ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ

ರಾಮಾಯಣ ಮಹಾಕಾವ್ಯದ ಧೀರರು ಮಾದರಿಯಾಗಲಿ.


ರಾಮಾಯಣ ಸಾರ್ವಕಾಲಿಕ. ಸದಾ ಪ್ರಸ್ತುತ. ಎಷ್ಟು ತಿಳಿದರೂ ತಿರುಚಿದರೂ ವಾಲ್ಮೀಕಿ ರಾಮಾಯಣ ಜನಜನಿತವಾಗಿಯೇ ಇರುತ್ತದೆ.ಇದು ಬ್ರಹ್ಮದೇವರ ಅನುಗ್ರಹ."ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ| ತಾವತ್ ರಾಮಾಯಣಕಥಾ ಲೋಕೇಷು ಪಚರಿಷ್ಯತಿ"|. ಎಲ್ಲಿಯವರೆಗೆ ಗಿಡಮರಗಳು,ನದಿಪರ್ವತಗಳು ಇರುವವೋ ಅಲ್ಲಿಯವರೆಗೆ ರಾಮನ ಕಥೆ ಇದ್ದೇ ಇರುತ್ತದೆ. ರಾಮಾಯಣದ ಪ್ರತಿಯೊಂದು ಪಾತ್ರಗಳು ವಿಭಿನ್ನ ಆಯಾಮದಲ್ಲಿ ವಿಭಿನ್ನ ಗುಣಗಳನ್ನು ಪ್ರತಿನಿಧಿಸುತ್ತವೆ. ರಾಮಾಯಣದ ಕೇಂದ್ರಬಿಂದು ರಾಮನಾದರೆ, ವೃತ್ತ ಲಕ್ಷ್ಮಣ. ಶ್ರೀನಾರಾಯಣಪಂಡಿತಾಚಾರ್ಯರು ಸಂಗ್ರಹ ರಾಮಾಯಣ ಗ್ರಂಥದಲ್ಲಿ ಲಕ್ಷ್ಮಣನ ಅವತಾರದ ಉದ್ದೇಶವನ್ನು ಸುಂದರವಾಗಿ ನಿರೂಪಿಸಿದ್ದಾರೆ. ಅನಂತೋನಂತ ಪರ್ಯಂಕಃ ಪರಿಚರ್ಯಾರ್ಥಮೀಶಿತುಃ ರಾಮನ ಸೇವೆಗಾಗಿಯೇ ಲಕ್ಷ್ಮಣನ ಜನ್ಮ. ಅವನಿಗೆ ರಾಮನ ಹೊರತು ಬೇರೆಲ್ಲರೂ ಅಪ್ರಧಾನರು, ಹೆತ್ತ ತಾಯಿ, ಹೆಂಡತಿಯೂ ಸಹ.  ಅಂತಹ ಅಸದೃಶವಾದ ಭಾತೃಭಕ್ತಿಯನ್ನು ಲೋಕಕ್ಕೆ ತೋರಿಸಿದವನು ಲಕ್ಷ್ಮಣ. ರಾಮನಿಗೂ ಲಕ್ಷಣನೆಂದರೇ ಬಹಳ ಪ್ರೀತಿ. ಬಾಲ್ಯದಲ್ಲಿ ತನ್ನ ಪಕ್ಕದಲ್ಲಿ ಲಕ್ಷ್ಮಣನಿಲ್ಲದಿದ್ದರೆ ರಾಮನು ನಿದ್ರಿಸುತ್ತಿರಲಿಲ್ಲ, ಲಕ್ಷ್ಮಣ ಉಣ್ಣದೇ ತಾನು ಉಣ್ಣುತ್ತಿರಲಿಲ್ಲ. ಮೃಷ್ಟಮನ್ನಮುಪಾನೀತಂ ಅಶ್ನಾತಿ ನ ಹಿ ತಂ ವಿನಾ' .ಲಕ್ಷ್ಮಣನಿಗೆ ರಾಮನಲ್ಲಿ ಅಪರಿಮಿತವಾದ ಭಕ್ತಿ ಹಾಗೆಯೇ  ತಮ್ಮನಲ್ಲಿ ರಾಮನಿಗೂ ಅಸದೃಶವಾದ ಪ್ರೀತಿ ಆದ್ದರಿಂದಲೇ,  ಪಟ್ಟಾಭಿಷೇಕ ಸಮಯದಲ್ಲಿ ರಾಮನು ಲಕ್ಷ್ಮಣನಿಗೆ, ನೀನು ಸಹ ನನ್ನೊಟ್ಟಿಗೆ ರಾಜ್ಯವನ್ನಾಳು ಎಂದೆನ್ನುತ್ತಾನೆ . ಲಕ್ಷ್ಮಣನಿದ್ದರೆ ರಾಮನಿಗೆ ತಂದೆಯ ನೆನಪೂ ಬರುತ್ತಿರಲಿಲ್ಲ, ಯಂ ದೃಷ್ಟ್ವಾ ರಾಘವೋ ನೈವ ವೃತ್ತಮಾರ್ಯಮನುಸ್ಮರೇತ್ ಇದು ಸೀತೆಯ ಮಾತು. ಸುಖದಲ್ಲಿ ಮಾತ್ರ ಸಹಭಾಗಿಯಾಗಿ ದುಃಖದಲ್ಲಿ ಕೈಬಿಡುವ ಮನಸ್ಥಿತಿ ಇಂದಿನ ಬಂಧುಗಳದ್ದು, ಆದರೆ ರಾಮ ಕಾಡಿಗೆ ಹೊರಟು ನಿಂತಾಗ,ಬೇಡವೆಂದರೂ ಹಠ ಮಾಡಿ ಕಾಡಿಗೆ ಬಂದವನು ಲಕ್ಷ್ಮಣ. ನೀನಿಲ್ಲದ ಸಂಪತ್ತು, ರಾಜ್ಯಾಧಿಕಾರವೆಲ್ಲ ತೃಣಕ್ಕೆ ಸಮಾನ ಎಂದು ರಾಜ್ಯ ಸುಖವನ್ನು ಧಿಕ್ಕರಿಸಿದ ಧೀರ ತ್ಯಾಗಿ. ತಾಯಿ ಮತ್ತು ಮಡದಿಗೂ ಲಕ್ಷ್ಮಣನ ಈ ಪ್ರವೃತ್ತಿ ಆಶ್ಚರ್ಯವನ್ನು ಉಂಟುಮಾಡಲಿಲ್ಲ. ಹಾಗಾಗಿಯೆ ಕಾಡಿಗೆ ಹೋಗಲು ಅಪ್ಪಣಿಗಾಗಿ ತಾಯಿಯ ಕಾಲು ಹಿಡಿದಾಗ ಸುಮಿತ್ರೆ ಹೇಳುವ ಮಾತು ಲಕ್ಷ್ಮಣನ ಜೀವನದ ಅರ್ಥವನ್ನು ತೆರೆದಿಡುತ್ತದೆ.   ಸೃಷ್ಟಸ್ತ್ವಂ ವನವಾಸಾಯ ಸ್ವನುರಕ್ತಃ ಸುಹೃಜ್ಜನೇ. ನೀನು ಹುಟ್ಟಿದ್ದೆ ವನವಾಸ ಕಾಲದಲ್ಲಿ ರಾಮನ ಜೊತೆಯಾಗಿರಲು. ಅಣ್ಣನನ್ನು ಎಂದೂ ಅಗಲಬೇಡ ಎಂದು ಸುಮಿತ್ರೆ ಆಶೀರ್ವದಿಸುತ್ತಾಳೆ. ಲಕ್ಷ್ಮಣನು ಸುಮಿತ್ರೆಯ ಆ ಮಾತನ್ನು ಚಾಚೂ ತಪ್ಪದೆ ಪಾಲಿಸಿದ.  ಆಹಾರ- ನಿದ್ದೆಗಳ ಪರಿವಿಲ್ಲದೆ, ಆಯಾಸವೆನ್ನದೇ ರಾಮಸೀತೆಯರ ಸೇವೆಯನ್ನು ಭಕ್ತಿ ಭಾವದಿಂದ ಮಾಡಿದ.

ಇಂದಿನ ಕಾಲದ ದುರ್ಬುಧ್ಧಿ ಜೀವಿಗಳು ರಾಮಾಯಣದ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಾರೆ. ಲಕ್ಷ್ಮಣನು ಶೂರ್ಪಣಖೆಯನ್ನು ವಿರೂಪಗೊಳಿಸಿದ್ದು ತಪ್ಪೆಂದೂ,  ಸೀತೆಯಲ್ಲಿ ಬೇರೆ ರೀತಿಯಾದ ಭಾವನೆ ಹೊಂದಿದ್ದನೆಂದೂ ಆರೋಪ ಮಾಡುತ್ತಾರೆ. ಇವರ ಮಟ್ಟಕ್ಕೆ  ಇಳಿದು ತಿಳಿಹೇಳುತ್ತಾ ಕುಳಿತರೆ ವಾಲ್ಮೀಕಿಗಳೂ ಕೋಪಿಸಿಕೊಂಡಾರು. ಶೂರ್ಪಣಖೆಯು ಸೀತೆಯನ್ನು ತಿನ್ನಲು ಬಂದದ್ದು ಇವರಿಗೆ ಕಾಣುವುದಿಲ್ಲ. ಸೀತೆಯ ಆಭರಣವನ್ನು ಗುರುತಿಸುವ ಸಂದರ್ಭದಲ್ಲಿ ಲಕ್ಷ್ಮಣ ಹೇಳುವ ಮಾತು ಇವರ ತಲೆಯಾಳಕ್ಕೆ ಇಳಿಯುವುದಿಲ್ಲ. ಈ ರೀತಿಯಾಗಿ ರಾಮಾಯಣದಲ್ಲಿ ತ್ಯಾಗಕ್ಕೆ ಪ್ರತೀಕದಂತಿರುವ ಲಕ್ಷ್ಮಣನು ತ್ಯಾಗಕ್ಕೆ ಹೊಸ ಭಾಷ್ಯ ಬರೆದ. 

ರಾಮಾಯಣದ ಪ್ರತಿಯೊಂದು ಪಾತ್ರಗಳು ಮೌಲ್ಯಗಳನ್ನು ಎತ್ತಿಹಿಡಿಯಲು ತಾ ಮುಂದು ತಾ  ಮುಂದು ಎಂದು ಮುಂದೆ ಬರುತ್ತವೆ. ಲಕ್ಷಣ, ತ್ಯಾಗ, ಭಕ್ತಿಯ ಪರಾಕಾಷ್ಠೆಯನ್ನು ಪ್ರದರ್ಶಿಸಿದ. ಭಕ್ತಿ ಮತ್ತು ತ್ಯಾಗ ಗುಣಗಳಿದ್ದರೂ ತನ್ನದಲ್ಲದ ತಪ್ಪಿಗೆ ನಿರಂತರ ಎಲ್ಲರ ಸಂಶಯ  ದೃಷ್ಟಿಯಿಂದ ಘಾಸಿಗೊಂಡವನು ಭರತ .ಕೈಕೇಯಿಯ ಮಗ ಮುಂದೆಂದೋ ಒಂದು ತನಗೆ ತೊಡಕಾಗುವನೆಂದು ದಶರಥ ಮೊದಲೇ ತಿಳಿದಿದ್ದೇನೆ? ಗೊತ್ತಿಲ್ಲ.  ಅಥವಾ ಕೈಕೇಯಿಗೆ ಕೊಟ್ಟ ವರ ತನಗೆ ತೊಡಕಾಗಬಹುದೆಂದು ಊಹಿಸಿದ್ದನೇ?  ಹೀಗೆ ಸಂಶಯ ಬರುವುದು ದಶರಥನು ಹೋಮದ ಪಾಯಸವನ್ನು ವಿತರಿಸುವ ರೀತಿಯಿಂದ. ಎಲ್ಲರೂ ತಿಳಿದ ಹಾಗೆ ಅವನು ಸರಿಯಾಗಿ ಮೂರು ಭಾಗ ಮಾಡಿ  ಪಾಯಸವನ್ನು ವಿತರಿಸಲಿಲ್ಲ, ವಾಲ್ಮೀಕಿಗಳು ಹೀಗೆ ನಿರೂಪಿಸಿದ್ದಾರೆ. ಮೊದಲು ಸಂಪೂರ್ಣ ಪಾಯಸದ ಅರ್ಧ ಭಾಗವನ್ನು ಕೌಸಲ್ಯೆಗೆ ಕೊಡುತ್ತಾನೆ. ಉಳಿದ ಭಾಗವನ್ನು ಮತ್ತೆ ಅರ್ಧಭಾಗವನ್ನು ವಿಭಾಗಿಸಿ ಒಂದು ಭಾಗವನ್ನು ಸುಮಿತ್ರೆಗೆ ಕೊಡುತ್ತಾನೆ. ಇನ್ನು ಉಳಿದ ಅರ್ಧಭಾಗವನ್ನು ಪುನಹ ವಿಂಗಡಿಸಿ ಅದರಲ್ಲಿ ಒಂದು ಭಾಗವನ್ನು ಕೈಕೇಯಿಗೆ, ಇನ್ನೊಂದು ಭಾಗವನ್ನು ಸುಮಿತ್ರೆಗೆ ಕೊಡುತ್ತಾನ. “ತಸ್ಮಾದದರ್ಧಾದಸೌ ಅರ್ಧಂ ಕೈಕೇಯ್ಯೈ ಪ್ರತಿದತ್ತವಾನ್” ಎಂದು ವಾಲ್ಮೀಕಿಗಳ ಮಾತು. ಪ್ರೀತಿ ಪಾತ್ರಳಾದರೂ ಪಾಯಸದ ಸ್ವಲ್ಪ ಭಾಗವನ್ನು ಮಾತ್ರ ಕೊಟ್ಟಿದ್ದರ ಹಿಂದೆ ಸಂದೇಹ ಕೆಲಸ ಮಾಡಿರಲಿಕ್ಕೂ ಸಾಕು, ಈ ರೀತಿ ಸಂದೇಹ ಬೀಜದಿಂದಲೇ  ಹುಟ್ಟಿದವನು ಭರತ. ಅದ್ದರಿಂದಲೇ ಏನೋ ತನ್ನ ಯೌವನದ ಬಹಳ  ಸಮಯವನ್ನು ಮಾತುಲರ ಮನೆಯಲ್ಲೇ ಕಳೆದ. ರಾಮನ ಪಟ್ಟಾಭಿಷೇಕವು ಅವನಿರದಿದ್ದಾಗಲೇ ನಡೆಯಿತು. ಅವನಿದ್ದಿದ್ದರೆ ಖಂಡಿತವಾಗಿಯೂ  ಕೈಕೇಯಿಗೆ ಬೈದು ರಾಮನಿಗೆ ಪಟ್ಟಾಭಿಷೇಕ ಮಾಡಿಸುತ್ತಿದ್ದ. ಅದರೆ ಅವನನ್ನು ನಂಬುವವರು ಯಾರು, ತಾಯಿ ಮಗ ಸೇರಿ  ಹೂಡಿದ ಸಂಚೆಂದೇ ಎಲ್ಲರೂ ತಿಳಿದರು.ಗುಹನೂ ಸಂಶಯ ಪಟ್ಟ, ವಶಿಷ್ಟರೂ ಭಾರದ್ವಾಜರೂ ಸಂಶಯ ಪಟ್ಟರು. ಸ್ವಂತ ಅಣ್ಣನಾದ ಲಕ್ಷ್ಮಣನು ಸಂದೇಹ ವ್ಯಕ್ತಪಡಿಸಿದ.ಇಂತಹ ಎಲ್ಲ ಸಂದರ್ಭಗಳಲ್ಲೂ ಭರತನು ಧೃತಿಗೆಡದೆ ತನ್ನ ವರ್ತನೆಗಳಿಂದಲೇ ಎಲ್ಲರ ಮನಸ್ಸನ್ನು ಗೆದ್ದನು. ನಮ್ಮ ಜೀವನದಲ್ಲೂ ಕೆಲವೊಮ್ಮೆ ನಮ್ಮ ತಪ್ಪುಗಳಿಲ್ಲದ್ದಾಗ್ಯೂಅಪಮಾನಗಳು ಬಂದೊದಗುತ್ತವೆ. ಆ ಸಂದರ್ಭದಲ್ಲಿ ನಮ್ಮ ವರ್ಶನೆ ಹೇಗಿರಬೇಕೆಂಬುವುದಕ್ಕೆ ಭರತನ ಜೀವನವೇ ನಮಗೆ ಸ್ಪೂರ್ತಿ .ಒಂದು ಸಂದರ್ಭ, ರಾಮನನ್ನು ಹಿಂತಿರುಗಿ ಕರೆತರಲು ಬಂದಾಗ ಭಾರದ್ವಾಜರ ಆಶ್ರಮದಲ್ಲಿ ತಂಗಿದ್ದ. ಅವರು ರಾಜನಿಗೆ ಬೇಕಾದ ಆಸನವನ್ನು, ಭತ್ತ ಚಾಮರಾದಿಗಳನ್ನು ತಂದಿರಿಸಿದರು. ಆದರೆ ಭರತನು  ಇದೆಲ್ಲವೂ ಅಣ್ಣನಾದ ರಾಮನಿಗೆ ಮೀಸಲು ಎಂದು ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಂಡ. ಹೀಗೆ ಗುರುಗಳು ಮಾಡಿದ ಪರೀಕ್ಷೆಯನ್ನು ಗೆದ್ದನು. ತನ್ನ ಮನಸ್ಸಿನ ಯಾವ ಮೂಲೆಯಲ್ಲಿ ರಾಜಾಧಿಕಾರೆ ಇಲ್ಲವೆಂದು ತೋರಿಸಿದ. ರಾಮನು ಬರಲು ಒಪ್ಪದಿದ್ದಾಗ ಅವನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ನಂದಿಗ್ರಾಮದಲ್ಲಿದ್ದು, ರಾಮನಿಗಿಲ್ಲದ  ಭೋಗ ತನಗೂ ಬೇಡವೆಂದು, ಋಷಿ ಜೀವನ ನಡೆಸುತ್ತ ರಾಜ್ಯಭಾರವನ್ನು ಮಾಡಿದನು ರಾಜ ವೈಭೋಗದ ಅವಕಾಶವಿದ್ದರೂ ಗೆಣಸುಗಳನ್ನು ತಿಂದುಕೊಂಡು, ನೆಲದ ಮೇಲೆ ಮಲುಗುತಿದ್ದನು. ಇಂದಿನ  ರಾಜಕೀಯ ಪರಿಸ್ಥಿತಿಯಲ್ಲಿ ಇಂತಹ ಒಬ್ಬ ವ್ಯಕ್ತಿ ಇದ್ದನೆಂದು ಊಹಿಸುವುದೂ ಕಷ್ಟ ಮನೋವಿಕಾರವನ್ನು ಹೊಂದುವ ಎಲ್ಲ ಸಾಧ್ಯತೆಗಳಿದ್ದರೂ, ಭರತನು ಧೃಡಚಿತ್ತವಾಗಿ ಅಣ್ಣನಿಗಾಗಿ ಕಾಯುತ್ತ ರಾಜ್ಯವನ್ನು ಬಂದಾಗ ರಾಮನಿಗೆ ಒಪ್ಪಿಸಿದ. ಇಂತಹವರಲ್ಲವೇ ಲೋಕದ ಧೀರರು. “ವಿಕಾರಹೇತೌ ಸತಿ ವಿಕ್ರಿಯಂತೇ ಯೆಷಾಂ ನ ಚೇತಾಂಸಿ ತ ಎವ ಧೀರಾಃ..”  . ಜಗತ್ತಿನಲ್ಲಿ ಭಯಂಕರ ರೋಗ ನಿಮಿತ್ತವಾಗಿ ವಿಪ್ಲವ ಎದುರಾಗುತ್ತಿರುವ ಈ ಸಂದರ್ಭದಲ್ಲಿಯೂ ಅನೇಕರು ಸ್ವಾರ್ಥದಿಂದ ಚಿಂತಿಸುತ್ತಾ ಅನೇಕರನ್ನು ವಂಚಿಸುತ್ತಿದ್ದಾರೆ. ಅಧಿಕಾರ ಹಣ ಮುಂತಾದವುಗಳ ಆಸೆಯಿಂದ ಅನೇಕರ ಜೀವದ ಜೊತೆಗೆ ಆಟವಾಡುತ್ತಿದ್ದಾರೆ. ನಮ್ಮ ಸಮಾಜ ಇಂತಹ ಸ್ವಾರ್ಥ ದಿಕ್ಕಿನಲ್ಲಿಯೇ ಮುಂದುವರಿಯಬಾರದು ಎಂದರೆ ಎಂತಹ ತ್ಯಾಗ ಮೂರ್ತಿಗಳ ಜೀವನ ಚರಿತ್ರೆ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿ ಮುಂದಿನ ಪೀಳಿಗೆಯಲ್ಲಿ ಇಂತಹ ಗುಣಗಳ ಬೀಜವು ಬಿತ್ತು ವಂತಾಗಬೇಕು. ಇಂತಹ  ತ್ಯಾಗಮೂರ್ತಿಗಳು ನಮ್ಮ ಸಮಾಜಕ್ಕೆ ಮಾದರಿಯಾಗಬೇಕು.


Comments

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting