ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ


 ಶತಮಾನದ ಸಂತ - ನೆನೆದರೆ ಅವರ ಗುಣ ನಾಶವಾಗುವುವು ದುಃಖಗಳ ಗಣ   -     
                                       ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ


ಪೂಜ್ಯ ಗುರುಗಳಾದ ವಿಶ್ವೇಶತೀರ್ಥ ಶ್ರೀಪಾಂದಗಳವರ ಜೀವನವನ್ನು ಬರವಣಿಗೆಯಿಂದ ತಿಳಿಯಲು ಸಾಧ್ಯವಿಲ್ಲ . ಅದನ್ನು ಅನುಭವಿಸಿಯೇ ತಿಳಿಯಬೇಕು . ಆದರೆ ವಾಕ್ ಶುದ್ಧಿಗಾಗಿ , ಗುರುಗಳ  ಅನುಗ್ರಹಕ್ಕಾಗಿ  ಅವರ ಚರಿತ್ರೆಯನ್ನು ಬರೆಯುವುದು ಪೂರ್ವಾಚಾರ್ಯರು ತಿಳಿಸಿಕೊಟ್ಟ ಕ್ರಮ. ಆ ನಿಟ್ಟಿನಲ್ಲಿ ಈ ಒಂದು ಉಪಕ್ರಮ.

ಜ್ಞಾನದ ಪ್ರಖರತೆ .

ಸ್ವಾಮಿಗಳನ್ನು, ಶತಾವಧಾನಿಗಳೆನ್ನಬಹುದು . ನೂರು ತರಹದ ಚಿಂತನೆಗಳು ಯಾವ ಕಾಲದಲ್ಲೂ ಸ್ವಾಮಿಗಳ ಮನಸ್ಸಿನ್ನಲ್ಲಿ ನಡೆಯುತ್ತಿರುತ್ತಿತ್ತು.  ಸ್ವಾಮಿಗಳಿಗೆ ಪ್ರತಿದಿನ ಅನೇಕ ಕಾರ್ಯಕ್ರಮಗಳು . ಅದರ ಮಧ್ಯದಲ್ಲಿ ಪಲಿಮಾರು ಶ್ರೀಪಾದರು ವಿದ್ಯಾಮಾನ್ಯತೀರ್ಥರ ಆರಾಧನಾ ನಿಮಿತ್ತ ಆಯೋಜಿಸುತ್ತಿದ್ದ ಅತ್ಯಂತ ಕಠಿನ ವಿಷಯದ ವಾಕ್ಯಾರ್ಥಗೋಷ್ಠಿಯಲ್ಲಿ  ಪಾಲ್ಗೊಳ್ಳುವಿಕೆ.  ಮಹಾಯತಿಗಳ ವಿದ್ವಾಂಸರ ದಿವ್ಯೋಪಸ್ಥಿತಿ . ದೇಶದ ಮೂಲೆ ಮೂಲೆಗಳಿಂದ  ಅನೇಕ ಶ್ರೇಷ್ಠ ವಿದ್ವಾಂಸರ ಸಮಾಗಮ . ಇಂತಹ ಗೋಷ್ಥಿಯು ನಡೆಯುತ್ತಿರುವಾಗ ಎಲ್ಲಿಂದಲೋ ಬೇರೊಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದ ಶ್ರೀಪಾದಂಗಳವರು, ತತ್ ಕ್ಷಣವೆ ಆ ಗೋಷ್ಠಿಯ ಜಟಿಲವಾದ ವಿಷಯವನ್ನು ಗ್ರಹಿಸಿ  ಅಲ್ಲಿ ಬಂದಿರುವ ಸಂದೇಹಗಳಿಗೆ ಉತ್ತರಿಸುತ್ತಿದ್ದ ರೀತಿ ಅಸದೃಶ . ಇದರಿಂದ ಅವರಿಗಿದ್ದ ಶಾಸ್ತ್ರದ ಆಳಜ್ಞಾನ , ಪ್ರಮೇಯಗಳ ಸ್ಪಷ್ಟತೆಯನ್ನು ಊಹಿಸಬಹುದು .ವಾದ-ಪ್ರತಿವಾದಗಳನ್ನು ಅರ್ಥೈಸಿಕೊಳ್ಳುವುದೆ ಅತ್ಯಂತ ಕಠಿನ . ಅನೇಕ ದಿನ ತಯಾರಿನಡೆಸಿದರೂ ಪಂಡಿತರಿಗೂ ಉತ್ತರಿಸಲೂ  ಕಷ್ಟವಾಗುತ್ತಿದ ಪ್ರಶೆಗಳನ್ನು ಸ್ವಾಮಿಗಳು ಯಾವುದೇ ತಯಾರಿಯಿಲ್ಲದೆ ಗ್ರಹಿಸಿ ಉತ್ತರಿಸುತ್ತಿದ್ದ ರೀತಿ ಎಲ್ಲಾ ಪಂಡಿತರಿಗೂ ಆಶ್ಚರ್ಯವನ್ನುಂಟುಮಾಡುತ್ತಿತ್ತು . ವಿದ್ಯಾಮಾನ್ಯತೀರ್ಥರು  ಸ್ವಾಮಿಗಳ ಇಂತಹ ಪ್ರತಿಭೆಯನ್ನು ಚಿಕ್ಕ ವಯಸ್ಸಿಯನ್ನಲ್ಲಿಯೆ ಗುರುತಿಸಿದ್ದರಿಂದಲೆ ಅವರನ್ನು ಮಾಧ್ವರಾದ್ಧಾಂತ ಸಭೆಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು . ಅನಂತರ ಗುರುಗಳ ಆಶೀರ್ವಾದದ ಬಲದಿಂದ ಆಗಮತ್ರಯ ಸಮ್ಮೇಳನ ಮುಂತಾದ ಅನೇಕ ದೊಡ್ಡ ಸಭೆಗಳಿಗೆ ಚಿಕ್ಕ ವಯಸ್ಸಿನಲ್ಲಿಯೆ ಅಧ್ಯಕ್ಷರಾಗಿ ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸಿದರು.

ಪಾಠದ ನಿಷ್ಠೆ.

ಇತ್ತಿಚ್ಚಿನ ಕಾಲದಲ್ಲಿ ಪೂಜ್ಯರು ಮಾಡಿರುವಷ್ಟು ಶ್ರೀಮನ್ನ್ಯಾಯಸುಧಾದಿಗ್ರಂಥಗಳ ಪಾಠಗಳನ್ನು ಮಾಡಿದವರೆ ಯಾರೂ ಇಲ್ಲ ಎಂದರೆ ಯಾವುದೇ ಅತಿಶಯೋಕ್ತಿಯಿಲ್ಲ. ಸ್ವಾಧ್ಯಾಯ ಪ್ರವಚನ ಎವ ಇತಿ ನಾಕೋ ಮೌದ್ಗಲ್ಯಃ . ತದ್ ಹಿ ತಪಃ ತದ್ ಹಿ ತಪಃ ಎಂಬ ಉಪನಿಷತ್ತಿನ ವಾಣಿಯನ್ನು ಜೀವನದಾದ್ಯಂತ ಪಾಲಿಸಿದ್ದಾರೆ. "ಶ್ರವಣಾದಿ ವಿನಾ ನೈವ ತಿಷ್ಠೇತ್ ಕ್ಷಣಮಪಿ ಕ್ವಚಿತ್ " ಎಂಬ ಆದೇಶವನ್ನು ಶಿರಸಾ ವಹಿಸಿ ಪಾಲಿಸಿರುವ ಯತಿಶ್ರೇಷ್ಠರಿವರು.  ಪೂಜ್ಯರಿಗೆ  ಶ್ರೀಮನ್ನ್ಯಾಯಸುಧಾ ಗ್ರಂಥವು ರಕ್ತಗತ . ಇವರ ಪಾಠವು ಪಂಡಿತರಿಗೂ ಸಾಮಾನ್ಯರಿಗೂ ಅರ್ಥವಾಗುವಂತೆ ಇರುತ್ತಿತ್ತು . ಪಂಡಿತರಿಗೂ ವಿಶೇಷ ಅರ್ಥವನ್ನು ಕೊಡುತ್ತಿತ್ತು . ಸಾಮಾನ್ಯರಿಗೆ ತತ್ವದ ಸಾರವನ್ನು ಉಣಿಸುತ್ತಿತ್ತು . ಇದನ್ನು ಗಮನಿಸಿದರೆ ನಾರಾಯಣ ಪಂಡಿತಾಚಾರ್ಯರ " ಬಾಲಸಂಘಮಪಿ ಬೋಧಯತ್ ಭೃಶಂ ದುರ್ನಿರೂಪವಚನಂ ಚ ಪಂಡಿತೈಃ '  ಎಂಬ ಮಾತು ನೆನಪಿಗೆ ಬರುತ್ತದೆ . ಪಾಠ ಮಾಡುವುದಲ್ಲದೆ ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಪ್ರತಿಯೊಬ್ಬರಿಗೂ ಅನುವಾದ ಚಿಂತನೆಯನ್ನು ಮಾಡಿಸುತಿದ್ದರು .ಅನುವಾದ ಮಾಡಲು ಕಷ್ಟಪಡುತ್ತಿದ್ದ ಕೆಲವರನ್ನು  ಹುರುದುಂಬಿಸಿ , ಅನುವಾದ ಮಾಡಲು ಸಹಾಯಮಾಡುತ್ತಿದ್ದರು . ಇದು ಅವರ ಜೀವನದ ಸಿದ್ದಾಂತವೆ ಆಗಿತ್ತು .ಯಾರನ್ನೂ ಬಿಡದೆ ,ಎಲ್ಲರನ್ನೂ ತಮ್ಮೊಟ್ಟಿಗೆ ಕರೆದುಕೊಂಡುವ ಹೋಗುವ ಗುಣವನ್ನು ಅವರ ಪಾಠದಲ್ಲೂ ಕಾಣಬಹುದು . ಇವರು ಜಗತ್ತಿನ  ಎಲ್ಲ ಗುರುಗಳಿಗೆ ಆದರ್ಶ. 

ಪ್ರವಚನ :

ಸ್ವಾಮಿಗಳ ಪ್ರವಚನವೆಂದರೆ ಆಧ್ಯಾತ್ಮರಸಿಕರಿಗೆ ರಸದೌತಣ. ಧಾರ್ಮಿಕ ಸಭೆಗಳಿರಲಿ ,ಲೌಕಿಕ ಸಭೆಗಳಿರಲಿ , ಸಾಮಾಜಿಕ ಸಭೆಗಳಿರಲಿ, ರಾಜಕಿಯ, ಸಭೆಗಳಿರಲಿ  ಅದಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ,ಸರಳ ದೃಷ್ಟಾಂತಗಳಿಂದ ಸುಂದರವಾದ ಕಥೆಗಳನ್ನು ಉಪಯೋಗಿಸಿ  ಪ್ರಕೃತ ಸಂದರ್ಭಕ್ಕೆ ಸಮನ್ವಯ ಮಾಡಿ ತೋರಿಸಿ ಸಂದೇಶ ನೀಡುವುದು ಅವರ ವಿಶೇಷತೆ . ಅವರು ಘಂಟೆಗಟ್ಟಲೆ ಪ್ರವಚನ ಮಾಡುತ್ತಿರಲಿಲ್ಲ , ಹೇಳಬೇಕಾದ ಎಲ್ಲಾ ವಿಷಯವನ್ನು ಚುಟುಕಾಗಿ ಸ್ವಲ್ಪ ಕಾಲದಲ್ಲಿಯೆ ವಿವಿಧ ಉಪಮೆಗಳೊಂದಿಗೆ ಹೇಳಿ ಜನರ ಮನಸ್ಸನ್ನು ಮುಟ್ಟುತ್ತಿದ್ದರು . ಅದಕ್ಕೊಂದು ನಿದರ್ಶನವೆಂದರೆ ಅವರು ಹಿಂದೂ ಧರ್ಮದ ವಿಷಯವಾಗಿ ನೀಡುತ್ತಿದ್ದ ಸಂದೇಶ. ಅದರ ಒಂದು ಪುಟ್ಟ ನಿದರ್ಶನ ಇಲ್ಲಿದೆ. ಶ್ರೀರಂಗ ಮೊದಲಾದ ದೇವಸ್ಥಾನಗಳಲ್ಲಿ ಗರ್ಭಗುಡಿ ಏಳು ಪ್ರಾಕಾರಗಳಿರುತ್ತವೆ . ಹಾಗೆಯೆ ಹಿಂದೂ ಧರ್ಮದಲ್ಲೂ ಅನೇಕ ಜಾತಿ ಮತಗಳೆಂಬ ಅನೇಕ ಪ್ರಾಕಾರಗಳಿವೆ . ಯಾವುದೂ ಯಾವುದಕ್ಕೂ ವಿರೋಧಿಯಲ್ಲ ,ಹೊರತು ಪರಸ್ಪರ ಪೂರಕವೆ. ಹಾಗೆಯೆ ರಾಷ್ಟ್ರ ಭಕ್ತಿ , ಸಮಾಜ ಭಕ್ತಿ, ಧರ್ಮ ಭಕ್ತಿ,ಜಾತಿ ಭಕ್ತಿ ಇವೆಲ್ಲವೂ ಪರಸ್ಪರ ಪೂರಕವಾಗಬೇಕು. ಮೂದಲು ರಾಷ್ಟ್ರಭಕ್ತಿ,ನಂತರ ಸಮಾಜ ಭಕ್ತಿ , ನಂತರ ತನ್ನ ಜಾತಿ ಭಕ್ತಿ, ನಂತರ ವ್ಯಕ್ತಿಯಾಗಬೇಕು ,ಆಗ ರಾಷ್ಟ್ರ ಮತ್ತು ಹಿಂದೂ ಧರ್ಮದ ಉದ್ಧಾರ ಸಾಧ್ಯ ಎಂದು ವಿಶಿಷ್ಟವಾಗಿ ಯಾರಿಗೂ ಸಂದೇಹ ಬರದಂತೆ ಬೋಧಿಸುತ್ತಿದ್ದರು . ಹಾಗಾಗಿ ಹಿಂದು ಧರ್ಮ ಎಂದಿಗೂ ಒಡೆಯ ಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದ್ದೆ  ವೀರಶೈವ ಲಿಂಗಾಯತ ಧರ್ಮ ಭಿನ್ನವಾಗುವ ಸಂದರ್ಭ ಬಂದಾಗ ತಮಗೆ ಸಂಬಂಧಿಸದ್ದಲ್ಲವೆಂದು ಅನೇಕ ರಾಜಕಾರಣಿಗಳು ಬುದ್ಧಿ ಜೀವಿಗಳು ಆಕ್ಷೇಪವೆತ್ತಿದಾಗಲೂ ಅದನ್ನು ಲೆಕ್ಕಿಸದೇ ,ಆ ಎರಡೂ ಜಾತಿಗಳು ಅಣ್ಣ ತಮ್ಮಂದಿರಂತೆ ಇರಬೇಕೆಂಬುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಮೂಲಕ ಸ್ವಾಮಿಗಳು  ಕೇವಲ ಉಪದೇಶ ವ್ಯಕ್ತಪಡಿಸದ್ದಲ್ಲದೆ ಅದನ್ನು ಅನುಷ್ಠಾನಗೊಳಿಸಿದರು . ಅಷ್ಟೆ ಅಲ್ಲದೆ ಜೈನ ,ಸಿಖ್ಖ ಧರ್ಮಗಳು ಹಿಂದೂ ಧರ್ಮದ ಅಂಗಗಳೆಂದು ಪ್ರತಿಪಾದಿಸುತ್ತಿದ್ದರು . ಹಿಂದೂ ಧರ್ಮದ ಒಗ್ಗಟ್ಟಿಗೆ ತೊಡಕಾಗಿದ್ದ ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜೀವನ ಪರ್ಯಂತ ಹೋರಾಟ ಮಾಡಿದರು . "ಹಿಂದವಃ ಸೋದರಾಃ ಸರ್ವೇ ನ ಹಿಂದುಃ ಪತಿತೋ ಭವೇತ್" ಎಂಬ ಘೋಷವಾಕ್ಯವನ್ನು ಮೊಳಗಿಸಿ ಎಲ್ಲರನ್ನು ಒಗ್ಗುಡಿಸುವ ಪ್ರಯತ್ನವನ್ನು ಮಾಡಿದರು .

ಶ್ಲೋಕ ರಚನೆ:

ಕೆಲವು ವಿದ್ವಾಂಸರು ಕೇವಲ ಶಾಸ್ತ್ರಾರ್ಥಗಳಲ್ಲಿ ಪ್ರಾವಿಣ್ಯವನ್ನು ಹೊಂದಿರುತ್ತಾರೆ , ಕೆಲವರು ಸಾಹಿತ್ಯದಲ್ಲಿ ವಿದ್ವತ್ತೆಯನ್ನು ಹೊಂದಿರುತ್ತಾರೆ. ಇವರೆಡರಲ್ಲೂ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ತೀರ ವಿರಳ . ಅದರಲ್ಲೂ ಶಾಸ್ತ್ರಾರ್ಥಸಭೆಗಳಲ್ಲೂ ಭಾಗವಹಿಸಿ  , ರಮಣಿಯವಾದ ಚೇತೋಹಾರಿಯಾದ ಶ್ಲೋಕಗಳನ್ನು ರಚಿಸುವ ಸಾಮಾರ್ಥವನ್ನು ಹೊಂದಿರುವವರು ವಿರಳಾತಿವಿರಳರು . ಪೂಜ್ಯ ಗುರುಗಳು ಅಂತಹ ಅಸಾಮಾನ್ಯ ಪ್ರತಿಭೆಯನ್ನು ಹೊಂದಿದ ವಿದ್ವಾಂಸರು . ಸಭೆಯಲ್ಲಿಯೆ ಕುಳಿತು ಸಂದರ್ಭಕ್ಕೆ ತಕ್ಕಂತಹ , ಅಲಂಕಾರಗಳಿಂದ ಕೂಡಿದ , ಅನೇಕಾರ್ಥಗಳನ್ನು ಕೊಡುವ ರಮಣಿಯವಾದ ಶ್ಲೋಕಗಳನ್ನು ರಚಿಸುವ ವಿಷಯದಲ್ಲಿ ಗುರುಗಳಿಗೆ ಗುರುಗಳೇ ಸಾಟಿ. ತಮ್ಮ ಇಳಿ ವಯಸ್ಸಿನಲ್ಲಿಯೂ ಸಭೆಗಳಲ್ಲಿ ಉತ್ತರಾದಿ ಮಠ, ರಾಯರ ಮಠದ ಶ್ರೀಪಾಂದಗಳವರ ಕುರಿತಾದ  ಆಶು ಶ್ಲೂಕಗಳನ್ನು ರಚಿಸಿದ್ದನ್ನು ನಾವೆಲ್ಲಾ ಅನುಭವಿಸಿಯೆ ಇದ್ದೆವೆ. 

ತಪೂನುಷ್ಠಾನ :

ಶ್ರೀಗಳರವರು ಬೇರೆಯವರ ವಿಷಯದಲ್ಲಿ ಎಷ್ಟು ಮೃದುವೂ , ತಮ್ಮ ವಿಷಯದಲ್ಲಿ ಅಷ್ಟೇ ನಿಷ್ಠುರ ಎಂಬ ಆಂಶವನ್ನು ಅವರ ಅನುಷ್ಠಾನ ಪದ್ಧತಿಯನ್ನು ಗಮನಿಸಿ ತಿಳಿಯಬಹುದಾಗಿದೆ . ಒಂದು ದಿನದಲ್ಲಿ ಇಷ್ಟು ಜಪ, ಪಾರಾಯಣ,ಸ್ತ್ರೋತ್ರಪಠಣವನ್ನು ನಿಗದಿ ಪಡಿಸಿಕೊಂಡಿದ್ದರು. ಮೋದಲೇ ಯತಿಗಳಿಗೆ ಪ್ರಣವ ಜಪವೆ ಬಹಳವಿರುತ್ತದೆ.  ಅದಾದ ಮೇಲೂ ಅಷ್ಟಮಹಾಮಂತ್ರಗಳ ಜಪ ,ರಾಮಾಯಣದ ಸುಂದರಕಾಂಡದ ಪಾರಾಯಣ ಮೂದಲಾದ ಸ್ತ್ರೋತ್ರ-ಜಪಾನುಷ್ಠಾನಗಳನ್ನು ಅಳವಡಿಸಿಕೊಂಡಿದ್ದರು. ಇದನ್ನೆಲ್ಲವನ್ನೂ ಎಷ್ಟೆ ಕಾರ್ಯಗಳಿದ್ದರೂ ತಪ್ಪಿಸುತ್ತಿರಲಿಲ್ಲ. ಅದು ರಾತ್ರಿ ೧೨ ಘಂಟೆಯಾದರೂ ಮುಗಿಸಿಯೆ ವಿಶ್ರಮಿಸುತ್ತಿದ್ದರು . ಇದಾದ ಮೇಲೂ ನಿರಂತರ ನಾಮ ಸ್ಮರಣೆ ಮಾಡುತ್ತಿದ್ದರೆ . ಅವರದು ನಿರಂತರ ಚಟುವಟಿಕೆಯ ಜೀವನ . ಅನೇಕ ಕಾರ್ಯಕ್ರಮಗಳು . ಆ ಕಾರ್ಯಕ್ರಮಗಳಿಗೆ ಹೋಗುವಾಗ ಕಾರಿನಲ್ಲಿಯೂ ಕೂಡ ಪಾಠ , ಚಿಂತನೆ, ಪತ್ರವ್ಯವಹಾರ , ದಿನ ಪತ್ರಿಕೆಗಳ ಒದು , ಸಂದೇಶ ಲೇಖನ ಇತ್ಯಾದಿ ಅನೇಕ ಕಾರ್ಯಗಳು . ಅದೆಲ್ಲವಾದಮೆಲೂ ಸಮಯ ಸಿಕ್ಕಾಗಲೆಲ್ಲ ನಾಮಸ್ಮರಣೆಯನ್ನು ಮಾಡುತ್ತಿದ್ದರು .ನಾವೆಲ್ಲಾ ಗಮನಿಸಿದ ಹಾಗೆ ಯಾವುದೇ ಸಭಾ ಕಾರ್ಯಕ್ರಮಗಳಲ್ಲಿ ಅವರು ನಿರಂತರ ನಾಮ ಸ್ಮರಣೆಯನ್ನು ನಡೆಸುತ್ತಿದ್ದರು . ಅನೇಕರು ಶ್ರೀಪಾದರ ಬಳಿ ತಮ್ಮ ಸಾಮಾಜಿಕ ಕಷ್ಟಗಳನ್ನು, ಸಾಂಸಾರಿಕ ಸಮಸ್ಯೆಗಳನ್ನು ಹೇಳಿ ಪರಿಹಾರವನ್ನು ಪಡೆಯಲು ಬರುತ್ತಿದ್ದರು . ಪೂಜೆಯ ಸಮಯವಾದಾಗಲೂ, ತಾವೆ ಅನೇಕ ಬಾರಿ ಸ್ನಾನ ಮಾಡಿದರೂ ಸರಿ, ಯಾರನ್ನೂ ಕಾಯಿಸದೆ ಅವರ ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ ಭೂಜನ ಮಾಡಿಕೊಂಡೆ ಹೋಗಬೇಕೆಂದು ತಾಕೀತು ಮಾಡುತ್ತಿದ್ದರು . ಪೂಜೆ ಹಾಗೂ ಜಪಾನುಷ್ಠಾನಕ್ಕಾಗಿ ಹತ್ತು ಬಾರಿ ಸ್ನಾನ ಮಾಡುವ ಸಂದರ್ಭ ಬಂದರೂ ಮಾಡುತ್ತಿದ್ದರು. ಯಾವುದೇ ಪೀಠಾಧಿಪತಿಗಳು ಬಂದರೂ ,ಅವರಿಗೆಲ್ಲರಿಗೂ  ಪೂಜೆಗೆ ಭಿಕ್ಷೆಗೆ ವಿಶೇಷ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲದೆ ತಮ್ಮ  ಪೂಜಾಸ್ಥಳವನ್ನು, ವಾಸಸ್ಥಳವನ್ನೂ ಬಿಟ್ಟು ಕೊಡುತ್ತಿದ್ದರು . ಬಂದ ಅತಿಥಿಗಳಿಗೆ ಮೊದಲ ಪ್ರಾಶಸ್ತ್ಯ . ತನ್ನ ಕಷ್ಟವನ್ನು ಲೆಕ್ಕಿಸದೆ ಪರರ ಸುಖವನ್ನು ಬಯಸುತ್ತಿದ್ದರು . ಯಾವ ವ್ಯಕ್ತಿಗೂ ಬೇಸರವಾಗಬಾರದು ಅವರ ಸಮಸ್ಯೆ ಅದು ತನ್ನ ಸಮಸ್ಯೆ ಎಂದು ಭಾವಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಇವರ ವಾತ್ಸ್ಯಲ್ಯ ಇವರ ಔದಾರ್ಯ ಇವರ ಪ್ರೀತಿಯ ಮಾತು ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.  ಇದೇ ಅಲ್ಲವೆ ನಿಜವಾದ ತಪಸ್ಸು .

ವಿದ್ಯಾರ್ಥಿ ಪ್ರೀತಿ:

ಸ್ವಾಮಿಗಳಿಗೆ ಯಾವಾಗಲೂ ವಿದ್ಯಾರ್ಥಿಗಳೆಂದರೆ ಬಹಳ ಪ್ರೀತಿ .ಯಾವುದೇ ವಿದ್ಯಾರ್ಥಿಗಳು ಆಶ್ರಯ ಕೇಳಿಕೊಂಡು ಬಂದರೂ ಎಂದೂ ಆಶ್ರಯವನ್ನು ನಿರಾಕರಿಸುತ್ತಿರಲಿಲ್ಲ. ಹಾಗಾಗಿ ಸಾಗರ,,ಕೊಪ್ಪ ಮೊದಲಾದ ಮಲೆನಾಡಿನ ಪ್ರದೇಶದಿಂದಲೂ ,ಉತ್ತರಕರ್ನಾಟಕ ಕಡು ಬಡು ಹಳ್ಳಿಗಂದಲೂ ಪೇಜಾವರ ಮಠದಲ್ಲಿ ಆಶ್ರಯ ಪಡೆದಿದ್ದರು .ಪೇಜಾವರ ಮಠ ಸಂಪೂರ್ಣ ವಿಧ್ಯಾರ್ಥಿಗಳಿಂದ ತುಂಬಿರುತ್ತಿತ್ತು. ಅಷ್ಟೇ ಅಲ್ಲದೆ ಮಠಕ್ಕೆ ಯಾವ ಸಮಯದಲ್ಲೂ ವಿದ್ಯಾರ್ಥಿಗಳು ,ಅತಿಥಿಗಳು ಬಂದರೂ ರಾತ್ರಿ ೧೨ ಘಂಟೆಯಾಗಿದ್ದರೂ ಅಡುಗೆ ಮಾಡಿಸಿ  ಊಟದ ವ್ಯವಸ್ಥೆ ಮಾಡಿಸುತಿದ್ದರು. ಅಷ್ಟೇ ಅಲ್ಲದೆ ಸಿಬ್ಬಂದಿ ವರ್ಗದವರ ಸಂಸ್ಥೆಯಲ್ಲಿರುವ ಕೆಲಸದವ ಎಲ್ಲಾ ಕಷ್ಟಗಳನ್ನು ಅಹವಾಲುಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುತ್ತಿದ್ದ ಮಹಾನ್ ಚೇತನ ಅವರು .ಇದೇ ಗುಣದಿಂದಲೇ ಭೂಕಂಪ ಮೂದಲಾದ ಸಮಸ್ಯೆಗಳು ಎದುರಾದಾಗ ತಾವು ಮುಂದೆ ನಿಂತು ಪರಿಹಾರಕ್ಕಾಗಿ ಶ್ರಮಿಸುತ್ತಿದ್ದರು. ಅದು ಬಿಹಾರ ವಾಗಿರಬಹುದು ,ಆಂಧ್ರ ಪ್ರದೇಶವಾಗಿರಬಹುದು ಸ್ವಾಮಿಗಳ ಮಾತೃ ಹೃದಯವೆ ಅವರನ್ನು ಈ ಕಾರ್ಯಕ್ಕೆ ಪ್ರೇರೆಪಿಸುತ್ತಿತ್ತು .


ವಿರೋಧಿಗಳನ್ನು ಪ್ರೀತಿಸುವ ಗುಣ .

ಸ್ವಾಮಿಗಳ ಜೀವನದಲ್ಲಿ ಅವರ ವೈಚಾರಿಕ ನಿಲುವುಗಳಿಂದ ,ವಿಚಾರಧಾರೆಗಳಿಂದ ಧಾರ್ಮಿಕ ನಿಲುವುಗಳಿಂದ ,ಸಾಮಾಜಿಕ ನಿಲುವುಗಳಿಂದ ಅನೇಕರ ವಿರೋಧವನ್ನು ಕಂಡಿದ್ದಾರೆ. ಆದರೆ ಅವರು ಎಂದೂ ವಿರೋಧಿಗಳನ್ನು ದ್ವೇಷಿಸಿಲ್ಲ. ಹೊರತು ಪ್ರೀತಿಯಿಂದಲೆ ಅವರೆಲ್ಲರ ಮನಸ್ಸನ್ನು ಗೆದ್ದಿದ್ದಾರೆ . ಅದು ಪೀಠಾಧಿಪತಿಗಳಿಬಹುದು , ಬುದ್ಡಿಜೀವಿಗಳಿರಬಹುದು , ಅಥವಾ ಹಿಂದು ಸಂಘಟನೆಯ ಮುಖಂಡರೆ ಇರಬಹುದು , ಅವರೆಲ್ಲರು ಸ್ವಾಮಿಗಳನ್ನು ಅನೇಕ ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ , ಆದರೆ ಅದು ಯಾವಾಗಲೂ ವೈಚಾರಿಕ ನೆಲೆಯಲ್ಲಿಯೆ ಇರುತ್ತಿತ್ತೆ ಹೊರತು ವೈಯಕ್ಕ್ತಿಕ ಹಂತಕ್ಕೆ ಇಳಿಯುತ್ತಿರಲಿಲ್ಲ. ಎಷ್ಟೇ ವೈಚಾರಿಕ ವಿರೋಧವಿದ್ದರೂ ಸ್ವಾಮಿಗಳು  ತಮ್ಮ ನಡುವಳಿಕೆಯಿಂದ ಅವರ ಮನಸ್ಸನ್ನು ಗೆಲ್ಲುತ್ತಿದ್ದರು. ಆದರೆ ಎಂದೂ ತಮ್ಮ ವಿಚಾರಗಳನ್ನು ,ನಂಬಿಕೆಗಳನ್ನು ಬಿಟ್ಟುಕೊಡುತ್ತಿರಲಿಲ್ಲ.    ಇತ್ತೀಚ್ಚಿಗೆ ಅಗ್ನಿ ಶ್ರೀಧರ್ ಅವರ ಮಾತುಗಳೂ ಈ ಮಾತುಗಳನ್ನು ಪುಷ್ಟಿಕರಿಸುತ್ತದೆ. ಸಮಾಜದ ಸಂತೋಷಕ್ಕಾಗಿ ಅನೇಕ ಕ್ಷೇತ್ರಗಳಲ್ಲಿಅವರ ಮಾಡಿದ ಹೋರಾಟ ತ್ಯಾಗ ಮಹಾದೋಡ್ಡ ತಪಸ್ಸು.

  

ಹೀಗೆ ಪೇಜಾವರ ಶ್ರೀಪಾದರ ಸಾರ್ವಜನಿಕ, ಆಧ್ಯಾತ್ಮಿಕ,ಸಾಮಾಜಿಕ ಚಟುವಟಿಕೆಗಳನ್ನು ಪಟ್ಟಿ ಮಾಡುತ್ತ ಹೋದರೆ ಅದೊಂದು ಮುಗಿಯದ ಕಥೆ.  ಒಂದು ಪುಟ್ಟ ಲೇಖನದಲ್ಲಿ ಬರೆದು ಮುಗಿಸುವಂಥದ್ದಲ್ಲ.  ಒಂದು ಬೃಹತ್ ಸಂಪುಟವೇ ಬೇಕು.  ಆದರೂ ಅವರ ವ್ಯಕ್ತಿತ್ವದ ಭೌಮದರ್ಶನಕ್ಕೆ ಇಷ್ಟು ನಿದರ್ಶನಗಳು ಸಾಕು.  ಸಮುದ್ರದ ಪರಿಚಯಕ್ಕೆ ಒಂದು ಬೊಗಸೆ ನೀರು.  ಇಡಿಯ ಕಡಲನ್ನೇ ಬೊಗಸೆಯಲ್ಲಿ ಹಿಡಿದು ಹೀರುವ ಅಗಸ್ತ್ಯರು ನಾವಾಗಲಾರೆವು.

 ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ



Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting