ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ

ಅಳಿಯದ ಅಚ್ಚರಿತನ- ಪೂಜ್ಯ ಗುರುಗಳ ಗುಣ
                       
ಪೂಜ್ಯ ಗುರುಗಳು ತಾವು ಜೀವನದುಕ್ಕೂ ಎಂದೂ ಬಿಡದ ಪಾಠ, ಪ್ರವಚನ, ಸಂಚಾರವನ್ನು ಮಾಡುತ್ತಲೆ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಅವರ ವ್ಯಕ್ತಿತ್ವ ಸಮುದ್ರವಿದ್ದಂತೆ.  ನಾವು ನಮ್ಮ ನಮ್ಮ ಪಾತ್ರೆಗನುಗುಣವಾಗಿ ನೀರನ್ನು ಮನೆಗೆ ತರಬಹುದು .  ತರದೆ ಇದ್ದದ್ದೆ ಅಪಾರ . ಆದರೆ ನಮಗೆ ಸಮುದ್ರದ ನೀರನ್ನು ತಂದೆವೆಲ್ಲಾ ಎನ್ನುವ ಖುಷಿ . ಪೂಜ್ಯ ಗುರುಗಳ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದವರೆಲ್ಲಗೂ ಆದದ್ದು ಇದೇ ಅನುಭವ . ಇಂತಹ ಗುರುಗಳ ಜೊತೆ  ಎರಡು ವರ್ಷ ಸಂಚಾರ ಮಾಡುವ ಭಾಗ್ಯ ಒದಗಿದ್ದು ನನ್ನ ಸುಕೃತದ ಫಲ .ನಾನೂ ಪಾತ್ರೆಗನುಗುಣವಾಗಿ ಒಂದಷ್ಟು ಅನುಭವ ಪಡೆದಿದ್ದೇನೆ . ಅದನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸುತ್ತೇನೆ

 ಮಹಾನ್ ದೇಶಭಕ್ತರು .

ಪೇಜಾವರ ಸ್ವಾಮಿಗಳು ದೇಶಭಕ್ತರು. ಹೌದು ಸ್ವಾಮಿಗಳು ಎಂದೂ ದೇಶಭಕ್ತಿಗೂ ಆಧ್ಯಾತ್ಮಕ್ಕೂ ವಿರೋಧವನ್ನು ಕಾಣಲೇ ಇಲ್ಲ.  ಈ ವಿಷಯದಲ್ಲಿ ನನಗಾದ ಅನುಭವವೇ ಪ್ರಮಾಣ.  May 16-2014 ಭಾರತದ ರಾಜಕೀಯದಲ್ಲಿ ಮಹತ್ವದ ದಿನ.
ಅಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದಿತ್ತು. ಸ್ವಾಮಿಗಳೊಟ್ಟಿಗೆ ಕೆಲವು ದಿನಗಳಿಂದ ನಾವು ಉಡುಪಿಯಲ್ಲೇ ಇದ್ದೆವು. ಅಂದು ಬೆಳಗ್ಗೆ ಸ್ವಾಮಿಗಳು ಕೃಷ್ಣನ ಪೂಜೆ ಮುಗಿಸಿ ಬರುವಾಗ ರಥಬೀದಿಯಲ್ಲಿ "ಶೋಭಾ ಕರಂದ್ಲಾಜೆ" ಯವರು ಎದುರಾದರು. ಅವರನ್ನು ಆಶೀರ್ವದಿಸಿ ಮಠಕ್ಕೆ ಬಂದು ನಮ್ಮನ್ನೆಲ್ಲಾ ಪಾಠಕ್ಕೆ ಕರೆದರು. 9:00 ಘಂಟೆಗೆ ಮತ ಎಣಿಕೆ ಶುರುವಾಯಿತು. ಸ್ವಾಮಿಗಳಿಗೆ ಬಹಳ ಕುತೂಹಲವಿದ್ದರೂ, ದಿನನಿತ್ಯ ಕ್ರಮದಲ್ಲೆ " ಶ್ರೀಮನ್-ನ್ಯಾಯಸುಧಾ " ಪಾಠವನ್ನು ಮುಂದುವರೆಸಿದರು. ಮಧ್ಯ ಮಧ್ಯದಲ್ಲಿ ಫಲಿತಾಂಶವನ್ನು ಕೇಳುತ್ತಿದ್ದರು. ದಿನಕ್ಕೆ ಕ್ರಮವಾಗಿ ಮಾಡಬೇಕಾದ ಪಾಠವನ್ನು ಮುಗಿಸಿದರು. ಇಲ್ಲಿ ಒಂದು ಮಾತು ಹೇಳಬೇಕು. ಸ್ವಾಮಿಗಳಿಗೆ ಏಷ್ಟೇ ಒತ್ತಡವಿದ್ದರೂ, ಅನಿವಾರ್ಯತೆಯಿದ್ದರೂ "  ಶ್ರೀಮನ್-ನ್ಯಾಯಸುಧಾ " ಪಾಠವನ್ನು ಬಿಡುತ್ತಿರಲಿಲ್ಲ, ಪ್ರತಿನಿತ್ಯ ಮಾಡುತ್ತಿದ್ದರು. " ಶ್ರೀಮನ್-ನ್ಯಾಯಸುಧಾ " ಪಾಠ ಅವರ Commitment. ಆದ್ದರಿಂದ ಅಂತಹ ಕುತೂಹಲವೂ ಪಾಠವನ್ನು ಅಡ್ದಪಡಿಸುವಲ್ಲಿ ಸಫಲವಾಗಲಿಲ್ಲ. ಮಠದಲ್ಲಿ T.V ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಸ್ವಾಮಿಗಳು ರಘುರಾಮಾಚಾರ್ಯರ    { ಸ್ವಾಮಿಗಳ ಪೂರ್ವಾಶ್ರಮದ ತಮ್ಮ}  ಮನೆಗೆ ಹೊರಟರು. ನಾನೂ ಹೋದೆ. ಅಲ್ಲಿ ಸ್ವಾಮಿಗಳ ಕುತೂಹಲ, ದೇಶದಲ್ಲಿ ಸುಭದ್ರ ಸರ್ಕಾರ ಬರಬೇಕೆಂಬ ಕಾಳಜಿ, ರಾಜಕೀಯ ವಿಮರ್ಶೆ ಇದನ್ನೆಲ್ಲಾ ಅನುಭವಿಸಿಯೇ ತಿಳಿಯಬೇಕು. ಪದಗಳಲ್ಲಿ ಹಿಡಿಯಲು ಸಾಧ್ಯವಿಲ್ಲ.
ಆಚಾರ್ಯರ ಮನೆಯಿಂದ ಹೊರಡುವಾಗ ಭಾರತಕ್ಕೆ ಸುಭದ್ರ " ನರೇಂದ್ರ ಮೋದಿ " ಯವರ ಸರ್ಕಾರ ಸಿಗುವುದು ನಿಶ್ಚಯವಾಗಿತ್ತು. ಹೊರಡುವಾಗ ಕಾರಿನಲ್ಲಿ ನಾನು  ಸ್ವಾಮಿ,  ಕೊನೆಗೂ " ನರೇಂದ್ರ ಮೋದಿ "ಯವರು ಭಾರತಕ್ಕೆ ಪ್ರಧಾನಿಯಾಗುವುದು ನಿಶ್ಚಯವಾಯಿತಲ್ಲ ಎಂದೆ. ಅದಕ್ಕೆ ಸ್ವಾಮಿಗಳು " ಹೌದು ಒಳ್ಳೆಯದಾಯಿತು " ನಾನೂ ಇದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಕೃಷ್ಣನಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಮಾಡುತ್ತಿದ್ದೆ ಎಂದರು. ನಾನು ಸ್ವಾಮಿ, ಮೋದಿಯವರು ಪ್ರಧಾನಿ ಆಗಬೇಕೆಂದು ಪ್ರಾರ್ಥನೆ ಮಾಡಿದಿರಾ? ಎಂದೆ. ಅದಕ್ಕೆ ಸ್ವಾಮಿಗಳು ಮೋದಿಯವರು ಪ್ರಧಾನಿಯಾಗಬೇಕೆಂದು ಪ್ರಾರ್ಥನೆ ಮಾಡಲಿಲ್ಲ. ಫಲಿತಾಂಶದಿಂದ ದೇಶಕ್ಕೆ ಒಳ್ಳೆಯದಾಗಲಿ  ಎಂದು ಪ್ರಾರ್ಥನೆ ಮಾಡುತ್ತಿದ್ದೆ, ಎಂದರು. ಅವರ ಪ್ರಾರ್ಥನೆ ವ್ಯಕ್ತಿಕೇಂದ್ರಿತವಾಗಿರಲಿಲ್ಲ ದೇಶಕೇಂದ್ರಿತವಾಗಿತ್ತು . ದೇವರ ಅನುಗ್ರಹದಿಂದ ನರೇಂದ್ರ ಮೋಡಿಯವರು ನಾಯಕರಾದಾಗ ಸಂತೋಷಪಟ್ಟರು . ಇದು ನಿಜವಾದ ಪ್ರಾರ್ಥನೆಯ ಕ್ರಮವಲ್ಲವೆ , ಈ ಘಟನೆಯ ನಂತರ ನನಗೆ ಸ್ವಾಮಿಗಳ ಮೇಲಿದ್ದ ಗೌರವ, ಅಭಿಮಾನ ಇಮ್ಮಡಿಯಾಯಿತು. ಮೊದಲೇ ಸನ್ಯಾಸಿಗಳಿಗೆ ಜಪ,ಪಾರಾಯಣ, ಪೂಜೆಗಳ ಭಾರ ಜಾಸ್ತಿ, ಅದರಲ್ಲೂ ಸ್ವಾಮಿಗಳಿಗೆ ಬಿಡುವಿಲ್ಲದ ಸಂಚಾರ. ಆದಾಗ್ಯೂ ಬಿಡುವು ಮಾಡಿಕೊಂಡು ಸ್ವಾಮಿಗಳು ದೇಶಕ್ಕಾಗಿ " ವಾಯುಸ್ತುತಿ ಪುರಶ್ಚರಣ " ಮಾಡುತ್ತಿದ್ದರು ಎಂದು ನನಗೆ ನಂತರ ತಿಳಿಯಿತು. ಹೀಗೆ ಅಧ್ಯಾತ್ಮ ಮತ್ತು ದೇಶಭಕ್ತಿ ಇವೆರಡನ್ನೂ ಒಂದೇ ಕಡೆ ಸೇರಿಸಿದ ಸ್ವಾಮಿಗಳ ಕ್ರಮ, ನನಗೆ ಅವರ ಇನ್ನೊಂದು ಮುಖವನ್ನು ಪರಿಚಯ ಮಾಡಿಸಿತು. ನನ್ನಲ್ಲೂ ಒಂದು ಹೊಸ ಚಿಂತನಾ-ಕ್ರಮ ಹುಟ್ಟಲು ಕಾರಣವಾಗಿತ್ತು.

 ಪೃಕೃತಿಯ ಕಾಳಜಿ

ಮಾಧ್ವಯತಿಗಳಲ್ಲಿ "ಪರಿಸರ ರಕ್ಷಣೆ"ಗಾಗಿ ಬೀದಿಗಿಳಿದು ಹೋರಾಟ ಮಾಡಿದ ಏಕೈಕ ಯತಿ ಪೇಜಾವರ ಶ್ರೀಪಾದರು ಅಂದರೆ ಅತಿಶಯೋಕ್ತಿಯೇನಿಲ್ಲ. ನಾವು ಭಾಗವತದಲ್ಲಿ ಬರುವ " ಕಾಳಿಂಗ ಮರ್ದನ " ಪ್ರಕರಣವನ್ನು ಕೃಷ್ಣನ ಬಾಲಲೀಲೆ ಎಂದು ಪರಿಗಣಿಸಿದರೆ, ಸ್ವಾಮಿಗಳು ಕೃಷ್ಣನು "ಪರಿಸರ ಸಂರಕ್ಷಣೆಗಾಗಿ" ತೆಗೆದುಕೊಂಡ ದಿಟ್ಟಕ್ರಮ ಎಂದು ವಿವರಿಸುತ್ತಾರೆ. ಮತ್ತು ತಾವೂ ಅಂತಹ ದಿಟ್ಟ ಕ್ರಮವನ್ನು ತೆಗೆದುಕೊಂಡು ಅದನ್ನು ಕೃಷ್ಣನ ಸೇವೆಯಲ್ಲಿ ಪರ್ಯವಸಾನ ಮಾಡುತ್ತಾರೆ. ಅದು ಕೈಗಾ ಉಷ್ಣ ವಿದ್ಯುತ್ ಸ್ಥಾವರವಾಗಲಿ, ನಂದಿಕೂರಿನ ಉಷ್ಣ ಸ್ಥಾವರವಾಗಲಿ ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ಮಂಚೂಣಿಯಲ್ಲಿರುತ್ತಾರೆ. ನಂದಿಕೂರಿನ ಉಷ್ಣಸ್ಥಾವರದಿಂದ  ಆಗುವ ಪರಿಸರಮಾಲಿನ್ಯ, ಅದರಿಂದ ಸುತ್ತ-ಮುತ್ತಲಿನ ಹಳ್ಳೀಯ ಜನರ ಆರೋಗ್ಯದಲ್ಲಿ ಆಗುವ ದುಷ್ಪರಿಣಾಮವನ್ನು ತಿಳಿದು ಸ್ವಾಮಿಗಳು ಹೋರಾಟದಲ್ಲಿ ಸಕ್ರಿಯರಾದರು. ಒಂದು ದಿನ ಪತ್ರಕರ್ತರ ಸಭೆಯಲ್ಲಿ, ಸಂವಾದ, ಪ್ರಶ್ನೊತ್ತರ ಕಾರ್ಯಕ್ರಮದ ನಂತರ ಪತ್ರಕರ್ತರೆಲ್ಲರೂ ಸ್ವಾಮಿಗಳು "ಉಪವಾಸ ಸತ್ಯಾಗ್ರಹ"ವನ್ನು ಘೋಷಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಪತ್ರಕರ್ತರ ಪ್ರಶ್ನೆಗಳಿಂದ ಸ್ವಾಮಿಗಳಿಗೆ ಈ ವಿಷಯದ ಅರಿವಾಯಿತು. ಆದರೆ ಸಂಪೂರ್ಣ ಉಪವಾಸ ಕ್ಲಿಷ್ಟಕರ ಮತ್ತು ಅದರಲ್ಲಿರುವ ಪರಿಶ್ರಮದಷ್ಟು ಪ್ರಯೋಜನವನ್ನು "ಸತ್ಯಾಗ್ರಹ" ಉಂಟುಮಾಡುತ್ತದೆ ಎನ್ನುವುದೂ ಸಂಶಯವೇ. ಆದರೆ ಜಾಗೃತಿಗಾಗಿ ಎನಾದರೂ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಆ ಸಂದರ್ಭದಲ್ಲಿ ಸ್ವಾಮಿಗಳು "24 ಘಂಟೆ ಉಪವಾಸ" ಎಂಬ ಹೊಸ ವಿಧಾನವನ್ನು ಕಂಡುಹಿಡಿದರು.  ಅಂದರೆ ಮಧ್ಯಾಹ್ನ ಭಿಕ್ಷೆ { ಯತಿಗಳ ಊಟ } ಸ್ವೀಕರಿಸಿದರೆ, ಮರುದಿನ ಮಧ್ಯಾಹ್ನದವರೆಗೂ ಯಾವುದೇ ಆಹಾರ ಸ್ವೀಕರಿಸದಿರುವುದು, ಅದರ ನಿಯಮವಾಗಿತ್ತು. ಗಾಂಧೀಜಿಯ ಅನುಯಾಯಿಯಾದರೂ ಸತ್ಯಾಗ್ರಹದ ವಿಷಯದಲ್ಲಿ ಈ ಉದಾರ ಧೋರಣೆ ತೋರಿದ್ದು ನಮಗೆಲ್ಲರಿಗೂ ಸಂತೋಷದಾಯಕವೇ ಆಗಿತ್ತು. ಆದರೂ ಈ ಇಳಿ ವಯಸ್ಸಿನಲ್ಲಿ ರಾತ್ರಿ ಆಹಾರ ಸ್ವೀಕರಿಸದಿರುವುದು ಅವರ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡಿತ್ತು. ಈ ಕ್ರಮಗಳಿಂದ ಸ್ಥಾವರಗಳನ್ನು ಮುಚ್ಚುವುದು ಅಸಾಧ್ಯವಾದರೂ ಜನರಲ್ಲಿ ಪರಿಸರದ ವಿಷಯದಲ್ಲಿ ಜಾಗೃತಿ ಮೂಡುವುದು ನಿಶ್ಚಯವಾಗಿತ್ತು.

ನಿರಂತೋತ್ಸಾಹಿ ಮತ್ತು ಆಶಾವಾದಿಗಳು

ಗುಜರಾತಿನ ಅಹಮದಾಬಾದಿನಲ್ಲಿ "ಹಿಂದೂ ಮಹಾಸಭಾ" ಆಯೋಜನೆಯಾಗಿತ್ತು. ಸ್ವಾಮಿಗಳೂ ಪ್ರತಿವರ್ಷದಂತೆ ಹೋಗುವುದಾಗಿ ತೀರ್ಮಾನಿಸಿದ್ದರು. ಪ್ರಯಾಣ ಬಹಳ ದೂರವಾದ್ದರಿಂದ "ಪಾಠ ತಪ್ಪಿಸಬಾರದು" ಎನ್ನುವ ಉದ್ದೇಶದಿಂದ ನಮ್ಮನ್ನೂ ಜೊತೆಗೆ ಕರೆದುಕೊಂಡು ಹೋದರು. 84ರ ಇಳಿವಯಸ್ಸಿನಲ್ಲೂ ಹಿಂದೂ ಸಮಾಜದ ಸಂಘಟನೆಯ ಉದ್ದೇಶದಿಂದ ನಡೆಯುವ ಸಭೆಗಳಿಗೆ ಹೋಗಲೇಬೇಕೆಂಬ ಅವರ ದೃಢನಿರ್ಧಾರ. ಅವರ ತತ್ವನಿಷ್ಠೆಗೆ ಒಂದು ಕನ್ನಡಿ. ಎಕೆಂದರೆ ಆ ಸಭೆಗೆ ಪ್ರಾಯ: ಎಲ್ಲಾ ದಕ್ಷಿಣಭಾರತದ ಪೀಠಾಧಿಪತಿಗಳು ತಮ್ಮ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಅಂದು ಆ ಸಭೆಗೆ ಆಗಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ "ನರೇಂದ್ರ ಮೋದಿ"ಯವರು ಆಗಮಿಸುವವರಿದ್ದರು. ಅಂದು ಗುಜರಾತಿನಲ್ಲಿ ಚುನಾವಣಾ ಸಮಯ. "Code of conduct" ಜಾರಿಯಲ್ಲಿತ್ತು. ಆದ್ದರಿಂದ ಮೋದಿಯವರು ಹೆಚ್ಚು ಸಮಯ ಇರುವವರಿರಲಿಲ್ಲ. ಅದೊಂದು ದೊಡ್ಡ ಸಭಾಂಗಣ. ಸ್ವಾಮಿಗಳಿಗೆ ಆಸನದ ವ್ಯವಸ್ಥೆ ಸ್ವಲ್ಪ ದೂರದಲ್ಲಿತ್ತು. ಸ್ವಾಮಿಗಳು ಮೋದಿಯವರನ್ನು ಆಶೀರ್ವದಿಸಿಬೇಕೆಂದು ಶಾಲು ತರಿಸಿದರು. ಮೋದಿಯವರ ಭಾಷಣ ಮುಗಿಯಿತು. ಅವರ ಸುತ್ತಲೂ ಜನಗುಂಗುಳಿಯೇ ಏರ್ಪಟ್ಟಿತ್ತು. ಇನ್ನೇನು ಸ್ವಾಮಿಗಳು ಹಾಗೆಯೇ ಹಿಂದಿರುಗುತ್ತಾರೆ ಎಂದು ಅಂದುಕೊಂಡೆ. ಆದರೆ ಸ್ವಾಮಿಗಳು ನನಗೆ, "ನೀನು ನನ್ನ ಹಿಂದೆ ಶಾಲು ಹಿಡಿದುಕೊಂಡು ಬಾ" ನಾನು ಅವರಿಗೆ ಶಾಲು ಹೊದಿಸುತ್ತೇನೆ ಅಂತ ಹೇಳಿ, ನೋಡು ನೋಡುತ್ತಿದ್ದಂತೆ ಜನಗುಂಗುಳಿಯಲ್ಲಿ ಸರ ಸರನೇ ದಾರಿ ಮಾಡಿಕೊಂಡು  ಹೊರಟರು. ನನಗೋ ಅವರನ್ನು ಹಿಂಬಾಲಿಸುವುದೇ ಕಷ್ಟವಾಯಿತು. ಇನ್ನೇನು ಮೋದಿಯವರು ಹೊರಡುವವರಿದ್ದರೂ, ಅಷ್ಟರಲ್ಲಿ ಸ್ವಾಮಿಗಳು " ಮೋದಿ ಜೀ" ಎಂದು ಅವರನ್ನು ಕರೆದು ಹೆಗಲಿಗೆ ಶಾಲು ಹೊದಿಸಿ ಸನ್ಮಾನಿಸಿದರು. "ಅಶೋಕ್ ಸಿಂಘಾಲ''ರು ಸ್ವಾಮಿಗಳನ್ನು ಪರಿಚಯಿಸಲು ಮುಂದಾದರು. ಅಷ್ಟರಲ್ಲಿ ಮೋದಿಯವರೇ "ಮುಝೆ ಪತಾ ಹೈ" ಎಂದು ಸ್ವಾಮಿಗಳು ಉಡುಪಿಯಲ್ಲಿ ಆಯೋಜಿಸಿದ ವಿ.ಹಂ.ಪಾ ಸಮ್ಮೇಳನಕ್ಕೆ ಕಾರ್ಯಕರ್ತನಾಗಿ  ಉಡುಪಿಗೆ ಬಂದದ್ದನ್ನು ಸ್ಮರಿಸಿಕೊಂಡರು. ಹೀಗೆ ಅಂದುಕೊಂಡಿದ್ದನ್ನು ಸ್ವಾಮಿಗಳು ಮಾಡಿಯೇ ಬಿಟ್ಟರು. ಇಳಿವಯಸ್ಸಿನಲ್ಲಿ ಸ್ವಾಮಿಗಳ ಚುರುಕುತನ, ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಳ್ಳುವ ಗುಣ, ಅಂದುಕೊಂಡಿದ್ದನ್ನು ಸಾಧಿಸುವ ಛಲ ಯುವಕರೂ ನಾಚುವಂತಿತ್ತು. ಸ್ವಾಮಿಗಳ ಇಂತಹ ಅನೇಕ ಹೋರಾಟ, ಜನ ಸಂಘಟನೆ ಮೋದಲಾದ ಸಹಾಯದಿಂದಲೆ ಇಂದು ರಾಮಮಂದಿರವನ್ನು ಕಾಣುವ ಸೌಭಾಗ್ಯ ನಮ್ಮದಾಗಿದೆ ಹೀಗೆ ಸ್ವಾಮಿಗಳವರ ಹಲವಾರು ಮುಖಗಳನ್ನು ನೋಡುವ ಅವಕಾಶ ನನಗಾಗಿದ್ದು ಸೌಭಾಗ್ಯವೇ ಸರಿ.....
                                      ಶ್ರೀಪಾದರಅಸಂಖ್ಯಶಿಷ್ಯರಲ್ಲೋಬ್ಬ...
ಶ್ರಿನಿಧಿ ಆಚಾರ್ಯ ಪ್ಯಾಟಿ


Comments

  1. Avara vyaktitvavannu pratibimbisuva sooktavada lekhana

    ReplyDelete
  2. Really it was enlightening !! Our Pranamagalu to both of you!!

    ReplyDelete

Post a Comment

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting