ವಿಜಯದಾಸರ ಸ್ವಪ್ನಸುಳಾದಿ



ಸಾಧನಾ ಮಾರ್ಗದಲ್ಲಿ ಅತಿಪ್ರಮುಖವಾದ ಅಂಶ ಭಕ್ತಿ. ಭಕ್ತಿ ಎಂದರೆ ಪರಮಾತ್ಮನಲ್ಲಿ ಮಾಡುವ ಮಾಹಾತ್ಮ್ಯಜ್ಞಾನಪೂರ್ವಕವಾದ ಧೃಢವಾದ ಸ್ನೇಹ. ಪರಮಾತ್ಮನಲ್ಲಿ ಮಾಹಾತ್ಮ್ಯಜ್ಞಾನ ಬರಬೇಕಾದರೆ, ಅವನ ಗುಣಗಳನ್ನು ,ಲೀಲೆಗಳನ್ನು ಅರ್ಥೈಸಿಕೊಳ್ಳಬೇಕು. ಈ ರೀತಿಯಾದ ಭಕ್ತಿಯೇ ನಮ್ಮಲ್ಲಿ ಈಶ ದಾಸ ಭಾವವನ್ನು, ಪರಮಾತ್ಮನ ಅಧೀನರೆಂಬ ಜ್ಞಾನವನ್ನು ಅನುಭವ ,ಆಚರಣೆಗಳ ಹಂತಕ್ಕೆ ಕೊಂಡೊಯ್ಯುತ್ತದೆ. ನಾವು ಪರಮಾತ್ಮನ ಅಧೀನರೆಂಬ ಪ್ರಮೇಯಕ್ಕೆ ಅತ್ಯಂತ ಉತ್ತಮವಾದ ದೃಷ್ಟಾಂತವೆಂದರೆ ವ್ಯಕ್ತಿಗಳು ಮಲಗಿದಾಗ ಕಾಣುವ ಸ್ವಪ್ನ. ಸ್ವಪ್ನವು ಅತಿ ವಿಸ್ಮಯಕಾರಿಯಾದ ಪರಮಾತ್ಮನ ಸೃಷ್ಟಿ. ನಾವು ಸ್ವತಂತ್ರರಾಗಿದ್ದರೆ, ನಾವು ಇಚ್ಚೆಪಟ್ಟಂತೆ ಸ್ವಪ್ನವನ್ನು ಕಾಣಬೇಕಿತ್ತು. ಆದರೆ ವಸ್ತುಸ್ಥಿತಿಯು ಹಾಗಿಲ್ಲವೆನ್ನುವುದು ಎಲ್ಲರಿಗೂ ಅನುಭವವೇದ್ಯವೇ ಆಗಿದೆ. ಸ್ವಪ್ನದಂತೆಯೆ ಜಾಗೃತ್ತು ಅವನ ಅಧೀನ. ಮಾನವನ ಈ ಅವಸ್ಥೆಗಳನ್ನು, ಅವುಗಳನ್ನು ನಿಯಂತ್ರಿಸುವ ಪರಮಾತ್ಮನ ರೂಪಗಳನ್ನು ದಾಸರು ಸ್ವಪ್ನಸುಳಾದಿಯಲ್ಲಿ ವಿಮರ್ಶಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ಪದಾರ್ಥಗಳು ಸತ್ಯ ಎನ್ನುವುದು ಆಚಾರ್ಯರ ಸಿದ್ಧಾಂತ. ಸ್ವಪ್ನಕಾಲದಲ್ಲಿ ಕಾಣುವ ಪದಾರ್ಥಗಳನ್ನು ಪರಮಾತ್ಮನು ಮನಸ್ಸೆಂಬ ಗೊಡೆಯ ಮೇಲೆ ಸೃಷ್ಟಿಸುತ್ತಾನೆ. ಈ ಪದಾರ್ಥಗಳನ್ನು ಯಾವಾಗ ಸೃಷ್ಟಿಸುತ್ತಾನೆ ಎಂದು ಪ್ರಶ್ನೆ ಮೂಡುವುದು ಸಹಜ. ಸ್ವಪ್ನಕಾಲಕ್ಕಿಂತ ಮುಂಚೆ ಅಥವಾ ನಂತರ ಎಚ್ಚರಕಾಲದಲ್ಲಿ ಸೃಷ್ಟಿಸುತ್ತಾನೆ ಎಂದು ಹೇಳಲು ಬರುವುದಿಲ್ಲ.ಏಕೆಂದರೆ ಆಗ ನಮಗೆ ಸ್ವಾಪ್ನ ಪದಾರ್ಥಗಳು ಕಣ್ಣಿಗೆ ಕಾಣುವುದಿಲ್ಲ. ಆಗ ಸೃಷ್ಟಿಮಾಡಿದ್ದರೆ ಕಣ್ಣಿಗೆ ಕಾಣಬೇಕಿತ್ತು. ಸ್ವಪ್ನಕಾಲದಲ್ಲೇ ಸೃಷ್ಟಿ ಮಾಡುತ್ತಾನೆ ಎಂದು ಹೇಳಲು ಬರುವುದಿಲ್ಲ, ಏಕೆಂದರೆ ಸೃಷ್ಟಿಯ ನಂತರದಲ್ಲಿ ಆ ಪದಾರ್ಥಗಳು ಎಲ್ಲಿ ಹೋದವು ಎನ್ನುವ ಪ್ರಶ್ನೆ ಬರುತ್ತದೆ. ಹಾಗಾಗಿ ಸೃಷ್ಟಿಯಕಾಲದಲ್ಲಿ ಪದಾರ್ಥಗಳನ್ನು ಸೃಷ್ಟಿಸಿ, ಆ ಕಾಲದಲ್ಲಿ ಧ್ವಂಸಗೊಳಿಸುತ್ತಾನೆ ಎನ್ನುವುದು ಉತ್ತರ. ಆಕಾಲದಲ್ಲೇ ಪದಾರ್ಥಗಳನ್ನು ಧ್ವಂಸಗೊಳಿಸಿದರೆ ಅದರ ಅವಶೇಷಗಳು ಏಕೆ ಕಾಣಸಿಗುವುದಿಲ್ಲ ಎನ್ನುವ ಪ್ರಶ್ನೆ ಉಳಿಯುತ್ತದೆ. ಮಣ್ಣಿನಿಂದ ಮಡಿಕೆ ಮಾಡಿದಾಗ ಮಡಿಕೆಯನ್ನು ಧ್ವಂಸಮಾಡಿದರೆ ,ಅದರ ಅವಶೇಷಗಳು ದೊರೆಯುತ್ತವೆ, ಏಕೆಂದರೆ ಮಡಿಕೆಗೆ ಕಾರಣವಾದ ಮಣ್ಣು ಮೂರ್ತಪದಾರ್ಥ. ಆದರೆ ಪರಮಾತ್ಮನು ಅಮೂರ್ತವಾದ ನಮ್ಮ ಸಂಸ್ಕಾರಗಳೆಂಬ ಕಾರಣಗಳಿಂದ ಸ್ವಪ್ನವನ್ನು ಸೃಷ್ಟಿ ಮಾಡುವುದರಿಂದ ಅವುಗಳ ಅವಶೇಷಗಳು ಅಮೂರ್ತವಾಗುತ್ತವೆ. ಆಚಾರ್ಯರು ಬ್ರಹ್ಮಾಂಡಪುರಾಣದಲ್ಲಿರುವ ಈ ವಿಷಯವನ್ನು ಭಾಷ್ಯದಲ್ಲಿ ತಿಳಿಸಿದ್ದಾರೆ. ``    ಮನೋಗತಾಂಸ್ತು ಸಂಸ್ಕಾರಾನ್
ಸ್ವೇಚ್ಛಯಾಪರಮೇಶ್ವರಃ |
ಪ್ರದರ್ಶಯತಿ ಜೀವಾಯ                          ಸ ಸ್ವಪ್ನ ಇತಿ ಗೀಯತೆ
||

ಇದನ್ನೇ ದಾಸರಾಯರು ಸೂಕ್ಷ್ಮವಾಗಿ ``ಸ್ವಪ್ನಪ್ರಕರಣ ನಿತ್ಯ ಯೋಚಿಸಿ ತಿಳಿಯಬೇಕು. ಗುಪುತವಾಗಿ ಇದು ನೋಡಿದರು” ಎಂದು ಪ್ರಾರಂಭಿಸುತ್ತಾ, ``ದಿಪುತವಾದ ಮನಸು ಆಶ್ರಯವೆನ್ನಿ ಜಡ ತ್ರಿಪರಿಗುಣ ಸಂಯುಕ್ತ ಪ್ರಕಾಶವು” ಎಂದು ನುಡಿದಿದ್ದಾರೆ. ಮುಂದೆ ಜಾಗೃದವಸ್ಥೆ ಬಗ್ಗೆ ಹೇಳುತ್ತಾ ಜಾಗೃದವಸ್ಥೆಗೆ ನಿಯಾಮಕವಾದ ಪರಮಾತ್ಮನ ರೂಪ ವಿಶ್ವ. ಇವನು ಪ್ರಣವದ ಅಕ್ಷರಗಳಲ್ಲಿ ಆದ್ಯಕ್ಷರವಾದ ಅಕಾರದಿಂದ ವಾಚ್ಯನು. ಈ ರೂಪವು ನಮ್ಮ ಬಲಗಣ್ಣಿನಲ್ಲಿರುವುದು. ವಿಶ್ವನು ಹತ್ತೊಂಭತ್ತು ಮುಖವುಳ್ಳವನು, ಗಜವದನು ಆಗಿದ್ದಾನೆ. ``ಕೃಪಣ ವತ್ಸಲ ವಿಶ್ವಾನಂತಪ್ರಾಜ್ಞಾ ಚಕ್ಷುಷ ನೃಪ ತ್ರೀಣಿ ಮೊಗ ಮನುಜ ಹಸ್ತಿವದನ. ಪೂರ್ಣ ಸ್ಥೂಲಭುಕು ಸತ್ವಪ್ರವರ್ತಕ. ತಪನೀಯಕಾಯ ಈತನೆ ವಿ಼ಷ್ಣುನೊ ತಪವ ಮಾಡೆಲೊ ನಿತ್ಯ ವಿಶ್ವನ್ನ ಸೃಷ್ಟಿಕಾಲ.” ಇದು ದಾಸರ ಮಾತು. ಮಾಂಡುಕೋಪನಿಷತ್ತಿನ ವಿಷಯವನ್ನು ದಾಸರು ಇಲ್ಲಿ ವಿವರಿಸಿದ್ದಾರೆ. ಮಾಂಡುಕೋಪನಿಷತ್ತನಲ್ಲಿ ವಿಶ್ವನ ವಿವರಣೆ ಹೀಗಿದೆ. ``ಜಾಗರಿತಸ್ಥಾನೋ ಬಹಿಃಪ್ರಜ್ಞಃ| ಸಪ್ತಾಂಗಃ ಎಕೋನವಿಂಶತಿಮುಖ; ಸ್ಥೂಲಭುಕ್ ವೈಶ್ವಾನರಃ ಪ್ರಥಮಃ ಪಾದಃ|” ಹತ್ತೊಂತ್ತು ಮುಖಗಳು ಮತ್ತು ಸಪ್ತಾಂಗಳು ಯಾವುವು ಎನ್ನುವ ವಿಷಯವನ್ನು ಆಚಾರ್ಯರು ಭಾಷ್ಯದಲ್ಲಿ ವಿವರಿಸಿದ್ದಾರೆ. ``ಅಷ್ಟಾದಶಮುಖಾನ್ಯಸ್ಯ ಪುಮಾಕಾರಾಣಿ ಸರ್ವಶಃ| ಮಧ್ಯಮಂ ತು ಗಜಾಕಾರಂ ಚತುರ್ಬಾಹುಃ ಪರಃ ಪುಮಾನ್| ಪಾದೌ ಹಸ್ತಿಕರೋ ಹಸ್ತಾ ಇತಿ ಸಪ್ತಾಂಗ ಈರಿತಃ|” ಇವನಿಗೆ ಮನುಷ್ಯಾಕಾರದ ಹದಿನೆಂಟು ಮುಖಗಳಿವೆ. ಅವುಗಳ ಮಧ್ಯದಲ್ಲಿರುವ ಮುಖ ಆನೆಯಮುಖದಂತಿದೆ. ಅವನಿಗೆ ಎರಡು ಪಾದಗಳು, ಒಂದು ಸೊಂಡಿಲು, ನಾಲ್ಕು ಕೈಗಳಿರುವುದರಿಂದ ಅವನು ಸಪ್ತಾಂಗನೆನಿಸಿದ್ದಾನೆ. ``ಪೂರ್ಣಸ್ಥೂಲಭುಕು” ಎನ್ನುವ ಮೂಲಕ ಅವನ ವೈಶ್ವಾನರ ಎನ್ನುವ ನಾಮವನ್ನು ತಿಳಿಸಿದ್ದಾರೆ. ಆಚಾರ್ಯರು ಭಾಷ್ಯದಲ್ಲಿ ಹೀಗೆ ಹೇಳಿದ್ದಾರೆ.`` ಸ್ಥೂಲಾನ ಭೋಗಾನ್ ಇಂದಿಯೈಸ್ತು ಶುಭಾನ್ ಭುಂಕ್ತೇ ನ ಚಾಶುಭಾನ್ | ವಿಶ್ವಂ ಸ್ಥೂಲಂ ಸಮುದ್ದಿಷ್ಟಂ ಸರ್ವಗಮ್ಯತ್ವ ಹೇತುತಃ| ತತ್ಸಂಭಂಧೀ ನರೋ -ಅನಾಶಾತ್ ವೈಶ್ವಾನರ ಉದಾಹೃತಃ|” ಸ್ಥೂಲ ಪದಾರ್ಥಗಳನ್ನು ಜೀವಿಗಳ ಇಂದ್ರಿಯಗಳ ಮೂಲಕ ಭೋಗಿಸುವುದರಿಂದ ಅವನು ವೈಶ್ವ. ಜೀವಾತ್ಮರಶರೀರದಲ್ಲಿದ್ದರೂ ಅವನು ನಾಶರಹಿತರಾದ್ದರಿಂದ ನರ ಎಂದು ಕರೆಸಿಕೊಳ್ಳುವನು. ಹಾಗಾಗಿ ಇವನಿಗೆ ವೈಶ್ವಾನರ ಎಂದು ನಾಮ.ಇವನ ಧ್ಯಾನದಿಂದಲೇ ವಿನಾಯಕನು ಗಜವದನನಾದನು. ಇಂತಹ ವಿಶ್ವನು ತನ್ನ ಸಾಸಿವೆಕಾಳಿನಷ್ಟು ಭಾಗದ ಸಾಮರ್ಥ್ಯದಿಂದ ಬ್ರಹ್ಮ ವಾಯು ಮೊದಲಾದ ದೇವತೆಗಳಿಂದ ಈ ಪ್ರಪಂಚದ ವ್ಯಾಪಾರವನ್ನು ನಡೆಸುತ್ತಾನೆ. ಜಾಗೃದವಸ್ಥೆಯಲ್ಲಿ ಧ್ಯಾನ ಮಾಡುವಾಗ ವಾಸನಾಮಯವಾದ ಕಪಿಲಮೊದಲಾದ ರೂಪಗಳಲ್ಲಿ ಪರಮಾತ್ಮನ ಅಪರೋಕ್ಷವಾದರೆ, ನಮ್ಮ ಪ್ರಾರಬ್ಧ ಕರ್ಮಗಳಿಂದ ವಿವಿಧವಾದ ನೀಚಯೋನಿಗಳಿಗಳಲ್ಲಿ ಹುಟ್ಟಿ ಪಡೆಯಬೇಕಾಗಿದ್ದ ದುಃಖವನ್ನು ಸ್ವಪ್ನದಲ್ಲಿ ಅನುಭವಿಸುವ ಹಾಗೆ ಮಾಡಿ ನಮಗೆ ಪರಮಾನುಗ್ರಹ ಮಾಡುತ್ತಾನೆ.
ಮುಂದೆ ದಾಸರು ತೈಜಸನ ವಿ಼ಷಯವನ್ನು ನಿರೂಪಿಸಿದ್ದಾರೆ. ಜಾಗೃದವಸ್ಥೆಯಲ್ಲಿ ಕರ್ಮಾಭಿಮಾನಿ ದೇವತೆಗಳು,ದೈತ್ಯರು ಭಗವಂತನ ಪ್ರೇರಣೆಯಿಂದ ಯೋಗ್ಯತೆಗನುಸಾರವಾಗಿ ಸುಕರ್ಮ ದುಷ್ಟಕರ್ಮಗಳನ್ನು ಮಾಡಿಸುವರು. ಸ್ವಪ್ನಕಾಲವಾಗುವಾಗ ವಿಶ್ವನು ತೈಜಸನಲ್ಲಿ ಒಂದುಗೂಡುತ್ತಾನೆ. ಅದಕ್ಕೂ ಮುಂಚೆ ಈ ಎಲ್ಲಾ ಕರ್ಮಾಭಿಮಾನಿ ದೇವತೆಗಳು, ದೈತ್ಯರು ಮನಸ್ಸು ಹೊರತುಪಡಿಸಿ ಉಳಿದೆಲ್ಲಾ ಇಂದ್ರಯಾಭಿದೇವತೆಗಳು ವಿಶ್ವನಲ್ಲಿ ಬಂದು ಸೇರುತ್ತಾರೆ. ಇವರನ್ನೆಲ್ಲಾ ಒಡಲಲ್ಲಿ ಇಟ್ಟುಕೊಂಡು ವಿಶ್ವನು ತೈಜಸನಲ್ಲಿ ಸೇರುತ್ತಾನೆ. ಆ ತೈಜಸನ ರೂಪ ಹೇಗಿದೆಯೆಂದು ಮಾಂಡೂಕೋಪನಿಷತ್ತು ಹೀಗೆ ನಿರೂಪಿಸಿದೆ,`` ಸ್ವಪ್ನಸ್ಥಾನೋ ಅಂತಃಪ್ರಜ್ಞಃ | ಸಪ್ತಾಂಗಃ ಎಕೋನವೊವಿಂಶತಿಮುಖಃ ಪ್ರವಿವಿಕ್ತಭುಕ್ ತೈಜಸೋ ದೀತಿಯಃ ಪಾದಃ |” ಇದನ್ನೆ ಸಂಗ್ರಹಿಸಿ ದಾಸರು ಹೀಗೆ ನಿರೂಪಿಸಿದ್ದಾರೆ.`` ದಿವಿಜ ದಾನವತತಿಯ ಗರ್ಭದಿ ಧರಿಸಿ | ಶಿವನ ಮನೆಗೆ ಇಳಿದು ತೈಜಸನಲ್ಲಿ ಕೂಡುವ ಸಪ್ತಾಂಗ ಪ್ರಾಜ್ಞ |” ತೈಜಸನಿಗೂ ವಿಶ್ವನಂತೆ ಹತ್ತೊಂಭತ್ತು ಮುಖಗಳು ಎಳು ಅಂಗಗಳು . ಕಂಠ ದೇಶ ಇವನ ಸ್ಥಾನ .ಬಾಹ್ಯಪದಾರ್ಥಗಳನ್ನು ನೋಡುವುದು ,ಕೇಳುವುದು ಮುಂತಾದವುಗಳಿಂದ ಉಂಟಾಗುವ ಸಂಸ್ಕಾರಗಳನ್ನು ಉಪಾದಾನಕಾರಣ ಮಾಡಿಕೊಂಡು ( ಮಡಿಕೆಗೆ ಮಣ್ಣಿನಂತೆ ) ಸ್ವಾಪ್ನವಸ್ತುಗಳನ್ನು ಸೃಷ್ಟಿಸಿ ಜೀವಿಗಳು ಅನುಭವಿಸುವಂತೆ ಮಾಡುತ್ತಾನೆ. ಸ್ವಪ್ನದಲ್ಲಿ ಆನೆ ಕುದುರೆ ಮುಂತಾದ ಹೊರಗೆ ನೊಡಿರುವ ವಸ್ತುಗಳಂತಹ ವಸ್ತುಗಳನ್ನು ಸೃಷ್ಟಿಸುತ್ತಾನೆ. ಈ ವಿಷಯವನ್ನು ಬೃಹದಾರಣಕೋಪನಿಷತ್ತಿನಲ್ಲಿ ನಿರೂಪಿಸಿದ್ದಾರೆ. “ನ ತತ್ರ ರಥಾಃ ನ ರಥಯೊಗಾಃ ನ ಪಂಥಾನಃ ಭವನ್ತ್ಯಥ ರಥಾನ್ ರಥಯೊಗಾನ್ ಪಥಃ ಸೃಜತೇ” ಸ್ವಪ್ನಕಾಲದಲ್ಲಿ ರಥಗಳೂ , ರಥದ ಮಾರ್ಗಗಳೂ ಇರುವುದಿಲ್ಲ ,ಆದರೆ ಅವುಗಳನ್ನು ಆ ಕಾಲದಲ್ಲಿ ಪರಮಾತ್ಮನು ಸೃಷ್ಟಿಸುತ್ತಾನೆ ಎಂದು ಈ ಉಪನಿಷತ್ತಿನ ಅರ್ಥ. ಹೊರ ಜಗತ್ತಿನಲ್ಲಿ ನೊಡಿದ ಆನೆಯನ್ನೆ ಸ್ವಪ್ನದಲ್ಲಿ ನೋಡಿದೆ ಎಂದು ತಿಳಿದರೆ ಭ್ರಾಂತಿ. ಏಕೆಂದರೆ ಆ ಆನೆಯು ನಮ್ಮ ಒಳಗೆ ಬರಲು ಸಾಧ್ಯವಿಲ್ಲ. ಹಾಗಾಗಿ ಆ ಆನೆಯ ತರಹದ ವಸ್ತುವನ್ನು ನೊಡಿದೆ ಎಂದು ತಿಳಿಯಬೇಕು.
ಇಂತಹ ವಿಸ್ಮಯಕಾರಿಯಾದ ಸ್ವಪ್ನಲೋಕವನ್ನು ಪ್ರತಿನಿತ್ಯ ನಮಗೆ ತೋರಿಸುತ್ತಲೆ, ನೀವು ನನ್ನಾಧೀನ ಎನ್ನುವ ಪ್ರಮೇಯವನ್ನು ಪರಮಾತ್ಮನು ತಿಳಿಸುತ್ತಲೇ ಇರುತ್ತಾನೆ. ಆದರೆ ತಿಳಿಯುವ ಯೋಗ್ಯತೆ ನಮಗೆ ಬರಬೇಕು. ಈ ರೀತಿಯಾದ ಯೋಗ್ಯತೆ ನಮಗೆ ದಾಸರ ಈ ತರಹದ ಸುಳಾದಿಗಳ ಅಧ್ಯಯನದಿಂದ ಉಂಟಾಗುತ್ತದೆ. ನಾನು ಲೇಖನದ ಆದಿಯಲ್ಲಿ ಹೇಳಿದ ಹಾಗೆ ಕೇವಲ ಅಧ್ಯಯನ ಮಾತ್ರದಿಂದ ಈ ಸುಳಾದಿಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲಾಗುವುದಿಲ್ಲ. ಆದರೆ ನನ್ನ ಯೋಗ್ಯತೆಗೆ ನಿಲುಕಿದ ಅರ್ಥವನ್ನು ಈ ಲೇಖನದಲ್ಲಿ ವಿಮರ್ಶಿಸಲು ಪ್ರಯತ್ನಿಸಿದ್ದೇನೆ. ಈ ಲೇಖನ ಯಜ್ಞದಿಂದ ವಿಜಯದಾಸರು ಮತ್ತು ಅವರಿಂದ ಆರಾಧ್ಯರಾದ ವಿಜಯವಿಠಲ ದೇವರು ಪ್ರೀತರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಲೇಖಕರು - ವಿ. ಶ್ರೀನಿಧಿ ಪ್ಯಾಟಿ. ಪೂರ್ಣಪ್ರಜ್ಞ ಸಂಶೋಧನ ಮಂದಿರ. ಬೆಂಗಳೂರು.


Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting