ಏಕಭುಕ್ತ ಮತ್ತು intermittent fasting

 


ಏಕಭುಕ್ತ ಮತ್ತು intermittent fasting

ಕೆಲವು ದಿನಗಳ ಹಿಂದೆ ಮೋಬೈಲ್ ನಲ್ಲಿ ಹಿಂದಿ ಚಿತ್ರರಂಗದ ನಟ ಮನೋಜ್ ವಾಜಪೇಯಿಯವರ ಸಂದರ್ಶನವೊಂದು ಕಣ್ಣಿಗೆ ಬಿತ್ತು . ಅದರಲ್ಲಿ ತಮ್ಮ ದೈಹಿಕ ಕ್ಷಮತೆಯ ರಹಸ್ಯವೇನೆಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಗಮನ ಸೆಳೆಯಿತು.. ಅವರು ಹೇಳಿದ್ದು ‌'' ನನ್ನ ಅಜ್ಜ ಬಹಳ ಸ್ವಸ್ಥವಾಗಿ ಬಾಳಿ ಬದುಕಿದ್ದರು . ನಾನೂ ಅವರ ಜೀವನ ಶೈಲಿಯನ್ನೆ ಅನುಸರಿಸಬೇಕೆಂಬ ನಿರ್ಣಯ ತೆಗೆದುಕೊಂಡು ಕಳೆದ ೧೫ ವರ್ಷಗಳಿಂದ ರಾತ್ರಿ ಊಟ ಮಾಡುವುದನ್ನು ನಿಲ್ಲಿಸಿದ್ದೆನೆ . ದಿನಕ್ಕೆ ಒಂದು ಹೋತ್ತು ಮಾತ್ರ ಊಟ ಮಾಡುತ್ತೇನೆ . ಇದು ನನ್ನ ಆರೋಗ್ಯದಲ್ಲಿ ಬಹಳ ಸುಧಾರಣೆಯನ್ನು ತಂದಿದೆ , ಬ್ಲಡ್ ಪ್ರೆಶರ್, ಶುಗರ್ ಎಲ್ಲವೂ ನಿಯಂತ್ರಣದಲ್ಲಿದೆ . ನಾನು ಯಾವಾಗಲೂ ಚುರುಕಾಗಿರುತ್ತೆನೆ , ಉತ್ಸಾಹಿಯಾಗಿರುತ್ತೆನೆ . ನಾನು ಈ ಜೀವನ ಕ್ರಮವನ್ನು ಪ್ರಾರಂಭಿಸಿದಾಗ ಎಲ್ಲರೂ ಆಶ್ಚರ್ಯ ಪಡುತಿದ್ದರು . ಆದರೆ ಈಗ intermittent fasting ಎನ್ನುವ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ ''. ಅವರ ಈ ಮಾತುಗಳನ್ನು ಕೇಳಿ ಬಹಳ ಆಶ್ವರ್ಯವಾಯಿತು . ಅರೆ! ನಮ್ಮ ಪೂರ್ವಜರು ಹಲವರು ರಾತ್ರಿ ಊಟ ಮಾಡದೆ ಕೇವಲ ಹಾಲನ್ನೋ ಹಣ್ಣನ್ನೋ ತಿಂದು ಮಲಗುತ್ತಿದ್ದರಲ್ಲವೆ ಎಂದು ಯೋಚಿಸಿ ಅದನ್ನೆ ಹೋಲುವ intermittent fasting ಕ್ರಮದ ಬಗ್ಗೆ ಕುತೂಹಲದಿಂದ ತಿಳಿಯಲು ಪ್ರಯತ್ನಿಸಿದೆ .

                2012 ರಲ್ಲಿ ಬಿಡುಗಡೆಯಾದ B.B.C ಪತ್ರಕರ್ತ ಡಾ.ಮೈಕಲ್ ಮೋಸ್ಲೆ ಯ Eat fast,live longer ಎಂಬ ಕಿರುಚಿತ್ರ ಹಾಗೂ ಅವರದ್ದೆ The fast diet ಎಂಬ ಪುಸ್ತಕದ ಪ್ರಭಾವದಿಂದ intermittent fasting ಎಂಬ ಆಹಾರ ಪದ್ಧತಿಯು ಪ್ರಸಿದ್ದಿಯನ್ನು ಪಡೆಯಿತು . ನಾವು ತಿಂದ ಆಹಾರ ಕರುಳಿನಲ್ಲಿ ಕಿಣ್ವಗಳ ಮೂಲಕ (Digestive enzymes) ಪಚನವನ್ನು ಹೊಂದಿ ಕೊನೆಗೆ ನಮ್ಮ ರಕ್ತದಲ್ಲಿ ಸಣ್ಣ ಕಣಗಳಾಗಿ ಸೇರಿಕೊಳ್ಳುತ್ತವೆ , ಅಕ್ಕಿ ಹಿಟ್ಟು ಮೊದಲಾದ ಬಿಳಿ ಹಿಟ್ಟಿನ ಪದಾರ್ಥಗಳು, ಅಥವಾ ಅನ್ನ ಮೊದಲಾದ ಪದಾರ್ಥಗಳು  ವೇಗವಾಗಿ ಗ್ಲುಕೋಸ್ ಆಗಿ (sugar)  ಪರಿವರ್ತನೆಗೊಳ್ಳುತ್ತವೆ . ನಮ್ಮ ಜೀವಕೋಶಗಳು ಇದನ್ನು ಶಕ್ತಿಯ ಮೂಲವನ್ನಾಗು ಉಪಯೋಗಿಸುತ್ತವೆ . ನಮ್ಮ ಜೀವಕೋಶಗಳು ಇದನ್ನು ಉಪಯೋಗಿಸದಿದ್ದಲ್ಲಿ ಇದು ಕೊಬ್ಬಾಗಿ ಶೇಕರಗೊಳ್ಳುತ್ತದೆ . ಆದರೆ ಶರ್ಕರವು (sugar) ಮೇದೋಜ್ಜೀರಕ ಗ್ರಂಥಿಯಲ್ಲಿ (pancreas) ಉತ್ತತ್ತಿಯಾಗುವ ಇನ್ಸುಲಿನ್ ಮೂಲಕವೆ ನಮ್ಮ ಜೀವಕೋಶಗಳನ್ನು ಪ್ರವೇಶಿಸಬಹುದು .ಇನ್ಸುಲಿನ್ ಶರ್ಕರವನ್ನು ಕೊಬ್ಬಿನ ಕೊಶಗಳಲ್ಲಿ ಶೇಖರಿಸುತ್ತದೆ . ಒಂದು ಆಹಾರದಿಂದ ಇನ್ನೊಂದು ಆಹಾರದ ಮಧ್ಯದಲ್ಲಿ  ನಾವು  ಆಹಾರವನ್ನು ಸ್ವೀಕರಿಸದಿದ್ದಲ್ಲಿ ನಮ್ಮ ಇನ್ಸುಲಿನ್ ಮಟ್ಟ ಕಡಿಮೆಯಾಗುತ್ತದೆ . ಆಗ ಕೊಬ್ಬಿನ ಕೋಶಗಳು ತಮ್ಮಲ್ಲಿ ಶೇಖರವಾದ ಶರ್ಕರವನ್ನು ಶಕ್ತಿಯ ಮೂಲವನ್ನಾಗಿ ಉಪಯೋಗಿಸುತ್ತವೆ . ಹಾಗಾಗಿ ಇನ್ಸುಲಿನ್ ಮಟ್ಟವನ್ನು ನಾವು ಕಡಿಮೆ ಮಾಡಲು ಅವಕಾಶಕೊಟ್ಟಷ್ಟು ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ , ಇದರಿಂದ ದೇಹದ ತೂಕದಲ್ಲಿ ಇಳಿಕೆ , ಮಧುಮೇಹ, ರಕ್ತದೊತ್ತಡದ ನಿವಾರಣೆಯಾಗುತ್ತದೆ. ಇದೆ intermittent fasting ಎಂಬ ಆಹಾರ ಪದ್ಧತಿಯ ಹಿಂದಿನ ವಿಜ್ಞಾನ.

        intermittent fasting  ಪದ್ಧತಿಯಲ್ಲೂ ಅನೇಕ ವಿಧಗಳಿವೆ. ದಿನ ಬಿಟ್ಟು ದಿನ ಆಹಾರ ಸ್ವೀಕರಿಸುವುದು  ಐದು ದಿನ ಆಹಾರ ಸ್ವೀಕರಿಸಿ ಎರಡು ದಿನ ಉಪವಾಸವಿರುದು ಇತ್ಯಾದಿ . ಆದರೆ ಅದರಲ್ಲಿ ಬೆಳಗ್ಗಿನ ಹೊತ್ತಿನಲ್ಲಿ ದಿನಕ್ಕೆ ಒಮ್ಮೆ ಆಹಾರವನ್ನು ಸ್ವೀಕರಿಸುವುದು ಬಹಳ ಪರಿಣಾಮಾಕಾರಿ ಎಂದು ತಜ್ಞರು ತಿಳಿಸುತ್ತಾರೆ . ಇದರ ಆಧಾರದ ಮೇಲೆ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಪ್ರಯೋಗವನ್ನು ಮಾಡಿದರು .ಒಂದಿಷ್ಟು ಜನರನ್ನು ಆಯ್ಕೆ ಮಾಡಿ, ಅವರನ್ನು ಎರಡು ಗುಂಪುಗಳಾಗಿ ವಿಭಾಗಿಸಿ ಒಂದು ಗುಂಪಿಗೆ ದಿನದ ಮೊದಲ ಎಂಟು ಗಂಟೆಗಳ ಕಾಲ (7am to 3pm) ಒಂದು ಬಾರಿ ಮಾತ್ರ ಆಹಾರವನ್ನು ನೀಡಿದರು. ಇನ್ನೊಂದು ಗುಂಪಿಗೆ ದಿನದ ಹನ್ನೆರಡು ಗಂಟೆಗಳ ಕಾಲದಲ್ಲಿ (7am to 7 pm) ಒಂದು ಬಾರಿ ಆಹಾರವನ್ನು ನೀಡಿದರು . ಎರಡೂ ಗುಂಪಿನವರು ತೂಕದಲ್ಲಿ ಯಾವುದೆ ವ್ಯತ್ಯಾಸವನ್ನು ಕಾಣಲಿಲ್ಲ. ಆದರೆ ಐದು ವಾರದ ನಂತರ ಮೊದಲ ಗುಂಪಿನವರ ಇನ್ಸುಲಿನ್ ಪ್ರಮಾಣ ಬಹಳ ಕಡಿಮೆಯಾಗಿತ್ತು . ಹಾಗೆಯೆ ರಕ್ತದೊಡ್ದದ ಉತ್ತಮ ಸ್ಥಿತಿಯಲ್ಲಿತ್ತಲ್ಲದೆ ಹಸಿವೆಯು ಬಹಳ ನಿಯಂತ್ರಣದಲ್ಲಿತ್ತು .ಕೆವಲ ಆಹಾರದ ಸಮಯದಲ್ಲಿನ ಬದಲಾವಣೆಯಿಂದ ಹಾಗೂ ರಾತ್ರಿಯ ಉಪವಾಸದಿಂದ ಜನರ ಪಚನ ಕ್ರಿಯೆಯು ಬಹಳ ಉತ್ತಮವಾಗಿ ಮಾರ್ಪಡಿದ್ದು ಈ ಸಂಶೋಧನೆಗಳಿಂದ ಧೃಢವಾಯಿತು . ಇಂದು ಅನೇಕರು ತಮ್ಮ ಆರೋಗ್ಯಕ್ಕಾಗಿ ಈ ಜೀವನಶೈಲಿಯನ್ನು ಅನುಸರಿಸುತಿದ್ದಾರೆ.

                ನಮ್ಮ ಪುರಾಣಗಳಲ್ಲಿ ಹಾಗೂ ಧರ್ಮಶಾಸ್ತ್ರಗಳಲ್ಲಿ ಏಕಭುಕ್ತವೆಂಬ ವೃತಕ್ಕೆ ಬಹಳ ಮಹತ್ವವನ್ನು ನೀಡಿದ್ದಾರೆ. ಏಕಭುಕ್ತದ ಸ್ವರೂಪವನ್ನು ಸ್ಕಾಂದ ಪುರಾಣದ ವಚನದಿಂದ ವೀರಮಿತ್ರೋದಯದಲ್ಲಿ ಹೀಗೆ ನಿರೂಪಿದ್ದಾರೆ .

                        ದಿನಾರ್ಧಸಮಯೇತೀತೆ ಭುಜ್ಯತೇ ನಿಯಮೇನ ಯತ್ |

                     ಏಕಭಕ್ತಮಿತಿ ಪ್ರೋಕ್ತಂ ಅತಸ್ತತ್ಸ್ಯಾತ್ ದಿವೈವ ಹಿ ||

ಅತ್ರ ಎಕಭುಕ್ತಮಿತಿ ಯೌಗಿಕೇನ ನಾಮ್ನಾ ದ್ವಿತೀಯಭೋಜನನಿವೃತ್ತಿಃ . ತೇನ ದ್ವೀತೀಯಭೋಜನಾಭಾವಸಹಕೃತಂ ದಿವಾಭೋಜನಂ ಎಕಭಕ್ತಶಬ್ದಾರ್ಥಃ.  ದಿನದ ಅರ್ಧಸಮಯ ,ಅಂದರೆ ಮಧ್ಯಾಹ್ನವು ಕಳೆಯುತ್ತಿರಲು ಯಾರು ನಿಯಮೇನ ಭೋಜನ ಮಾಡಿ, ತದನಂತರ ಯಾವುದೆ ಆಹಾರವನ್ನು ಸ್ವೀಕರಿಸದಿದ್ದರೆ ಅದನ್ನು ಎಕಭಕ್ತವೃತವೆಂದು ತಿಳಿಯಬೇಕು ಎಂದು ಇದರ ತಾತ್ಪರ್ಯು. ಚೈತ್ರಾದಿ ದ್ವಾದಶ ಮಾಸಗಳಲ್ಲೂ ಈ ವೃತವನ್ನು ವಿಧಿಸಿ, ಯಾರು ಎಲ್ಲಾ ಮಾಸಗಳಲ್ಲೂ ಈ ವೃತವನ್ನಾಚರಿಸುತ್ತಾರೂ ಅವರಿಗೆ ಅನೇಕ ಫಲವನ್ನು ತಿಳಿಸಿದ್ದಾರೆ . ಮಹಾಭಾರತದಲ್ಲಿ ಯುಧಿಷ್ಠಿರ ಕೃಷ್ಣನನ್ನು  ಕುರಿತು ಎಲ್ಲಾ ಪ್ರಾಣಿಗಳಿಗೂ ಸುಖಕರವಾದ ವೃತವೊಂದನ್ನು ತಿಳಿಸೆಂದು ಕೇಳಿದಾಗ ,ಕೃಷ್ಣನು

                ಯದ್ ದರಿದ್ರಜನಸ್ಯಾಪಿ ಸ್ವರ್ಗ್ಯಂ ಸುಖಕರಂ ಭವೇತ್ |

              ಸರ್ವಪಾಪಪ್ರಶಮನಂ ತತ್ ಶ್ರುಣುಷ್ವ ಯುಧಿಷ್ಠಿರ ||

ಯಾವುದು ಬಡವರಿಗೂ ಸುಖವನ್ನು ಹಾಗೂ ಸ್ವರ್ಗವನ್ನು ಕೊಡುವುದೂ ಅಂತಹ ಒಂದು ವೃತವನ್ನು ತಿಳಿಸುತ್ತೇನೆಂದು ಕಾರ್ತೀಕಾದಿ ಮಾಸದಲ್ಲಿ ಮಾಡುವ ಎಕಭಕ್ತವೃತವನ್ನು ನಿರೂಪಿಸುತ್ತಾನೆ . ಎರಡೂ ಹೊತ್ತು ಆಹಾರವನ್ನು ಸೇವಿಸಿದರೂ ಮಧ್ಯದಲ್ಲಿ (ಮಧ್ಯಾಹ್ನ ಮತ್ತು ರಾತ್ರಿಯ ಊಟದ ಮಧ್ಯದಲ್ಲಿ)  ಯಾವುದೆ ಆಹಾರವನ್ನು ಸೇವಿಸದಿರುದನ್ನೂ ಮಹಾಭಾರತವು ಶ್ಲಾಘಿಸುತ್ತದೆ . ಅಂತಹವನನ್ನು ಸದೋಪವಾಸೀ ಎಂದು ಹೊಗಳುತ್ತದೆ .

                ಅಂತರಾ ಸಾಯಮಾಶಂ ಚ ಪ್ರಾತರಾಶಂ ತಥೈವ ಚ |

              ಸದೋಪವಾಸೀ ಭವತಿ ಯೋ ನ ಭುಂಕ್ತೇಂತರಾ ಪುನಃ ||

Harward school ನ ಮೆಟಾಬೊಲಿಕ್ ತಜ್ಞೆ ಡಾ.ದೆಬೋರಾ ವೆಕ್ಸಲರ್ ' intermittent fasting ನ ಈ ಕ್ರಮದಿಂದ ಅನೇಕ ಆರೋಗ್ಯದ ಸುಧಾರಣೆಗಳನ್ನು ಕಾಣಬಹುದೆಂಬ ವಿಷಯವು ಅನೇಕ ಪ್ರಯೋಗಗಳಿಂದ ಸಿದ್ಧವಾಗಿವೆಯೆಂದು ಅಭಿಪ್ರಾಯ ಪಡುತ್ತಾರೆ . ಭೌತಿಕ ಪ್ರಯೋಜನವನ್ನು ಗರ್ಭದಲ್ಲಿಟ್ಟು ಅಧ್ಯಾತ್ಮವನ್ನು ಮುನ್ನೆಲೆಯಲ್ಲಿರಿ ಪ್ರಾಚೀನರು ಜೀವನಕ್ರಮವನ್ನು ನಿರೂಪಿಸಿದ್ದಾರೆ . ನಮ್ಮ ಹಿರಿಯರು ಅದನ್ನು ಅಳವಡಿಸಿಕೊಂಡಿದ್ದಾರೆ . ಇಂದಿನ ಯುವ ಪೀಳಿಗೆಗೆ ನಮ್ಮ ಆಚರಣೆಗಳ ಗರ್ಭದಲ್ಲಿರುವ ಭೌತಿಕ ಪ್ರಯೋಜವನ್ನು ಆಧಾರ ಸಹಿತವಾಗಿ ತಿಳಿಸುವ ಅನಿವಾರ್ಯತೆ ಎದುರಾಗಿದೆ . ಹಾಗಾದರೆ ಎಲ್ಲಾ ಆಚರಣೆಗಳ ಪ್ರಯೋಜನವನ್ನು ವೈಜ್ಞಾನಿಕವಾಗಿ ನಿರೂಪಿಸುವ ಬಾಧ್ಯತೆಯಿದೆಯೆ ಎಂಬ ಪ್ರಶ್ನೆ ಸಹಜ . ಇಂದು ಅನೇಕರು ಆನೇಕರು ಆ ನಿಟ್ಟಿನಲ್ಲಿ ಪ್ರಯತ್ನವನ್ನು ಪಡುತ್ತಾ ವಿಜ್ಞಾನಾಭಾಸವನ್ನು( pseudo-science) ಜಗತ್ತಿನಲ್ಲಿ ಹಬ್ಬಿಸುತ್ತಾ ಅಪಹಾಸ್ಯಕ್ಕೀಡಾಗುತ್ತಿದ್ದಾರೆ . ಇದು ನಮಗೆ ದೀರ್ಘಕಾಲದಲ್ಲಿ ಆಪತ್ತನ್ನೆ ತಂದೊಡ್ಡುತ್ತದೆ . ಎಲ್ಲದಕ್ಕೂ ವಿಜ್ಞಾನದತ್ತ ಮುಖ ಮಾಡುವ ಅವಶ್ಯಕತೆಯಿಲ್ಲ. ಆದರೆ ನಮ್ಮ ಅನೇಕ ಆಚಾರಣೆಗಳು ಆಧ್ಯಾತ್ಮದ ತಳಹದಿಯಲ್ಲಿ ಮನೋವೈಜ್ಞಾನಿಕ ಹಾಗೂ ಭೌತಿಕ ಮಹತ್ವವನ್ನು ಹೊಂದಿವೆ. ಯಾವುದರ ಮನೋವೈಜ್ಞಾನಿಕತೆಯನ್ನು ಅಥವಾ ಭೌತಿಕ ಪ್ರಯೋಜನವನ್ನು ಜಗತ್ತಿನಲ್ಲಿ ವೈಜ್ಞಾನಿಕ ಪ್ರಾಜ್ಞರೂ ಒಪ್ಪುವಂತೆ ನಿರೂಪಿಸಲು ಸಾಧ್ಯವೋ ಅಲ್ಲಿ ಆಧಾರಸಹಿತವಾಗಿ ಅದನ್ನು ನಿರೂಪಿಸುವ ಪದ್ಧತಿಯು ಯುವಕರಲ್ಲಿ ನಮ್ಮ ಆಚರಣೆಗಳ,ಶಾಸ್ತ್ರಗಳ ಕುರಿತಾಗಿ ಶ್ರದ್ಧೆಯನ್ನು ಮೂಡಿಸಲು ಸಹಾಯಕಸಂವಾದಿವಾಗಬಲ್ಲದು .   

 ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ


 

  

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ