ಸಂಸ್ಕೃತದ ಎರಡು ಭಿನ್ನ ಯುಗಗಳು


     ಸಂಸ್ಕೃತದ ಎರಡು ಭಿನ್ನ ಯುಗಗಳು 

ನಾನು ನಿಮಗೆ ಎರಡು ಘಟನೆಗಳನ್ನು ಹೇಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಮೊದಲನೆಯದು 11 ನೇ ಶತಮಾನದ್ದು. ಭೋಜ ಎಂಬ ರಾಜನಿದ್ದನು. ಅವನ ರಾಜ್ಯವು ತುಂಬಾ ಸಮೃದ್ಧವಾಗಿತ್ತು. ಒಮ್ಮೆ ಲಕ್ಷ್ಮಿಧರ ಎಂಬ ಕವಿ ಆ ರಾಜನ ನಗರಕ್ಕೆ ಬಂದ. ಕವಿಯು ತುಂಬಾ ಪ್ರಭಾವಿತನಾಗಿ  ಆ ನಗರದಲ್ಲಿ ವಾಸಿಸಲು ಮನಸ್ಸು ಮಾಡಿದನು.  ಹಾಗಾಗಿ ಅವನು ರಾಜನ ಆಸ್ಥಾನಕ್ಕೆ ತೆರಳಿ ತನ್ನ ಉದ್ದೇಶವನ್ನು ಹೇಳಿದನು. ಭೋಜರಾಜನು ತುಂಬಾ ಸಂತೋಷಪಟ್ಟು ಕವಿಯ ವಸತಿಗಾಗಿ ವ್ಯವಸ್ಥೆಗಳನ್ನು ಮಾಡುವಂತೆ ಸಚಿವರಿಗೆ ಆದೇಶಿಸಿದನು. "ಈ ನಗರದಲ್ಲಿರುವ ಅವಿದ್ಯಾವಂತನೊಬ್ಬನನ್ನು ಹುಡುಕಿ ಅವನ ಮನೆಯನ್ನು ಖಾಲಿ ಮಾಡಿ ಈ ಪಂಡಿತನಿಗೆ ಆ ಮನೆಯನ್ನು ಮಂಜೂರು ಮಾಡಿ" ಎಂದು ರಾಜನು ಸಚಿವನಿಗೆ ಆದೇಶಿಸಿದನು. ಸಚಿವನು ಕೆಲವು ಅವಿದ್ಯಾವಂತರನ್ನು ಹುಡುಕಲು ಹೋದನು, ಆದರೆ ಅವನಿಗೆ ಅಂತಹವರು ಸಿಗಲಿಲ್ಲ. ಎಲ್ಲರೂ ಒಂದಾದರೂ ವಿದ್ಯೆಯಲ್ಲಿ ಪಾರಂಗತರೇ ಆಗಿದ್ದರೂ . ಅವನು ಮತ್ತೆ ರಾಜನ ಬಳಿಗೆ ಬಂದು ನಗರದಲ್ಲಿ ಅವಿದ್ಯಾವಂತನನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದು ಹೇಳಿದನು. ಆಗ ರಾಜನು ಸಂಸ್ಕೃತದಲ್ಲಿ ಕವಿತೆಯನ್ನು ರಚಿಸಲಾಗದ ವ್ಯಕ್ತಿಯನ್ನು ಹುಡುಕಲು ಹೇಳಿ, ಈ ಕವಿಗೆ ಆ ಮನೆಯನ್ನು ಮಂಜೂರು ಮಾಡಬೇಕೆಂದು  ಸಚಿವನಿಗೆ ಆದೇಶಿಸಿದನು .


ಅನಂತರ ಸಚಿವನು ಒಬ್ಬ ನೇಕಾರನ ಮನೆಗೆ ಹೋಗಿ 'ಸಂಸ್ಕೃತದಲ್ಲಿ ಕವಿತೆಗಳನ್ನು ರಚಿಸಲು ನೀನು ಸಮರ್ಥನಾಗಿದ್ದಿಯಾ' ಎಂದು ವಿಚಾರಿಸಿದನು. ಅವನು "ನಾನು ಸಂಸ್ಕೃತವನ್ನು ಅಧ್ಯಯನ ಮಾಡಿದ್ದೇನೆ  ಆದರೆ ನನ್ನದು ಬಟ್ಟೆ ನೇಯುವ ವೃತ್ತಿಯಾದ್ದರಿಂದ , ನನ್ನ ವೃತ್ತಿಗೂ ಕವಿತಾ ರಚನೆಗೂ ಯಾವುದೇ ಸಂಬಂಧವಿಲ್ಲ" ಎಂದು ಉತ್ತರಿಸಿದನು . ಆಗ ಮಂತ್ರಿಯು "ಹಾಗಾದರೆ ರಾಜನ ಆದೇಶದ ಮೇರೆಗೆ  ನಿನ್ನ ಮನೆಯನ್ನು ಖಾಲಿ ಮಾಡಿ ಒಬ್ಬ ಕವಿಗೆ ಅದನ್ನು ಬಿಟ್ಟು ಕೊಡಬೇಕೆಂದು ತಿಳಿಸಿದನು. ಹಾಗೆಯೆ  ಈ ವಿಷಯದಲ್ಲಿ ಎನಾದರೂ ಮಾತನಾಡಬೇಕೆಂದಿದ್ದರೆ  ಭೋಜರಾಜನನ್ನು ಭೇಟಿಯಾಗಲು ತನ್ನೊಂದಿಗೆ ಬರಬೇಕು' ಎಂದು ಹೇಳಿದನು. ನೇಕಾರನೂ ಕೂಡ ನ್ಯಾಯಾಲಯಕ್ಕೆ ಬಂದು ತನ್ನ ಜೀವನೋಪಾಯವು ಆ ಮನೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿ, ಮನೆ ಖಾಲಿ ಮಾಡಿದರೆ ಜೀವನೋಪಾಯವೇ  ಇಲ್ಲವಾಗಿ ಕಷ್ಟವಾಗುತ್ತದೆ ಎಂದು ರಾಜನಿಗೆ ತಿಳಿಸಿದನು . ರಾಜನು ಯೋಚಿಸಿ ಅವನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದನು. ಒಬ್ಬ ಮಹಾನ್ ಕವಿಗೆ ಮನೆಯ ವ್ಯವಸ್ಥೆಯು ಸಾಧ್ಯವಾಗದದಿರುವ   ಕಾರಣದಿಂದ ಮನೆ ಖಾಲಿ ಮಾಡಲು ಹೇಳುತ್ತಿರುವುದಷ್ಟೆ, ಹಾಗಾಗಿ ನೀನು ಮನೆ ಖಾಲಿ ಮಾಡಿ ಕವಿಗೆ ಇರಲು ಅವಕಾಶ ನೀಡಿದರೆ  ಸಹಾಯವಾಗುತ್ತದೆ . ಮತ್ತು ನಗರದ ಹೊರ ಪ್ರದೇಶದಲ್ಲಿ ಮತ್ತೊಂದು ಮನೆ ಖರೀದಿಸಲು ನಿನಗೆ ಸಾಕಷ್ಟು ಹಣವನ್ನು ನೀಡಲಾಗುವುದು ಎಂದು ರಾಜ ಹೇಳಿದನು  . ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜನು ತನ್ನ ಮಾತನ್ನು ಕೇಳಬೇಕು ಎಂದು ನೇಕಾರನು ಹೇಳುತ್ತಾ . ಆ ಕ್ಷಣದಲ್ಲಿಯೇ  ಒಂದು ಕವಿತೆಯನ್ನು ಹೇಳಲು ಪ್ರಾರಂಭಿಸಿದನು,

      ಕಾವ್ಯಂ ಕರೋಮಿ ನ ತು ಚಾರುತರಂ ಕರೋಮಿ | 

   ಯತ್ನಾತ್ ಕರೋಮಿ ಯದಿ ಚಾರುತರಂ ಕರೋಮಿ ||

ಭೂಪಾಲಮೌಲಿಮಣಿಮಂಡಿತಪಾದಪೀಠ |

    ಹೇ ಸಾಹಸಾಂಕ ಕವಯಾಮಿ ವಯಾಮಿ ಯಾಮಿ ||

 ( ಭೋಜಪ್ರಬಂಧ-96)

ನಾನು ಸರಳವಾದ ಕವಿತೆಗಳನ್ನು ರಚಿಸಬಲ್ಲೆನಾದರೂ  ಅವು ಸುಂದರವಾಗಿಲ್ಲದಿರಲೂಬಹುದು, ಆದರೆ ನಾನು  ಪ್ರಯತ್ನ ಮಾಡಿದರೆ, ಸುಂದರ ಕವಿತೆಗಳನ್ನೇ ರಚಿಸಬಲ್ಲೆನು.  ಎಲ್ಲ ರಾಜರುಗಳ ಕಿರಿಟಮಣಿಗಳಿಂದ ಅಲಂಕೃತವಾದ ಪಾಣಿಪೀಠವುಳ್ಳ  ಸಾಹಸವೇ ಹೆಗ್ಗುರುತಾದಂತಹ ರಾಜನೇ ,  ನಾನು ಕವಿತೆಯನ್ನೂ ನೇಯುತ್ತೇನೆ, ಬಟ್ಟೆಗಳನ್ನೂ ನೇಯುತ್ತೇನೆ, ಮತ್ತು ಈ ರೀತಿಯಾಗಿ ಜೀವನವನ್ನು ಸಾಗಿಸುತ್ತೇನೆ)

ನೇಕಾರನ ಈ ರೀತಿಯ ಕವಿತಾರಚನೆಯ ಸಾಮರ್ಥ್ಯವನ್ನು ತಿಳಿದು  ರಾಜನು ತುಂಬಾ ಸಂತೋಷಪಟ್ಟನು. ಈ ಪದ್ಯದಲ್ಲಿರುವ ಚಮತ್ಕಾರ ಹೀಗಿದೆ . ಕವಿ ತಾನು ಬಿನ್ನವಿಸಿಕೊಂಡ ತನ್ನ ಕವಿತಾ ಸಾಮರ್ಥ್ಯವನ್ನು  ಕೊನೆಯ ಪಾದದಲ್ಲಿ  "ಕವಯಾಮಿ , ವಯಾಮಿ , ಯಾಮಿ " ಎನ್ನುವ ಮೂಲಕ ಕೂಡಲೇ ಸಾಬೀತು ಕೂಡ ಮಾಡಿರುವನು . ಅವನು ತಾನು ಕವನವನ್ನು ರಚಿಸಬಲ್ಲೆನು ಎಂಬ ವಿಚಾರವನ್ನು ಕವಯಾಮಿ ಎಂದು ಹೇಳುತ್ತಲೆ , ಆ ಪದದ ಮೊದಲಕ್ಷರವನ್ನು ತೆಗೆದು ವಯಾಮಿ ಎಂದೂ, ಜೊತೆಗೆ ಎರಡನೆ ಅಕ್ಷರವನ್ನು ತೆಗೆದು ಯಾಮಿ ಎಂದು ಚಮತ್ಕಾರವಾಗಿ ಹೇಳುವ ಮೂಲಕ ತನ್ನ ವೃತ್ತಿಯನ್ನು , ತನ್ನ ಆರ್ಥಿಕ ಸ್ಥಿತಿಯನ್ನು, ಅಸಹಾಯಕತೆಯನ್ನು ಪ್ರಕಟಿಸಿದನು . ಜೊತೆಗೆ ರಾಜನು ತನ್ನ ವಿರುದ್ಧ ಕ್ರಮ ಕೈಗೊಂಡರೆ ತನಗಾಗುವ ದುಃಸ್ಥಿತಿಯನ್ನು ವಿವರಿಸಿದ್ದಾನೆ.  ಅಲ್ಲದೆ "ಕವಯಾಮಿ, ವಯಾಮಿ, ಯಾಮಿ" ಎನ್ನುವ  ಪದಗಳ ಉಪಯೋಗದಿಂದ ಮೂಡಿದ  ಪ್ರಾಸವೂ  ತುಂಬಾ ಸುಂದರವಾಗಿತ್ತು . ಇದನ್ನೆಲ್ಲಾ ಗಮನಿಸಿದ ರಾಜನು ಅವನಿಗೆ ಉಡುಗೊರೆಯಾಗಿ ಚಿನ್ನವನ್ನು ಕೊಟ್ಟು ವಾಪಸ್ ಕಳುಹಿಸಿದನು. ಇದು ವಲ್ಲಭದೇವನ ಭೋಜಪ್ರಬಂಧದಲ್ಲಿ ಉಲ್ಲಿಖಿತವಾಗಿರುವ ಘಟನೆ  , ಈ ರೀತಿಯ ಘಟನೆಗಳ ಉಗಮಕ್ಕೆ ಕಾರಣವಾದ ಕಾಲದಲ್ಲಿ ಸಂಸ್ಕೃತದ ಸ್ಥಿತಿಯು ಎಷ್ಟು ಉತ್ತಮವಾಗಿತ್ತು ಎಂದು ತಿಳಿದು ಬರುತ್ತದೆ .


ಮತ್ತೊಂದು ಘಟನೆ ಈ ಶತಮಾನಕ್ಕೆ ಸೇರಿದ್ದು. ನೀವು ದೇವದತ್ತ ಪಟ್ನಾಯಕ್ ಎಂಬ ಹೆಸರನ್ನು ಕೇಳಿರಬಹುದು .ಅವರು ಸ್ವಯಂ  ಘೋಷಿತ ಪುರಾಣಶಾಸ್ತ್ರಜ್ಞ( Mythologist).ಅವರು ಪುರಾಣಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ .ಅವರು ಇತ್ತಿಚ್ಚಿಗೆ ಭಗವದ್ಗೀತೆಯ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕದಲ್ಲಿ ಅವರು ಯಾವುದೇ ಸಂಸ್ಕೃತ ಭಾಷೆಯ ಸಾಮಾನ್ಯ ಪರಿಚಯವಿರುವ ವ್ಯಕ್ತಿಯೂ ಮಾಡದ ತಪ್ಪುಗಳನ್ನು ಮಾಡಿದ್ದಾರೆ. ನಾವು ತಾತ್ವಿಕ ದೋಷಗಳನ್ನು ಬೇಕಿದ್ದರೆ ಕಡೆಗಣಿಸಿಯೇ ಬಿಡೊಣ , ಆದರೆ ಅವರು ಸಾಮಾನ್ಯವಾದ  ಭಾಷಾ ದೋಷಗಳನ್ನೂ ಮಾಡುತ್ತಾರೆ. ಇವರು ಬಹಳ ಮಾರಾಟವಾದ ಪುಸ್ತಕಗಳ ಲೇಖಕನಾಗಿ ( Best-selling book author) ಅಂತಹ ತಪ್ಪುಗಳನ್ನು ಹೇಗೆ ಮಾಡಬಹುದು ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಅವರ ದೋಷಗಳನ್ನು ಲೇಖಕ ಮತ್ತು ಸಂಸ್ಕೃತ ವಿದ್ವಾಂಸ ನಿತ್ಯಾನಂದ ಮಿಶ್ರಾ ಅವರು ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ .(https://swarajyamag.com/culture/not-just-his-gita-its-pattanaiks-own-fantasy-world ಲೇಖನದ ಕೋಂಡಿ ) ಅವರು ಭಗ ಮತ್ತು ಭಾಗ ಎಂಬ ಸಂಸ್ಕೃತದ ಪದಗಳ ನಡುವೆ ವ್ಯತ್ಯಾಸವನ್ನು ಗಮನಿಸದೆ ಅಪಾರ್ಥವನ್ನೇ ಮಾಡಿದ್ದಾರೆ. ಭಾಗ  ಎಂದರೆ ಘಟಕ ಎಂದರ್ಥ . ಭಗ ಎಂಬ ಪದವು ಇದಕ್ಕಿಂತ ವಿಭಿನ್ನ ಅರ್ಥವನ್ನು ಹೊಂದಿದೆ.  ಇದು ಭಗವಾನ್ ಮತ್ತು ಭಗವತಿಯಂತಹ ಪದಗಳಲ್ಲಿ ಪ್ರಯುಕ್ತವಾಗಿದೆ. ಭಗ ಎಂಬ ಪದವನ್ನು ಆಂಗ್ಲಭಾಷೇಯ ಕೇವಲ ಒಂದು ಪದದಿಂದ ಅನುವಾದಿಸಲು ಸಾಧ್ಯವಿಲ್ಲ.  ಈ ಪದವು ಒಂದು ಪದದಿಂದ ಅನುವಾದಿಸಲಾಗದ ಅರ್ಥವನ್ನು ನೀಡುತ್ತದೆ.  

 ಐರ್ಶರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಃ ಶ್ರೀಯ |

   ಜ್ಞಾನವಿಜ್ಞಾನಯೋಶ್ಚೈವ ಷಣ್ಣಾಂ ಭಗ ಇತೀರಣಾ |

 

ಅಪಾರ ಯೋಗ ಶಕ್ತಿ, ಸಂಪತ್ತು, ಬಲ, ಜ್ಞಾನ ಮತ್ತು ವಿಜ್ಞಾನ ಮುಂತಾದ ಗುಣಗಳನ್ನು ಭಾಗ ಎಂಬ ಪದದಿಂದ ತಿಳಿಸಲಾಗಿದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವವನು ಭಗವಾನ್ ಎಂದು ಕರೆಸಿಕೊಳ್ಳುತ್ತಾನೆ.  ಇಷ್ಟೆಲ್ಲವಿದ್ದಾಗ್ಯೂ  ಭಗವಾನ್ ಎಂದರೆ ಘಟಕಗಳನ್ನು ಹೊಂದಿರುವವನು(ಭಾಗ ಎಂಬ ಪದದ ಅರ್ಥದಿಂದ ಭ್ರಮಿತರಾಗಿ) ಎಂಬುವ ಅರ್ಥವನ್ನು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ . ಇದು ಒಂದು ಉದಾಹರಣೆ ಅಷ್ಟೇ .ಇಂತಹ ಅನೇಕ ತಪ್ಪುಗಳನ್ನು ತೋರಿಸಬಹುದು . ಇದೇ ಇಷ್ಟಿರುವಾಗ ತಾತ್ವಿಕವಾದ ವಿಷಯಗಳಲ್ಲಿ ಇನ್ನೆಷ್ಟು ತಪ್ಪಿರಬಹುದು ಎಂದು ನೀವೆ ಊಹಿಸಿ. ಎಡ ಸಿದ್ದಾಂತದ ಅಭಿಪ್ರಾಯಗಳನ್ನು ಪುರಾಣ ಗೀತೆ ಮುಂತಾದ ಗ್ರಂಥಗಳ ಅಭಿಪ್ರಾಯವೆಂದು ವ್ಯಾಖ್ಯಾನಿಸುವುದರಲ್ಲಿ ಇವರು ನಿಸ್ಸೀಮರು . ಇತ್ತೀಚಿನ ದಿನಗಳಲ್ಲಿ ತಪ್ಪುಗಳಿಲ್ಲದ ಉತ್ತಮ ಅನುವಾದಗಳನ್ನು ಕಂಡುಹಿಡಿಯುವುದು ಕಷ್ಟ. ಹಾಗಾಗಿ ಸಂಸ್ಕೃತವನ್ನು ಕಲಿಯುವುದು ಮತ್ತು ಸಂಸ್ಕೃತದಲ್ಲಿಯೆ ಮೂಲ ಪಠ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಈ ನಿಟ್ಟಿನಲ್ಲಿ ಸಂಸ್ಕೃತಜ್ಞರ ಜವಾಬ್ದಾರಿಯು ಬಹಳಷ್ಟಿದೆ . ಇಲ್ಲವಾದಲ್ಲಿ ಇಂತಹ ಪುಸ್ತಕಳನ್ನೇ ಓದಿ ಭಾರತದ ಎಲ್ಲಾ ಯುವ ಪೀಳಿಗೆಗಳು "ಮೆಕಾಲೆ ಪುತ್ರ"ರಾಗುವುದರಲ್ಲಿ ಯಾವುದೆ ಸಂಶಯವಿಲ್ಲ .

ಲೇಖಕರು - ವಿ. ಶ್ರೀನಿಧಿ ಪ್ಯಾಟಿ. ಪೂರ್ಣಪ್ರಜ್ಞ ಸಂಶೋಧನ ಮಂದಿರ. ಬೆಂಗಳೂರು.



Comments

  1. Myth ಎಂದರೆ ಸುಳ್ಳು, mythology ಎಂದರೆ ಸುಳ್ಳುಕಥೆಗಳು ಎಂದು ಎಡ ಪಂಥೀಯ ಧೋರಣೆ ಪ್ರತಿಪಾದನೆ ಮಾಡುವ ಜಾಣರು ನಮ್ಮಲ್ಲಿ ಬಹಳಷ್ಟು ಇದ್ದಾರೆ. ಆ ರೀತಿಯಲ್ಲಿ ಮಾತನಾಡುವುದು ಬುದ್ದಿವಂತಿಕೆಯ ಪ್ರತೀಕ ಎಂದು ತಿಳಿದಿರುತ್ತಾರೆ.

    ReplyDelete

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting