ಆಚಾರ್ಯರು ಉದಾಹರಿಸಿದ ಅಪರೂಪದ ಸ್ತೋತ್ರ

 


ಅನುವ್ಯಾಖ್ಯಾನದ ತೃತೀಯಾಧ್ಯಾಯದ ಪ್ರಥಮಪಾದದಲ್ಲಿ ಆಚಾರ್ಯರು ಅಪೂರ್ವವಾದ ವಿಷಯವನ್ನು ನಿರೂಪಿಸಿದ್ದಾರೆ.

ಏಕೈವ ಬ್ರಹ್ಮಹತ್ಯಾಹಿ ವರಾಹಹರಿಣೋದಿತಾ | ಬ್ರಹ್ಮಪಾರಸ್ತವೇನೈವ ನಿಷ್ಕಾಂತಾ ರಾಜದೇಹತಃ |

ಸೊತ್ರಸ್ಯ ತಸ್ಯ ಮಾಹಾತ್ಮ್ಯಾತ್  ವ್ಯಾಧತ್ವಂ ಗಮಿತಾ ಪುನಃ | ಪ್ರಾಪ್ಯಜ್ಞಾನಂ ವರಂ ಚಾಪ |''

ಆಚಾರ್ಯರು ಕರ್ಮಗಳಿಗಿರುವ ಜೀವಸ್ವರೂಪದ ವಿಷಯದಲ್ಲಿ ಅಪರೂಪದ ಪ್ರಮೇಯವನ್ನು ಈ ಪ್ರಕರಣದಲ್ಲಿ ನಿರೂಪಿಸಿದ್ದಾರೆ.ಈ ಪ್ರಮೇಯಕ್ಕೆ ಸಂವಾದಿಯಾಗಿ ಈ ಮೇಲಿನ ಶ್ಲೋಕಗಳಲ್ಲಿ ವರಾಹಪುರಾಣದಲ್ಲಿ ಬರುವ ಒಂದು ಕಥೆಯನ್ನು ಉದಾಹರಿಸಿದ್ದಾರೆ.

 ಆಚಾರ್ಯರು ನಿರೂಪಿಸುವ ಕಥೆಯ ಸಾರಾಂಶ ಹೀಗಿದೆ. ರಾಜನೊಬ್ಬನಿಗೆ ಬ್ರಹ್ಮಹತ್ಯಾ ದೋಷವು ಬಂದೊದಗುತ್ತದೆ. ಆ ರಾಜನು ಬ್ರಹ್ಮಪಾರಸ್ತೋತ್ರವನ್ನು ಪಠಿಸುತ್ತಾ ತಪಸ್ಸನ್ನು ಆಚರಿಸುತ್ತಾನೆ. ಆ ಸ್ತೋತ್ರದ ಪ್ರಭಾವದಿಂದ ರಾಜನಲ್ಲಿರುವ ಬ್ರಹ್ಮಹತ್ಯಾ ದೋಷವು ವ್ಯಾಧ ಜನ್ಮವನ್ನು ಪಡೆಯುತ್ತದೆ. ಆ ದೋಷದಿಂದ ಮುಕ್ತನಾದ ರಾಜನು ಮುಕ್ತಿಯನ್ನು ಪಡೆಯುತ್ತಾನೆ.ಇಲ್ಲಿ ಬ್ರಹ್ಮಹತ್ಯಾ ದೋಷವು  ವ್ಯಾಧ ಜನ್ಮವನ್ನು ಪಡೆದಿದೆ ಎಂಬ ಕಥೆಯನ್ನು ಉದಾಹರಿಸಿ ಆಚಾರ್ಯರು ಕರ್ಮಗಳಿಗೆ ಅಭಿಮಾನಿಗಳಾದ ಜೀವಿಗಳೂ ಇದ್ದಾರೆ ಎಂಬ ಪ್ರಮೇಯವನ್ನು ನಿರೂಪಿಸಿದ್ದಾರೆ."ಈ ಶ್ಲೋಕದಲ್ಲಿ ವರಾಹಹರಿಣೋದಿತಾ'' ಎಂದು ಹೇಳಿರುವುದರಿಂದ ಆಚಾರ್ಯರು ಈ ಸ್ತೋತ್ರವು ವರಾಹಪುರಾಣದಲ್ಲಿದೆ ಎಂಬುದನ್ನು ಸೂಚಿಸಿದ್ದಾರೆ'  ಎಂದು ಟೀಕಾರಾಯರು ವ್ಯಾಖ್ಯಾನ ಮಾಡಿದ್ದಾರೆ. 

ಹಾಗಾಗಿ ನಾನು ಈ ಸ್ತೋತ್ರದ ಹಿನ್ನೆಲೆ ತಿಳಿಯುವ ಉದ್ದೇಶದಿಂದ ವರಾಹಪುರಾಣವನ್ನು ನೋಡಿದೆ. ಆದರೆ ನಾರದರ ಪೂರ್ವಜನ್ಮ ವೃತ್ತಾಂತದ ಸಂದರ್ಭದಲ್ಲಿ ಉಲ್ಲೇಖಗೊಂಡಿರುವ ಬ್ರಹ್ಮಪಾರ ಸ್ತೋತ್ರವನ್ನು ಹೊರತುಪಡಿಸಿ ಈ ಕಥೆಗೆ ಸಂಬಂಧಿಸಿದ ಬ್ರಹ್ಮಪಾರ ಸ್ತೋತ್ರದ ಉಲ್ಲೇಖ ಸಿಗಲಿಲ್ಲ. ಆಚಾರ್ಯರು ಉದಾಹರಿಸಿದ ಅನೇಕ ವಿಷಯಗಳು ಈಗ ಉಪಲಬ್ದವಾಗುವುದಿಲ್ಲ  ಅಂತಹ ವಿಷಯಗಳಲ್ಲಿ ಇದೂ ಒಂದು ಎಂದು ತಿಳಿದು ಸುಮ್ಮನಾದೆ. ಒಮ್ಮೆ ಒಬ್ಬ ಆಚಾರ್ಯರ ಬಳಿ ಈ ವಿಷಯವನ್ನು ನಿರೂಪಿಸಿದೆ. ಅವರು ಮತ್ತೊಮ್ಮೆ ನೋಡುವುದಾಗಿ ತಿಳಿಸಿದರು. ನಾವಿಬ್ಬರೂ ಮತ್ತೆ  ನೋಡಲು ಕುಳಿತಾಗ  ಅವರ ಸೂಕ್ಷ್ಮದೃಷ್ಟಿಗೆ ಈ ಸ್ತೋತ್ರ ಸಿಕ್ಕಿತು.ಆದರೆ ಒಂದು ವ್ಯತ್ಯಾಸವಿತ್ತು .ಈ ಸ್ತೋತ್ರದ ಹೆಸರು ಬ್ರಹಪಾರ ಸ್ತೋತ್ರವೆಂದಿರದೇ ಪುಂಡರೀಕಾಕ್ಷಪಾರಸ್ತೋತ್ರ ಎಂದು ಉಲ್ಲಿಖಿತವಾಗಿತ್ತು. ಅಂದರೆ ಆಚಾರ್ಯರು ಉದಾಹರಿಸಿದ ಬ್ರಹ್ಮಪಾರ ಸ್ತೋತ್ರವು, ಈ ಪುಂಡರಿಕಾಕ್ಷಪಾರ ಸ್ತೋತ್ರವೇ ಆಗಿತ್ತು . ಅದರ ಆಧಾರದ ಮೇಲೆ ಈಗ ಆಚಾರ್ಯರು ಸೂಚಿಸಿದ ಕಥೆಯನ್ನು ವಿಸ್ತಾರವಾಗಿ ತಿಳಿಯೋಣ.

ವಸು ಎಂಬ ರಾಜನು ಅನೇಕ ವರ್ಷಗಳಿಂದ ಅಂದರೆ ರಾಜ್ಯವಾಳುತ್ತಿದ್ದ. ಒಮ್ಮೆ ರಾಜನು ತನ್ನ ನೂರು ಪುತ್ರರಲ್ಲಿ ಜೈಷ್ಠ ಮಗನಾದ ವಿವಸ್ವಾನನಿಗೆ ರಾಜ್ಯ ಭಾರವನ್ನು ವಹಿಸಿ ಪುಷ್ಕರ ತೀರ್ಥಕ್ಕೆ ತಪಸ್ಸಿಗಾಗಿ ಬಂದ.

''ಪುಷ್ಕರಂ ನಾಮ ತೀರ್ಥಾನಾಂ ಪ್ರವರಂ ಯತ್ರ ಕೇಶವಃ | ಪುಂಡರೀಕಾಕ್ಷನಾಮಾ ತು ಪೂಜ್ಯತೇ ತತ್ಪರಾಯಣೈಃ' ||

ಪುಷ್ಕರ ಎಂಬವುದು ಶ್ರೇಷ್ಠ ಕ್ಷೇತ್ರ. ಈ ಕ್ಷೇತ್ರದಲ್ಲಿ ಕೇಶವನ ಭಕ್ತರು ಅವನ ಪುಂಡರೀಕಾಕ್ಷ ಎಂಬ ರೂಪವನ್ನು ಪೂಜಿಸುತ್ತಾರೆ.ಈ ಕ್ಷೇತ್ರದಲ್ಲಿ ರಾಜನು ಪುಂಡರೀಕಾಕ್ಷಪಾರ ಸ್ತೋತ್ರವನ್ನು ಪಠಿಸುತ್ತಾ ತೀವ್ರವಾದ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದನು. ಕೂಡಲೇ ಅವನ ದೇಹದಿಂದ ಕಪ್ಪು ಬಣ್ಣದ, ಸಣ್ಣ ಗಾತ್ರದ, ಕೆಂಪು ಕಣ್ಣುಗಳಿರುವ, ಭಯಂಕರವಾದ ವ್ಯಾಧನ ರೂಪವನ್ನು ಧರಿಸಿದ ಪುರುಷನೊಬ್ಬನು ಹೊರಬಂದನು. ಹೊರಬಂದವನೇ ಕೈ ಮುಗಿಯುತ್ತಾ 'ರಾಜನೇ ಆಜ್ಞೆ ಮಾಡು' ಎಂದು ಹೇಳಿದನು. ಆಶ್ಚರ್ಯಚಕಿತನಾದ ರಾಜನು ಆ ವ್ಯಾಧ ನನ್ನು ಕುರಿತು 'ಯಾರು ನೀನು? ಎಲ್ಲಿಂದ ಬಂದಿರುವಿ? ನಿನ್ನ ಉದ್ದೇಶವೇನು? ಎಂದು ಕೇಳಿದನು. ವ್ಯಾಧನು ರಾಜನ ಜನ್ಮಾಂತರದ ಇತಿಹಾಸವನ್ನು, ಆ ದೇಹದಲ್ಲಿ ತಾನಿರುವ ಕಾರಣವನ್ನು ತಿಳಿಸುತ್ತಾನೆ. 

ಅದು ಹೀಗಿದೆ. ಈ ರಾಜನು ಹಿಂದೆ ಕಲಿಯುಗದಲ್ಲಿ ದಕ್ಷಿಣಾಪಥದ ಜನಸ್ಥಾನ ಎಂಬ ಒಂದು ಪ್ರದೇಶದಲ್ಲಿ ರಾಜನಾಗಿರುತ್ತಾನೆ. ಒಮ್ಮೆ ಬೇಟೆಗಾಗಿ ಕಾಡಿಗೆ ಹೋದಾಗ, ಅಲ್ಲಿ ಜಿಂಕೆರೂಪದಲ್ಲಿದ್ದ ಋಷಿಯನ್ನು ಜಿಂಕೆಯೆಂದು ತಿಳಿದು ಬೇಟೆಯಾಡುತ್ತಾನೆ. ಹತ್ತಿರ ಹೋಗಿ ನೋಡಿದಾಗ ಋಷಿಯು ಸತ್ತಿರುವುದನ್ನು ತಿಳಿದು ದುಃಖ ಪಡುತ್ತಾನೆ.ಬ್ರಹ್ಮಹತ್ಯಾ ದೋಷದಿಂದ ಭಯ ವಿಹ್ವಲನಾಗಿ ಅನೇಕ ರಾತ್ರಿಗಳನ್ನು ಕಳೆಯುತ್ತಾನೆ. ಒಂದು ದಿನ ಈ ದೋಷದ ಪರಿಹಾರಕ್ಕಾಗಿ ಏಕಾದಶಿ ವ್ರತವನ್ನು ಮಾಡಲು ಸಂಕಲ್ಪಿಸುತ್ತಾನೆ . ಅಂದು ಉಪವಾಸದಿಂದಿದ್ದು ಬೆಳಿಗ್ಗೆ ಗೋದಾನವನ್ನು ಮಾಡುತ್ತಾನೆ. ಆದರೆ ವ್ರತ ಸಮಾಪ್ತಿಯಾಗುವ ಮುನ್ನ ಹೊಟ್ಟೆ ನೋವಿನಿಂದ ಮರಣಹೊಂದುತ್ತಾನೆ. ಆದರೆ  ಅವನಿಗೆ ಬ್ರಹ್ಮಹತ್ಯಾದೋಷವಿದ್ದರೂ ನರಕಾದಿಗಳನ್ನು ಹೊಂದುವುದಿಲ್ಲ. ಏಕೆಂದರೆ ಮರಣ ಹೊಂದುವಾಗ ಅವನು ತನ್ನ ಪತ್ನಿಯಾದ ನಾರಾಯಣಿಯ ಹೆಸರನ್ನು ಉಚ್ಚರಿಸುತ್ತಾನೆ. ಆ ನಾಮದ ಬಲದಿಂದ ಅವನು ಅಮುಕ್ತರು ಹೋಗಬಹುದಾದ ವಿಷ್ಣುಲೋಕವನ್ನು ಹೊಂದುತ್ತಾನೆ. ಅಲ್ಲಿ ಉದರವೇದನೆ ಕೊಡುತ್ತಿದ್ದ ಈ ಬ್ರಹ್ಮಹತ್ಯಾ ಅಭಿಮಾನಿಯಾದ ಜೀವಿಯು ವಿಷ್ಣುಪಾರ್ಷದರ ಭಯದಿಂದ ಅವನ ರೋಮ ಕೂಪಗಳಿಂದ ಹೊರಬರುತ್ತಾನೆ. ಮುಂದೆ ಅವಾಂತರ ಪ್ರಳಯವಾದ ಮೇಲೆ ವಿಷ್ಣುಲೋಕದಲ್ಲಿದ್ದ ಈ ಜೀವನು ಕಾಶ್ಮೀರ ದೇಶದ ರಾಜನಾಗಿ ಜನ್ಮ ಪಡೆಯುತ್ತಾನೆ. ಆಗ ಪುನಃ ಈ ಬ್ರಹ್ಮಹತ್ಯಾದೋಷಕ್ಕೆ ಅಭಿಮಾನಿಯಾದ ಜೀವಿಯು ರಾಜನನ್ನು ಪ್ರವೇಶಿಸುತ್ತಾನೆ. ಪುಂಡರೀಕಾಕ್ಷಪಾರ ಸ್ತೋತ್ರ ಪಠಣದ ಪ್ರಭಾವದಿಂದ ರಾಜನ ಒಳಗಿರುವ ಜೀವಿಯು ಶಾಶ್ವತವಾಗಿ ಹೊರಬರುತ್ತಾನೆ. ಆಗ ವ್ಯಾಧ ಒಂದು ಮಾತನ್ನು ಹೇಳುತ್ತಾನೆ

ಯಜ್ಞೈರಿಷ್ಟಂ ತ್ವಯಾನೇಕೈಃ ಬಹುಭಿಶ್ಚಾಪದಕ್ಷಿಣೈಃ    ನ ಚಾಹಂ ತೈರುಪಹೃತಃ ವಿಷ್ಣುಸ್ಮರಣವರ್ಜಿತೈಃ | ಇದಾನೀಂ ಯತ್ ತ್ವಯಾ ಸ್ತೋತ್ರಂ ಪುಂಡರೀಕಾಕ್ಷಪಾರಗಂ ಪಠಿತಂ ತತ್ಪಭಾವೇಣ ವಿಹಾಯ-ಅಂಗರುಹಾಣ್ಯಹಂ ||          ಏಕೀಭೂತಃ ಪುನರ್ಜಾತಃ ವ್ಯಾಧರೂಪೀ ನೃಪೋತ್ತಮ ||

""ರಾಜನೆ ನೀನು ಅನೇಕ ಯಾಗಗಳನ್ನು ಮಾಡಿರುವಿ, ಆದರೆ ಆ ಕರ್ಮಗಳನ್ನು ಮಾಡುವಾಗ ನಿರಂತರ ವಿಷ್ಣು ಸ್ಮರಣೆ ಇಲ್ಲದ ಕಾರಣ ನಾನು ನಿನ್ನ ದೇಹದಿಂದ ಹೊರ ಬರಲಿಲ್ಲ, ಆದರೆ ಆ ಪುಂಡರೀಕಾಕ್ಷಪಾರ ಸೋತ್ರದ ಪ್ರಭಾವದಿಂದ ನಾನು ನಿನ್ನ ಕೂಪಗಳಿಂದ ಹೊರಬಂದು ವ್ಯಾಧಜನ್ಮವನ್ನು ಪಡೆದಿದ್ದೇನೆ. ಹಾಗೂ ಧರ್ಮಬುದ್ಧಿಯನ್ನು ಪಡೆದಿದ್ದೇನೆ' ಎಂದು ಹೇಳಿದನು. ರಾಜನ ಪೂರ್ವಜನ್ಮದ ತಿಳಿಸಿದ್ದಕ್ಕಾಗಿ ಸಂತುಷ್ಟನಾದ ರಾಜನು ಧರ್ಮವ್ಯಾಧನಾಗು ಎಂದು ವರವನ್ನು ನೀಡುತ್ತಾನೆ.. ಆ ರಾಜನು ಮುಂದೆ ಮುಕ್ತಿಯನ್ನು ಹೊಂದುತ್ತಾನೆ. ಆ ವಿಷಯವನ್ನೆಲ್ಲಾ ಆಚಾರ್ಯರು ತಮ್ಮ ಅನುವ್ಯಾಖ್ಯಾನದ ಶ್ಲೋಕಗಳಲ್ಲಿ ಸೂಚಿಸಿದ್ದಾರೆ. ಆದ್ದರಿಂದ ಆಚಾರ್ಯರು ಅನುವ್ಯಾಖ್ಯಾನದಲ್ಲಿ ನಿರೂಪಿಸಿದ ಬ್ರಹ್ಮಪಾರ ಸ್ತೋತ್ರ ಬೇರೆ, ಪೂಜಾಕಾಲದಲ್ಲಿ ಪಠಿಸುವ ಬ್ರಹ್ಮಪಾರ ಸ್ತೋತ್ರ ಬೇರೆ ಎಂದು ತಿಳಿಯುತ್ತದೆ. ಹಾಗಾಗಿ ಆಚಾರ್ಯರು ಹೊಸ ಪ್ರಮೇಯವನ್ನು ಪ್ರಮಾಣಪುರಸ್ಸರವಾಗಿ ಪ್ರತಿಪಾದಿಸಿದ್ದಾರೆ ಎಂದು ಸಿದ್ದವಾಗುತ್ತದೆ. ಈ ಸ್ತೋತ್ರದ ಶ್ರವಣದಿಂದಲೇ ಪುಷ್ಕರದಲ್ಲಿ ಸ್ನಾನ ಮಾಡಿದ ಫಲ ದೊರಕುತ್ತದೆ ಎಂದು ವರಾಹರೂಪಿ ಪರಮಾತ್ಮನು ಹೇಳಿದ್ದಾನೆ. ಪಾರಾಯಣ ಮಾಡುವವರ ಅನುಕೂಲಕ್ಕಾಗಿ, ಆಚಾರ್ಯರು ಉದಾಹರಿಸಿದ ಈ ಅಪೂರ್ವವಾದ ಸ್ತೋತ್ರವನ್ನು ಮುಂದೆ ಕೊಡಲಾಗಿದೆ.

ನಮಸ್ತೇ ಪುಂಡರೀಕಾಕ್ಷ ನಮಸ್ತೆ ಮಧುಸೂಧನ | ನಮಸ್ತೇ ಸರ್ವಲೋಕೇಶ ನಮಸ್ತೇ ತಿಗ್ಮಚಕ್ರಿಣೇ 

ವಿಶ್ವಮೂರ್ತಿಂ ಮಹಾಬಾಹುಂ ವರದಂ ಸರ್ವತೇಜಸಂ | ನಮಾಮಿ ಪುಂಡರೀಕಾಕ್ಷಂ ವಿದ್ಯಾವಿದ್ಯಾತ್ಮಕಂ ವಿಭುಂ |

ಆದಿದೇವಂ ಮಹಾದೇವಂ ವೇದವೇದಾಂಗಪಾರಗಂಗಂಭೀರಂ ಸರ್ವದೇವಾನಾಂ ನಮಾಮಿ ಮಧುಸೂಧನಂ 

ವಿಶ್ವಮೂರ್ತಿಂ ಮಹಾಮೂರ್ತಿಂ ವಿದ್ಯಾಮೂರ್ತೀಂ ತ್ರಿಮೂರ್ತಿಕಂ |ಕವಚಂ ಸರ್ವದೇವಾನಾಂ ನಮಸ್ಯೇ ವಾರಿಜೇಕ್ಷಣಂ ||

ಸಹಸ್ರಶೀರ್ಷಿಣಂ ದೇವಂ ಸಹಸ್ರಾಕ್ಷಂ ಮಹಾಭುಜಂಜಗತ್ಸಂವ್ಯಾಪ್ಯ ತಿಷ್ಕಂತಂ ನಮಸ್ಯೇ ಪರಮೇಶ್ವರಂ |

 ಶರಣ್ಯಂ ಶರಣಂ ದೇವಂ ವಿಷ್ಣುಂ ಜಿಷ್ಣುಂ ಸನಾತನಂ ನೀಲಮೇಘಪ್ರತೀಕಾಶಂ ನಮಸ್ಯೇ ಚಕ್ರಪಾಣಿನಂ || 

ಶುದ್ದಂ ಸರ್ವಗತಂ ನಿತ್ಯಂ ವ್ಯೋಮರೂಪಂ ಸನಾತನಂ ಭಾವಾಭಾವವಿನಿರ್ಮುಕ್ತಂ ನಮಸ್ಯೆ ಸರ್ವಗಂ ಹರಿಂ || 

ನಾನ್ಯತೆ ಕಿಂಚಿತ್ ಪ್ರಪಶ್ಯಾಮಿ ವ್ಯತಿರಿಕ್ತಂ ತ್ವಯಾಚ್ಯುತ | ತ್ವನ್ಮಯಂ ಚ ಪ್ರಪಶ್ಯಾಮಿ ಸರ್ವಮೇತತ್ ಚರಾಚರಂ |

ಶ್ರೀಕೃಷ್ಣಾರ್ಪಣಮಸ್ತು

ಲೇಖಕರು: ಶ್ರೀನಿಧಿ ಪ್ಯಾಟಿ.

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting