ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ

                           

ವ್ಯಾಸರಾಜರ ಜೀವನ – ಒಂದು ಐತಿಹಾಸಿಕ ಅಧ್ಯಯನ
                                                                                                ಭಾರತದಲ್ಲಿ ಸನಾತನ ಧರ್ಮದ ಪುನರುತ್ಥಾನದ ವಿಷಯದಲ್ಲಿ ಮಾಧ್ವ ಯತಿಗಳ ಕೊಡುಗೆ ಎನೂ ಇಲ್ಲ ಎನ್ನುವ ಆಕ್ಷೇಪವನ್ನು ನಾವು ಆಗ್ಗಾಗ್ಗೆ ಕೇಳುತ್ತೆವೆ . ವಿದ್ಯಾರಣ್ಯರು ಹಕ್ಕ-ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದ್ದನ್ನು ನಾವು ಓದಿದ್ದೇವೆ . ಆದರೆ ಅದರಂತೆಯೇ  ವ್ಯಾಸರಾಜರ ಜೀವನವನ್ನು ಐತಿಹಾಸಿಕ ದೃಷ್ಟಿಯಿಂದ ಇನ್ನೂ ಹೆಚ್ಚು ಅಧ್ಯಯನ ಮಾಡಿದರೆ ಇವರ ಕೊಡುಗೆಯೂ ಈ ವಿಷಯದಲ್ಲಿ ಅನುಪಮವೇ ಎನ್ನುವ ಸತ್ಯ ಗೋಚರಿಸುತ್ತದೆ.  ವ್ಯಾಸರಾಜರು  ಸಾಳುವ ನರಸಿಂಹದೇವರಾಯ , ತಿಮ್ಮಭೂಪಾಲ , ತುಳುವ ನರಸ ನಾಯಕ , ವೀರ ನರಸಿಂಹರಾಯ , ಕೃಷ್ಣದೇವರಾಯ , ಅಚ್ಯುತ ದೇವರಾಯರೆಂಬ ವಿಜಯನಗರರಾಜರುಗಳಿಗೆ ಅರ್ಧಶತಮಾನಕ್ಕೂ ಹೆಚ್ಚು ಕಾಲ ಮಾರ್ಗದರ್ಶನ ಮಾಡಿದ ರಾಜಗುರುಗಳಾಗಿದ್ದರು . ಪುರಂದರದಾಸರು , ಕನಕದಾಸರಿಗೆ ಆಧ್ಯಾತ್ಮ ಗುರುಗಳಾಗಿ ತಮ್ಮ ರಾಜ್ಯದಲ್ಲೆಲ್ಲಾ ಭಕ್ತಿ ಮಾರ್ಗವೂ ಪ್ರಬಲವಾಗಿ ಜನರ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದರು. ರಾಜರೆಲ್ಲರೂ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇದ್ದರೂ ಯಾವುದೆ ವೈಯಕ್ತಿಕ ಲಾಭವನ್ನು ಮಾಡಿಕೊಳ್ಳದೆ, ಕೃಷ್ಣನ ಭಕ್ತಿಯಲ್ಲಿ ಲೀನರಾಗಿ ವೈರಾಗ್ಯದ ಪರಾಕಾಷ್ಠತೆಯನ್ನು ಪ್ರದರ್ಶಿಸಿದರು .
ವ್ಯಾಸರಾಜರ ಈ ಅಸದೃಶವಾದ ಜೀವನವನ್ನು ಸೋಮನಾಥ ಕವಿಯು ತನ್ನ” ವ್ಯಾಸಯೋಗಿಚರಿತಂ” ಎನ್ನುವ ಚಂಪೂಕಾವ್ಯದಲ್ಲಿ ಸೆರೆಹಿಡಿದಿದ್ದಾನೆ .  ಸೋಮನಾಥನು ವ್ಯಾಸರಾಜರ ಸಮಕಾಲೀನ ಎನ್ನುವುದು ವಿಶೇಷ . ಅಚ್ಯುತದೇವರಾಯನ ಆಳ್ವಿಕೆಯ ಕಾಲದಲ್ಲಿ ನಾರಾಯಣಯತಿಗಳು ಅವನನ್ನು ವ್ಯಾಸರಜರಿಗೆ ಪರಿಚಯಿಸಿದರೆಂದು ಅವನೆ ಈ ಕಾವ್ಯದ ಅಂತ್ಯದಲ್ಲಿ ಹೇಳಿಕೊಂಡಿದ್ದಾನೆ.  ಸೋಮನಾಥನು ಸ್ಮಾರ್ತ ಬ್ರಾಹ್ಮಣನಾಗಿದ್ದನು . ಆದರೂ ಅವನು ತನ್ನ ಸಿದ್ದಾಂತದ ವಿರೋಧಿಗಳಾಗಿದ್ದ ವ್ಯಾಸರಾಜರ ಜೀವನ ಚರಿತ್ರೆಯನ್ನು ಬರೆದದ್ದು ಮೇಲುನೋಟಕ್ಕೆ ಆಶ್ಚರ್ಯತರಿಸಿದರೂ, ವ್ಯಾಸರಾಜರು ಸಿದ್ದಾಂತವನ್ನು ಲೆಕ್ಕಿಸದೆ ವಿದ್ವತ್ಪಕ್ಷಪಾತಿಗಳಾಗಿದ್ದರು ಎನ್ನುವುದನ್ನು ತಿಳಿದಾಗ ಇದು ಸಹಜವೆನ್ನಿಸಿಬಿಡುತ್ತದೆ. ಸೋಮನಾಥನು  ತನ್ನ ಕಲೆಗಳಿಂದ ಪ್ರಸಿದ್ಧನಾಗಿ ರಾಜ-ಮಹಾರಾಜರುಗಳಿಂದ ಸನ್ಮಾನ ಸ್ವೀಕರಿಸುತ್ತಾ ಯಾತ್ರೆಯನ್ನು ಕೈಗೊಳ್ಳುತ್ತಿದಾಗ  ನಾರಾಯಣಯತಿಗಳು  ವ್ಯಾಸರಾಜರ ಅಪ್ಪಣೆಯ ಮೇರೆಗೆ ಒಂದು ಪತ್ರವನ್ನು ಬರೆದರು . “ಸ್ವಾಮಿಗಳು ನಿಮ್ಮ ಯಾತ್ರೆಯ ಸಫಲತೆಯಿಂದ ಬಹಳ ಸಂತೋಷಗೊಂಡಿದ್ದಾರೆ ,ಹಾಗಾಗಿ ಆದಷ್ಟು ಬೇಗ ನಿಮ್ಮನ್ನು ಕಾಣಲು ಬಯಸಿದ್ದಾರೆ  “ಭವತಾ ತ್ವರಿತಮಾಗಂತವ್ಯಮಿತಿ`` ಇದು ಪತ್ರದ ಸಾರಾಂಶ . ಸೋಮನಾಥನು ಈ ಪತ್ರವನ್ನು ತನ್ನ ಪಂಡಿತಮಿತ್ರರ ಸಮಕ್ಷಮದಲ್ಲಿ ಓದಿ ಆನಂದದಿಂದ ಭಕ್ತಿಪರವಶನಾಗಿ ಹೀಗೆ ಹೇಳುತ್ತಾನೆ ,” ಅಹೋ ವಾಚಾಮಗೋಚರಶಿಷ್ಯಪರಮಾಣೌ ಮಯಿ ನಾರಾಯಣತಪೋನಿಧೇಃ ಮಹಾನ್ ಅಯಂ ವಾತ್ಸಲ್ಯಭಾರಃ `` (ಬಹಳಚಿಕ್ಕವನಾದ ಈ ಕವಿಯ ವಿಷಯದಲ್ಲಿ ತಪಶ್ಶ್ರೇಷ್ಠರಾದ ವ್ಯಾಸರಾಜರ ಅಪಾರ ವಾತ್ಸಲ್ಯವು ಆಶ್ಚರ್ಯನ್ನುಂಟುತ್ತದೆ ) . ನಂತರ ವಿಜಯನಗರಕ್ಕೆ ವೇಗವಾಗಿ ತಲುಪಿ ವ್ಯಾಸರಾಜರನ್ನು ರಾಜಸಭೆಯಲ್ಲಿ ಕಾಣುತ್ತಾನೆ . ಅವನ ಕಾವ್ಯಪಾಂಡಿತ್ಯವನ್ನು ಮೆಚ್ಚಿ ಅವನನ್ನು ರಾಜರ ಆಸ್ಥಾನದಲ್ಲಿ ಇರಿಸಿಕೊಳ್ಳುತ್ತಾರೆ. ಇದನ್ನು ಕವಿಯ ತನ್ನ ಕಾವ್ಯದಲ್ಲಿ ಉಲ್ಲೇಖಿಸಿದ್ದಾನೆ.   ಇಂತಹ ಈ ಕಾವ್ಯದ ಪ್ರಕಟಣೆಯನ್ನು ೧೯೨೬ನೆಯ ಇಸ್ವಿಯಲ್ಲಿ ವೆಂಕೋಬರಾವ್ ಎನ್ನುವರು ವಿಸ್ತಾರವಾದ , ವಿಮರ್ಶಾತ್ಮವಾದ ಆಂಗ್ಲ ಭಾಷೆಯ ಮುನ್ನುಡಿಯೊಂದಿಗೆ ಪ್ರಕಟಿಸಿದರು .ಹಸ್ತಪ್ರತಿಯನ್ನು ಕಾಳಜಿಯಿಂದ ಬೆಂಗಳೂರಿಗೆ ತರಿಸಿದ  ಅಂದಿನ ವ್ಯಾಸರಾಜಮಠದ ದಿವಾನರಾದ ಶ್ರೀನಿವಾಸಮೂರ್ತಿಯವರನ್ನು ವೇಂಕೋಬರಾವ್ ಅವರು ಬಹಳ ಸ್ಮರಿಸಿದ್ದಾರೆ . ಅವರು ಕಾಳಜಿಯಿಂದ  ಈ ಹಸ್ತ ಪ್ರತಿಯನ್ನು ಬೆಂಗಳೂರಿಗೆ ತರಿಸದಿದ್ದಲ್ಲಿ ನಂತರ ಕೆಲವು ವಾರಗಳಲ್ಲಿ ಬಂದ ಕಾವೇರಿಯ ಪ್ರವಾಹದಲ್ಲಿ ಈ ಗ್ರಂಥವು ಕೊಚ್ಚಿ ನಾಶವಾಗುವ ಎಲ್ಲಾ ಸಾಧ್ಯತೆಗಳಿದ್ದವು ಎನ್ನುವ ಅಪರೂಪದ ವಿಷಯವನ್ನು ತಿಳಿಸಿದ್ದಾರೆ.  “ ವತ್ಸ , ಸೋಮನಾಥಕವೇ , ಕಾರುಣ್ಯೇನ  ಕಮಲಾಸಹಾಯಸ್ಯ ವರ್ಧಸೆ  ಕಿಮವ್ಯಾಹತೇನ ಮಂಗಲೇನ`` ಎನ್ನುವ ವ್ಯಾಸರಾಜರ ಆಶೀರ್ವಾದದಿಂದಲೆ ಈ ಗ್ರಂಥ ಬಹುಕಾಲದ ನಂತರವೂ ಕಾಲಗರ್ಭದಲ್ಲಿ ಲೀನವಾಗದೆ ಲೇಖಕನ ನಾಮದಿಂದಲೇ ದೊರಕಿರುವುದು ಎನ್ನುವ ಅಭಿಪ್ರಾಯವನ್ನು ಮುನ್ನುಡಿಯಲ್ಲಿ ವ್ಯಕ್ತಪಡಿಸಿದ್ದಾರೆ . 
                          ವ್ಯಾಸರಾಜರು ದಕ್ಷಿಣಭಾರತದ ಸಂಚಾರ ಮಾಡುತ್ತಾ  ಕಾಂಚಿಯಲ್ಲಿ ಕೆಲವು ವರ್ಷಗಳ ಕಾಲ ವಾಸ ಮಾಡಿದರು . ಅನಂತರ ಶ್ರೀಪಾದರಾಜರನ್ನು ಕಾಣಲು  ಮುಳುಬಾಗಿಲಿಗೆ ಬಂದರು . ಅಲ್ಲಿ ಕೆಲವು ವರ್ಷ ಅವರಲ್ಲಿ ಅಧ್ಯಯನ ಮಾಡಿದರು . ಆ ಸಂಧರ್ಭದಲ್ಲಿ ಸಾಳುವ ನರಸಿಂಹನು ಚಂದ್ರಗಿರಿಯನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯವನ್ನು ಆಳುತ್ತಿದ್ದನು . ಆ ರಾಜನು ಪಾಂಡಿತ್ಯದಲ್ಲಿ ಪರಿಪಕ್ವರಾದ  ಶ್ರೀಪಾದರಾಜರನ್ನು ತನ್ನ ಆಸ್ಥಾನದಲ್ಲಿ ಬಂದು ನೆಲೆಸಿ , ತಿರುಪತಿಯಲ್ಲಿ ಪೂಜಾವ್ಯವಸ್ಥೆಯನ್ನು ನೋಡಿಕೊಳ್ಳಬೇಕೆಂದು ಪ್ರಾರ್ಥಿಸಿದನು . ಆದರೆ ಶ್ರೀಪಾದರಾಜರು ತಾವು ತೆರೆಳದೆ  ವ್ಯಾಸರಾಜರಿಗೆ ಸಾಳುವ ನರಸಿಂಹನ ಆಸ್ಥಾನಕ್ಕೆ ತೆರಳಲು ಆದೇಶಿಸಿದರು . ಸನ್ಯಾಸಿಗ ಳಾದ ಇಂತಹವರಿಗೆ ಲೌಕಿಕ ಜಗತ್ತಿನ ಕೆಲಸಗಳು ಏಕೆ ಎಂದು ಕೆಲವರಿಗೆ ಪ್ರಶ್ನೆ ಮತ್ತು ಸಂದೇಹ  ಬರಬಹುದು, ಕೆಲವರು ಆಕ್ಷೇಪವನ್ನು ಮಾಡಬಹುದು. ಅದಕ್ಕೆ ವ್ಯಾಸ ಯೋಗಿ ಚರಿತೆಯಲ್ಲಿ ಈ ರೀತಿ ಉತ್ತರವಿದೆ  .  ಶ್ರೀಪಾದರಾಜರು ವ್ಯಾಸರಾಜರಿಗೆ ಹೇಳುವ ಮಾತು ,  ತತ್ರ ಸರ್ವೇಷಾಂ ಅಪಿ ಧರ್ಮಾಣಾಂ ರಾಜಾ ಸೇತುರಿತಿ ನ್ಯಾಯೇನ ಭವತಾ ಸರ್ವದಾ ತದಾ ತದಾಸ್ಥಾನೀಸ್ಥೇಯುಷಾ ಭವಿತವ್ಯಂ . ಪುರಾ ಕಿಲ ಯೊಗಿನೋ ನಿಸ್ಸಂಗಾ ಅಪಿ ಮಹಾಂತೂ ದತ್ತಾತ್ರೆಯಾದಯಃ ಜಗದುಪಕರಣಾಯ ರಾಜನ್ಯಸಭಾಲಂಕಾರಾಃ ಬಭೂವುಃ . ಎಂಥಹ ಅದ್ಭುತವಾದ ಮಾತು.  ಎಲ್ಲಾ ಧರ್ಮಗಳ ಅಸ್ತಿತ್ವಕ್ಕೂ ರಾಜ್ಯದ ಅಸ್ತಿತ್ವ ಮುಖ್ಯ . ರಾಜ್ಯವು ಸುಸ್ಥಿರವಾಗಬೇಕಾದರೆ  ಸುದೃಢನಾದ ರಾಜನಿರಬೇಕು . ಹಾಗಾಗಿ ರಾಜನಿಗೆ ನಮ್ಮ ಅನಿವಾರ್ಯತೆಯಿರುವದರಿಂದ ನೀವು ಅವನ ಆಸ್ಥಾನದಲ್ಲಿಯೆ ಇರಬೇಕು ಎಂದು ಹೇಳಿದರು . ಅವರು ಪರಮಾತ್ಮನ ದತ್ತಾವತಾರದ ದೃಷ್ಟಾಂತವನ್ನು ಕೊಡುತ್ತಾರೆ . ಇಲ್ಲಿ ಈ ದೃಷ್ಟಾಂತ ಬಹಳ ಮುಖ್ಯವಾಗುತ್ತದೆ . ಕಾರ್ತವೀರ್ಯಾರ್ಜುನನು ದತ್ತರೂಪಿ ನಾರಾಯಣನ ಶಿಷ್ಯನು . ಪರಮಾತ್ಮನು ಈ ಅವತಾರದಲ್ಲಿ ಪರಮ ವರಾಗ್ಯಶಿಕ್ಷಣದ ಉದ್ದೇಶ ಹೊಂದಿದ್ದಾನೆ . ಮತ್ತು ಈ ಅವತಾರಲ್ಲಿ ಅವನು ಪರಮವೈರಾಗ್ಯಮೂರ್ತಿ . ಆದರೂ ಕಾರ್ತವೀರ್ಯಾರ್ಜುನನ ಶುಶ್ರೂಷೆ, ಭಕ್ತಿಗೆ ಮೆಚ್ಚಿ ,ರಾಜ್ಯದ ಜನರ ಹಿತದೃಷ್ಟಿಯಿಂದ  ಅವನು ಕೇಳುವ ವರಗಳನ್ನು ಕರುಣಿಸುತ್ತಾನೆ .  ಆಮೇಲೆ ದತ್ತನೆ ಅವನ ಪಟ್ಟಾಭಿಷೇಕ ಸಮಾರಂಭವನ್ನು ನೆರೆವೇರಿಸುತ್ತಾನೆ. “ನಾರಾಯಣೇನಾಭಿಷಿಕ್ತೋ ದತ್ತಾತ್ರೇಯಸ್ವರೂಪಿಣಾ “ ಎನ್ನುತ್ತದೆ ಮಾರ್ಕಾಂಡೆಯ ಪುರಾಣ . ಇದರ ಫಲದಿಂದ ಕಾರ್ತವೀರ್ಯಾರ್ಜುನನು ಎಂಭತ್ತೆಂಟು ಸಾವಿರವರ್ಷಗಳವರೆಗೆ ಪ್ರಜಾಹಿತದೃಷ್ಟಿಯಿಂದ ರಾಜ್ಯವಾಳಿದನು . ಅವನ ರಾಜ್ಯದಲ್ಲಿ ವಸ್ತುಗಳ ಕಳ್ಳತನವೇ ಆಗುತ್ತಿರಲಿಲ್ಲ , ಮತ್ತು ಅವನ ಪ್ರಜೆಗಳು ಆಪತ್ತಿನಲ್ಲಿ ಇದ್ದಾಗ ಕಾರ್ತವೀರ್ಯಾರ್ಜುನನ ಸ್ಮರಣೆ ಮಾಡಿದರೆ ಅವನು ಬಂದು ರಕ್ಷಿಸುತ್ತಿದ್ದನು ಎಂದು ಅವನ ರಾಜ್ಯಭಾರಕ್ರಮವನ್ನು ಮಾರ್ಕಾಂಡೇಯಪುರಾಣವು ವರ್ಣಿಸುತ್ತದೆ . ಇದೆಲ್ಲಾ ದತ್ತಾತ್ರೆಯನ ಅನುಗ್ರಹದ ಫಲವೇ ಆಗಿದೆ  ಎಂದು ಕಾರ್ತವೀರ್ಯಾರ್ಜುನನು ಪ್ರತಿನಿತ್ಯವು ಪರಮಾತ್ಮನ ಪೂಜಾ ಸತ್ಕಾರಗಳನ್ನು ಮಾಡುತ್ತಿರುತ್ತಾನೆ . ಇಷ್ಟೆಲ್ಲಾ ಹಿನ್ನಲೆಯಲ್ಲಿ ಶ್ರೀಪಾದರಾಜರ ಮಾತನ್ನು ಅರ್ಥೈಸಿಕೊಂಡಾಗ ಧೃಢವಿರಾಗಿಗಳು ಪ್ರಜೆಗಳ , ರಾಜ್ಯದ ಹಿತದೃಷ್ಟಿಯಿಂದ ಲೌಕಿಕ ಪೃವೃತ್ತಿಗಳನ್ನು ಮಾಡಿದರೂ ಅದರ ಪ್ರಭಾವದಿಂದ ಅವರ ಜೀವನ ವಿಧಾನದಲ್ಲಿ ಯಾವುದೇ ಬದಲಾವಣೆಯಾಗುದಿಲ್ಲ ಎನ್ನುವುದು ತಿಳಿಯುತ್ತದೆ . ಈ ದೃಷ್ಟಿಯಲ್ಲಿ ನಾವು ವ್ಯಾಸರಾಜರ ಜೀವನವನ್ನು ನೋಡಬೇಕು. ಅವರು ಶ್ರೀಪಾದರಾಜ ಆದೇಶದಂತೆ ನಂತರವೂ ತಮ್ಮ ಜೀವನದಲ್ಲಿ ರಾಜರುಗಳಿಗೆ ಅವಶ್ಯಕತೆ ಬಿದ್ದಾಗಲೆಲ್ಲಾ ಅವರನ್ನು ಅನುಗ್ರಹಿಸಿ , ಅವರನ್ನು ಕಷ್ಟಗಳಿಂದ ಪಾರುಮಾಡಿದ್ದಾರೆ . ಸಾಳುವ ನರಸಿಂಹದೇವರಾಯನಿಗೆ ತಿರುಪತಿಯ ಪೂಜೆಯ ವ್ಯವಸ್ಥೆಯ ಜವಾಬ್ದಾರಿಯನ್ನು ೧೨ ವರ್ಷಗಳ ಕಾಲ ನಿಭಾಯಿಸುವ ಮೂಲಕ ಅನುಗ್ರಹಿಸಿದರು .  ಅವನ ಮಗನಾದ ತಮ್ಮರಾಯನಿಗೆ ವ್ಯಾಸರಾಜರು ಇಂದ್ರನಿಗೆ ಬೃಹಸ್ಪತಿಯಂತೆ ಇದ್ದರು ಎಂದು ಈ ಕಾವ್ಯವು ವರ್ಣಿಸುತ್ತದೆ “ ಕೋವಿದಕುಲಸೇವನಕುತೂಹಲಿನಂ ಗುರುರಿವ ಕುಲಿಶಪಾಣಿಂ ಕ್ಷ್ಮಾಪತಿಂ ಅನುಗೃಹ್ಣನ್ ………..ತಾಂ ಪುರೀಂ ಚಿರಾದಲಮಕರೊತ್”.    ಅಲ್ಲಿಯವರೆಗೆ ಚಂದ್ರಗಿರಿಯಲ್ಲಿ ಇದ್ದ ವ್ಯಾಸರಾಜರು  ತುಳುವ ನರಸ ನಾಯಕನ ಪ್ರಾರ್ಥನೆಯ ಮೇರೆಗೆ ವಿಜಯನಗರಕ್ಕೆ ಬರುತ್ತಾರೆ . ನರಸ ನಾಯಕನು ಪ್ರತಿದಿನವು ರಹಸ್ಯವಾಗಿ ವ್ಯಾಸರಾಜರಲ್ಲಿ ಧರ್ಮೋಪದೇಶವನ್ನು ಪಡೆಯುತ್ತಿದ್ದನು .” ಎವಮೇವ ಭಕ್ತ್ಯಾ ಸಂಭಾವಯಂತಂ ರಹಸ್ಯೇನಂ ಧರ್ಮೋಪದೇಶೇನ ಪ್ರತ್ಯಹಂ ಅನುಗೃಹ್ಣಣ್`` . ವೀರ ನರಸಿಂಹನು ಕೂಡ ವ್ಯಾಸರಾಜರನ್ನು ಆದರಿಸುತಿದ್ದನು , “ವಸುದಾಧಿಪೇನ ಹಂಸೇನೇವ ಕಮಲಾಕರಃ ಪ್ರತ್ಯಹಮುಪಸೇವ್ಯಮಾನಃ” ಎಂದೆನ್ನುತ್ತಾನೆ ಸೋಮನಾಥನು . ಕೃಷ್ಣದೇವರಾಯನಂತೂ ಒಂದು ಹೆಜ್ಜೆ ಮುಂದೆ ಹೊಗಿ “ಕೃಷ್ಣಮಹೀಪಾಲೇನ ತ್ರಿಸಂಧ್ಯಂ ಕುಲದೇವತೆವ  “ ಎಂದು ಕವಿ ಹೇಳಿದಂತೆ ಮೂರು ಹೊತ್ತು ಕುಲದೇವರಂತೆ ಆರಾಧಿಸುತಿದ್ದನು . ಅಚ್ಯುತರಾಯನ ಕಾಲದಲ್ಲಿ ಪೋರ್ಚುಗೀಸ ಯಾತ್ರಿಕನಾದ ನುನೀಜ್ ನ The king of Bisnaga is a Brahman. Every day he hears the preaching of learned Brahman, who never married nor ever touched a women. ಈ ವಾಕ್ಯಗಳು ಅವನು ವ್ಯಾಸರಾಜರನ್ನು ಎಷ್ಟು ಆದರಿಸುತ್ತಿದ್ದನೆಂಬುವುದಕ್ಕೆ ಉದಾಹರಣೆಯಾಗುತ್ತದೆ .  ಇಷ್ಟೆಲ್ಲಾ ಪ್ರಭಾವಿಗಳಾಗಿದ್ದ ವ್ಯಾಸರಾಜರು ತಮ್ಮ ಸ್ವಂತ ಅನುಕೂಲಕ್ಕಾಗಿ ಯಾವ ವಸ್ತುಗಳನ್ನು ಬಯಸಲಿಲ್ಲ , ಮತ್ತು ರಾಜರುಗಳೆ ಕೊಟ್ಟಾಗ ಅದನ್ನು ಎಲ್ಲರಿಗೂ ಹಂಚಿ ವೈರಾಗ್ಯವನ್ನು ಮೆರೆದರು . ಇದಕ್ಕೊಂದು ನಿದರ್ಶನ  ಕೃಷ್ಣದೇವರಾಯನು ವ್ಯಾಸರಾಯರಿಗೆ ಮಾಡಿದ ಮುತ್ತು ರತ್ನಗಳ ಅಭಿಷೇಕದ ಸಂದರ್ಭ .  ಕವಿಯು ಇದನ್ನು ತುಂಬಾ ಸುಂದರವಾಗಿ ವರ್ಣಿಸುತ್ತಾನೆ …
         
ಅಹಮಹಮಿಕಯೇವ ಸ್ವಾಮಿಪಾದಾರವಿಂದ         
  ಪ್ರಣತವಿಬುಧಯೂಥೈಃ ಸಾಲಹಲ್ಲೋಹಲಶ್ರೀಃ |
ಪ್ರಣತಕುಶಲವಾದ್ಯಾ ಪ್ರಾಂತಧಾವತ್ಪುರೊಧಾಃ 
ಕ್ಷಣಮಜನಿಸಭಾ ಸಾ ಕೌತುಕೆನೆವ ಸೃಷ್ಟಾ ||
ವ್ಯಾಸರಾಜರು ಚಿನ್ನದ ಸಿಂಹಾಸನದಲ್ಲಿ ಕುಳಿತಕೂಡಲೆ ಮೋದಲು ಪಂಡಿತರು , ನಂತರ ಕ್ಷತ್ರಿಯ ಯೋಧರು ತಾ ಮುಂದು ,ತಾ ಮುಂದು ಎಂಬಂತೆ ಅವರನ್ನು ನಮಸ್ಕರಿಸಲು ಮುಂದೆ ಬಂದರು. ನಂತರ ರಾಜನು ತಾನೆ ಮುತ್ತು ರತ್ನಗಳಿಂದ ಅಭಿಷೇಕ ಮಾಡಿದನು . ನಂತರ ಅಭಿಷೇಕದ ಮುತ್ತು ರತ್ನಗಳನ್ನು ವ್ಯಾಸರಾಜರು ಎಷ್ಟು ಸಾಧ್ಯವೋ ಅಷ್ಟು ವಿದ್ವಾಂಸರಿಗೆ , ಬ್ರಾಹ್ಮಣರಿಗೆ ಕೊಟ್ಟು , ಉಳಿದಿದ್ದನ್ನು ಅಲ್ಲಿ ನೆರೆದಿರುವ ವಿವಿಧ ರಾಜರುಗಳಿಗೆ , ಅವರ ಪ್ರತಿನಿಧಿಗಳಿಗೆ ಕೊಟ್ಟರೆಂದು ಕವಿ ವರ್ಣಿಸುತ್ತಾನೆ .
ಕ್ಷೋಣಿಸುರಯತ್ನವಿಶ್ರಾಣಿತಾವಶೆಷಾಣಿ ತಾನಿ ರಾಶಿಂ ಕಾರಯಿತ್ವಾ ನಾನಾದಿಶಾಂಚಲೇಭ್ಯಃ ಸಮಾಗತಾನಾಂ ಕುಂಡಲಾಯ ತುಂಡರಧಿಪಾನಾಂ , ಕೇಯೂರಾಯ ಕೇರಲಾನಾಂ , ಹಾರಾಯ ಪಾರಾಶಿಕಾನಾಂ, ಮಕುಟಾಯ ಲಾಟಾನಾಂ , ಅಂಗುಲೀಯಕಾಯ ಕಲಿಂಗಾನಾಂ , ಕಂಕಣಾಯ ಕೋಂಕಣಾನಾಂ , ನಿಷ್ಕಾಯ ತುರುಷ್ಕಾನಾಂ, ಚೂಡನಾಯ ಗೌಡಾನಾಂ , ತರಲಾಯ ಚೊಲಾನಾಂ , ಕಾಂಚೀಗುಣಾಯ ಪಾಂಚಾಲಾನಾಂ , ಅನ್ಯೇಷಾಮಪಿ ಭೂಭುಜಾಂ ವದಾನ್ಯಗ್ರಣೀಃ ಸಃ ಭಿಕ್ಷುಃ ಪ್ರಾದಿಕ್ಷತ್  “
ಅಷ್ಟೇ ಅಲ್ಲದೇ  ಧರ್ಮದ ರಕ್ಷಣೆಗಾಗಿ ಅನೇಕ ಅಧ್ಯಯನ ಕೇಂದ್ರಗಳನ್ನು , ಅಗ್ರಹಾರಗಳನ್ನು ನಿರ್ಮಿಸಿದರು.
 ಇನ್ನು ಕೆಲವು ಬುದ್ಧಿಜೀವಿಗಳು ವ್ಯಾಸರಾಜರು ವೈಷ್ಣವ ಮತವನ್ನು ಪ್ರಚಾರಪಡಿಸುವ ನೆಪದಿಂದ ವಿಜಯನಗರ ಕುಲದೇವತೆಯಾದ ವಿರೂಪಾಕ್ಷನನ್ನು ಬದಲಿಸಿ  ಶ್ರೀನಿವಾಸನನ್ನು ಕುಲದೇವತೆಯನ್ನಾಗಿ ಮಾಡಿದರು , ಹಾಗೆಯೆ ಅತಿಯಾದ ವೈಷ್ಣವ ಧರ್ಮದ ಹೇರಿಕೆಯಿಂದ ಶೈವ –ವೈಷ್ಣವ ಸಂಘರ್ಷ ಪ್ರಾರಂಭವಾಗಿ ಕೃಷ್ಣದೇವರಾಯನು ಯುದ್ಧದಲ್ಲಿ ಸೊಲನ್ನುಂಡು ವಿಜಯನಗರ ಸಾಮ್ರಾಜ್ಯ ಪತನವಾಯಿತು ಎಂದು ಎಂದು ದುರಾಗ್ರಹದಿಂದ ಪ್ರಮಾಣಗಳಿಲ್ಲದೆ ಆರೋಪಿಸುತ್ತಾರೆ . ಎಡಸಿದ್ಧಾಂತದ, ಇತಿಹಾಸ ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಿದವರೆಗೆ ಮಾತ್ರ ಕೃಷ್ಣದೇವರಾಯನ ನಂತರ ವಿಜಯಪತನವಾಯಿತು ಎಂಬ ಭ್ರಮೆ ಬರಬಹುದು . ಕೃಷ್ಣದೇವರಾಯನ ಮರಣದ ನಂತರವೂ ಸುಮಾರು ನೂರು ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಆಡಳಿತವಿತ್ತು  ಎನ್ನುವುದು  ದುರಾಗ್ರಹವಿಲ್ಲದ ಸಾಮಾನ್ಯ ಇತಿಹಾಸಜ್ಞನಿಗೂ ತಿಳಿದ ವಿಷಯವೆ ಆಗಿದೆ . ಇನ್ನು ಮಾಧ್ವಯತಿಗಳಾರು ಕುಲದೇವರನ್ನು ಬದಲಿಸಲಿಲ್ಲ . ಇನ್ನು ವಿದ್ಯಾರಣ್ಯರೆ ಹಕ್ಕ-ಬುಕ್ಕರಿಂದ ಸ್ಥಾಪಿತವಾದ ಈ ವಂಶಾಡಳಿದ ೧೫೦ ವರ್ಷಗಳನಂತರ ಅಳಿಯುತ್ತದೆ  ಎಂದು ನುಡಿದಿದ್ದರು . ಪಂಚಾಶದುತ್ತರೇ ಶತೇ ವಂಶಪೂರ್ತಿರ್ಭವಿಷ್ಯತಿ  ಎನ್ನುವುದು ಕೇಳದಿ ನೃಪವಿಜಯಕಾವ್ಯದಲ್ಲಿ ಬರುವ ವಿದ್ಯಾರಣ್ಯರ ಮಾತು. ಹಾಗಾಗಿ ನಂತರದ ಕಾಲದಲ್ಲಿ ಮೂಲವಂಶದೇವತೆಯ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಕಾಲಕ್ರಮದಲ್ಲಿ ಕೆಲವು ಘಟನೆಗಳಿಂದ ರಾಜರುಗಳಲ್ಲಿ ಉಂಟಾದ ವೈಷ್ಣವಶ್ರದ್ಧೆಯೆ ಬದಲಾವಣೆಗೆ ಕಾರಣವಾಗಿದೆ .  ಸಾಳುವ ನರಸಿಂಹನ ಕಾಲದಲ್ಲಿ ರಾಜವಂಶವು ವೈಷ್ಣವಶ್ರದ್ಧೆಯನ್ನು ಬೆಳೆಸಿಕೊಂಡಿತ್ತು ಎನ್ನುವುದಕ್ಕೆ ಅವನು ಶ್ರೀನಿವಾಸ ದೇವರಿಗೆ ಕೀರಿಟವನ್ನು ಸಮರ್ಪಸಿದ ಘಟನೆಯು ನಿದರ್ಶನವಾಗುತ್ತದೆ .  ನರಸ ನಾಯಕನ ಆಸ್ಥಾನದಲ್ಲಿ ವ್ಯಾಸರಾಜರು ರಾಜಗುರುಗಳಾಗಿ ನೇಮಕವಾಗುವಾಗ ಯಾರ ಪ್ರತಿರೋಧವು ಇರಿಲಿಲ್ಲವೆಂದಲ್ಲಾ . ವ್ಯಾಸರಾಜರನ್ನು ಭಿನ್ನ ಭಿನ್ನ ಪ್ರದೇಶಗಳಿಂದ ವಿವಿಧದಾರ್ಶನಿಕರು ವಾದಕ್ಕಾಗಿ ಆಹ್ವಾನಿಸಿದರು . ಆ ಎಲ್ಲಾ ಪಂಡಿತರ ಆರ್ಭಟವನ್ನು ನೋಡಿ , ವ್ಯಾಸರಾಜರ ಮಹಿಮೆಯನ್ನು ತಿಳಿದಿದ್ದರೂ ರಾಜನಿಗೆ ಭಯವಾದಂತಾಯಿತು ಎಂದು ಸೋಮನಾಥನು ವರ್ಣಿಸುತ್ತಾನೆ 
ವೈದೇಶಿಕಾನಾಂ ಸುಧಿಯಾಂ ಕ್ಷಿತಿಂದ್ರಃ
 ತಾದ್ರಗ್ವಿಧಾರಭಟೀಂ ಸಮೀಕ್ಷ್ಯ | 
ತಂ ವ್ಯಾಸಯೋಗಿಶಿತುರಾನುಭಾವಂ
    ಜಾನನ್ನಪಿ ತ್ರಸ್ತ ಇವಾಬಭಾಷೆ ||    ಆ ಎಲ್ಲಾ ಪಂಡಿತರ ಜೊತೆ ವಾದದಲ್ಲಿ ಗೆದ್ದು ವ್ಯಾಸರಾಜರು ಆ ಸ್ಥಾನವನ್ನು ಅಲಂಕರಿಸಿದರು . ವ್ಯಾಸರಾಜಕಾಲಕ್ಕಿಂತಲೂ ಮೊದಲೆ ನರಸ ನಾಯಕನ ಕಾಲದಲ್ಲೆ ವಿರೂಪಕ್ಷನ ಹಾಗೆ ವಿಠಲನೂ ಕೂಡ ವಿಜಯನಗರದ ಅಧಿದೇವತೆಯಾಗಿದ್ದನೆಂದು ಕುಮಾರ ಧೂರ್ಜಟಿಯೆಂಬ ಕವಿಯ ಕೃಷ್ಣದೇವರಾಯವಿಜಯಮು ಎಂಬ ಕಾವ್ಯದಲ್ಲಿ ವರ್ಣಿತವಾಗಿದೆ . ಕವಿ ವರ್ಣಿಸುತ್ತಾ ಹೀಗೆನ್ನುತ್ತಾನೆ : ಅಕ್ಷೋಣೀ ರಮಣಾಗ್ರಗಣ್ಯುಡು ವಿರೂಪಾಕ್ಷೆಶ್ವರಸ್ವಾಮಿಕಿನ್ |  ರಕ್ಷಾ ಶಿಕ್ಷಕುಡೈನ ವಿಠಲುನಕುನ್ ರಂಜಿಲ್ಲು ನಿತ್ಯೋತ್ಸವಂ .  ಇನ್ನು ಅನಂತಾಚಾರ್ಯರು ತಮ್ಮ’ ಪ್ರಪನ್ನಾಮೃತಂ ‘ಎನ್ನುವ ಗ್ರಂಥದಲ್ಲಿ ಎಟ್ಟೂರು ಗ್ರಾಮದ ಶ್ರೀವೈಷ್ಣವ ಸಂಪ್ರದಾಯದ ನೃಸಿಂಹ ಆಚಾರ್ಯ , ಶ್ರೀರಂಗಾಚಾರ್ಯ ಎನ್ನುವ ವಿದ್ವಾಂಸರಿಗೆ ವಿರೂಪಾಕ್ಷರಾಜನ ಆಸ್ಥಾನದಲ್ಲಿದ್ದ ಪ್ರಭಾವದಿಂದ ಆ ರಾಜನು ವೈಷ್ಣವನಾಗಿ ಪರಿವರ್ತನೆಗೊಂಡನು ಎಂದು ವಿವರಿಸುತ್ತಾರೆ . ಇದನ್ನೆ ಆಧಾರವಾಗಿಟ್ಟುಕೊಂಡು Rav. Haras ಎನ್ನುವನು  The Aravidu dyanastya of Vijayanagara ಎಂಬ ಗ್ರಂಥದಲ್ಲಿ ಇದೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ . ವಿರೂಪಾಕ್ಷನ ಆಡಳಿತಕಾಲವು ಕೇವಲ ಹನ್ನೊಂದು ವರ್ಷಗಳಕಾಲದ್ದಾಗಿತ್ತು . ಇರುವಷ್ಟು ಕಾಲವು ಅವನಿಗೆ ಮಹಿಳೆಯರು ಬಿಟ್ಟರೆ ಬೆರೆ ಯಾವ ವಿಷಯದಲ್ಲೂ ಆಸಕ್ತಿ ಇರಲಿಲ್ಲ, ಮತ್ತು ಅವನ ಹಿರಿಯರು ಗಳಿಸಿದ ಎಲ್ಲಾ ಸಂಪತ್ತನ್ನು ಕಳೆದುಕೋಳ್ಳುತ್ತಿದ್ದನು ಎಂದು ಫ್ರೆಂಚ್ ಯಾತ್ರಿಕನಾದ ನುನಾಜ್ ದಾಖಲಿಸಿದ್ದಾನೆ . ಹಾಗಾಗಿ ಇವನ ಕಾಲದಲ್ಲಿ ಸಿದ್ದಾಂತ ಬದಲಾಗುವಷ್ಟು ಮಹತ್ತತ್ತರ ಬದಲಾವಣೆಯಾಗಲು ಸಾಧ್ಯವಿಲ್ಲ  ಎಂದು VaiShnavism in Vijayanagar ಎನ್ನುವ ಪ್ರಬಂಧದಲ್ಲಿ  B.A.Salatore ಎನ್ನುವ ಇತಿಹಾಸಕಾರರು ನಿರೂಪಿಸಿದ್ದಾರೆ . ಮುಂದುವರೆದು ಅವರು “ವಿರೂಪಾಕ್ಷರಾಜನ ಕಾಲದಿಂದ  ವಿರೂಪಾಕ್ಷದೇವರ ಹೆಸರಿನಲ್ಲಿದ್ದ ಮೊಹರನ್ನು ಶ್ರಿರಾಮ ನ ಹೆಸರಿನಲ್ಲಿ ಬಳಸಲು ಪ್ರಾರಂಭಿಸಿದರು ಎನ್ನುವ ವಾದವು ಸತ್ಯಕ್ಕೆ ದೂರವಾದದ್ದು. ಎಕೆಂದರೆ ಹಾಗಿದ್ದಲ್ಲಿ ವಿರೂಪಾಕ್ಷನ ಅಂತ್ಯದ ೧೨೦ ವರ್ಷಗಳ ನಂತರವೂ ವಿರೂಪಾಕ್ಷದೇವರ ಹೆಸರಲ್ಲಿದ್ದ ದಾಖಲೆಗಳು ಸಿಗುತ್ತವೆ . ಅಷ್ಟೆ ಅಲ್ಲದೆ   ಸದಾಶಿವರಾಯನು ೧೫೪೫ ರ ಕಾಲದಲ್ಲಿ ಪ್ರಸಿದ್ಧವಾದ ಶ್ರೀವಿರೂಪಾಕ್ಷ ಎಂಬ ಮೋಹರನ್ನು ಬಳಸುತ್ತಿದ್ದನು ,ಹಾಗಾಗಿ ಕಾಲಕ್ರಮದಲ್ಲಿ ಬದಲಾದ ಸನ್ನಿವೇಷ ಮತ್ತು ಘಟನೆಗಳಿಂದ, ಪ್ರಮುಖವಾಗಿ ವೈಷ್ಣವ ಪಂಥದ ವಿದ್ವಾಂಸರಿಗೆ ಸರಿಸಮನಾದ ವಿದ್ವಾಂಸರ ಕೊರತೆಯಿಂದ ರಾಜ ಮನೆತನ ಮತ್ತು ವಿಜಯನಗರ ರಾಜ್ಯವು ವೈಷ್ಣವ ಶ್ರದ್ಧೆಯನ್ನು ಒಪ್ಪಿಕೊಂಡಿತು “ ಎಂದು ಬರೆಯುತ್ತಾರೆ . ವ್ಯಾಸರಾಜರು ಸಿದ್ದಾಂತವನ್ನು ಮೀರಿ ವಿದ್ವತ್ಪಕ್ಷಪಾತಿಯಾಗಿದ್ದರು ಎನ್ನುವುದಕ್ಕೆ ಸೋಮನಾಥನೆ ಪ್ರಬಲ ಉದಾಹರಣೆ . ಇನ್ನು ವ್ಯಾಸರಾಜರ ಅನುಗ್ರಹದಿಂದಲೆ ವಿಜಯನಗರದ ರಾಜರೆಲ್ಲರೂ ಯುದ್ಧವನ್ನು ಗೆಲ್ಲುತ್ತಿದ್ದರು ಎಂದು ಎಲ್ಲರೂ ಮಾತನಾಡುತ್ತಿದ್ದರು ಎಂದು ಸೋಮನಾಥನು ವರ್ಣಿಸುತ್ತಾನೆ ,  ತತ್ರೈನಮಾಲೋಕಯತಾಂ ಜನಾನಾಂ ಉಚ್ಚಾವಚಂ ಭಾಷಿತಮೆವಮಾಸೀತ್ | ಅನೆನ ಖಲು ಭದ್ರಮೆಕೈಕತಯಾ ಲಕ್ಷ್ಯಮಾಣಾಃ ಸುಖೇನ ವಿಜಯಲಕ್ಶ್ಮೀ ಸ್ವಯಂ ರಮಮಾಣಾಃ  ಭವೆಯುಃ |  ರಾಜ್ಯದ ಜನರ ಇಂತಹ  ಮಾತುಗಳಿಂದ ವ್ಯಾಸರಾಜರು ತಮ್ಮ ಬ್ರಹ್ಮಬಲದಿಂದ , ಲೌಕಿಕ ಸಲಹೆಗಳಿಂದ ಧರ್ಮಾಧಾರಾಧಿತ ರಾಜ್ಯವು ಸ್ಥಿರವಾಗಿರಿಸಲು ರಾಜರಿಗೆ ನೆರವಾಗುತ್ತಿದ್ದರು ಎನ್ನುವ ಅಂಶ ತಿಳಿದು ಬರುತ್ತದೆ .
 ಇನ್ನು ವ್ಯಾಸರಾಜರ ವಿದ್ವತ್ತ್ತಿನ ವಿಷಯವನ್ನು ಎಷ್ಟು ಹೇಳಿದರು ಕಡಿಮೆಯೆ .  ಈ ಕವಿಯ ಒಂದೇ ಶ್ಲೋಕದಿಂದ ಅವರ ವಿದ್ಯಾವೈಶಾಲ್ಯದ ಅರಿವನ್ನು ಪಡೆಯಬಹುದು ,
ಮಾನ್ಯಸ್ಯ ತಸ್ಯ ಮಹತೋ ಮಹತಾಂ ಸಕಾಶೇ |
ಷಡ್ದರ್ಶನಾನ್ಯಪಿ ಧರಾಧರಸನ್ನಿಭಾನಿ ||       
  ವಿದ್ಯಾಬುಭುಕ್ಷಿತವತೋ ಧಿಷಣಾಮಹಿಮ್ನೋ |           
  ಪ್ರಾಣಾದಿಮಾಹುತಿದಶಾಂ ಪ್ರಥಮಂ ಪ್ರಜಗ್ಮುಃ ||

    ಬಹಳ ಹಸಿವಿರುವ ವ್ಯಕ್ತಿಗೆ ಊಟಕ್ಕೆ ಮುಂಚೆ ತೆಗೆದುಕೊಳ್ಳುವ ಪ್ರಾಣಾಪಾನಾದಿ ಆಹುತಿಗಳಂತೆ , ವ್ಯಾಸರಾಜರ   ವಿದ್ಯಾ ಹಸಿವಿಗೆ ಷಡ್ದರ್ಶನಗಳು ಪ್ರಾಣಾದಿ ಆಹುತಿಗಳಂತೆ ಆದವು ಎಂದು ಕವಿಯು ವರ್ಣಿಸುತ್ತಾನೆ .ಇದರಿಂದ ಅವರ ಜ್ಞಾನಾಗಧತೆಯ ಸಣ್ಣ ಪರಿಚಯವಾಗಬಹುದು .
 
  ಹೀಗೆ ವ್ಯಾಸರಾಜರ ಅನುಪಮ ಜೀವನ ಚರಿತ್ರೆಯನ್ನು ವರ್ಣಿಸಲು ಪ್ರಾರಂಭಿಸಿದರೆ ಅದು  ಮುಗಿಯುವುದಿಲ್ಲ .  ಆದರೂ ನನಗೆ ಸಾಧ್ಯವಾದಷ್ಟು , ವ್ಯಾಸರಾಜರ ಅನುಗ್ರಹದಿಂದ ಐತಿಹಾಸಿಕ ದೃಷ್ಟಿಯಿಂದ ಅವರ ಜೀವನ ಚರಿತ್ರೆಯನ್ನು ಬರೆಯಲು ಪ್ರಯತ್ನಿಸಿದ್ದೆನೆ . ಈ ಕಾರ್ಯದಿಂದ ವ್ಯಾಸರಾಜನ ಅಂತರ್ಯಾಮಿಯಾದ ಕೃಷ್ಣನು ಪ್ರೀತನಾಗಲಿ ಎಂದು ಪ್ರಾರ್ಥಿಸುತ್ತಾ ವಿರಮಿಸುತ್ತೆನೆ.

Comments

Popular posts from this blog

Exploring the unwavering devotion of Shri Vishwaprasana tirtha Swamiji - my experience of ayodhya yatra.

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ

ಏಕಭುಕ್ತ ಮತ್ತು intermittent fasting