೋಲಿಸಿದರೆ ಅಯೋಧ್ಯೆಯ ರಚನೆಯು ಪ್ರಾಚೀನ ಭಾರತೀಯ ನಗರಗಳ ಯೋಜನೆ, ಕಲಾತ್ಮಕತೆ, ಸಮೃದ್ಧಿಯನ್ನು , ಅಧುನಿಕ ನಗರಗಳ ಕಲಾಹೀನತೆ, ವಿಕೃತ ಸಂಸ್ಕೃತಿಯನ್ನು ತೊರಿಸುತ್ತದೆ . ಬಾಲಕಾಂಡದ ಐದನೆಯ ಸರ್ಗದಲ್ಲಿ ವಾಲ್ಮೀಕಿಮಹರ್ಷಿಗಳು ಅಯೋಧ್ಯೆಯನ್ನು ಹೀಗೆ ವರ್ಣಿಸಿದ್ದಾರೆ.


ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ ।

ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶ:।।

ಕವಾಟತೋರಣವತೀಂ ಸುವಿಭಕ್ತಾನ್ತರಾಪಣಾಮ್||

ಅಯೋಧ್ಯೇಯು ಹನ್ನೆರಡು ಯೋಜನ ಉದ್ದ ಮೂರು ಯೋಜನ ಅಗಲವಾದ ನಗರವಾಗಿತ್ತು. ವಿಶಾಲವಾದ ರಾಜಮಾರ್ಗಗಳಿಂದ ಕಂಗೊಳಿಸುತಿತ್ತು. ದೊಡ್ಡದೊಡ್ಡ ರಸ್ತೆಗಳು ನಗರದಲ್ಲಿ ಹರಡಿದ್ದವು. ಅಚ್ಚುಕಟ್ಟಾದ ರಾಜಬೀದಿಗಳನ್ನು ನಿತ್ಯವೂ ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ಹೂಗಳನ್ನು ಹರಡುತ್ತಿದ್ದರು.(ಇತ್ತಿಚ್ಚಿಗೆ ಪ್ರಧಾನಮಂತ್ರಿಗಳು ಅಯೋಧ್ಯಾನಿವಾಸಿಗಳಿಗೆ ಸ್ವಚ್ಛತೆ ಕಾಪಾಡಲು ಕರೆ ನೀಡಿದ್ದನ್ನು ಸ್ಮರಿಸಬಹುದು)  ನಗರದೊಳಗಿದ್ದ ಅಂಗಡಿಗಳನ್ನು ಕ್ರಮಬದ್ಧವಾಗಿ ವಿಂಗಡಿಸಿದ್ದರು. ಅಯೋಧ್ಯಾನಗರವು ಪ್ರಶಸ್ತವಾದ ದಿಡ್ಡಿಯ ಬಾಗಿಲುಗಳಿಂದಲೂ ತೋರಣಗಳಿಂದಲೂ ಸುಂದರವಾಗಿತ್ತು . ಆದರೆ ಈಗಿನ ನಗರಗಳ ಪರಿಸ್ಥಿತಿ ದುಸ್ತರ ಈಗಿನ  ಚಿಕ್ಕ ಚಿಕ್ಕ ರಸ್ತೆಗಳು, ಜನರಿಗೆ ಓಡಾಡಲಾಗದಷ್ಟೂ ಸಂಚಾರ ದಟ್ಟಣೆ, ಅಲ್ಲಲ್ಲಿ ಕಸದ ರಾಶಿಗಳು ,ಅಲ್ಲಲ್ಲಿ ರಸ್ತೆಬದಿಯಲ್ಲಿಯೆ ಕಾಣಸಿಗುವ ಅಂಗಡಿ ವ್ಯಾಪಾರ , ಜನರು ಗೋಡೆಗಳನ್ನು ಹಾಳಗೆಡಿಸಬಾರದೆಂದು ಗೋಡೆಗಳ ಮೇಲೆ ಕಲೆಯ ಹೆಸರಿನಲ್ಲಿ ವಿಕೃತಿ, ಇವಿಷ್ಟು ಭಾರತದ ಎಲ್ಲಾ ಆಧುನಿಕ ನಗರಗಳಲ್ಲಿ ಕಾಣಬಹುದಾದ ದೃಶ್ಯಾವಳಿ.

ಗೃಹಗಾಢಾಮವಿಚ್ಛಿದ್ರಾಂ ಸಮಭೂಮಿನಿವೇಶಿತಾಮ್ |

ಪ್ರಜೆಗಳ ಮನೆಗಳಿಂದ ನಿಬಿಡವಾದ ಆ ನಗರವನ್ನು  ಹಳ್ಳತಿಟ್ಟುಗಳೂ ಇಲ್ಲದ ಸಮಭೂಮಿಯಲ್ಲಿ ಕಟ್ಟಲಾಗಿತ್ತು.  ಇಂದು ಕೆರೆ ಕಟ್ಟೆಗಳನ್ನು ಆಕ್ರಮಿಸಿ , ಬೆಟ್ಟ ಗುಡ್ಡಗಳನ್ನು ಒಡೆದು ಅಪಾರ್ಟಮೆಂಟ್ ಗಳನ್ನು ,ಮನೆಗಳನ್ನು ಕಟ್ಟುವರು. ಮಳೆಗಾಳದಲ್ಲಿ ಮಳೆಯ ನೀರು ತುಂಬಿ ನಾಗರೀಕರೆಲ್ಲರೂ ಪರದಾಡುವಂತಹ ಪರಿಸ್ಥಿತಿ ಎದುರಾಗುವುದು. 

ವಧೂನಾಟಕಸಂಫೈಶ್ಚ ಸಂಯುಕ್ತಾಂ ಸರ್ವತಃ ಪುರೀಮ್ ||ಉದ್ಯಾನಾಮ್ರವಣೋಪೇತಾಂ ||

ಉತ್ತಮ ಕಲೆಗಳಿಗೆ ಪ್ರೋತ್ಸಾಹವಾಗುವಂತೆ ಅನೇಕ ನೃತ್ಯಶಾಲೆಗಳು,ನಾಟಕ ಸಂಘಗಳಿದ್ದವು . ನಗದಲ್ಲೆಲ್ಲಾ ಹಸಿರು ವಾತಾವರಣ,ಉದ್ಯಾನವನಗಳು ರಾರಾಜಿಸುತಿದ್ದವು .  ಈಗಿನ ನಗರಿಗಳಲ್ಲಿ ಕಲೆಯ ಹೆಸರಿನಲ್ಲಿ ಸರ್ಕಾರದ ಹಣದಲ್ಲಿ ರಂಗಾಯಣಗಳನ್ನು ರಂಗಮಂದಿರಗಳನ್ನು ನಿರ್ಮಿಸಿ ,ತಮ್ಮದೆ ಗುಂಪನ್ನು ಕಟ್ಟಿಕೊಂಡು ತಮಗೆ ಮಾತ್ರ ಅರ್ಥವಾಗುವ,ಅಥವಾ ತಮಗೂ ಅರ್ಥವಾಗದ ಕಲೆಗಳನ್ನು ಬಿತ್ತರುಸುವುದೆ ಹೊಟ್ಟೆಪಾಡಿನ ಕಾಯಕವಾಗಿದೆ. ಕೆಲವೆ ನಗರಗಳಲ್ಲಿ ಉದ್ಯಾನಗಳ ಪರಿಕಲ್ಪನೆಯಿದೆ ಆದರೂ ಜನಸಂದಣಿಗೆ ತಕ್ಕ ಹಸಿರು ವಾತಾವರಣವಿಲ್ಲ.

ಶಾಲಿತಂಡುಲಸಂಪೂರ್ಣಾಮಿಕ್ಷುಕಾಂಡರಸೋದಕಾಮ್|

ಅಯೋಧ್ಯೆಯಲ್ಲಿ ಶುಭ್ರವಾದ ಬಿಳಿಯ ಅಕ್ಕಿಯು ಸಮೃದ್ಧವಾಗಿ ದೊರೆಯುತ್ತಿತ್ತು.  ಕಬ್ಬಿನ ಹಾಲಿನಂತೆ ಸಿಹಿಯಾದ ನೀರು ಯಥೇಚ್ಛವಾಗಿ ದೊರಕುತ್ತಿತ್ತು . ಇಂದಿನ ಪಟ್ಟಣಗಳಲ್ಲಿ ಕುಡಿಯುವ ನೀರನದ್ದೆ ದೋಡ್ಡ ಸಮಸ್ಯೆ. ಜನಸಂಖ್ಯೆ ಜಾಸ್ತಿಯಾದಷ್ಟು ನೀರಿಗಾಗಿ ಪರದಾಡುತ್ತಾ,ಅನಧಿಕೃತವಾಗಿ ಬೋರ್ ವೆಲ್ ಗಳನ್ನು ಕೋರೆಯುತ್ತಾ ಅಂತರ್ಜಲಕ್ಕೂ ಹಾನಿಯುಂಟುಮಾಡುತ್ತಿದ್ದಾರೆ. ಇನ್ನು ಕುಡಿಯಲು ಸಿಗುವ ನೀರೂ ಕೂಡ ಶುದ್ಧವಾಗಿರದೆ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಶುದ್ಧವಾದ ನೀರು ಕುಡಿಯಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಪರಿಸ್ಥಿತಿಯಿದೆ . 

ಅಯೋಧ್ಯೆಯಲ್ಲಿ  ಮೂಲಭೂತ ಸೌಕರ್ಯಗಳಿದ್ದರೂ ಇಂದಿನ ಹಳ್ಳಿಗಳಂತಿರಬಹುದೆಂದು ಊಹಿಸಿಕೊಂಡರೆ ,ಅದು ಕಲ್ಪನಾಪ್ರಮಾದವಾಗುತ್ತದೆ .ಅಯೋಧ್ಯೆಯು ಎಲ್ಲಾ ಆಧುನಿಕ ಐಷಾರಾಮಿ ಸೌಕರ್ಯಗಳನ್ನು ಹೊಂದಿತ್ತು.

ಪ್ರಾಸಾದ್ಯೈಃ ರತ್ನಖಚಿತೈಃ ಪರ್ವತೈರುಪಕೋಭಿತಾಮ್| ಕೂಟಾಗಾರೈಶ್ಚ ಸಂಪೂರ್ಣಾಮಿಂದ್ರಸ್ಯೇವಾಮರಾವತೀಮ್ ||* *ಚಿತ್ರಾಮಷ್ಟಾಪದಾಕಾರಾಂ ವರನಾರೀಗಣೈರ್ಯುತಾಮ್ | ಸರ್ವರತ್ನಸಮಾಕೀರ್ಣಾ೦ ವಿಮಾನಗೃಹಶೋಭಿತಾಮ್ 

ಪರ್ವತಗಳಂತೆ ಉನ್ನತವಾದ ರತ್ನ ಖಚಿತ ಪ್ರಾಸಾದಗಳಿಂದಲೂ ಕ್ರೀಡಾಗೃಹಗಳಿಂದಲೂ ಇ೦ದ್ರನ ಅಮರಾವತಿಯಂತೆ ಅಯೋಧ್ಯೆಯು ವಿರಾಜಿಸುತ್ತಿದ್ದಿತು.  ಸುಂದರ ಸ್ತ್ರೀಯರ ಸಂಚಾರ, ನವರತ್ನಗಳ ಮಾಳಿಗೆಗಳು, ಏಳು ಅಂತಸ್ತುಗಳಿರುವ ವಿಮಾನವೆಂಬ ಗೃಹಗಳ ಸಮುದಾಯಗಳಿಂದ ಅಯೋಧ್ಯೆಯು ಮನೋಹರವಾಗಿತ್ತು.  ಹೀಗೆ ಅಧುನಿಕತೆ ಮತ್ತು ಮೂಲಭೂತ ಸೌಕರ್ಯಗಳ ಉತ್ತಮ ಮಿಶ್ರಣದಂತಿದ್ದ ಅಯೋಧ್ಯೆಯನ್ನು ಆದರ್ಶವಾಗಿರಿಸಿಕೊಂಡು ಇಂದು ಆಧುನಿಕ ನಗರಿಗಳ ನಿರ್ಮಾಣವಾಗಬೇಕಾಗಿದೆ. ಇಲ್ಲವಾದಲ್ಲಿ ಈಗ ಮಾಡುತ್ತಿರುವ ನಗರೀಕರಣವು ಕಾಂಕ್ರಿಟೀಕರಣದಲ್ಲಿ ಪರ್ಯವಸಾನವಾಗಿ ಆತ್ಮನಿಲ್ಲದ ದೇಹದಂತೆ,ಚೈತನ್ಯ,ಸಂಸ್ಕೃತಿ, ಕಲೆಗಳಿಲ್ಲದೆ ಜಡವಾಗಿ ಜನರು ಕಷ್ಟಪಟ್ಟು ದಿನದೂಡುವ ವಾಸಕೇಂದ್ರಗಳಾಗಿ ಪರಿಣಮಿಸುವ ದಿನ ದೊರವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಈ ಸಂದರ್ಭದಲ್ಲಿ ರಾಮರಾಜ್ಯದ ನಿರ್ಮಾಣದ ಸಂಕಲ್ಪವನ್ನು ಹೊತ್ತಿರುವ ನಮ್ಮೆಲ್ಲರಲ್ಲೂ ಅಯೋಧ್ಯಾಧಿಪತಿಯು  ಈ ರೀತಿಯಾದ ನಗರ ನಿರ್ಮಾಣದ ಪ್ರಚೋದನೆಯನ್ನು  ಉಂಟುಮಾಡಲೆಂದು ಪ್ರಾರ್ಥಿಸೋಣ.

ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting